ಔತಣದ ರಸಗವಳ ಎಂದರೆ ಬಾಯಿ ಚಪ್ಪರಿಸುವ ಬಗೆಬಗೆಯ ವ್ಯಂಜನಗಳ ಹೂರಣ. ಇವುಗಳ ವೈವಿಧ್ಯತೆಯ ಬಗ್ಗೆ ಒಂದಿಷ್ಟು ವಿವರವಾಗಿ ತಿಳಿಯೋಣವೇ…?

`ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು’…… ಎನ್ನುತ್ತಾ, `ಆಹಾರೇ ಜಿಲೇಬಿಗಳು, ಓಹೋರೆ ಗಾರಿಗೆಗಳು….’ ಎಂದು ವಿವಿಧ ಬಗೆಯ ತಿನಿಸುಗಳನ್ನು ಹೊಗಳುತ್ತಾ…. ಅವುಗಳನ್ನು ಮನಸಾರೆ ಭಕ್ಷಿಸುವ ಘಟೋತ್ಕಚನ ಆಹಾರ ಸವಿಯುವ ಆ ಪರಿಯನ್ನು ಕಂಡರೆ, ಯಾರಿಗೆ ತಾನೇ ಬಾಯಲ್ಲಿ ನೀರೂರದು? ರಸನ, ನಾಲಿಗೆ, ಜಿಹ್ವೆ ಮುಂತಾದ ಹೆಸರಿನಿಂದ ಕರೆಯುವ ನಮ್ಮ ಬಾಯಿಯೊಳಗಿನ ಮೃದುವಾದ ಅಂಗಕ್ಕೆ ಆಹಾರ ಕಂಡೊಡನೆ ನೀರೂರುವುದೇ ಕೆಲಸವಾದರೆ, ಸಮಯಕ್ಕೆ ಸರಿಯಾಗಿ ಆಹಾರ ಪೂರೈಸುವುದು ನಮ್ಮ ಕರ್ತವ್ಯವಾಗಿರುತ್ತದೆ.

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ದಾಸ ವಾಣಿಯಂತೆ ಹೊಟ್ಟೆಪಾಡಿಗಾಗಿ ನಾನಾ ಉದ್ಯೋಗಗಳನ್ನು ಮಾಡುತ್ತೇವೆ. ಹಾಗೆಯೇ ನಮ್ಮ ಉದರವನ್ನು ಮುಂಜಾನೆ, ಮಧ್ಯಾಹ್ನ, ರಾತ್ರಿಗಳಲ್ಲಿ ಫಲಹಾರ, ಭೋಜನಗಳಿಂದ ತಣಿಸಿದರೆ ನಡುನಡುವೆ ಕುರುಕುತಿಂಡಿ, ಪಾನೀಯಗಳ ಸೇವನೆಯೂ ನಡೆಯುತ್ತಿರುತ್ತದೆ.

cookry-utsavi-mithas-2

ವೈವಿಧ್ಯಮಯ ತಿನಿಸುಗಳು

ಪ್ರಕೃತಿ ನಮಗೆ ವಿವಿಧ ಧಾನ್ಯಗಳನ್ನು ನೀಡಿದರೆ, ಅವುಗಳನ್ನು ವಿವಿಧ ಮೂಸೆಗೆ ಒಡ್ಡಿ ನಮ್ಮ ಜಿಹ್ನೆಗೆ ಒಗ್ಗುವ ಹಾಗೆ ರುಚಿಕರವಾದ ಅಡುಗೆಗಳನ್ನು ತಯಾರಿಸಿಕೊಳ್ಳುವ ಚಾಣಾಕ್ಷರು ನಾವು. ಅಚ್ಚರಿಯ ವಿಷಯವೆಂದರೆ ಪಾಕಶಾಸ್ತ್ರದಲ್ಲಿರುವ ವೈವಿಧ್ಯತೆ. ಒಂದು ಧಾನ್ಯದಿಂದ ಹಲವು ಬಗೆಯ ತಿನಿಸುಗಳು ತಯಾರಾಗುವುದೇ ಒಂದು ಸೋಜಿಗ. ಅದನ್ನೆಲ್ಲಾ ಕಂಡುಹಿಡಿದ ಮನುಷ್ಯನ ಮೆದುಳಿಗೆ ಏನು ಕೊಟ್ಟರೂ ಕಡಿಮೆಯೇ!

ಉದಾಹರಣೆಗೆ ಭತ್ತವೆಂಬ ಧಾನ್ಯದಿಂದ ಮೊದಲು ಅಕ್ಕಿಯನ್ನು ಬೇರ್ಪಡಿಸಿ, ಆ ಅಕ್ಕಿಯಿಂದ ಅನ್ನ ಮಾಡಿ ಮತ್ತದೇ ಅನ್ನದಿಂದ ಚಿತ್ರಾನ್ನ, ವಾಂಗಿಭಾತ್‌, ಪುಳಿಯೋಗರೆ, ಫ್ರೆಡ್‌ ರೈಸ್‌ ಮುಂತಾದ ಪಕ್ವಾನ್ನಗಳನ್ನು ತಯಾರಿಸುತ್ತೇವೆ. ಇನ್ನು ಅಕ್ಕಿಯನ್ನು  ನೆನೆಸಿ ರುಬ್ಬಿದಾಗ ದೊರೆಯುವ ಹಿಟ್ಟಿನಿಂದ ಇಡ್ಲಿ, ಮಸಾಲೆ ದೋಸೆ, ಪಡ್ಡುಗಳು ತಯಾರಾದರೆ, ಅಕ್ಕಿಯನ್ನು ಗಿರಣಿ ಮಾಡಿಸಿದಾಗ ದೊರೆಯುವ ಹಿಟ್ಟಿನಿಂದ ರೊಟ್ಟಿ, ಚಕ್ಕುಲಿ, ಕೋಡುಬಳೆ, ಮುಚ್ಚೋರೆಗಳು ನಮ್ಮ ಸಂಜೆಯ ಬಾಯಿಚಪಲವನ್ನು ನೀಗಿಸುತ್ತವೆ.

cookry-utsavi-mithas-3

ಸಿರಿಧಾನ್ಯದ ಹಿರಿಮೆ

ಇಂದಿನ ಒತ್ತಡದ ಜೀವನದಿಂದ ಬರುತ್ತಿರುವ ಕಾಯಿಲೆಗಳಿಗೆ ರಾಮಬಾಣ ಎಂಬ ಹಣೆಪಟ್ಟಿಯೊಂದಿಗೆ, ಸಿರಿಧಾನ್ಯಗಳಾದ ರಾಗಿ ಜೋಳದ ಜೊತೆಗೆ, ನವಣೆ, ಸಜ್ಜೆ, ಸಾಮೆ, ಹಾರಕ, ಬರಗು, ಊದಲು, ಕೊರಿ ಮುಂತಾದವುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರೂಢಿಗತ ಆಹಾರ ಸೇವಿಸಿ ಒಗ್ಗಿರುವ ನಾಲಿಗೆಗೆ ಹೊಸ ಆಹಾರ ತಿನ್ನಲು ಕೊಂಚ ಕಷ್ಟವೆನಿಸಿದರೂ, ಅದರಿಂದಲೂ ಕಿಚಡಿ, ಪೊಂಗಲ್, ಬಿಸಿಬೇಳೆ ಭಾತ್‌ ಇತ್ಯಾದಿಗಳನ್ನು ತಯಾರಿಸಿ ಸಿರಿಧಾನ್ಯಗಳಿಗೇ ಮೆರುಗು ಕೊಟ್ಟಿದ್ದೇವೆ.

 

ಆಹಾರ ಸೇವನೆಯ ಭಾವಭಂಗಿ

ಇಷ್ಟೆಲ್ಲ ಬಗೆಬಗೆಯ ಸವಿಯಾದ ಆಹಾರಗಳಿದ್ದರೂ ಎಲ್ಲರೂ ಊಟ ಮಾಡುವ ವೈಖರಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಮಿತಾಹಾರಿಗಳಾದರೆ, ಹಲವರು ಪುಷ್ಕಳ ಭೋಜನಪ್ರಿಯರು. ಸಾವಧಾನದಿಂದ ಭುಜಿಸುವವರು ಕೆಲವರಾದರೆ, ಕೈಯಲ್ಲಿ ತಟ್ಟೆ ಹಿಡಿದು ನಿಂತುಕೊಂಡೇ ಗಬಗಬ ತಿಂದು, ಗಟಗಟನೇ ನೀರು ಕುಡಿದು ನೆತ್ತಿಗೆ ಹತ್ತಿಸಿಕೊಂಡು ಪರಿತಪಿಸುವ ಅವಸರದ ವ್ಯಕ್ತಿಗಳು ಹಲವರು.

ಕಾಲೇಜಿನಲ್ಲಿ ನಿಂತು ಪಾಠ ಮಾಡುತ್ತಿದ್ದ ನನ್ನ ಗೆಳತಿ ಅಭ್ಯಾಸಬಲದಿಂದ ನಿಂತುಕೊಂಡೇ ಊಟ ಮಾಡುತ್ತಿದ್ದಳು. ಆದರೆ ಸಾವಧಾನವಾಗಿ ಕುಳಿತು ಉಂಡರೇ ತಿಂದ ಅನ್ನ ಮೈಗೆ ಹತ್ತುತ್ತದೆ ಎಂಬುದು ಹಿರಿಯ ಹಿತವಚನ.

ವೈವಿಧ್ಯಮಯ ಕೈ ರುಚಿ

ಇನ್ನು ಅಡುಗೆ ತಯಾರಿಸುವ ವಿಷಯಕ್ಕೆ ಬಂದರೆ ಒಬ್ಬೊಬ್ಬರ ಕೈರುಚಿ ಒಂದೊಂದು ಬಗೆ ಇರುತ್ತದೆ. ಕರಿಬೇವು, ಇಂಗು, ತೆಂಗು ಇತ್ಯಾದಿಯನ್ನು ಹಾಕಿದರೂ ರುಚಿಗಟ್ಟದ ಅಡುಗೆ, ಕೆಲವರು ಕೆಲವೇ ಪದಾರ್ಥಗಳನ್ನು ಹಾಕಿ ತಯಾರಿಸಿದರೂ ದೂರದವರೆಗೂ ಅಡುಗೆ ಘಮಘಮಿಸುತ್ತದೆ.

cookry-utsavi-mithas-4

ಸಾಹಿತ್ಯದಲ್ಲಿ ನಳಪಾಕ

ಖ್ಯಾತ ಸಾಹಿತಿ ಚದುರಂಗರು ತಮ್ಮ ಪತ್ನಿಯ ಜೊತೆಗೂಡಿ, ಹಳ್ಳಿಯ ಪರಿಚಿತರ ಮನೆಗೆ ಹೋದಾಗ, ಆ ಮನೆಯ ಗೃಹಿಣಿ ಹಿತ್ತಲಿಗೆ ಹೋಗಿ ಎಳೆಯ ಬದನೆಕಾಯಿಗಳನ್ನು ಕಿತ್ತು ತಂದು ಒಳ್ಳೆ ಸಾರು ಮಾಡಿ ಬಡಿಸುವುದನ್ನು ಓದುತ್ತಿದ್ದರೆ, ನಾಲಿಗೆ ನೀರೂರದೆ ಇರದು. ಹಾಗೆಯೇ ತ್ರಿವೇಣಿಯವರ ವಸಂತಗಾನ ಕಾದಂಬರಿಯಲ್ಲಿ, ನಾಯಕಿ ಗರ್ಭಿಣಿಯೆಂದು ಅವಳನ್ನು ಊಟಕ್ಕೆ ಆಮಂತ್ರಿಸಿದರು ಬಡಿಸುವ ತಿನಿಸುಗಳಾದ ಆಂಬೊಡೆ, ಜಾಮೂನು ಮುಂತಾದ ಹೆಸರುಗಳನ್ನು ಓದುತ್ತಿದ್ದರೆ ನಾವು ಮಾಡುತ್ತಿರುವ ಸಾಧಾರಣ ಊಟ ಸ್ವಾದಿಷ್ಟವೆನಿಸುತ್ತದೆ. ಎಚ್‌.ಜಿ. ರಾಧಾದೇವಿಯವರ ಕಾದಂಬರಿಗಳಲ್ಲಿನ ಅಡುಗೆಯ ವೈವಿಧ್ಯವಂತೂ ವರ್ಣಿಸಲಸದಳ!

ವನಿತಾ ಸಾಮ್ರಾಜ್ಯ

ಅಡುಗೆಮನೆ ಸಾಮ್ರಾಜ್ಯ ಹೆಚ್ಚಿನಂಶ ವನಿತೆಯರದ್ದೇ ಆಗಿರುತ್ತದೆ. ಹೀಗಾಗಿ ಅಡುಗೆ ಮಾಡುವ ಹದ, ಬೆರೆಸುವ ಮಸಾಲೆ ಎಲ್ಲವೂ ಅವರಿಗೆ ಕರಗತ. ಹಾಗಾಗಿಯೇ ನಮ್ಮ ಲೇಖಕಿಯರು ಅಡುಗೆಯನ್ನು ವರ್ಣನೆ ಮಾಡಿದರೆ ಅಡುಗೆಮನೆ ಸಾಹಿತ್ಯ ಎಂದು ಮೂಗು ಮುರಿಯುತ್ತಾರೆ. ಆದರೆ ಎರಡು ದಿನ ಅಡುಗೆ ಮನೆಗೆ ಹೆಂಗಸರು ರಜೆ ಘೋಷಿಸಿದರೆ ಯಾರೂ ಸಹಿಸಲಾರರು. ಹೋಟೆಲ್‌ಮಾಮನ ಸೇವೆ ಹಣ ಕೊಟ್ಟರೆ ಭೋಜನ ದೊರೆಯುವ ಖಾನಾವಳಿಗಳು ಇರಬಹುದು. ಆದರೆ ದಿನ ಒಂದೇ ರುಚಿಯ ಅಡುಗೆಯನ್ನು ಯಾಂತ್ರಿಕವಾಗಿ ತಂದು ಬಡಿಸುವವರಿಗಾಗಲಿ, ಮನೆ ಬಾಗಿಲಿಗೇ ಸಿದ್ಧ ಆಹಾರವನ್ನು ಪೂರೈಸುವ ಸಿಬ್ಬಂದಿಗಾಗಲಿ, ವೈವಿಧ್ಯಮಯ ಅಡುಗೆ ತಯಾರಿಸಿ ಅಕ್ಕರೆಯಿಂದ ಉಣಬಡಿಸುವ ವನಿತೆ ಸರಿಸಾಟಿ ಆಗಲಾರಳು.

ಆಹಾರದಲ್ಲಿನ ಬಗೆ

ಶಾಕಾಹಾರಿ, ಮಾಂಸಾಹಾರಿ ಎಂದು ಎರಡು ವರ್ಗಗಳನ್ನು ಮಾಡಿಕೊಂಡಿರುವ ನಾವು ಸಸ್ಯಾಹಾರಿಗಳನ್ನು ಸೊಪ್ಪು ಸದೆ ತಿನ್ನುವ ಪುಳಿಚಾರುಗಳು ಎಂದು ಕೀಟಲೆ ಮಾಡಿದರೆ, ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಗಳ ಸ್ಮಶಾನ ಮಾಡಿರಿ ಎಂಬ ಟೀಕೆಗೆ ಮಾಂಸಾಹಾರಿಗಳು ಗುರಿಯಾಗುತ್ತಾರೆ. ಪರಸ್ಪರ ಆಗೊಮ್ಮೆ, ಈಗೊಮ್ಮೆ ಈ ಮಂದಿ ಪಕ್ಷಾಂತರ ಮಾಡುವುದೂ ಇದೆ!

cookry-utsavi-mithas-5

ಸಿಹಿ ರಹಿತ ಖಾದ್ಯ

ಆಧುನಿಕ ಯುಗದ ಕೊಡುಗೆಯಾಗಿರುವ ಮಧುಮೇಹದಿಂದ ಬಳಲುವವರು ಸಿಹಿ ತಿನ್ನುವಂತಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಸಕ್ಕರೆ ಪಾಕದಲ್ಲೇ ಮುಳುಗೇಳುವ ಜಾಮೂನು, ಸಿಹಿರಸದಲ್ಲಿ ತೇಲುವ ರಸಗುಲ್ಲಾ, ಹೋಳಿಗೆಗೆ ಜೊತೆ ಕೊಡುವ ಮಾವಿನಹಣ್ಣಿನ ಸೀಕರಣೆ ಮಧುಮೇಹಿಗಳನ್ನು ಕೆಣಕುತ್ತವೆ. ಸಿಹಿ ತಿನ್ನದ ಜೀವನವೇ ವ್ಯರ್ಥ ಎಂದವರಿಗೆ ಅನಿಸಿದರೂ, ಅಂತಹ ಸವಿಯಾದ ತಿನಿಸುಗಳನ್ನು ತ್ಯಜಿಸಿದ ಧೀರರು ನಾವು ಎಂದು ಹೆಮ್ಮೆಪಡಬಹುದು.

ಹಾಲಿನಲ್ಲೇ ಬೇಯಿಸಿ ದೇವರಿಗೆ ನೈವೇದ್ಯ ಮಾಡುವ ಸಿಹಿಗೆ ಸಮನವಾದ ಸಿಹಿ ಇಲ್ಲವೆಂದು ಹೇಳುತ್ತಾರೆ. ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾರೆ ಎಂದರೆ, ನಮ್ಮ ಸಂಡಿಗೆಯ ಸಂಬಂಧಿಯೇನೋ ಎಂದುಕೊಂಡರೆ ಅಲ್ಲ, ಅದೊಂದು ಬಗೆಯ ನಮ್ಮ ಉತ್ತರ ಕರ್ನಾಟಕದ ವಿಶೇಷ ತಿನಿಸು ಎಂದು ತಿಳಿದುಬರುತ್ತದೆ.

ಅನ್ನಪೂರ್ಣೆಯ ಆಶೀರ್ವಾದ

ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅತ್ಯಂತ ಶ್ರಮವಹಿಸಿ ತಯಾರಿಸಿ ಅತಿಥಿಗಳಿಗೆ ಬಡಿಸುತ್ತಾರೆ ಎಂದಾಗ ನಮ್ಮ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರಕ್ಕೆ ಕೊಡುವ ಪ್ರಾಮುಖ್ಯತೆಯ ಅರಿವಾಗುತ್ತದೆ.

ನಮ್ಮ ಹಿಂದಿನವರು ಹೇಳಿಕೊಟ್ಟ ಹಳೆಯ ಪಾಕ ವಿಧಾನಗಳನ್ನು ಮರೆಯದೆ ಇಂದಿನ ಆಹಾರ ಪದ್ಧತಿಯ ಜೊತೆ ಮಿಶ್ರ ಮಾಡಿ, ಮನೆಮಂದಿಗೆಲ್ಲ ಪ್ರೀತಿಯಿಂದ ಅಡುಗೆ ತಯಾರಿಸಿ ಉಣಬಡಿಸಿದರೆ ಎಲ್ಲರ ಮನಸ್ಸು ಪ್ರಸನ್ನತೆಯಿಂದ `ಅನ್ನದಾತ ಸುಖೀಭವ’ ಎಂದು ಹರಸುತ್ತದೆ.

ಕೆ. ಕೃಷ್ಣಕುಮಾರಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ