ರಾಘವೇಂದ್ರ ಅಡಿಗ ಎಚ್ಚೆನ್.

ಮನುಷ್ಯನಲ್ಲಿ ಒಡಮೂಡುವ ಪ್ರಶ್ನೆ ಮತ್ತು ಪ್ರತಿಭಟಿಸುವ ಆತನ ಮನೋಧರ್ಮಗಳೇ ಒಬ್ಬ ಲೇಖಕನ ಮೂಲ ದ್ರವ್ಯವಾಗಿದೆ. ಅವುಗಳಿಂದಲೇ ಬರಹ ಹೊಮ್ಮುತ್ತದೆ ಮತ್ತು ಸಾಹಿತ್ಯ ಗಟ್ಟಿಗೊಳ್ಳುತ್ತದೆ ಎಂದು ಖ್ಯಾತ ಲೇಖಕ ಮತ್ತು ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

FB_IMG_1773152873756

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ 49 ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತಿದ್ದರು. ಸಾಮಾಜಿಕ ಜಾಲತಾಣಗಳ ಇಂದಿನ ಯುಗದಲ್ಲಿ ಹೊಸಬರಹಗಾರರು  ಏನನ್ನೇ ಬರೆದರೂ ಅದನ್ನು ಜಾಲತಾಣದಲ್ಲಿ ಮೊದಲು ಹಾಕುವ ಹವ್ಯಾಸ ಹೊಂದಿದ್ದಾರೆ. ಆದರೆ ಒಬ್ಬ ಲೇಖಕನ ಮೊದಲ ಬರಹ ಪುಸ್ತಕ ರೂಪದಲ್ಲಿ ಬಂದಾಗ ಸಿಗುವ ಸಂತೋಷ ಬೇರೆಯದ್ದೇ ಆಗಿರುತ್ತದೆ. ಆದ್ದರಿಂದ ಪುಸ್ತಕ ಬರೆಯುವ ಮತ್ತು ಪುಸ್ತಕ ಓದುವ ಹವ್ಯಾಸವನ್ನು ಇಂದಿನ ಯುವಪೀಳಿಗೆ ರೂಢಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಕಥೆ ಬರೆಯುವ ತಲ್ಲಣ್ಣ ಸೃಷ್ಠಿಸುವ ಅನುಭವಗಳೇ ಒಬ್ಬ ಲೇಖಕನ ಮನೋಧರ್ಮವನ್ನು ರೂಪಿಸುತ್ತದೆ. ಕನ್ನಡ ಸಾಹಿತ್ಯ ಲೋಕ ಅತ್ಯಂತ ಸಮೃದ್ಧವಾದದ್ದು. ಅದನ್ನು ಓದಿದಾಗ ಮಾತ್ರವೇ ಅಲ್ಲಿನ ಅನುಭವವಗಳನ್ನು ಗ್ರಹಿಸಲು ಸಾಧ್ಯ. ಹಾಗಾಗಿ ಪುಸ್ತಕ ಲೋಕ ಕಟ್ಟಿಕೊಡಬಲ್ಲ ಅನುಭವ ಬೇರೆಯಾವುದೇ ಮಾಧ್ಯಮ ನೀಡಲು ಸಾಧ್ಯವಿಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

FB_IMG_1773152868847

ಇಂದು ಬಿಡುಗಡೆಯಾಗಿರುವ ಕೃತಿಗಳಲ್ಲಿ ಹೊಸತನ ಇದೆ. ಎಲ್ಲಾ ಪ್ರಕಾರಗಳ ಸಾಹಿತ್ಯ ಇಲ್ಲಿ ಕಾಣಸಿಗುತ್ತಿದೆ. ಅಂದರೆ ಇಂದಿನ ಯುವಬರಹಗಾರರು ಯಾವುದೇ ಒಂದು ಪ್ರಾಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಇಂದಿನ ಯುವ ಜನರಿಗೆ ಅವಶ್ಯವೂ ಹೌದು. ಪ್ರತಿಯೊಂದು ಪ್ರಕಾರದಲ್ಲಿಯೂ ತಮ್ಮ ಬರಹದ ಪ್ರಯೋಗವನ್ನು ಮಾಡಬೇಕು. ಯಾವುದೇ ಸಾಹಿತ್ಯ ಹಳತಲ್ಲ. ನಿತ್ಯ ನವೀಕರಣ ಪ್ರತಿಯೊಂದು ವಿಭಾಗಕ್ಕೂ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

FB_IMG_1773152893759

ಸಮಾರಂಭದಲ್ಲಿ ಭಾಗಿಯಾಗಿದ್ದ ಖ್ಯಾತ ಸಾಹಿತಿ ಸಂಶೋಧಕ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಅಡಿ ಇಡುತ್ತಿರುವ ಎಲ್ಲಾ ಯುವಲೇಖಕರಿಗೆ ಶುಭ ಕೋರಿದರು.

FB_IMG_1773152882281

ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಹಿತಿ ಸತೀಶ್ ಕುಲಕರ್ಣಿ ಅವರು ಎಲ್ಲಾ ಮೊದಲುಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಮರಣೀಯವಾಗಿ ಉಳಿಯುತ್ತದೆ. ಹಾಗಾಗಿ 49 ಬರಹಗಾರರ ಬದುಕಿನಲ್ಲೂ ಅವರ ಈ ಮೊದಲ ಕೃತಿಗಳು ಹಾಗೂ ಪ್ರಾಧಿಕಾರದ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿರುತ್ತದೆ ಎಂದರು. ಹೊಸ ಲೇಖಕರು ಸಾಮಾಜಿಕ ಮಾಧ್ಯಮ ತಾಣಗಳಿಂದ ಹೊರಬಂದು ಪುಸ್ತಕ ಸಂಸ್ಕೃತಿಯ ಕಡೆಗೆ ಮನಸ್ಸು ಮಾಡಬೇಕು. ಸಮಕಾಲೀನ ಓದಿನ ವಿಧಾನ ಬದಲಾಗಿದೆ. ಓದಿನ ಪ್ರವೃತ್ತಿಯೂ ಬದಲಾಗಿದೆ. ಹಾಗಾಗಿ ಇಂದಿನ ಯುವಪೀಳಿಗೆ ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡಿದೆ. ಪುಸ್ತಕ ಸ್ಪರ್ಶ ಕೊಡುವ ಅನುಭವವನ್ನು, ಸಂತೋಷವನ್ನು, ಬೇರೆ ಯಾವುದೇ ಮಾಧ್ಯಮಗಳು ಕೊಡುವುದಿಲ್ಲ ಎಂದರು. ಉತ್ತರ ಕರ್ನಾಟಕದ, ಅದರಲ್ಲಿಯೂ ಗದಗದಂತಹ ಜಿಲ್ಲೆಯಲ್ಲಿ ಮುದ್ರಣಾಲಯಗಳು ದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಲ್ಪಟ್ಟಿವೆ. ಪುಸ್ತಕ ಸಂಸ್ಕೃತಿ ಆ ಭಾಗದಲ್ಲಿ ಸಮೃದ್ಧವಾಗಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಬಿ.ಎಸ್.

FB_IMG_1773152871699

ಮಂಜುನಾಥ ಸ್ವಾಮಿ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರದ ಈ ಯೋಜನೆ ಶ್ಲಾಘನೀಯವಾಗಿದೆ. ಕನ್ನಡ ಸಾಹಿತ್ಯಕ್ಕೆ 49 ಯುವಲೇಖಕರು ಅಡಿ ಇಡುತಿದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡಮಟ್ಟದ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. ಇಂತಹ ಯೋಜನೆಗಳು ಸಾಂಸ್ಕೃತಿಕ ಲೋಕವನ್ನು ಕಟ್ಟುವ ಕೆಲಸ ಮಾಡುತ್ತದೆ.  ಪ್ರಾಧಿಕಾರದ ಈ ಪ್ರಯತ್ನದ ಫಲವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ ಎಂದು ಹೇಳಿದರು.

FB_IMG_1773152862754

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಯುವಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಇಲ್ಲಿ ಪುಸ್ತಕ ಬಿಡುಗಡೆ ಮಾಡುತ್ತಿರುವ ಯುವಲೇಖಕರಲ್ಲಿ ಅನೇಕರು ಕನ್ನಡ ಸಾಹಿತ್ಯದ ದೊಡ್ಡ ಲೇಖಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಅವರ ಕೃತಿಯಲ್ಲಿ ಕಾಣಸಿಗುತ್ತಿದೆ ಎಂದರು.

FB_IMG_1773152886595

ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಾಧಿಕಾರಕ್ಕೆ ಈ ಯೋಜನೆಯಡಿ ಒಟ್ಟು 156 ಹಸ್ತಪ್ರತಿಗಳು ಬಂದಿದ್ದವು ಅದರಲ್ಲಿ 51 ಹಸ್ತಪ್ರತಿಗಳನ್ನು ಪ್ರೋತ್ಸಾಹಧನಕ್ಕಾಗಿ ಆಯ್ಕೆ ಮಾಡಲಾಯಿತು. ಇಬ್ಬರು ಪುಸ್ತಕಗಳನ್ನು ಸಲ್ಲಿಸದ ಕಾರಣ ಇಂದು 49 ಯುವಬರಹಗಾರರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಸಮಾರಂಭಲ್ಲಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಬಿ.ಸಿ. ಕುಶಾಲ ಅವರು ಸ್ವಾಗತಿಸಿದರು. ಲಕ್ಷ್ಮಣ ಕೊಡಸೆ ಅವರು ವಂದಿಸಿರುವ ಹಾಗೂ ಬಿ.ಹೆಚ್. ನಿರಗುಡಿ ಅವರು ಕಾರ್ಯಕ್ರಮ ನಿರೂಪಿಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ