– ರಾಘವೇಂದ್ರ ಅಡಿಗ ಎಚ್ಚೆನ್.
ಬಣ್ಣದಲೋಕಕ್ಕೆ ಹೊಸ ಪ್ರತಿಭೆಗಳ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ಬೆಂಗಳೂರು ಮೂಲದ ಯುವ ಉದ್ಯಮಿ ನಹೇಶ್ ಪೋಲ್ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಅಭಿಲಾಷೆಯಿಂದ ’ಎವರಿಒನ್ ವಾಂಟ್ಸ್ ದಿಸ್’ ಚಿತ್ರದ ಮೂಲಕ ಸಿನಿಮಾ ಪ್ರೇಮಿಗಳಿಗೆ ಒಂದು ಸುಂದರ ಸಿನಿಮ್ಯಾಟಿಕ್ ಅನುಭವ ನೀಡುವ ಅಭಿಲಾಷೆ ಹೊಂದಿದ್ದಾರೆ.

ಈ ಚಿತ್ರವನ್ನು ತಮ್ಮದೇ ರ‍್ಯಾಡಿಕಲ್ ಕಾನ್ಸೆಪ್ಟ್ಸ್ ಸ್ಡುಡಿಯೋ (Radical Concepts Studios) ಬ್ಯಾನರ್ ಅಡಿಯಲ್ಲಿ ನಿರ್ಮಾಣ, ಸಂಗೀತ, ನಿರ್ದೇಶನ ಅಲ್ಲದೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ಮತ್ತು ನೃತ್ಯ ಸಾಗರ್‌ಮೂರ್ತಿ, ಕಾರ್ಯಕಾರಿ ನಿರ್ಮಾಪಕ ಕೆ.ಬಾಲಸುಬ್ರಮಣ್ಯಂ, ಕಲೆ ದೀಪಿಕಾ ಮಾಚ್‌ಮೊಂಡ, ಕಾಸ್ಟ್ಯೂಮ್ ಶ್ರೀಧರ್‌ವೀರ್ ಅವರದಾಗಿದೆ.

ಪ್ರಚಾರದ ಮೊದಲ ಹಂತವಾಗಿ ಹಾಡಿನ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು 2026ರಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈಗಿನ ಸಿನಿಮಾವು ತೊಂಬತ್ತು ನಿಮಿಷವಾಗಿರುತ್ತದೆ.

ದುಡ್ಡಿನ ಆಸೆಗಾಗಿ ವಜ್ರ ದರೋಡೆ ಮಾಡಿದಾಗ, ಅದರಿಂದ ಮುಂದಾಗುವ ಅನಾಹುತಗಳನ್ನು ಕಾಮಿಡಿ ಹಾಗೂ ಥ್ರಿಲ್ಲರ್ ಮಾದರಿಯಲ್ಲಿ ಮನರಂಜನೆಯೊಂದಿಗೆ ತೋರಿಸಲಾಗುತ್ತಿದೆ ಎಂದು ನೆಹೇಶ್ ಪೋಲ್ ಮಾಹಿತಿ ನೀಡಿದರು.

ಅಕ್ಷರ ಸುರೇಶ್ ನಾಯಕಿ ಹಾಗೂ ಸಿನಿಮಾಕ್ಕೆ ಕಥೆ ಬರೆದು ಕ್ರಿಯೇಟೀವ್ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಹೇಳುವಂತೆ ಇದೊಂದು ಲವ್ ಸಾಂಗ್ ಆಗಿದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಸಾಹಿತ್ಯ ಬಳಸಿಕೊಳ್ಳಲಾಗಿದೆ.

ಒಟ್ಟು ಆರು ಹಾಡುಗಳು ಇರಲಿದೆ. ಪೇಪರ್ ವರ್ಕ್‌ನಂತೆ ಚಿತ್ರೀಕರಣ ನಡೆಸಿ, ಅಲ್ಲಿಯೇ ಸಂಕಲನವನ್ನು ಒಟ್ಟಿಗೆ ಮಾಡಲಾಗುವುದರಿಂದ ಸಮಯ ಉಳಿತಾಯವಾಗುತ್ತದೆ. ’ಮನರಂಜನೆ ಎಲ್ಲಾ ಕಡೆ’ ಎನ್ನುವ ಪರಿಕಲ್ಪನೆಯಲ್ಲಿ ನಮ್ಮದೆ ಅತ್ಯಾಧುನಿಕ ಪ್ರೊಜೆಕ್ಟರ್, 50 ಹೆಡ್ ಫೋನ್ಸ್‌ಗಳೊಂದಿಗೆ ಕಡಿಮೆ ದರದಲ್ಲಿ ಜನರಿಗೆ ಸಿನಿಮಾ ತೋರಿಸುವ ಇರಾದೆ ಇದೆ ಅಂತ ಎಲ್ಲವನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದರು. ಉಳಿದಂತೆ ತಾರಾಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದೆಂದು ಅಕ್ಷರ ಸುರೇಶ್ ಮಾತಿಗೆ ವಿರಾಮ ಹಾಕಿದರು.

3.43 ನಿಮಿಷದ ಗೀತೆಯಲ್ಲಿ ಆಯಾ ರಾಜ್ಯದ ಭಾಷೆಗಳಿಗೆ ತಕ್ಕಂತೆ ನಾಯಕ ಮತ್ತು ನಾಯಕಿ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆಯಿತು.





