ರಾಘವೇಂದ್ರ ಅಡಿಗ ಎಚ್ಚೆನ್.

‘ಬಿಗ್ ಬಾಸ್ ಕನ್ನಡ ಸೀಸನ್ 12 ಖ್ಯಾತಿಯ ಗಿಲ್ಲಿ ನಟ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ‘ಸರ್ಕಾರಿ ಶಾಲೆ H8’ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಗಿಲ್ಲಿ ಹಾಜರಾಗಿಲ್ಲ ಎಂದು ಆರೋಪಿಸಿ, ಸಿನಿಮಾ ತಂಡ ಫಿಲ್ಮ್ ಚೇಂಬರ್‌ಗೆ ದೂರು ನೀಡಿರುವುದು ಇದೀಗ ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ವಿಚಾರ ಚರ್ಚೆಯಲ್ಲಿರುವ ನಡುವೆಯೇ, ಮತ್ತೊಂದು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ನಟಿಗೆ ಹಿರಿಯರೊಬ್ಬರಿಂದ ಕಿವಿಮಾತು ಸಿಕ್ಕಿರುವುದು ಗಮನ ಸೆಳೆದಿದೆ. ‘ಸೂಪರ್ ಹಿಟ್’ ಹೆಸರಿನ ಚಿತ್ರದಲ್ಲಿ ಗೌರವ್ ಶೆಟ್ಟಿ ಜೊತೆ ಗಿಲ್ಲಿ ನಟಿಸುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯ ವೇದಿಕೆಯಲ್ಲೇ ಖ್ಯಾತ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಗಿಲ್ಲಿಗೆ ಕಿವಿಮಾತು ಹೇಳಿದ್ದಾರೆ.
“ನಿಂಗೆ ಚಾನ್ಸ್ ಕೊಟ್ಟವರನ್ನು ಯಾವಾಗಲೂ ಮರೆಯಬೇಡ” ಎಂದು ಅವರು ಹೇಳಿದ್ದು, ಈ ಮಾತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ನಟ ನಡೆನುಡಿಯಲ್ಲಿ ಬದಲಾವಣೆ ಆಗಿದೆ, ಚಾನ್ಸ್ ಕೊಟ್ಟವರನ್ನೇ ಮರೆತಿದ್ದಾರೆ ಎಂಬ ಮಾತುಗಳು ಈಗಾಗಲೇ ಹರಿದಾಡುತ್ತಿವೆ. ಈ ಹಿನ್ನೆಲೆ ನೋಡಿದರೆ, ನಾಗೇಂದ್ರ ಪ್ರಸಾದ್ ಅವರ ಮಾತು ಇದೇ ಪ್ರಕರಣಕ್ಕೆ ಸಂಬಂಧಪಟ್ಟಿತ್ತೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಈ ಎಲ್ಲ ಚರ್ಚೆಗಳ ಬಳಿಕ ಗಿಲ್ಲಿ ನಟ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಇತರೆ ಸಿನಿಮಾಗಳ ಕೆಲಸಗಳ ಒತ್ತಡ ಇತ್ತು. ಅದರಿಂದ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅವರಿಗೆ ಬೈಟ್ ಕೊಟ್ಟಿದ್ದೇನೆ. ಅದು ಅವರಿಗೆ ತಲುಪಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಫಿಲ್ಮ್ ಚೇಂಬರ್‌ಗೆ ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ” ಎಂದು ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗಮನಾರ್ಹ ಅಂಶವೆಂದರೆ, ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿತ್ತು. ದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಗಿಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಆ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಬಿಗ್ ಬಾಸ್ ಬಳಿಕ ಗಿಲ್ಲಿ ಅಭಿಮಾನಿ ಬಳಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಗಿಲ್ಲಿಗಾಗಿ ‘ಡೆವಿಲ್’ ಸಿನಿಮಾ ನೋಡಿದವರೂ ಇದ್ದರು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ