ಉಮಾ : ನಮ್ಮ ಬೆಂಗಳೂರಿಗರ ವೈಶಿಷ್ಟ್ಯ ಏನು ಗೊತ್ತೇ?
ಸುಮಾ : ಓಹೋ.... ನಮ್ಮವರಿಗೆ ಇಲ್ಲಿ ಕನ್ನಡ ಬರುತ್ತದೋ ಇಲ್ಲವೋ, ಜಾವಾ ಅಂತೂ ಬಹಳ ಚೆನ್ನಾಗಿ ಬರುತ್ತದೆ! ಆಗ್ರಾದ ತಾಜ್ ಮಹಲ್ ನೋಡಲು ಬಂದಿದ್ದ ಶಹಜಹಾನ್ ನ 6ನೇ ಪೀಳಿಗೆಯ ಮೊಮ್ಮಗ ಹೇಳಿದನಂತೆ, ``ಇಂದು ನಮ್ಮದೂ ಬೇಕಾದಷ್ಟು ಬ್ಯಾಂಕ್ ಬ್ಯಾಲೆನ್ಸ್ ಉಳಿದಿರುತ್ತಿತ್ತು... ಅಂದು ನಮ್ಮ ಅಜ್ಜನಜ್ಜನ ಲವ್ ಕಂಟ್ರೋಲ್ ನಲ್ಲಿ ಇರಬೇಕಿತ್ತು!''
ಪಿ.ಯು.ಸಿ ಕಾಲೇಜಿನಲ್ಲಿ ಇಂಗ್ಲಿಷ್ ಕ್ಲಾಸ್ ನಡೆಯುತ್ತಿತ್ತು. ಹೊಸ ಮೇಡಂ ಉತ್ಸಾಹದಿಂದ ಕೊನೆ ಬೆಂಚಿನ ವೆಂಕಿಯನ್ನು ಕೇಳಿದರು, ``ಏನ್ರಿ ವೆಂಕಿ, ಎದ್ದು ನಿಂತು ಹೇಳಿ. ಇಂಗ್ಲಿಷ್ ನಲ್ಲಿ ಗುಡಿಸಲಿಗೆ ಏನಂತಾರೆ?''
ಏನನ್ನೋ ಯೋಚಿಸುತ್ತಿದ್ದ ವೆಂಕಿಗೆ ಖಂಡಿತಾ ಉತ್ತರ ಹೊಳೆಯಲಿಲ್ಲ. ಅವನು ಎದ್ದು ನಿಂತು ಕಿಟಕಿಯಲ್ಲಿ ಇಣುಕಿದ. ಎಲ್ಲಿಂದಲೋ ಒಂದು ನೊಣ ಬಂದು ಅವನ ಮೂಗಿನ ಮೇಲೆ ಕೂರಲು `ಹಟ್' ಎನ್ನುತ್ತಾ ಅದನ್ನು ಓಡಿಸಲು ಕೈ ಬೀಸಿದ.
``ಶಭಾಷ್! ಎಲ್ಲರೂ ವೆಂಕಿಯ ಹಾಗೆ ಅಲರ್ಟ್ ಆಗಿರಿ,'' ಎಂದು ಹೊಸ ಮೇಡಂ ಹೇಳಲು ಕ್ಲಾಸು ದಂಗುಬಡಿಯಿತು.
ಕೋಲ್ಕತಾದಿಂದ ಬೆಂಗಳೂರಿನ ಕಾಲೇಜಿಗೆ ಹೊಸದಾಗಿ ಬಂದು ಸೇರಿದ್ದ ನಿವೇದಿತಾ, ಎಷ್ಟು ದಿನಗಳಾದರೂ ತನ್ನ ಹಳೆ ಊರಿನ ಬಗ್ಗೆ ಹೆಮ್ಮೆ ಕೊಚ್ಚಿಕೊಳ್ಳುವುದನ್ನು ಬಿಡಲಿಲ್ಲ. ``ನಮ್ಮ ಕೋಲ್ಕತಾದ ಪಾನ್ ಮಸಾಲ ಎಂಥ ಗ್ರೇಟ್ ಗೊತ್ತಾ?'' ಎಂದು ಮಾಮೂಲಾಗಿ ಶುರು ಹಚ್ಚಿಕೊಂಡಳು.
``ನಮ್ಮ ಬೆಂಗಳೂರಿನ ಬೆಣ್ಣೆ ಮಸಾಲೆಗಿಂತ ಅದು ಗ್ರೇಟಾ?'' ಸರಕ್ಕನೆ ಸರಳಾ ತಿರುಗೇಟು ಕೊಟ್ಟಳು. ನಿವೇದಿತಾ ಅಂತೂ ಟೋಟಲಿ ತಬ್ಬಿಬ್ಬು!
ಹೊಸ ಹೋಟೆಲ್ ನ ಕೊನೆ ಟೇಬಲ್ ನಲ್ಲಿ ಕುಳಿತಿದ್ದ ಜೋಡಿಯೊಂದು ಬಹಳ ಹೊತ್ತಿನಿಂದ ಗುಸುಗುಸು ನಡೆಸಿತ್ತು. ಮಾಣಿ ಇಬ್ಬರಿಗೂ ಟೀ ತಂದಿಟ್ಟು ಹೋದ ಬಳಿಕ, ಹುಡುಗಿ ಎದ್ದವಳೇ ಸಿಡಾರನೇ ಹುಡುಗನ ಕೆನ್ನೆಗೊಂದು ಬಾರಿಸಿದಳು.
ಅಲ್ಲಿ ಕುಳಿತಿದ್ದ ಜನರೆಲ್ಲ ಏನಾಯ್ತೋ ಏನೋ ಎಂದು ಆ ಟೇಬಲ್ ಬಳಿ ಓಡಿಬಂದವರೇ, ``ಏನಾಯ್ತು....? ಯಾಕೆ ಹೊಡೆದದ್ದು....?'' ಎಂದು ವಿಚಾರಿಸಿದರು.
``ಇವನು.... ಇವನು... ನನ್ನ ಟೀಗೆ ಏನೋ ತಾಯಿತ ಹಾಕಿ ನನ್ನ ವಶೀಕರಣ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ.... ಆಮೇಲೆ ನನ್ನ ಗತಿ?'' ಎಂದು ಬಡಬಡಿಸಿದಳು.
ಹುಡುಗ ತಕ್ಷಣ ತಡಬಡಾಯಿಸುತ್ತಾ.... ``ಇ...ಇ... ಇಲ್ಲ.... ಟೀ ಸ್ಟ್ರಾಂಗ್ ಆಗಿಲ್ಲ ಅಂತ ಟೀ ಬ್ಯಾಗ್ ಹಾಕಿದ್ದಷ್ಟೇ....'' ಎಂದು ಅವನು ಅದನ್ನು ಎತ್ತಿ ತೋರಿಸಿದಾಗ, `ಛೇ... ಇಷ್ಟೇನೇ....' ಎಂದು ಏನೂ ಸ್ವಾರಸ್ಯ ಕಾಣದ ಆ ಮಂದಿ ಹುಡುಗಿಯನ್ನು ಗದರಿಕೊಂಡು ಹೊರಟರು.
ಹೊಸದಾಗಿ ಮೊಬೈಲ್ ಫೋನ್ ಖರೀದಿಸಿದ್ದ ಕಲ್ಲೇಶಿ, ಅರ್ಧ ಗಂಟೆಯಲ್ಲೇ ಅದೇ ಅಂಗಡಿಗೆ ಓಡಿ ಬಂದು ಕೇಳಿದ, ``ನಾನು ಈ ಮೊಬೈಲ್ ಗೆ ಎಂಪಿ3 ಹಾಡುಗಳನ್ನು ಹಾಕಿಸಬೇಕು,'' ಎಂದ.
ಅಂಗಡಿಯವನು ಕಲ್ಲೇಶಿಯತ್ತ ತಿರುಗಿ, ``ನಿಮ್ಮ ಬಳಿ ಇದರ ಮೆಮರಿ ಕಾರ್ಡ್ ಇದೇ ತಾನೇ?'' ಎಂದು ಕೇಳಿದ. ತಕ್ಷಣ ಅದಕ್ಕೆ ಕಲ್ಲೇಶಿ, ``ಅದೇನೋ ಗೊತ್ತಿಲ್ಲ. ಆದರೆ ರೇಷನ್ ಕಾರ್ಡ್ ಇದೆ. ಅದು ಸಾಕಾಗೋದಿಲ್ವೇ.....?'' ಅಂತ ಕೇಳುವುದೇ?





