ಶೈಕ್ಷಣಿಕ ಮಾರ್ಗದರ್ಶನದ ಮಾಹಿತಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 200 ವರ್ಷಗಳ ಇತಿಹಾಸವನ್ನು ಬಿಂಬಿಸುವ ‘ಕಾನ್ಧಾರಿ’ ಕನ್ನಡ ಚಲನಚಿತ್ರದ ಟೀಸರ್ನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಸಂಸದರು, ಉತ್ತರ ಕನ್ನಡ ಜಿಲ್ಲೆಯು ಮೊದಲಿನಿಂದಲೂ ರಾಜ್ಯ ಮತ್ತು ದೇಶದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಅನೇಕ ವಿದೇಶಿಗರು ಇಲ್ಲಿಗೆ ಬಂದಿದ್ದಾರೆ. ಹಿಂದೆ ರಾಜ-ಮಹಾರಾಜರು ಹಾಗೂ ಸಾವಂತರ ಆಳ್ವಿಕೆಯಲ್ಲಿ ಜಿಲ್ಲೆಯು ಸಂಪದ್ಭರಿತವಾಗಿತ್ತು ಎಂದರು.

ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧರಾದ ಗೇರುಸೊಪ್ಪೆಯ ಚೆನ್ನಭೈರಾದೇವಿಯ ಶೌರ್ಯದ ಚಿತ್ರಣದೊಂದಿಗೆ ಈ ಸಿನಿಮಾ ಪ್ರಾರಂಭವಾಗುತ್ತದೆ. ಪರಕೀಯರ ಸವಾಲುಗಳನ್ನು ಹಿಮ್ಮೆಟ್ಟಿಸಿ ಉತ್ತಮ ಆಳ್ವಿಕೆ ನಡೆಸಿದ್ದ ಆಕೆ, ಜಿಲ್ಲೆಯ ಪ್ರಮುಖ ಬೆಳೆಯಾದ ಕಾಳುಮೆಣಸಿಗೆ ವಿದೇಶಿ ಮಾರುಕಟ್ಟೆ ಒದಗಿಸಿ ರೈತರ ಪಾಲಿನ ಆಶಾಕಿರಣವಾಗಿದ್ದರು. ಜಿಲ್ಲೆಯ ನದಿ, ಸಂಸ್ಕೃತಿ, ವನವಾಸಿಗಳ ಜೀವನ ಪದ್ಧತಿ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಿರ್ದೇಶಕ ವಿನಾಯಕ ಹೆಗಡೆ ಬೊಮ್ನಳ್ಳಿ ಮಾತನಾಡಿ, ಶೇ. 86ರಷ್ಟು ಅರಣ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲೇ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಸುಮಾರು 100 ನಿಮಿಷಗಳ ಈ ಚಿತ್ರವನ್ನು ಮಾಹಿತಿ ಮತ್ತು ತಂತ್ರಜ್ಞಾನದ ದೃಷ್ಟಿಕೋನದಲ್ಲಿ ಸಿದ್ಧಪಡಿಸಲಾಗಿದೆ. ಆಖ್ಯಾನ ಪ್ರೊಡಕ್ಷನ್ ಅಡಿಯಲ್ಲಿ ಸುಪ್ರೀತ ಹೆಗಡೆ ಸೋಮನಮನೆ ಇದನ್ನು ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರಕ್ಕೆ ಕೆ.ಎಂ. ಪ್ರಕಾಶ್ ಸಂಕಲನ, ಕವಿರಾಜ್ ಸಾಹಿತ್ಯ ಹಾಗೂ ಹರ್ಷವರ್ಧನ ರಾಜ್ ಸಂಗೀತ ನೀಡಿದ್ದಾರೆ. ಮದನ ನಾಯ್ಕ ಮತ್ತು ದೀಪಕ ನಾಯ್ಕ ಬೆಳಲೆ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರವು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಬೆಂಬಲಿಸಬೇಕೆಂದು ತಂಡ ವಿನಂತಿಸಿದೆ.

ಈ ಸಂದರ್ಭದಲ್ಲಿ ದೀಪಕ, ಮದನ, ಸದಾನಂದ ಭಟ್ಟ ನಿಡಗೋಡ, ಉಷಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ