ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ನ 36 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮಿನಾಬ್ ನಗರದಲ್ಲಿ ದಾಳಿ ನಡೆದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರದ ನ್ಯೂಸ್ ಏಜೆನ್ಸಿ IRNA ವರದಿ ಮಾಡಿದೆ.

ಬಾಂಬ್ ದಾಳಿಯ ಸಮಯದಲ್ಲಿ ಶಾಲೆಯ ಮೇಲೆ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ.ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿ ವೇಳೆ ಇರಾನ್‌ನಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಸಂಬಂಧಿಸಿದ ಕಚೇರಿಗಳ ಬಳಿ ಕೆಲವು ಆರಂಭಿಕ ದಾಳಿಗಳು ಸಹ ವರದಿಯಾಗಿವೆ. ಆದರೆ ರಾಜಧಾನಿ ಟೆಹ್ರಾನ್‌ನ ಕೆಲವು ಭಾಗಗಳಿಂದ ಹೊಗೆ ಮೇಲೇರುತ್ತಿರುವುದು ಕಂಡುಬಂದಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳು ವರದಿಯಾಗಿವೆ.“ಪ್ರಮುಖ ಯುದ್ಧ ಕಾರ್ಯಾಚರಣೆಗಳು” ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, 1979ರ ಕ್ರಾಂತಿಯ ನಂತರ ಇರಾನ್ ಅನ್ನು ಆಳುತ್ತಿರುವ ದೇಶದ ಇಸ್ಲಾಮಿಕ್ ನಾಯಕತ್ವವನ್ನು ಪ್ರಶ್ನಿಸುವಂತೆ ಇರಾನಿನ ಸಾರ್ವಜನಿಕರಿಗೆ ಟ್ರಂಪ್​ ಒತ್ತಾಯಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೂಡ ಇದೇ ರೀತಿ ಹೇಳಿಕೆ ನೀಡಿದ್ದಾರೆ.ಎಂಟು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕ ಇರಾನ್ ವಿರುದ್ಧ ಮಿಲಿಟರಿ ಪಡೆ ಬಳಸಿದ್ದು, ವೈಮಾನಿಕ ದಾಳಿ ಮತ್ತಷ್ಟು ಸಂಘರ್ಷ ಹೆಚ್ಚಿಸುವ ಸಾಧ್ಯತೆಯಿದೆ. ಪರಮಾಣು ಕಾರ್ಯಕ್ರಮ ನಿಲ್ಲಿಸುವಂತೆ ಇರಾನ್ ಮೇಲೆ ಪದೇ ಪದೇ ಒತ್ತಡ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಸೈನಿಕರ ನಿಯೋಜನೆ ಸೇರಿದಂತೆ ಹಲವು ವಾರದಿಂದ ಉದ್ವಿಗ್ನತೆ ಹೆಚ್ಚಾದ ಬಳಿಕ ದಾಳಿ ನಡೆಸಲಾಗಿದೆ.

ಇರಾನ್​ ಕೂಡ ಇಸ್ರೇಲ್​ ಸೇರಿದಂತೆ ಒಟ್ಟು 8 ದೇಶಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ನ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಬಹ್ರೇನ್, ಕುವೈತ್ ಮತ್ತು ಕತಾರ್ ನಲ್ಲಿ ಅಮೆರಿಕ ಮಿಲಿಟರಿ ಕಟ್ಟಡಗಳ ಮೇಲೆ ದಾಳಿ ನಡೆಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ