ಅಮೆರಿಕ- ಇಸ್ರೇಲ್ ದಾಳಿಯಿಂದ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದ್ದು, ನೂರಾರು ಅಮಾಯಕರು ಕ್ಷಿಪಣಿ ಹೊಡೆತಕ್ಕೆ ಬಲಿಯಾಗುತ್ತಿದ್ದಾರೆ.
ಶನಿವಾರ ಇರಾನ್ ನ ಮಿನಾಬ್ ನಗರದಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 168 ಅಮಾಯಕ ಶಾಲಾ ಬಾಲಕಿಯರು ಮೃತಪಟ್ಟಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಮಂಗಳವಾರ ನಡೆದಿದ್ದು, ಜನಸಾಗರವೇ ಹರಿದುಬಂದಿದೆ.
ಮುಗ್ದ ಶಾಲಾ ಬಾಲಕಿಯರ ದಾಳಿಗೆ ಕಾರಣರಾದ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಂತ್ಯಕ್ರಿಯೆ ಮೆರವಣಿಗೆಯ ದೃಶ್ಯಗಳನ್ನು ಇರಾನ್ನ ಸರ್ಕಾರಿ ಮಾಧ್ಯಮ Press TV ವರದಿ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ Press TV, ಮಿನಾಬ್ ಎಲಿಮೆಂಟರಿ ಶಾಲೆಯ ಮೇಲೆ ಯುಎಸ್ ಮತ್ತು ಇಸ್ರೇಲ್ ಆಡಳಿತದಿಂದ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದವರ ಅಂತ್ಯಕ್ರಿಯೆ ಮೆರಣಿಗೆ. ಶನಿವಾರ US ಮತ್ತು ಇಸ್ರೇಲ್‌ನಿಂದ ಹತ್ಯೆಯಾದ 168 ಕ್ಕೂ ಹೆಚ್ಚು ಅಮಾಯಕ ಇರಾನ್ನ ಶಾಲಾ ಬಾಲಕಿಯರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿತು ಎಂದು ಹೇಳಿದೆ.
ಇರಾನ್‌ನಲ್ಲಿ ಯುಎಸ್-ಇಸ್ರೇಲ್ ದಾಳಿಯ ನಂತರ ದೇಶದ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ಯುಎನ್ ನ್ಯೂಸ್ ವರದಿ ಮಾಡಿದೆ.
ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಈ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನು ಉಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.





