ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ (56) ಅವರನ್ನು ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾರ್ಮಿಕ ಪಂಡಿತರನ್ನೊಳಗೊಂಡ ಸಂಸ್ಥೆ Assembly of Experts ಆಯ್ಕೆ ಮಾಡಿದೆ.

ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನ್​ ಇಂಟರ್​ನ್ಯಾಷನಲ್ ವರದಿ ಮಾಡಿದೆ. ಅಯತೊಲ್ಲಾ ಅಲಿ ಖಮೇನಿ  ಅವರ ನಿಧನದ ನಂತರ ಈ ಆಯ್ಕೆ ನಡೆದಿದೆ.

ಅಮೆರಿಕಾ-ಇಸ್ರೇಲ್ ದಾಳಿಯಲ್ಲಿ ಖಮೇನಿ ಹತ್ಯೆಗೀಡಾದಿದ್ದು, ಪಶ್ಚಿಮ ಏಷ್ಯದಾದ್ಯಂತ ಸಶಸ್ತ್ರ ಸಂಘರ್ಷಗಳು ಹೆಚ್ಚಿವೆ. ಪರಮೋಚ್ಛ ನಾಯಕನ ಸ್ಥಾನವು ರಾಜ್ಯದ ಎಲ್ಲಾ ವಿಷಯಗಳ ಮೇಲೆ ಅಂತಿಮ ಅಧಿಕಾರವನ್ನೂ, ಇರಾನ್‌ನ ಸಶಸ್ತ್ರ ಪಡೆಗಳು ಹಾಗೂ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ ಮೇಲಿನ ನಿಯಂತ್ರಣ ಹೊಂದಿದೆ.ಮೊಜ್ತಾಬಾ ಖಮೇನಿ: ಇತ್ತೀಚೆಗಷ್ಟೇ ಮೃತಪಟ್ಟ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಪುತ್ರ ಮೊಜ್ತಾಬಾ ಖಮೇನಿ. ಅವರ ಪದೋನ್ನತಿ ರಾಜಕೀಯವಾಗಿ ಸಂವೇದನಾಶೀಲ ವಿಷಯವಾಗಬಹುದು. ಏಕೆಂದರೆ ಇಸ್ಲಾಮಿಕ್ ರಿಪಬ್ಲಿಕ್ ದೀರ್ಘಕಾಲದಿಂದ ವಂಶಪಾರಂಪರ್ಯ ಆಡಳಿತವನ್ನು ಟೀಕಿಸುತ್ತಿದ್ದು, ತಾನು ರಾಜಶಾಹಿಗೆ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಹೇಳಿಕೊಂಡಿದೆ.

ಮಧ್ಯಮ ಹುದ್ದೆಯ ಧಾರ್ಮಿಕ ಪಂಡಿತರಾಗಿ ಪರಿಚಿತರಾದ ಮೊಜ್ತಾಬಾ, ಇರಾನ್‌ನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ತಂದೆಯ ಆಡಳಿತಾವಧಿಯಲ್ಲಿ ರಾಜಕೀಯ, ಸೈನಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡ ಇರಾನ್‌ನ ಪ್ರಭಾವಶಾಲಿ ಸೈನಿಕ ಮತ್ತು ಭದ್ರತಾ ಸಂಸ್ಥೆ- Islamic Revolutionary Guard Corps (IRGC) ಜೊತೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದಾರೆ.

2019ರಲ್ಲಿ ಅಮೆರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲ್ಪಟ್ಟ IRGC, ಮೊಜ್ತಾಬಾರನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. IRGC ಧಾರ್ಮಿಕ ಪಂಡಿತರ ಗುಂಪಿನ ಮೇಲೆ ಭಾರೀ ಒತ್ತಡ ತಂದು ಮೊಜ್ತಾಬಾರನ್ನು ಆಯ್ಕೆ ಮಾಡುವಂತೆ ಮಾಡಿದೆ.

ಮೊಜ್ತಾಬಾ ಪ್ರಾಯೋಗಿಕವಾಗಿ ಪರಮೋಚ್ಛ ನಾಯಕನ ಕಚೇರಿಯನ್ನು ನಿರ್ವಹಿಸುತ್ತಿದ್ದರೆಂದು ಹೇಳಲಾಗಿದೆ.  ಐಆರ್ ಜಿಸಿ ಜೊತೆಗಿನ ಅವರ ಸಂಪರ್ಕಗಳು ಮತ್ತು ಸಶಸ್ತ್ರ ಪಡೆಗಳಲ್ಲಿನ ಅನುಭವವು, ಪ್ರಾದೇಶಿಕವಾಗಿ ಸಂವೇದನಾಶೀಲ ಸಮಯದಲ್ಲಿ ದೇಶದ ನಿರ್ಧಾರ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ನಿರೀಕ್ಷೆಯಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ