ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಜೈವಿಕ (ಮಣ್ಣಿನಲ್ಲಿ ಕರಗಬಹುದಾದ) ಮುಟ್ಟಿನ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ನೀಡಿದೆ. ಜೊತೆಗೆ, ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನದಲ್ಲಿ ನೀಡಲಾಗಿರುವ ಬದುಕುವ ಮೂಲಭೂತ ಹಕ್ಕಿನ ಒಂದು ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ‘ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ನೀತಿ’ಯ ಅನುಷ್ಠಾನದ ಕುರಿತು 2024ರಲ್ಲಿ ಜಯಾ ಠಾಕೂರ್ ಎಂಬುವವರು ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ. ಆರ್. ಮಹದೇವನ್ ಅವರ ಪೀಠ, ‘ಋತುಚಕ್ರದ ಆರೋಗ್ಯದ ಹಕ್ಕು ಸಂವಿಧಾನದ 21ನೇ ವಿಧಿಯಲ್ಲಿ ಬರುವ ಬದುಕುವ ಹಕ್ಕಿನ ಭಾಗವಾಗಿದೆ. ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಮುಟ್ಟಿನ ನೈರ್ಮಲ್ಯ ಕ್ರಮಗಳು ಹೆಣ್ಣುಮಗುವಿಗೆ ಉತ್ತಮ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಒದಗಿಸುತ್ತವೆ. ಆರೋಗ್ಯಕರ ಸಂತಾನೋತ್ಪತ್ತಿಯ ಹಕ್ಕು ಲೈಂಗಿಕ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ’ ಎಂದು ತಿಳಿಸಿದೆ.
ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು: ‘ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ, ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜೈವಿಕ ಸ್ಯಾನಿಟರಿ ಪ್ಯಾಡ್ ಒದಗಿಸುತ್ತಿರುವುದನ್ನು ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು. ಶೌಚಾಲಯದ ಆವರಣದಲ್ಲಿ, ವೆಂಡಿಂಗ್ ಮೆಷಿನ್ಗಳ ಮೂಲಕ ಅಥವಾ ಗುಪ್ತ ಸ್ಥಳಗಳಲ್ಲಿ ಪ್ಯಾಡ್ಗಳು ಲಭ್ಯವಾಗುವಂತೆ ಮಾಡಬೇಕು. ಖಾಸಗಿ ಶಾಲೆಗಳು ಇದನ್ನು ಒದಗಿಸಲು ವಿಫಲವಾದರೆ, ಅವುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ’ ಎಂದು ಖಡಕ್ ಸೂಚನೆ ನೀಡಿದೆ.
ಪ್ರತ್ಯೇಕ ಶೌಚಾಲಯ ನಿರ್ಮಿಸಿ: ‘ಎಲ್ಲಾ ಶಾಲೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅವುಗಳಲ್ಲಿ ನೀರು ಮತ್ತು ಸೋಪ್ ಎಲ್ಲ ಸಮಯದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಎಲ್ಲಾ ಶಾಲೆಗಳು, ಅವು ಸರ್ಕಾರದ್ದಾಗಿರಲಿ ಅಥವಾ ಖಾಸಗಿಯಾಗಿರಲಿ, ಅಂಗವಿಕಲಸ್ನೇಹಿ ಶೌಚಾಲಯಗಳನ್ನು ನಿರ್ಮಿಸಬೇಕು. ಇಲ್ಲದಿದ್ದರೆ ಇದಕ್ಕೆ ರಾಜ್ಯ ಸರ್ಕಾರಗಳೇ ಹೊಣೆಗಾರರಾಗಿರುತ್ತವೆ’ ಎಂದು ಕೋರ್ಟ್ ತಿಳಿಸಿದೆ.





