ರಾಷ್ಟ್ರೀಯ ಗೀತೆ “ವಂದೇ ಮಾತರಂ”ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ.

“ಜನ ಗಣ ಮನ”ಕ್ಕೂ ಮೊದಲು, ‘ವಂದೇ ಮಾತರಂ’ ಕಡ್ಡಾಯವಾಗಿ 2 ಚರಣದ ಬದಲು 3 ನಿಮಿಷ 10 ಸೆಕೆಂಡ್‌ ಅವಧಿ ಹೊಂದಿರುವ ಪೂರ್ತಿ ಹಾಡಬೇಕು.

ಕೇಂದ್ರ ಗೃಹ ಸಚಿವಾಲಯ ನಿಯಮಗ ಅನ್ವಯ, ‘ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಷ್ಟ್ರಗೀತೆ “ಜನ ಗಣ ಮನ”ಕ್ಕೂ ಮೊದಲು, “ವಂದೇ ಮಾತರಂ” ಗೀತೆಯನ್ನು ಕಡ್ಡಾಯವಾಗಿ ಮೊದಲಿನ 2 ಚರಣದ ಬದಲು 3 ನಿಮಿಷ 10 ಸೆಕೆಂಡ್‌ ಅವಧಿ ಹೊಂದಿರುವ ಪೂರ್ತಿ (ಎಲ್ಲ 6 ಚರಣ) ಹಾಡಬೇಕು ಅಥವಾ ನುಡಿಸಬೇಕು  ಎಂದು ಸೂಚಿಸಿದೆ.

“ಸರ್ಕಾರದ ಪ್ರಶಸ್ತಿ ಪ್ರದಾನ ಸೇರಿದಂತೆ ರಾಷ್ಟ್ರಪತಿಗಳು ಭಾಗಿಯಾಗುವ ಎಲ್ಲಾ ಸಮಾರಂಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ವಂದೇ ಮಾತರಂ ಮೊಳಗಬೇಕು. ಶಾಲೆ-ಕಾಲೇಜುಗಳಲ್ಲೂ ಪ್ರಾರ್ಥನೆ ವೇಳೆ ಗೀತೆ ಹಾಡಬೇಕು. ಈ ವೇಳೆ ಕಡ್ಡಾಯವಾಗಿ ಎದ್ದು ನಿಲ್ಲಬೇಕು” ಎಂದು ಹೊಸ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರವಾಗುವ ಸಾಕ್ಷ್ಯಚಿತ್ರ ಅಥವಾ ಸಿನಿಮಾಗಳ ಮಧ್ಯೆ ಇದು ಪ್ರಸಾರವಾದರೆ ಜನರು/ಪ್ರೇಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿ ಬರೆದ ಈ ಗೀತೆಗೆ ಸಂಬಂಧಿಸಿದ ಈ ಆದೇಶ ಪ.ಬಂಗಾಳ ಚುನಾವಣೆ ಹೊಸ್ತಿಲಲ್ಲೇ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಇದು ಬಿಜೆಪಿ ಹಾಗೂ ಇಂಡಿಯಾ ಕೂಟದ ಟಿಎಂಸಿ-ಸಿಪಿಎಂ-ಕಾಂಗ್ರೆಸ್‌ ನಡುವೆ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ. ಏಕೆಂದರೆ ಈವರೆಗೆ ಗೀತೆಯ 2 ಚರಣಕ್ಕೆ ಮಾತ್ರ ಅನುಮೋದನೆ ಇತ್ತು. ಉಳಿದ 4 ಚರಣಗಳಿಗೆ ವಿಪಕ್ಷಗಳ ವಿರೋಧವಿತ್ತು.

ವಿವಾದ ಏನು?: ವಂದೇ ಮಾತರಂ 1870ರ ದಶಕದಲ್ಲಿ ಬಂಗಾಳಿ ಕವಿ ಬಂಕಿಮಚಂದ್ರ ಚಟರ್ಜಿ ಬರೆದ ದೇಶಭಕ್ತಿಯ ಕವಿತೆಯಾಗಿದ್ದು, ಇದನ್ನು ಮೊದಲು 1882ರಲ್ಲಿ ಅವರ ಬಂಗಾಳಿ ಕಾದಂಬರಿ ‘ಆನಂದಮಠ’ದಲ್ಲಿ ಪ್ರಕಟಿಸಲಾಯಿತು. ಇದರ ಆರಂಭಿಕ ಸಾಲಿನ ಅರ್ಥ “ನಾನು ನಿನಗೆ ನಮಸ್ಕರಿಸುತ್ತೇನೆ, ತಾಯಿ”. ಇದು ಮಾತೃಭೂಮಿಯನ್ನು ಉಲ್ಲೇಖಿಸುತ್ತದೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಸಂಕೇತವಾಯಿತು. 1937ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು. ಆದರೆ ಮೊದಲ 2 ಚರಣ ಮಾತ್ರ ಬಳಸಲು ನಿರ್ಧರಿಸಿ ಉಳಿದ ಚರಣಗಳನ್ನು ಕೈಬಿಟ್ಟಿತ್ತು. ಏಕೆಂದರೆ ಉಳಿದ 4ರಲ್ಲಿ ದುರ್ಗಾ ಮಾತೆಯ ಗುಣಗಾನದ ಅಂಶಗಳಿದ್ದವು. ಏಕದೇವೋಪಾಸಕರಾದ ಮುಸ್ಲಿಮರು ಉಳಿದ ಚರಣಗಳಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದ್ದ ಕಾರಣ, ಜಾತ್ಯತೀತತೆ ಸಾರುವ ದೃಷ್ಟಿಯಿಂದ ಗಾಯನದಿಂದ ಉಳಿದ 4 ಚರಣ ಕೈಬಿಡಲಾಗಿತ್ತು. ಆದರೆ, ಇದೀಗ 1937ರಲ್ಲಿ ತೆಗೆದುಹಾಕಿದ್ದ 4 ಚರಣಗಳನ್ನೂ ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಲಾಗಿದೆ.

ಜಟಾಪಟಿ: ಕಳೆದ ವರ್ಷ ಗೀತೆಯ ಉಳಿದ 4 ಚರಣಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು. ಇದು ಬಿಜೆಪಿ ಮತ್ತು ವಿಪಕ್ಷದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿತ್ತು. ಇದೀಗ ಸರ್ಕಾರ ಹೊರಡಿಸಿದ ಆದೇಶ ಮತ್ತೆ ಜಟಾಪಟಿಗೆ ನಾಂದಿ ಹಾಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿದ್ದು, ‘1937ರಲ್ಲಿ, ರವೀಂದ್ರನಾಥ ಟ್ಯಾಗೋರ್ ಅವರ ಸಲಹೆ ಅನುಸರಿಸಿ ಜವಾಹರಲಾಲ್ ನೆಹರು ಅವರು ಈ ಹಾಡಿನ ಕೆಲವು ಭಾಗಗಳನ್ನು ಮಾತ್ರ ಅಳವಡಿಸಿಕೊಳ್ಳಲು ನಿರ್ಧರಿಸಿದ್ದರು. ನಂತರ, ಆ ಭಾಗಕ್ಕೆ ಮಾತ್ರ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಗಿತ್ತು. ಈಗ ಬಿಜೆಪಿ ಸರ್ಕಾರ ಆ ಇತಿಹಾಸವನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಒಂದು ದಿನವೂ ಕಂಬಿಗಳ ಹಿಂದೆ ಕಳೆಯದವರು ಈಗ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ ಎಂದು ಕಿಡಿಕಾರಿದೆ.

ಸಿಪಿಎಂ ಕೇಂದ್ರ ಸಮಿತಿ ಪ್ರತಿಕ್ರಿಯಿಸಿ, ‘ದೇಶದ ತುರ್ತು ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿ ವಂದೇ ಮಾತರಂ ಸುತ್ತ ಹೊಸ ನಿರೂಪಣೆಯನ್ನು ರಚಿಸಲು ಪ್ರಯತ್ನಿಸುತ್ತಿದೆ’ ಎಂದಿದೆ. ಆದರೆ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ