ರಾಘವೇಂದ್ರ ಅಡಿಗ ಎಚ್ಚೆನ್.

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ‘ಬಾಸ್’ ಸಿನಿಮಾದ ಟೀಸರ್  ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಟೀಸರ್ ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಕಥೆಯ ಎಳೆ ನೋಡಿದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ದರ್ಶನ್  ಪ್ರಕರಣದ ಕುರಿತಾದ ಸಿನಿಮಾ ಅಲ್ಲ ಎಂದು ಅವರು ಹೇಳಿದ್ದಾರೆ. ‘ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಅದರ ಬಗ್ಗೆ ಸಿನಿಮಾ ಮಾಡಬಾರದು. ನಾನು ದರ್ಶನ್ ಅವರ ಕಥೆಯನ್ನು ಸಿನಿಮಾ ಮಾಡುತ್ತಿಲ್ಲ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಸಿನಿಮಾ ಇದು. ನಾನು ಕೂಡ ದರ್ಶನ್ ಅವರ ಅಭಿಮಾನಿ. ಹಾಗಾಗಿ ಫ್ಯಾನ್ಸ್ ನಮಗೆ ತೊಂದ್ರೆ ಕೊಡುವ ಪ್ರಮೇಯವೇ ಬರಲ್ಲ’ ಎಂದು ಲವ ಹೇಳಿದ್ದಾರೆ.

Boss

‘ಸಮಾಜದಲ್ಲಿ ನಡೆದ ಅನೇಕ ಘಟನೆಗಳನ್ನ ಪ್ರೇರಣೆ ಆಗಿ ತೆಗೆದುಕೊಂಡು ಕಾಲ್ಪನಿಕವಾಗಿ ಈ ಸಿನಿಮಾ ಮಾಡಿದ್ದೇನೆ. 2024 ಹಾಗೂ 2025ರ ನಡುವೆ ನಡೆದ ಘಟನೆಗಳನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಒಬ್ಬ ಸೆಲೆಬ್ರಿಟಿ ಕೊಲೆ ಮಾಡಿದ ಮೇಲೆ ರಾಜಕೀಯಕ್ಕೆ ಹೇಗೆ ಬಲಿ ಆಗ್ತಾರೆ ಅನ್ನೋದೇ ಕಥೆ’ ಎಂದು ನಿರ್ದೇಶಕ ಕ ಲವ ಹೇಳಿದ್ದಾರೆ. ತನುಷ್ ಶಿವಣ್ಣ ಅವರು ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಸ್ ಚಿತ್ರಕ್ಕೆ ಸತ್ಯಮೇವ ಜಯತೇ ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್ ಆರ್ ಪುರ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ಮಂಜುನಾಥ್ ಮತ್ತು ತೀರ್ಥ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ  ಮೋನಿಕಾ ಗೌಡ ಸಂದೀಪ್, ವೀರೇನ್ ಕೇಶವ್, ಸುಜನ್ ಶೆಟ್ಟಿ, ದುನಿಯಾ ಮಹೇಶ್, ಜೋಶ್ ಅಕ್ಷಯ್, ಮಹೇಶ್, ಮನು, ಮಂಡ್ಯ ರವಿ, ಮಹೇಂದ್ರ ರಾವ್, ಪೃಥ್ವಿ, ನಿಶಾಂತ್, ಮೋಹಿತ್, ಲಕ್ಷ್ಮಣ್ ಪೂಜಾರಿ, ಮೊದಲಾದವರು ನಟಿಸಿದ್ದಾರೆ.

Boss 1

ಟೀಸರ್ ಹೇಗಿದೆ?
‘ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಲಾಗಿದೆ’ ಎಂದ ಸಾಲುಗಳ ಮೂಲಕ ‘ಬಾಸ್’ ಟೀಸರ್ ಆರಂಭ ಆಗುತ್ತದೆ. ‘ನನ್ನ ಹೆಂಡ್ತಿ ಪ್ರೆಗ್ನೆಂಟ್, ನನ್ನ ಬಿಟ್ಬಿಡಿ’ ಎಂದು ಪುರಷನೋರ್ವ ಬೇಡಿಕೊಳ್ಳುತ್ತಾನೆ. ಆದರೆ, ಆತನ ಸಾಯಿಸಲಾಗುತ್ತದೆ. ನಂತರ ಮೋರಿ ಪಕ್ಕ ಹೆಣ ಸಿಕ್ಕಿದೆ ಎಂದು ಪೊಲೀಸರು ವಾಕಿ ಟಾಕಿಯಲ್ಲಿ ಮಾತನಾಡೋದು ಕೇಳಿಸುತ್ತದೆ. ಈ ಪ್ರಕರಣದಲ್ಲಿ ಸೆಲೆಬ್ರಿಟಿ ಒಬ್ಬನ ಬಂಧನ ಕೂಡ ಆಗುತ್ತದೆ. ಆತ ತಾನು ಮುಗ್ಧ ಎಂದು ಹೇಳುತ್ತಾನೆ. ಹೀರೋನ ರಾಜಕೀಯ ಎಂಟ್ರಿ ಬಗ್ಗೆಯೂ ಚರ್ಚೆ ನಡೆಯುತ್ತದೆ.

ಈ ಮೇಲಿನ ಟೀಸರ್ ಶೈಲಿಯನ್ನು ಕಂಡಾಗ ಪ್ರತಿಯೊಬ್ಬನಿಗೂ ರೇಣುಕಾ ಸ್ವಾಮಿ ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. . ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ ಇನ್ನೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ಪ್ರಕರಣದ ಸಂಬಂಧ ಆರೋಪಿಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ ಮತ್ತು ಇತರರು ಜೈಲಿನಲ್ಲಿದ್ದಾರೆ. ಈ ಕೇಸ್‌ನಿಂದ ಮುಕ್ತರಾಗಿ ದರ್ಶನ್ ಹೊರಗೆ ಬರುತ್ತಾರಾ ಇಲ್ಲವೆ ಎನ್ನುವುದು ಇನ್ನೂ ಖಚತವಾಗಿಲ್ಲ. ಈಗ ಇದೇ ಪ್ರಕರಣದ ಕುರಿತ ಸಿನಿಮಾ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

Boss 3

ಈ ಹಿಂದಿನ ಎರಡು “ಬಾಸ್” ಕಥೆ
ಈ ಹಿಂದೆ 2011 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಬಾಸ್’ ಸಿನಿಮಾ ತೆರೆಗೆ ಬಂದಿತ್ತು. , ಆರ್. ರಘುರಾಜ್ ಅವರು ನಿರ್ದೇಶಿಸಿದ್ದ ಆ ಚಿತ್ರದಲ್ಲಿ  ದರ್ಶನ್ ಮತ್ತು ನವ್ಯಾ ನಾಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು,  ಇನ್ನೂ ಹಿಂದೆ ಎಂದರೆ 1996 ರಲ್ಲಿ ಕೆ.ಪಿ. ಭವಾನಿ ಶಂಕರ್ ನಿರ್ದೇಶನದಲ್ಲಿ ಟೈಗರ್ ಪ್ರಭಾಕರ್, ರಮೇಶ್ ಅರವಿಂದ್ ಮೊದಲಾದವರು ನಟಿಸಿದ “ಬಾಸ್” ಚಿತ್ರ ತೆರೆಕಂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ