ಉಮಾ : ನಮ್ಮ ಬೆಂಗಳೂರಿಗರ ವೈಶಿಷ್ಟ್ಯ ಏನು ಗೊತ್ತೇ?
ಸುಮಾ : ಓಹೋ…. ನಮ್ಮವರಿಗೆ ಇಲ್ಲಿ ಕನ್ನಡ ಬರುತ್ತದೋ ಇಲ್ಲವೋ, ಜಾವಾ ಅಂತೂ ಬಹಳ ಚೆನ್ನಾಗಿ ಬರುತ್ತದೆ! ಆಗ್ರಾದ ತಾಜ್ ಮಹಲ್ ನೋಡಲು ಬಂದಿದ್ದ ಶಹಜಹಾನ್ ನ 6ನೇ ಪೀಳಿಗೆಯ ಮೊಮ್ಮಗ ಹೇಳಿದನಂತೆ, “ಇಂದು ನಮ್ಮದೂ ಬೇಕಾದಷ್ಟು ಬ್ಯಾಂಕ್ ಬ್ಯಾಲೆನ್ಸ್ ಉಳಿದಿರುತ್ತಿತ್ತು… ಅಂದು ನಮ್ಮ ಅಜ್ಜನಜ್ಜನ ಲವ್ ಕಂಟ್ರೋಲ್ ನಲ್ಲಿ ಇರಬೇಕಿತ್ತು!”
ಪಿ.ಯು.ಸಿ ಕಾಲೇಜಿನಲ್ಲಿ ಇಂಗ್ಲಿಷ್ ಕ್ಲಾಸ್ ನಡೆಯುತ್ತಿತ್ತು. ಹೊಸ ಮೇಡಂ ಉತ್ಸಾಹದಿಂದ ಕೊನೆ ಬೆಂಚಿನ ವೆಂಕಿಯನ್ನು ಕೇಳಿದರು, “ಏನ್ರಿ ವೆಂಕಿ, ಎದ್ದು ನಿಂತು ಹೇಳಿ. ಇಂಗ್ಲಿಷ್ ನಲ್ಲಿ ಗುಡಿಸಲಿಗೆ ಏನಂತಾರೆ?”
ಏನನ್ನೋ ಯೋಚಿಸುತ್ತಿದ್ದ ವೆಂಕಿಗೆ ಖಂಡಿತಾ ಉತ್ತರ ಹೊಳೆಯಲಿಲ್ಲ. ಅವನು ಎದ್ದು ನಿಂತು ಕಿಟಕಿಯಲ್ಲಿ ಇಣುಕಿದ. ಎಲ್ಲಿಂದಲೋ ಒಂದು ನೊಣ ಬಂದು ಅವನ ಮೂಗಿನ ಮೇಲೆ ಕೂರಲು `ಹಟ್’ ಎನ್ನುತ್ತಾ ಅದನ್ನು ಓಡಿಸಲು ಕೈ ಬೀಸಿದ.
“ಶಭಾಷ್! ಎಲ್ಲರೂ ವೆಂಕಿಯ ಹಾಗೆ ಅಲರ್ಟ್ ಆಗಿರಿ,” ಎಂದು ಹೊಸ ಮೇಡಂ ಹೇಳಲು ಕ್ಲಾಸು ದಂಗುಬಡಿಯಿತು.
ಕೋಲ್ಕತಾದಿಂದ ಬೆಂಗಳೂರಿನ ಕಾಲೇಜಿಗೆ ಹೊಸದಾಗಿ ಬಂದು ಸೇರಿದ್ದ ನಿವೇದಿತಾ, ಎಷ್ಟು ದಿನಗಳಾದರೂ ತನ್ನ ಹಳೆ ಊರಿನ ಬಗ್ಗೆ ಹೆಮ್ಮೆ ಕೊಚ್ಚಿಕೊಳ್ಳುವುದನ್ನು ಬಿಡಲಿಲ್ಲ. “ನಮ್ಮ ಕೋಲ್ಕತಾದ ಪಾನ್ ಮಸಾಲ ಎಂಥ ಗ್ರೇಟ್ ಗೊತ್ತಾ?” ಎಂದು ಮಾಮೂಲಾಗಿ ಶುರು ಹಚ್ಚಿಕೊಂಡಳು.
“ನಮ್ಮ ಬೆಂಗಳೂರಿನ ಬೆಣ್ಣೆ ಮಸಾಲೆಗಿಂತ ಅದು ಗ್ರೇಟಾ?” ಸರಕ್ಕನೆ ಸರಳಾ ತಿರುಗೇಟು ಕೊಟ್ಟಳು. ನಿವೇದಿತಾ ಅಂತೂ ಟೋಟಲಿ ತಬ್ಬಿಬ್ಬು!
ಹೊಸ ಹೋಟೆಲ್ ನ ಕೊನೆ ಟೇಬಲ್ ನಲ್ಲಿ ಕುಳಿತಿದ್ದ ಜೋಡಿಯೊಂದು ಬಹಳ ಹೊತ್ತಿನಿಂದ ಗುಸುಗುಸು ನಡೆಸಿತ್ತು. ಮಾಣಿ ಇಬ್ಬರಿಗೂ ಟೀ ತಂದಿಟ್ಟು ಹೋದ ಬಳಿಕ, ಹುಡುಗಿ ಎದ್ದವಳೇ ಸಿಡಾರನೇ ಹುಡುಗನ ಕೆನ್ನೆಗೊಂದು ಬಾರಿಸಿದಳು.
ಅಲ್ಲಿ ಕುಳಿತಿದ್ದ ಜನರೆಲ್ಲ ಏನಾಯ್ತೋ ಏನೋ ಎಂದು ಆ ಟೇಬಲ್ ಬಳಿ ಓಡಿಬಂದವರೇ, “ಏನಾಯ್ತು….? ಯಾಕೆ ಹೊಡೆದದ್ದು….?” ಎಂದು ವಿಚಾರಿಸಿದರು.
“ಇವನು…. ಇವನು… ನನ್ನ ಟೀಗೆ ಏನೋ ತಾಯಿತ ಹಾಕಿ ನನ್ನ ವಶೀಕರಣ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ…. ಆಮೇಲೆ ನನ್ನ ಗತಿ?” ಎಂದು ಬಡಬಡಿಸಿದಳು.
ಹುಡುಗ ತಕ್ಷಣ ತಡಬಡಾಯಿಸುತ್ತಾ…. “ಇ…ಇ… ಇಲ್ಲ…. ಟೀ ಸ್ಟ್ರಾಂಗ್ ಆಗಿಲ್ಲ ಅಂತ ಟೀ ಬ್ಯಾಗ್ ಹಾಕಿದ್ದಷ್ಟೇ….” ಎಂದು ಅವನು ಅದನ್ನು ಎತ್ತಿ ತೋರಿಸಿದಾಗ, `ಛೇ… ಇಷ್ಟೇನೇ….’ ಎಂದು ಏನೂ ಸ್ವಾರಸ್ಯ ಕಾಣದ ಆ ಮಂದಿ ಹುಡುಗಿಯನ್ನು ಗದರಿಕೊಂಡು ಹೊರಟರು.
ಹೊಸದಾಗಿ ಮೊಬೈಲ್ ಫೋನ್ ಖರೀದಿಸಿದ್ದ ಕಲ್ಲೇಶಿ, ಅರ್ಧ ಗಂಟೆಯಲ್ಲೇ ಅದೇ ಅಂಗಡಿಗೆ ಓಡಿ ಬಂದು ಕೇಳಿದ, “ನಾನು ಈ ಮೊಬೈಲ್ ಗೆ ಎಂಪಿ3 ಹಾಡುಗಳನ್ನು ಹಾಕಿಸಬೇಕು,” ಎಂದ.
ಅಂಗಡಿಯವನು ಕಲ್ಲೇಶಿಯತ್ತ ತಿರುಗಿ, “ನಿಮ್ಮ ಬಳಿ ಇದರ ಮೆಮರಿ ಕಾರ್ಡ್ ಇದೇ ತಾನೇ?” ಎಂದು ಕೇಳಿದ. ತಕ್ಷಣ ಅದಕ್ಕೆ ಕಲ್ಲೇಶಿ, “ಅದೇನೋ ಗೊತ್ತಿಲ್ಲ. ಆದರೆ ರೇಷನ್ ಕಾರ್ಡ್ ಇದೆ. ಅದು ಸಾಕಾಗೋದಿಲ್ವೇ…..?” ಅಂತ ಕೇಳುವುದೇ?
ಬಲು ರೊಮ್ಯಾಂಟಿಕ್ ಮೂಡ್ ನಲ್ಲಿ ಪುಟ್ನಂಜ ತನ್ನ ಗರ್ಲ್ ಫ್ರೆಂಡ್ ಗೆ ಕೇಳುತ್ತಿದ್ದ, “ಡಿಯರ್…. ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?”
ಪುಟ್ನಂಜಿ ಏನೂ ಕಡಿಮೆ ಇಲ್ಲದ ದನಿಯಲ್ಲಿ, “ಡಾರ್ಲಿಂಗ್, ನನ್ನನ್ನು ನೀನೆಷ್ಟು ಪ್ರೀತಿಸುವೆಯೋ ಅಷ್ಟೇ!” ಎಂದಳು.
“ಓ… ಹಾಗಂದ್ರೆ ನೀನೂ ಟೈಂಪಾಸಿಗಾಗಿ ಬಂದವಳು ಅನ್ನು…..” ಅರಿಯದೆ ಪುಟ್ನಂಜನ ಬಾಯಿ ಸತ್ಯ ನುಡಿದಿತ್ತು.
ಸುನೀಲ್ ಬಹಳ ದಿನಗಳಿಂದ ಕಾಲೇಜಿನ ಹೊಸ ಹುಡುಗಿ ದೀಪ್ತಿಯ ಹಿಂದೆಮುಂದೆ ಸುತ್ತುತ್ತಾ ಅವಳನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದ. ಅವಳಿಗಂತೂ ಇವನ ಓಲೈಸುವಿಕೆಯ ಪುರಾಣದಿಂದ ಬಹಳ ಬೋರ್ ಆಗಿತ್ತು. ಅವನಿಂದ ಬಿಡಿಸಿಕೊಳ್ಳುವ ವಿಧಾನ ಗೊತ್ತಾಗಲಿಲ್ಲ.
ಆ ದಿನ ಮಧ್ಯಾಹ್ನ 2 ಪಿರೀಯಡ್ ಲೆಟ್ ಆಫ್‌ಆಗಲು, ಎಲ್ಲರೂ ಹತ್ತಿರದ ಕಬ್ಬನ್ ಪಾರ್ಕಿನಲ್ಲಿ ಹೋಗಿ ಕುಳಿತರು. ಸುನೀಲ್ ಈ ಅವಕಾಶ ಬಿಟ್ಟಾನೆಯೇ?
ಅವನು ದೀಪ್ತಿ ಬಳಿ ಬಂದು ಯಾವುದೋ ಹೊಸ ಸಿನಿಮಾದ ಕಂತೆ ಪುರಾಣ ಬಿಚ್ಚಿಕೊಂಡ. ದೀಪ್ತಿ ಅವನ ಮಾತಿಗೆ ಸುಮ್ಮನೆ ಹ್ಞಾಂ ಹ್ಞೂಂ ಎನ್ನುತ್ತಾ ತನ್ನ ಬಳಿಯಿದ್ದ ಮಾಸಪತ್ರಿಕೆ ತಿರುವಿ ಹಾಕುತ್ತಿದ್ದಳು.
ಸ್ವಲ್ಪ ಹೊತ್ತಾದ ಮೇಲೆ ಸುನೀಲ್ ಅವಳನ್ನು ಪ್ರಶ್ನಿಸಿದ, “ನಾನು ಕಥೆ ಎಲ್ಲಿ ನಿಲ್ಲಿಸಿದ್ದೆ ಹೇಳು….”
“ನನಗೇನು ಗೊತ್ತು?” ನಿರ್ಲಕ್ಷ್ಯದಿಂದ ಉತ್ತರಿಸಿದಳು ದೀಪ್ತಿ.
ಅವನಿಗೆ ಅವಮಾನ ಎನಿಸಿ, “ನಿನಗೆ ಅಷ್ಟೂ ಗೊತ್ತಾಗೋಲ್ವೇ? ನಿನ್ನ ತಲೆಯಲ್ಲೇನು ಸಗಮಿ ತುಂಬಿದೆಯೇ?” ಎಂದು ಎಲ್ಲರ ಮುಂದೆ ಛೇಡಿಸಿದ.
ಈ ಸದವಕಾಶ ಬಿಡಬಾರದೆಂದು ಅವಳು, “ನಾನೇನೋ ನನ್ನ ತಲೆಯಲ್ಲಿ ಚಾಕಲೇಟ್ ತುಂಬಿದೆ, ಅದಕ್ಕೆ ನೀನು ಒಂದೇ ಸಮ ನನ್ನ ತಲೆ ತಿಂತಿದ್ದೀಯಾ ಅಂದುಕೊಂಡಿದ್ದೆ….. ಬರೀ ಸಗಣಿ ಇರುವಾಗಲೇ ಅದನ್ನು ಈ ರೀತಿ ತಲೆ ತಿಂತೀಯಾ…. ಇನ್ನು ಚಾಕಲೇಟ್ ಆಗಿದ್ದರೆ ನನ್ನ ಗತಿ ಏನು?” ಎಂದಾಗ ಅಲ್ಲಿದ್ದವರೆಲ್ಲ ಸುನೀಲ್ ನನ್ನು ಛೇಡಿಸಿ ಜೋರಾಗಿ ನಕ್ಕರು. ಇಂಗು ತಿಂದು ಮಂಗನಾಗಿದ್ದ ಸುನೀಲ್ ಅಲ್ಲಿಂದ ಎದ್ದು ಓಡಿಹೋದ.
ಕಾಲೇಜಿನ ಕಿಶೋರಿ ಕವಿತಾ ತನ್ನ ಚೆಲ್ಲಾಟಗಳಿಗೆ ಖ್ಯಾತಳಾಗಿದ್ದಳು. ಮನ ಬಂದಂತೆ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸುತ್ತಾ, ಅವರಿಂದ ಬೇಕು ಬೇಕಾದ ಕೆಲಸ ಮಾಡಿಸಿಕೊಂಡು ಮೆರೆಯುತ್ತಿದ್ದಳು.
ಹೀಗೆ ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಪ್ರೀಪೆಯ್ಡ್ ಆಗಿದ್ದ ಅವಳ ಮೊಬೈಲ್ ಕರೆನ್ಸಿ ಖಾಲಿ ಆಯ್ತು. ಅಲ್ಲಿದ್ದ ತನ್ನ ಗೆಳತಿಯರನ್ನು ಕಂಡು, “ನೋಡ್ರೇ… ಆ ಹೊಸ ಬಕರಾ ಕೈಲಿ ಒಂದು ನಿಮಿಷದಲ್ಲಿ ಈಗ ರೀಚಾರ್ಜ್ ಮಾಡಿಸ್ತೀನಿ!” ಎಂದು ರೋಫ್ ಹೊಡೆದು, ತನ್ನ ಹೊಸ ಬಾಯ್ ಫ್ರೆಂಡ್ ಗೆ ಗೆಳತಿಯ ಫೋನಿಂದ ಕಾಲ್ ಮಾಡಿದಳು.
“ಡಿಯರ್…. ಒಂದು ಸ್ಮಾಲ್ ಹೆಲ್ಪ್ ಪ್ಲೀಸ್… ಈಗ ಹೇಗಿದ್ದೀಯಾ? ಹುಷಾರಾಗಿದ್ದೀಯಾ ತಾನೇ….?
“ಹ್ಞೂಂ ಚೆನ್ನಾಗಿದ್ದೀನಿ…. ನೀನು ಹೇಳು,” ಎಂದು ಅಲ್ಲಿಂದ ಜವಾಬು ಬಂತು. ಸ್ಪೀಕರ್ ಆನ್ ಮಾಡಿ ಅವಳು ಗೆಳತಿಯರ ಎದುರು ತನ್ನ ಪ್ರತಾಪ ಕೊಚ್ಚಿಕೊಳ್ಳುತ್ತಿದ್ದಳು.
“ಒಂದು ಎಮರ್ಜೆನ್ಸಿ…. ಅದಕ್ಕೆ ನನ್ನ ಫ್ರೆಂಡ್ ಫೋನಿಂದ ಮಾತನಾಡುತ್ತಿದ್ದೀನಿ. ತಕ್ಷಣ ನನ್ನ ನಂಬರ್ ಗೆ 1000 ರೂ. ರೀಚಾರ್ಜ್ ಮಾಡಿಸ್ತೀಯಾ?”
“ಸಾರಿ ಸಿಸ್ಟರ್…. ಇದು ರಾಂಗ್ ನಂಬರ್! ನೀವು ಬೇರೆ ನಂಬರ್ ಗೆ ಪ್ರಯತ್ನಿಸಿ,” ಎಂದು ಇವಳ ಬಗ್ಗೆ ಗೆಳೆಯರಿಂದ ತಿಳಿದುಕೊಂಡಿದ್ದ ಆ ಕಿಲಾಡಿ ಕಾಲೆಳೆದಾಗ ತನ್ನ ಪೆದ್ದುತನ ಎಲ್ಲರ ಮುಂದೆ ಸಿಕ್ಕಿ ಹಾಕಿಕೊಂಡಿತಲ್ಲ ಎಂದು ಕವಿತಾ ಮಂಕಾದರೆ, ಅಲ್ಲಿದ್ದ ಇವಳ ಫ್ರೆಂಡ್ಸ್ ಜೋರಾಗಿ ಅಟ್ಟಹಾಸದಿಂದ ನಗುತ್ತಾ, ಇವಳನ್ನು ಕಿಚಾಯಿಸಿದರು.
ಅಂದು ರವಿ-ಶಶಿಕಲಾರ ಮದುವೆಯ ಆರತಕ್ಷತೆಗೆ ಅವರ ಇಡೀ ಆಫೀಸ್ ಸಿಬ್ಬಂದಿ ದಂಡು ದಾಳಿ ಸಮೇತ ಅಲ್ಲಿಗೆ ಬಂದಿಳಿಯಿತು.
ಶಶಿ ರವಿಗಿಂತ 7 ಇಂಚು ಕುಳ್ಳಿ. ಇದನ್ನು ಗಮನಿಸಿದ ಗುಂಡ ಸುಮ್ಮನಿರಲಾಗದೆ ಕೀಟಲೆ ಮಾಡಿದ, “ಏನೋ ರವಿ, ನಿನ್ನ ಹೆಂಡತಿ ನಿನಗಿಂತ ತುಂಬಾ ಕುಳ್ಳಿ……”
ಅದಕ್ಕೆ ರವಿ, “ಟೆನ್ಶನ್ ಅನ್ನೋದು ಎಷ್ಟು ಚಿಕ್ಕದಾಗಿರುತ್ತೋ ಅಷ್ಟೇ ಒಳ್ಳೆಯದು,” ಎಂದ.
ಅದಕ್ಕೆ ಕೂಡಲೇ ಶಶಿ, “ಇದರಲ್ಲಿ ಇನ್ನೊಂದು ಲಾಭ ಇದೆ! ಇವರು ಪ್ರತಿ ಸಲ ನನ್ನೊಂದಿಗೆ ಮಾತನಾಡುವಾಗ ದೃಷ್ಟಿ ತಗ್ಗಿಸಿ ಮಾತನಾಡಬೇಕು. ಆದರೆ ನಾನು ಮಾತ್ರ ತಲೆಯೆತ್ತಿ ಮಾತನಾಡ್ತೀನಿ!” ಎಂದಾಗ ಅಲ್ಲಿದ್ದವರೆಲ್ಲ ನವ ವಧುವಿನ ಜಾಣತನ ಮೆಚ್ಚಿಕೊಂಡರೆ, ವರ ನಾಚಿ ತಲೆ ತಗ್ಗಿಸಿದ.





