ಎಲ್ಲರೂ ಭೂಮಿಯಲ್ಲಿ ಯಾವುದೇ ನಿರ್ದಿಷ್ಟ ದೇಶ, ಸ್ಥಳ ಮನೆ ಹೊಂದಿದ್ದರೂ ಸಹ ಬಾಹ್ಯಾಕಾಶಕ್ಕೆ ಹೋದಾಗ ಇಡೀ ಭೂಮಿಯೇ ನಮ್ಮ ಮನೆ ಎಂದೆನಿಸುತ್ತದೆ. ಇದು ಬಾಹ್ಯಾಕಾಶ ಯಾನದ ಪ್ರಬಲ ಗುಣಲಕ್ಷಣ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಯು.ಎಸ್. ಇಂಡಿಯಾ ಸ್ಪೇಸ್ ಬಿಸಿನೆಸ್ ಫೋರಂ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿದ್ದ “ಎಎಕ್ಸ್-4 ಮಿಷನ್ ಟು ಐಎಸ್ಎಸ್ (ಇಸ್ರ್ಒ, ನಾಸಾ, ಇಎಸ್ಎ ಮತ್ತು ಸ್ಪೇಸ್ ಎಕ್ಸ್ ನಡುವಿನ ಸಹಯೋಗ) ಪಾಠಗಳು ಮತ್ತು ಮುಂದಿನ ದಾರಿ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಾಹ್ಯಾಕಾಶ ಯಾನ ಎಂಬುದು ಒಂದು ಉತ್ಸಾಹದ ವಿಷಯ. ಅದರ ಪರಿಶೋಧನೆಯು ವಿಷಯಗಳನ್ನು ನೋಡುವ ಮತ್ತು ಯೋಚಿಸುವ ನಮ್ಮ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಅದು ವಿಭಿನ್ನವಾಗಿ ಯೋಚಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ. ಭೂಮಿಯ ಕಕ್ಷೆಯನ್ನು ಮೀರಿ ಚಂದ್ರ ಮತ್ತು ಮಂಗಳ ಗ್ರಹಗಳನ್ನು ಅನ್ವೇಷಿಸಲು ಪ್ರಾರಂಭಿಸಿದಾಗ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳುತ್ತವೆ. ಅಲ್ಲಿಂದ ಹಿಂದಿರುಗಿ ಭೂಮಿಯನ್ನು ನೋಡುವುದು ಒಂದು ಅದ್ಭುತ ಅನುಭವ” ಎಂದು ಹೇಳಿದರು.
ಇಡೀ ಭೂಮಿಯೇ ನಮ್ಮ ಮನೆ: “ನಾವೆಲ್ಲಾ ಶಾಲೆಗೆ ಹೋಗಲು ಆರಂಭಿಸಿದಾಗ ತಂದೆ-ತಾಯಿ ಆಧಾರದಲ್ಲಿ ಗುರುತಿಸಲ್ಪಡುತ್ತೇವೆ. ಕಾಲೇಜಿಗೆ ಹೋಗುವಾಗ, ನೀವು ಓದಿದ ಶಾಲೆಯ ಗುರುತಾಗುತ್ತದೆ. ಒಂದು ಊರು ಅಥವಾ ದೇಶ ಬಿಟ್ಟು ಮತ್ತೊಂದು ಊರು ಅಥವಾ ದೇಶಕ್ಕೆ ಹೋದಾಗ, ನಿಮ್ಮ ಊರು ಕೂಡಾ ಗುರುತಾಗುತ್ತದೆ. ಭೂಮಿಯನ್ನು ಬಿಟ್ಟು ಬಾಹ್ಯಾಕಾಶಕ್ಕೆ ಹೋದಾಗ ಇಡೀ ಭೂಮಿಯೇ ನಿಮ್ಮ ಗುರುತಾಗುತ್ತದೆ” ಎಂದು ಹೇಳಿದರು.
“ಅಲ್ಲಿ ನಮಗೆ ಅಮೆರಿಕ, ಭಾರತ, ರಷ್ಯಾ ಎಂಬ ವಿಷಯವಿರುವುದಿಲ್ಲ. ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದಾಗ, ಇಡೀ ಭೂಮಿಯೇ ನಮ್ಮ ಮನೆ ಎಂದು ಭಾಸವಾಗುತ್ತದೆ. ಇದು ಬಾಹ್ಯಾಕಾಶ ಯಾನದ ಒಂದು ಪ್ರಬಲ ಗುಣಲಕ್ಷಣ” ಎಂದು ವಿವರಿಸಿದರು.
“2025ರ ಜೂನ್-ಜುಲೈ ಬಾಹ್ಯಾಕಾಶ ಯಾನವು ವೈವಿಧ್ಯತೆ ಮತ್ತು ಸಹಯೋಗದೊಂದಿಗೆ ಕೂಡಿತ್ತು. ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತ, ರಷ್ಯಾ, ಜಪಾನ್, ಅಮೆರಿಕ, ಪೋಲೆಂಡ್, ಹಂಗೇರಿ ಸೇರಿದಂತೆ ವಿವಿಧ ರಾಷ್ಟ್ರಗಳ 11 ಗಗನಯಾತ್ರಿಗಳು ಇದ್ದರು. ಒಟ್ಟಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲರೂ ಒಟ್ಟಾಗಿ ಪ್ರಯೋಗ ಮಾಡುತ್ತಿದ್ದೆವು. ಅಲ್ಲಿ ದೇಶಗಳ ನಡುವೆ ಭೇದವಿರಲಿಲ್ಲ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೆವು” ಎಂದು ವಿವರಿಸಿದರು.
ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಮಾತನಾಡಿ, “ಭಾರತದ ಗಗನಯಾತ್ರಿ ದಳವು ಒಂದೇ ಬಾರಿಗೆ ನಡೆಯುವ ಪ್ರಯೋಗವಲ್ಲ. ಅದು ಶಾಶ್ವತ ರಾಷ್ಟ್ರೀಯ ಸಾಮರ್ಥ್ಯ. ಬಾಹ್ಯಾಕಾಶ ಕೇವಲ ಒಂದು ಕ್ಷೇತ್ರವಲ್ಲ. ಅದು ಭಾರತ ಮತ್ತು ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನದ ಹೊಸ ಶಕ್ತಿಯ ಸಂಕೇತ. ಬಾಹ್ಯಾಕಾಶ ಕೇವಲ ರಾಕೆಟ್ ಮತ್ತು ಸ್ಯಾಟಲೈಟ್ ಮಾತ್ರವಲ್ಲ, ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ “ಡೇಟಾ ಸೆಂಟರ್”ಗಳನ್ನು ಸ್ಥಾಪಿಸುವ ಬಗ್ಗೆ ನಾವು ಯೋಚಿಸಬೇಕು. ತಂತ್ರಜ್ಞಾನದ ಜತೆಗೆ ಮಾನವೀಯ ಸ್ಪರ್ಶವಾದಿ “ಕಲೆ” ಕೂಡಾ ಈ ಸಹಭಾಗಿತ್ವದಲ್ಲಿ ಇರಬೇಕು“ ಎಂದರು.
ಎಲ್ಪಿಎಸ್ಸಿ ಸಹಾಯಕ ನಿರ್ದೇಶಕ ಆರ್.ಹಟ್ಟನ್ ಉಪಸ್ಥಿತರಿದ್ದರು.





