ಫೋಟೋಗ್ರಾಫರ್​ಗಳ ವಿರುದ್ಧ ಸ್ಯಾಂಡಲ್​ವುಡ್​ ತಾರೆಯರು ಹೊಸ ಅಭಿಯಾನವನ್ನೇ ಆರಂಭಿಸಿದ್ದಾರೆ. ನಟಿಯರ ಅಂಗಾಂಗಗಳನ್ನು ಫೋಕಸ್ ಮಾಡಿ, ರೀಲ್ಸ್, ಮೀಮ್ಸ್ ಮತ್ತು ಶಾರ್ಟ್‌ವಿಡಿಯೋಗಳನ್ನು ಹಾಕುವ ಡಿಜಿಟಲ್ ಛಾಯಾಗ್ರಾಹಕರ ವಿರುದ್ಧ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ನಡೆಸಿದ್ದಾರೆ. ಸ್ಯಾಂಡಲ್​ವುಡ್​ನ ಅನೇಕ ತಾರೆಯರು ಒಂದಾಗಿ ನಿಂತು “ನಾವು ವಸ್ತುಗಳಲ್ಲ, ಕಲಾವಿದರು” ಎಂಬ ಸಂದೇಶದೊಂದಿಗೆ #ActorsNotObjects ಹ್ಯಾಷ್‌ಟ್ಯಾಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಈ ಅಭಿಯಾನಕ್ಕೆ ಚಾಲನೆ ನೀಡಿದವರು ಹಿರಿಯ ನಟಿ ರಕ್ಷಿತಾ ಪ್ರೇಮ್. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಕಾರ್ಯಕ್ರಮಗಳು ಮತ್ತು ಖಾಸಗಿ ಸಂದರ್ಭಗಳಲ್ಲಿ ತಾವು ಅನುಭವಿಸಿದ ಅಸೌಕರ್ಯವನ್ನು ಬಹಿರಂಗಪಡಿಸಿದ್ದಾರೆ. “ಕಾರ್ಯಕ್ರಮಕ್ಕೆ ಹೋದಾಗ ನಮ್ಮ ಕೆಲಸ, ಮಾತು, ಚಿತ್ರಗಳಿಗಿಂತಲೂ ಕೆಲವರು ಕ್ಯಾಮೆರಾವನ್ನು ತಪ್ಪು ರೀತಿಯಲ್ಲಿ ಬಳಸುತ್ತಿದ್ದಾರೆ. ಇದು ಅಸ್ವೀಕಾರಾರ್ಹ”ಎಂದು ಅವರು ಹೇಳಿದ್ದಾರೆ.

ಅವರನ್ನು ಬೆಂಬಲಿಸಿರುವ ನಟಿ ಸಪ್ತಮಿ ಗೌಡ, ನಟಿ ರಮ್ಯಾ ಹಾಗೂ ನಟ ಯುವರಾಜ್ ಕುಮಾರ್ ಸೇರಿದಂತೆ ಅನೇಕರು ಧ್ವನಿ ಎತ್ತಿದ್ದಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ತಾರೆಯರು, “ವೀವ್ಸ್ ಮತ್ತು ಲೈಕ್ಸ್‌ಗಾಗಿ ಅಸಭ್ಯ ದೃಶ್ಯಗಳನ್ನು ಸೃಷ್ಟಿಸುವುದು ನಿಲ್ಲಬೇಕು” ಎಂದು ಆಗ್ರಹಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಮೀಡಿಯಾ ಮತ್ತು ರೀಲ್ಸ್‌ ಸಂಸ್ಕೃತಿ ಹೆಚ್ಚಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ಅಂಗಾಂಗಗಳನ್ನು ಜೂಮ್ ಮಾಡಿ, ಆ ವಿಡಿಯೋಗಳನ್ನು ರೀಲ್ಸ್‌, ಮೀಮ್ಸ್‌, ಶಾರ್ಟ್ಸ್‌ ರೂಪದಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ತಾರೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಟಿ ಸಪ್ತಮಿ ಗೌಡ ಇತ್ತೀಚೆಗೆ ಥಿಯೇಟರ್‌ನಲ್ಲಿ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಮೊಬೈಲ್ ಕ್ಯಾಮೆರಾಗಳು ಅವರ ಖಾಸಗಿ ಭಾಗಗಳನ್ನು ಅಸಭ್ಯವಾಗಿ ಚಿತ್ರೀಕರಿಸಿದ ವಿಚಾರ ವೈರಲ್ ಆಗಿತ್ತು. “ನಾವು ದೇವರ ಮುಂದೆ ಪೂಜೆ ಮಾಡುತ್ತಿದ್ದಾಗಲೂ ಗೌರವದಿಂದ ಇರಬೇಕು. ಕ್ಯಾಮೆರಾ ಎಲ್ಲೆಡೆ ಇರಬಾರದು,” ಎಂದು ಸಪ್ತಮಿ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಬದುಕನ್ನು ಗೌರವಿಸಿ: ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ, ತಾರೆಯರ ಖಾಸಗಿ ಸಮಯದಲ್ಲೂ ಮೊಬೈಲ್ ಕ್ಯಾಮೆರಾಗಳನ್ನು ಹಿಡಿದು ಚಿತ್ರೀಕರಿಸುವುದನ್ನು ನಿಲ್ಲಿಸಬೇಕು ಎಂದು ರಕ್ಷಿತಾ ಪ್ರೇಮ್ ಮತ್ತು ಸಪ್ತಮಿ ಗೌಡ ಮನವಿ ಮಾಡಿದ್ದಾರೆ.

“ನಾವು ಜಿಮ್‌ಗೆ ಹೋದಾಗ, ಶಾಪಿಂಗ್ ಮಾಡುವಾಗ, ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ಕೂಡ ಕ್ಯಾಮೆರಾ ಕಣ್ಣುಗಳು ನಮ್ಮನ್ನು ಹಿಂಬಾಲಿಸುತ್ತವೆ. ಇದರಿಂದ ನಮಗೆ ಮಾನಸಿಕ ಯಾತನೆಯಾಗುತ್ತದೆ” ಎಂದು ರಮ್ಯಾ ಹೇಳಿದ್ದಾರೆ.

ರಕ್ಷಿತಾ ಪ್ರೇಮ್ ಮತ್ತು ಸಪ್ತಮಿ ಗೌಡ ಇಬ್ಬರೂ “ಕಾರ್ಯಕ್ರಮಗಳಲ್ಲಿ ನಿಯಂತ್ರಿತ ಛಾಯಾಗ್ರಹಣ ಇರಬೇಕು. ಇದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ನಾವು ಹಿಂದೇಟು ಹಾಕುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಸಾಂಸ್ಕೃತಿಕ ಮೌಲ್ಯ ಉಳಿಸಿ: ತಾರೆಯರ ಅಭಿಯಾನದ ಪ್ರಮುಖ ಉದ್ದೇಶವೇನೆಂದರೆ, ಬಾಲಿವುಡ್‌ನಲ್ಲಿ ವ್ಯಾಪಕವಾಗಿರುವ ಪಾಪರಾಜಿ ಸಂಸ್ಕೃತಿ ಸ್ಯಾಂಡಲ್‌ವುಡ್‌ಗೆ ಹರಡಬಾರದು. ಚಿತ್ರರಂಗದಲ್ಲಿ ಪರಸ್ಪರ ಗೌರವ ಮತ್ತು ಸಾಂಸ್ಕೃತಿಕ ಮೌಲ್ಯಗಳು ಉಳಿಯಬೇಕು ಎನ್ನುವುದು ಅವರ ಅಭಿಪ್ರಾಯ.

ಹೆಚ್ಚುತ್ತಿರುವ ಬೆಂಬಲ: #ActorsNotObjects ಹ್ಯಾಷ್‌ಟ್ಯಾಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. “ನಮ್ಮ ಮೆಚ್ಚಿನ ತಾರೆಯರನ್ನು ಗೌರವದಿಂದ ನೋಡಬೇಕು” ಎಂಬ ಸಂದೇಶ ಎಲ್ಲೆಡೆಯಿಂದ ಹರಿದುಬರುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ