ಕರ್ನಾಟಕದ ಭವ್ಯ ವಾಸ್ತುಶಿಲ್ಪವುಳ್ಳ ದೇವಾಲಯಗಳಲ್ಲಿ ಕೆಳದಿ ಹಾಗೂ ಇಕ್ಕೇರಿಯ ದೇವಾಲಯಗಳು ತಮ್ಮದೇ ಆದ ವಿಶಿಷ್ಟ ಶಿಲ್ಪಕಲಾ ಸೌಂದರ್ಯ ಹೊಂದಿವೆ. ಇವುಗಳ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ….?
ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯದಲ್ಲಿರುವ 500 ವರ್ಷಗಳ ಹಿಂದಿನ ಕೆಳದಿ ಹಾಗೂ ಇಕ್ಕೇರಿಯ ದೇವಾಲಯಗಳು ಹೊಯ್ಸಳ, ದ್ರಾವಿಡ, ಪರ್ಷಿಯನ್ ಹಾಗೂ ಗ್ರೀಕ್ ಶೈಲಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೆಲೆವೀಡು.
ಕೆಳದಿ ಹಾಗೂ ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಆರು ಕಿ.ಮೀ. ದೂರದಲ್ಲಿದೆ.

ಇತಿಹಾಸ
ಕೆಳದಿ ಹಾಗೂ ಇಕ್ಕೇರಿಯ ರಾಜರು 1499-1763ರವರೆಗೆ ನಮ್ಮ ಕರ್ನಾಟಕ ರಾಜ್ಯವನ್ನಾಳಿದ ಭಾರತೀಯ ರಾಜವಂಶವಾಗಿದೆ. ಇಕ್ಕೇರಿ 16 ಮತ್ತು 17ನೇ ಶತಮಾನಗಳಲ್ಲಿ ಕೆಳದಿ ಅರಸರ ವೈಭಾನ್ವಿತ ರಾಜಧಾನಿಯಾಗಿ ಮೆರೆಯಿತು. ಕೆಳದಿ ಹಾಗೂ ಇಕ್ಕೇರಿ ಸಂಸ್ಥಾನ 1565ರವರೆಗೆ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿತ್ತು. ತದನಂತರ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಆನಂತರ ಕೆಳದಿ ರಾಜರು ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು.

ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವನ್ನು ಬಹಳ ಕಾಲ ಪಡೆದಿತ್ತು. ಇಕ್ಕೇರಿ ದೇವಾಲಯದ ಎರಡೂ ಬದಿಗಳಲ್ಲಿ ಕೆರೆ ಇದ್ದುದರಿಂದ ಈ ಊರಿಗೆ ಇಕ್ಕೇರಿ ಎಂಬ ಹೆಸರು ಬಂದಿದೆ ಎಂಬ ಊಹೆ ಇದೆ ಹಾಗೂ ಕೆಳದಿ ರಾಜರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಚೌಡಯ್ಯ ನಾಯಕ, ಸದಾಶಿವಪ್ಪ ನಾಯಕ, ಶಂಕರ ನಾಯಕ, ಚಿಕ್ಕಶಂಕರ ನಾಯಕ, ವೀರಭದ್ರ ನಾಯಕ ಹೀಗೆ ಹಲವು ರಾಜರುಗಳು ಆಳಿದ್ದರು ಎಂದು ಇತಿಹಾಸ ಹೇಳುತ್ತದೆ.

ಇಕ್ಕೇರಿಯ ಆಘೋರೇಶ್ವರ ದೇವಾಲಯದ ದಂತಕಥೆ : ಹಿಂದೆ ಸದಾಶಿವಪ್ಪ ನಾಯಕ ಕೆಳದಿಯನ್ನು ಆಳುವಾಗ ಇಕ್ಕೇರಿ ಸಂಪೂರ್ಣ ಕಾಡಿನಿಂದ ತುಂಬಿತ್ತು. ಒಮ್ಮೆ ಒಬ್ಬ ರಾಜ ಹುಲಿ ಬೇಟೆಗೆಂದು ಇಕ್ಕೇರಿಯ ಕಾಡಿಗೆ ತನ್ನ ನಾಯಿಯೊಂದಿಗೆ ಬಂದಾಗ, ನಾಯಿ ಚಿಕ್ಕ ಮೊಲವನ್ನು ನೋಡಿ ಹೆದರಿ ಓಡಿಹೋಗುತ್ತದೆ. ತನ್ನ ನಾಯಿ ಎಲ್ಲಾ ಹುಲಿಯನ್ನು ಬೇಟೆಯಾಡುತ್ತದೆ. ಆದರೆ, ಈ ಚಿಕ್ಕ ಮೊಲಕ್ಕೆ ಏಕೆ ಹೆದರಿತು ಎಂದು ರಾಜ, ಜ್ಯೋತಿಷಿಯನ್ನು ಕೇಳಿದಾಗ, ಈ ಭೂಮಿ ಗಂಡುಮೆಟ್ಟಿದ ಭೂಮಿ. ಇಲ್ಲಿ ನೀವು ಅಘೋರೇಶ್ವರ ದೇವಾಲಯವನ್ನು ನಿರ್ಮಿಸಿ ಎಂದು ಹೇಳಿದರು. ಅದೇ ಕಾರಣದಿಂದ ಕೆಳದಿ ರಾಜ ತನ್ನ ರಾಜ್ಯಭಾರವನ್ನು ಇಕ್ಕೇರಿಗೆ ವರ್ಗಾವಣೆ ಮಾಡಿದನು. ನಂತರ ಇಕ್ಕೇರಿಯಲ್ಲಿ 32 ಶ್ರೀಶಕ್ತಿ ದೇವತೆಯ ಪೀಠದ ಮೇಲೆ ಅಘೋರೇಶ್ವರ ಮೂರ್ತಿಯನ್ನು ಸ್ಥಾಪಿಸಲಾಯಿತು. ಈ ಅಘೋರೇಶ್ವರ 1 ತಲೆ, 32 ಕೈಗಳು, 32 ಭುಜಗಳಿದ್ದು, 32 ವಿಧದ ಆಯುಧವನ್ನು ಹಿಡಿದ ಮೂರ್ತಿಯಾಗಿತ್ತು. ಆದರೆ ಬಿಜಾಪುರದ ಮೇಲೆ ದಂಡೆತ್ತಿ ಬಂದ ಸುಲ್ತಾನರು ಮತ್ತು ಮೊಘಲರು ನಿಧಿಗಾಗಿ ಅಘೋರೇಶ್ವರ ಮೂರ್ತಿಯನ್ನು ತುಂಡರಿಸಿ ನಾಶ ಮಾಡಿ ನಿಧಿಯನ್ನು ದೋಚಿದರು. ಈಗ ದೇವಾಲಯದ ಆವರಣದಲ್ಲಿ ಅಘೋರೇಶ್ವರನ ಅವಶೇಷವನ್ನು ನಾವು ನೋಡಬಹುದಾಗಿದೆ. ನಂತರ ಮತ್ತೆ ಹೊಸದಾಗಿ ಶಿವನ ಲಿಂಗವನ್ನು ಸ್ಥಾಪಿಸಲಾಯಿತು.

ವಾಸ್ತುಶಿಲ್ಪ
ಸದಾಶಿವಪ್ಪ ನಾಯಕನ ಕಾಲದಲ್ಲಿ ನಿರ್ಮಿಸಲಾದ ಕೆಳದಿ, ಇಕ್ಕೇರಿಯ ದೇವಾಲಯಗಳನ್ನು ವಾಸ್ತುಶಿಲ್ಪ ಹಾಗೂ ಆಗಮಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ಇಕ್ಕೇರಿಯ ಅಘೋರೇಶ್ವರ ದೇವಾಲಯದ ಒಳಭಾಗದಲ್ಲಿರುವ ಕಂಬಗಳನ್ನು ಹೊಯ್ಸಳ ಹಾಗೂ ದ್ರಾವಿಡ ಶೈಲಿಯಲ್ಲಿ ಕೆತ್ತಲಾಗಿದ್ದು, ಗಂಡಭೇರುಂಡ ಕೆಳದಿ ರಾಜರ ಲಾಂಛನವಾಗಿತ್ತು ಎನ್ನಲಾಗಿದೆ. ದೇವಾಲಯದ ಎದುರು 2 ಕಲ್ಲಿನ ಆನೆಗಳನ್ನು ನೋಡಬಹುದು. ಈ ಆನೆಗಳು ದೇವಾಲಯ ಕಟ್ಟುವ ಸಮಯದಲ್ಲಿ ಇಟ್ಟಿಗೆ, ಕಲ್ಲುಗಳನ್ನು ತಂದು ಸಹಾಯ ಮಾಡಿದ ಎಂಬ ನಂಬಿಕೆ ಇದೆ. ಅದರ ನೆನಪಿಗಾಗಿ ಸುಂದರವಾದ ಕಲ್ಲಿನ ಆನೆಗಳನ್ನು ಕೆತ್ತಲಾಗಿದೆ. ಹೊರಾಂಗಣದಲ್ಲಿ ಮಹಾನಂದಿಯನ್ನು ಸ್ಥಾಪಿಸಲಾಗಿದ್ದು, ಇದರ ದೃಷ್ಟಿ ನೇರ ಶಿವನ ಮೇಲಿದೆ. ಆದಾಗ್ಯೂ ಶಿವ ಹಾಗೂ ನಂದಿಗೆ ಅಂತರ ಜಾಸ್ತಿ ಇರುವುದರಿಂದ ಶಿವನ ಗರ್ಭಗುಡಿಯಲ್ಲಿ ಸಣ್ಣ ನಂದಿಯನ್ನು ಸ್ಥಾಪಿಸಲಾಗಿದೆ. ಇದನ್ನು ಆಗಮ ಶಾಸ್ತ್ರದ ಪ್ರಕಾರ ಅಮೃತಶಿಲೆಯಲ್ಲಿ ನಿರ್ಮಿಸಲಾಗಿದೆ.

ಇನ್ನು ನಾವು, ಕೆಳದಿಯಲ್ಲಿ ವೀರಭದ್ರ ಸ್ವಾಮಿ, ಶಿವ ಹಾಗೂ ಪಾರ್ವತಿ ದೇವಾಲಯವನ್ನು ನೋಡಬಹುದು. ಒಮ್ಮೆ ಕೆಳದಿ ರಾಜನ ಕನಸಿನಲ್ಲಿ ಕಾಶಿ ವಿಶ್ವನಾಥ ಬಂದು, ವೀರಭದ್ರ ಸ್ವಾಮಿ ವಿಗ್ರಹವನ್ನು ಸ್ಥಾಪಿಸಲು ಆದೇಶ ನೀಡಿದನು ಎನ್ನಲಾಗಿದೆ. ಅದೇ ರೀತಿ ಕೆಳದಿಯಲ್ಲಿ ವೀರಭದ್ರ ಸ್ವಾಮಿ ವಿಗ್ರಹವನ್ನು ಸ್ಥಾಪಿಸಲಾಯಿತು. ಇಲ್ಲಿ ಅಷ್ಟದಿಕ್ಪಾಲಕರನ್ನು ಚಂದನ ಮರದಲ್ಲಿ ಸುಂದರವಾಗಿ ಕೆತ್ತಲಾಗಿದೆ. ಒಟ್ಟಿನಲ್ಲಿ ಕೆಳದಿ ಹಾಗೂ ಇಕ್ಕೇರಿ ನಮ್ಮ ಕರ್ನಾಟಕದ ರಾಜರ ಇತಿಹಾಸವನ್ನು ಸಾರುವ ಹೆಮ್ಮೆಯ ನೆಲೆವೀಡಾಗಿದ್ದು ದೇವಾಲಯದ ವಾಸ್ತುಶಿಲ್ಪ ಮನೋಹರವಾಗಿದೆ.
– ಸಂಜ್ಞಾ ಪಿ. ಭಟ್





