– ರಾಘವೇಂದ್ರ ಅಡಿಗ ಎಚ್ಚೆನ್.
ಹೊಸಬರ ಚಿತ್ರ ‘ವಿಕಲ್ಪ’ ಇಂದು (30 ಜ. 2026) ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ‘ವಿಕಲ್ಪ’ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ, . ‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಎಂಬ ಮಾನಸಿಕ ರೋಗದ ಹಿನ್ನೆಲೆ ಇರುವ ವ್ಯಕ್ತಿಯ ಸುತ್ತ ಹೇಳಿರುವ ಕಥೆಯೇ ವಿಕಲ್ಪ. ಹಾಗೆಂದು ಇದು ಕೇವಲ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದುಕೊಳ್ಳಬೇಕಾಗಿಲ್ಲ.
“ವಿಕಲ್ಪ” ಒಂದು ಸೈಕಾಲಜಿಕಲ್-ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆ ಬೆರೆತಿರುವ ಸಿನಿಮಾ ಆಗಿದೆ. ವ್ಯಕ್ತಿಯ ಮನಸ್ಸಿನಲ್ಲಿರುವ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಚಿತ್ರದಲ್ಲಿದೆ. ವೈಜ್ಞಾನಿಕ ಅಂಶಗಳನ್ನು ಆಧರಿಸಿ, ತಜ್ಞರ ಸಲಹೆಯ ಮೇರೆಗೆ ಈ ಪಾತ್ರಗಳನ್ನು ಸನ್ನಿವೇಶವನ್ನೂ ಚಿತ್ರೀಕರಿಸಿದ್ದಾರೆ ನಿರ್ದೇಶಕರು. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಇಲ್ಲಿ ತೋರಿಸಲಾಗಿದೆ

ಎರಡು ದಶಕಗಳಿಗೂ ಹೆಚ್ಚಿನ ಕಾಲ ಹವ್ಯಾಸಿ ರಂಗಭೂಮಿಯ ಅನುಭವವಿರುವ, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೃಥ್ವಿರಾಜ್ ಪಾಟೀಲ್, ತಮ್ಮ ಪರಿಕಲ್ಪನೆಯನ್ನು ‘ವಿಕಲ್ಪ’ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ. ʼಸುರೂಸ್ ಟಾಕೀಸ್ʼ ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ವಿಕಲ್ಪ’ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ಅವರೇ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ನಾಗಶ್ರೀ ಹೆಬ್ಬಾರ್ ನಾಯಕಿಯಾಗಿದ್ದಾರೆ. ಉಳಿದಂತೆ ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್, ಗಿರೀಶ್ ಮುಂತಾದವರು ‘ವಿಕಲ್ಪ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾದ ಹಲವಾರು ದೃಶ್ಯಗಳನ್ನು ಅವು ನೈಜತೆಗೆ ಹತ್ತಿರವಾಗಿರಬೇಕು ಎನ್ನುವ ಕಾರಣಕ್ಕಾಗಿ ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಚಿತ್ರಿಸಲಾಗಿದೆ. ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ‘ವಿಕಲ್ಪ’ದ ಚಿತ್ರೀಕರಣ ಮಾಡಲಾಗಿದೆ. ‘ವಿಕಲ್ಪ’ ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನವಿದೆ.

ಚಿತ್ರಕ್ಕೆ ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಕಾರ್ಯವಿದೆ. ‘ವಿಕಲ್ಪ’ದ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟಿಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ʼವಿಕಲ್ಪʼದ ಹಾಡುಗಳು ಮೂಡಿಬಂದಿವೆ.

ಈಗಾಗಲೇ ತನ್ನ ಟೀಸರ್, ಹಾಡುಗಳು ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರು ಮತ್ತು ಚಿತ್ರರಂಗದಲ್ಲಿ ಹಲವರ ಗಮನ ಸೆಳೆಯುತ್ತಿರುವ “ವಿಕಲ್ಪ” ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತದೆ ಎನ್ನುವ ಭರವಸೆ ಚಿತ್ರತಂಡಕ್ಕಿದೆ.





