ಕಥೆ – ಪದ್ಮಾ ಕುಲಕರ್ಣಿ
ಮದುವೆಯಾದ ಹೊಸತರಲ್ಲಿದ್ದ ಪ್ರೀತಿ ಪ್ರೇಮಗಳೆಲ್ಲಾ ಎರಡು ಮೂರು ದಶಕ ಕಳೆಯುವಷ್ಟರಲ್ಲಿ ಎಲ್ಲಿ ಮಾಯವಾಗುತ್ತದೆ…..? ಇದಕ್ಕೆ ವೈದ್ಯರೇನೋ ಹೆಣ್ಣಿಗೆ ಮೆನೋಪಾಸ್ ಹೆಸರಿಟ್ಟು, ಔಷಧಿ ಸೂಚಿಸಬಹುದು. ಈ ಮನೋವೇದನೆಗೆ ನಿಜಕ್ಕೂ ಮದ್ದುಂಟೇ…..?
ಆಫೀಸ್ ಗೆ ಹೊರಟ ಗಂಡನ ಹಿಂದೆ ಬಾಗಿಲವರೆಗೆ ಬಂದಳು ಸರಿತಾ. ಅವಳ ಉದ್ದೇಶ ಗಂಡನನ್ನು ಆಫೀಸ್ ಗೆ ಕಳಿಸಿ ಬಾಗಿಲು ಮುಚ್ಚಿಕೊಂಡು ಬರುವುದಾಗಿತ್ತು. ಅವಳು ಎಂದಿನಂತೆ ತನ್ನ ಮನೆ ಗೇಟಿನ ಬಳಿ ನಿಂತಳು.
ಅಷ್ಟರಲ್ಲಿ ಎದುರು ಮನೆಯವಳು ಅವನನ್ನು ಕಾಣುತ್ತಲೇ ಹಲ್ಲು ಕಿರಿಯುತ್ತಾ, “ಹಾಯ್…..” ಎಂದಳು. ಅವನೂ, “ಹಾಯ್….” ಎನ್ನುತ್ತಾ ಅವಳತ್ತ ಕೈ ಬೀಸಿದ. ಹಾಗೆ ಅವಳತ್ತ ನೋಡುತ್ತಲೇ, “ನಾವು ಹೋಗ್ಬರ್ತಿನಿ ಡಾರ್ಲಿಂಗ್…..” ಎನ್ನುತ್ತಾ ಕಾರು ಹತ್ತಿ ಭುರ್ರೆಂದು ಹೊರಟುಹೋದ.
ಸರಿತಾಳಿಗೆ ಅಲ್ಲಿನ ನಾಟಕ ನೋಡಿ ನಖಶಿಖಾಂತ ಉರಿಯಿತು. ಇವಳ್ಯಾರೋ ಎದುರು ಮನೆಯವಳು, ದಿನ ಅವನು ಆಫೀಸ್ ಗೆ ಹೋಗುವ ಸಮಯಕ್ಕೆ ಸರಿಯಾಗಿ ಮನೆ ಗೇಟಿನ ಬಳಿ ನಿಲ್ಲುತ್ತಾಳೆ. ಅವನು ಹೊರ ಬರುತ್ತಲೇ ಹಲ್ಲು ಕಿರಿಯುತ್ತಾ ಕೈ ಬೀಸುತ್ತಿದ್ದಳು. ಅವನಂತೂ ರಸಿಕ ಶಿಖಾಮಣಿ, ತಾನೂ ಹಲ್ಲು ಕಿರಿಯುತ್ತಾ ಅವಳಿಗೆ ಕೈ ಬೀಸುತ್ತಿದ್ದ. ಸರಿತಾಳಿಗೆ ದಿನ ಇದನ್ನು ನೋಡುವ ಕರ್ಮ. ಹಾಗಂತ ಎದುರು ಮನೆಯವಳೇನೂ ಹರೆಯದ ಹುಡುಗಿಯಲ್ಲ! ಎರಡು ಮಕ್ಕಳಿರುವ ಹೆಂಗಸರು. ಮೇಲಾಗಿ ಹೇಳಿಕೊಳ್ಳುವಂತಹ ಸುಂದರಿಯೂ ಅಲ್ಲ….. ತೀರಾ ಸಾಮಾನ್ಯ ರೂಪಿನ ಹೆಂಗಸು. ಇದು ಇತ್ತೀಚಿನ ಕೆಲವು ದಿನಗಳಿಂದ ದಿನ ನಡೆಯುತಿತ್ತು.
ಕೆಲವು ಮನುಷ್ಯರಿಗೆ ತಮ್ಮ ತಟ್ಟೆಯಲ್ಲಿ ಏನಿದೆಯೋ ಅದನ್ನು ಬಿಟ್ಟು ಬೇರೆಯವರ ತಟ್ಟೆಯಲ್ಲಿ ಹಣಕುವುದೊಂದು ಕೆಟ್ಟ ಚಟ. ಮನೆಯ ಮೃಷ್ಟಾನ್ನವನ್ನು ಕಡೆಗಣಿಸಿ ಪರರ ಎಲೆಯ ಎಂಜಲೂಟಕ್ಕೆ ಬಾಯ್ದೆರೆದಂತೆ!
ಗಂಡನನ್ನು ಕಳಿಸಿ ಮುಂಬಾಗಿಲು ಮುಚ್ಚಿದ ಸರಿತಾ, ದುಮ್ಮಾನದಿಂದಲೇ ಒಳಬಂದಳು. ಆಗ ಟೈಮ್ ಎಂಟು ಮೂಕ್ಕಾಲಾಗಿತ್ತು. ಇನ್ನೂ ನಿಂಗಿ ಬರುವುದು ಹನ್ನೊಂದು ಗಂಟೆಗೆ. ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಬರದೇ ಸರಿತಾಳ ಕಣ್ಣುಗಳು ಭಾರವಾಗಿ ಎಳೆಯತೊಡಗಿದವು. ನಿದ್ರೆ ಕವುಚಿಕೊಂಡು ಬಂದಿತು. ಇಂದು ಹಾಸಿಗೆಯಿಂದ ಎದ್ದಾಗಿನಿಂದಲೇ ಅವಳಿಗೆ ಮೈಯಲ್ಲಿ ಏನೋ ಒಂಥರಾ ಸುಸ್ತು, ಎಂಥದೋ ಬೇಸರ, ಮೈ ಮನವನ್ನು ಆವರಿಸಿಕೊಂಡು ಮನಸ್ಸು ತೀರಾ ಅಸ್ವಸ್ಥವಾಗಿತ್ತು. ಹೇಗೂ ನಿಂಗಿ ಬರುವುದಕ್ಕೆ ಸಾಕಷ್ಟು ಟೈಮಿದಿ, ಒಂದಷ್ಟು ಹೊತ್ತು ಹಾಗೇ ಮುಸುಕೆಳೆದು ಮಲಗಿಬಿಡಲೇ ಎನಿಸಿತು. ಹಾಗೆ ಮಲಗಿಬಿಡಲು ಸಾಧ್ಯವೇ….? ಅಸ್ತವ್ಯಸ್ತವಾಗಿರುವ ಅಡುಗೆಮನೆ ಕಡೆಗೊಮ್ಮೆ ಅವಳ ದೃಷ್ಟಿ ಹರಿಯಿತು. ಅದು ಮೊದಲು ನನ್ನ ಸ್ವಸ್ಥಗೊಳಿಸು ಬಾ…. ಎಂದು ಕರೆದಂತೆ ಭಾಸವಾಯಿತು. ರಾತ್ರಿ ತಿಂದುಂಡ ಪಾತ್ರೆಗಳು ಸಿಂಕ್ ನಲ್ಲಿ ಬಾಯಿ ಒಣಗಿಸಿಕೊಂಡು ಹಾಗೆ ಬಿದ್ದಿದ್ದವು. ಬೆಳಗ್ಗೆ ಮಾಡಿದ ಅಡುಗೆ ತಿಂಡಿಯ ಪಾತ್ರೆಗಳು, ಕ್ಲೀನ್ ಮಾಡದ ಗ್ಯಾಸ್ ಕಟ್ಟೆ ಎಲ್ಲವೂ ಹಾಗಾಗೇ ಇರುವುದನ್ನು ನೋಡಿ ಅವಳ ಮನಸ್ಸು ಮತ್ತಷ್ಟು ಅಸ್ವಸ್ಥಗೊಂಡಿತು.
ಇದೆಲ್ಲವನ್ನೂ ಸ್ವಚ್ಛವಾಗಿಸಿದ ಮೇಲೆಯೇ ನನ್ನ ಮನಸ್ಸಿಗೆ ನೆಮ್ಮದಿ. ಕೆಲಸದವಳು ಬರುವುದಕ್ಕೂ ಮೊದಲೇ ಮುಸುರೆ ಪಾತ್ರೆಗಳನ್ನೆಲ್ಲಾ ಹಿತ್ತಲಲ್ಲಿ ಇಡಬೇಕು. ಬಚ್ಚಲಲ್ಲಿ ಬಕೆಟ್ ನಲ್ಲಿ ಇರುವ ಕೊಳೆ ಬಟ್ಟೆಗಳನ್ನೆಲ್ಲಾ ಒಗೆಯಲು ವಾಷಿಂಗ್ ಮೆಷಿನ್ ಗೆ ಹಾಕಬೇಕಿತ್ತು. ಹಾಗಾಗಿ ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಅಡುಗೆಮನೆ ಹೊಕ್ಕಳು.
ತಿಂಡಿಗಾಗಿ ಮಾಡಿದ ಉಪ್ಪಿಟ್ಟಿನಲ್ಲಿ ತನಗಾಗಿ ಉಳಿದಿದ್ದನ್ನು ಒಂದು ಪ್ಲೇಟಿಗೆ ಹಾಕಿ ಮುಚ್ಚಿಟ್ಟು ಬಾಣಲೆಯನ್ನು ತೊಳೆಯಲು ಇಟ್ಟಳು. ಗಂಡನ ಲಂಚ್ ಬಾಕ್ಸ್ ಗೆ ಮಾಡಿದ ಚಪಾತಿಯಲ್ಲಿ ತನಗೆರಡು ಚಪಾತಿ, ಆಲೂ ಬದನೆ ಪಲ್ಯ, ಸೌತೆಕಾಯಿ ಈರುಳ್ಳಿ ಕೋಸಂಬರಿ, ಡ್ರೈಫ್ರೂಟ್ಸ್ ಒಗ್ಗರಣೆ ಹಾಕಿ ಕಲಸಿದ ಮೊಸರನ್ನವನ್ನು ಮಧ್ಯಾಹ್ನದ ಊಟಕ್ಕೆ ಎಂದು ತನಗೊಂದಿಷ್ಟು ಉಳಿಸಿಕೊಂಡಿದ್ದಳು. ಅವನ್ನೆಲ್ಲ ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ತೆಗೆದು ಖಾಲಿ ಪಾತ್ರೆಗಳನ್ನೆಲ್ಲಾ ಹಿತ್ತಲಿಗೆ ಒಯ್ದು ಅವುಗಳಲ್ಲಿದ್ದ ಮುಸುರೇ ಸವರಿ ತೆಗೆದು, ಮುಸುರೆ ನೆನೆಯುವುದಕ್ಕಾಗಿ ಅವುಗಳೊಳಗೆ ನೀರು ತುಂಬಿಸಿಟ್ಟಳು. ಕೊಳೆ ಬಟ್ಟೆಗಳನ್ನೆಲ್ಲಾ ವಾಷಿಂಗ್ ಮೆಷಿನ್ ಒಳಗೆ ತುರುಕಿ ಅದನ್ನು ಚಾಲೂ ಮಾಡಿದಳು. ನಿನ್ನ ಮೌನಕ್ಕೆ ನಾನು ಸಂಗಾತಿ ಎಂಬಂತೆ ವಾಷಿಂಗ್ ಮೆಷಿನ್ ಗು…ರ್ರ್…..ಗು…ರ್ರ್… ಎಂದು ಸದ್ದು ಮಾಡುತ್ತಾ ತಿರುಗತೊಡಗಿತು.
ಸರಿತಾಳಿಗೆ ಯಾವಾಗಲೂ ರೇಡಿಯೋ ಕೇಳುವ ಹವ್ಯಾಸ. ಬೆಳಗಾಗುತ್ತಲೆ ಅದನ್ನು ಹಚ್ಟಿಟ್ಟೇ ಅವಳ ಪ್ರಾತಃವಿಧಿ ಶುರು. ಇವಳು ಕೆಲಸ ಮಾಡುವಾಗ ಅದು ತನ್ನ ಪಾಡಿಗೆ ತಾನು ಒದರುತ್ತಿರಬೇಕು, ಅಂದರೆ ಮಾತ್ರ, ಅವಳ ಮನಸ್ಸಿಗೆ ಸಮಾಧಾನ. ಅದು ಅವಳಿಗೆ ಅವಳ ತಂದೆಯಿಂದ ಬಂದ ಹವ್ಯಾಸವಾಗಿತ್ತು.
ಸರಿತಾ ರೇಡಿಯೋ ಕಿವಿ ಹಿಂಡಿದಳು. ಅದರಲ್ಲಿ ಯಾವುದೋ ರೋಗದ ಕುರಿತಾದ `ರೇಡಿಯೋ ಡಾಕ್ಟರ್’ ಕಾರ್ಯಕ್ರಮ ನಡೆದಿತ್ತು. ಇತ್ತೀಚೆಗೆ `ರೇಡಿಯೋ ಡಾಕ್ಟರ್’ ಕಾರ್ಯಕ್ರಮ ಕೇಳುವುದೇ ಬೇಡ ಎನಿಸಿತ್ತು. ಅದರಲ್ಲಿ ಯಾವುದೇ ರೋಗದ ಬಗ್ಗೆ ಸಂವಾದ ನಡೆಯುತ್ತಿದ್ದರೂ ಅದು ನನಗೂ ಬಂದಿರಬಹುದೇ….. ಎಂಬ ಸಂಶಯ ಶುರುವಾಗುತ್ತಿತ್ತು. ಇವತ್ಯಾಕೋ ಅದನ್ನು ಕೇಳುವುದೇ ಬೇಡವೆನಿಸಿ `ಟಕ್’ ಎಂದು ಆಫ್ ಮಾಡಿಬಿಟ್ಟಳು.
ವಾಷಿಂಗ್ ಮೆಷಿನ್ ನ ಸದ್ದೊಂದನ್ನು ಹೊರತುಪಡಿಸಿ ಹೊರಗಡೆ ಜಗತ್ತಾದರೂ ಇದೆಯೇ…. ಎನಿಸುವಷ್ಟು ನಿಶ್ಶಬ್ದತೆ ಆವರಿಸಿತ್ತು. ತಿನ್ನುವುದಕ್ಕೆ ಮನಸ್ಸಿಲ್ಲ. ಆದರೂ ಹಾಳು ಹೊಟ್ಟೆ ಕೇಳಬೇಕಲ್ಲ…. ಸಮಯಕ್ಕೆ ಅನುಸಾರವಾಗಿ ಹೊಟ್ಟೆ ಚುರ್ರೆಂದು ಚುರುಗುಟ್ಟತೊಡಗಿತು. ಥೈರಾಯಿಡ್ ಮಾತ್ರೆ ನುಂಗಿ ಒಂದೈದು ನಿಮಿಷ ಬಿಟ್ಟು ತನಗಾಗಿ ಇರಿಸಿಕೊಂಡಿದ್ದ ಉಪ್ಪಿಟ್ಟಿನ ಪ್ಲೇಟ್ ನ್ನು ಕೈಗೆತ್ತಿಕೊಂಡು ಒಂದೊಂದೇ ತುತ್ತನ್ನು ಬಲವಂತವಾಗಿ ಬಾಯಿಗೆ ಇಟ್ಟುಕೊಂಡಳು. ಒಂದು…. ಎರಡು… ಮೂರು… ನಾಲ್ಕನೇ ತುತ್ತಿನ ಮೇಲೆ ಏಕೋ ಉಪ್ಪಿಟ್ಟು ಸೇರಲಿಲ್ಲ. ಪ್ಲೇಟ್ ನ್ನು ತೊಳೆಯಲು ಇಟ್ಟು ಬಂದಳು.
ಉಪ್ಪಿಟ್ಟು ಎಂದರೆ ಮೂಗು ಕೊಯ್ದುಕೊಳ್ಳುವಷ್ಟು ಇಷ್ಟ ಸರಿತಾಳಿಗೆ. ಮನೆಯಲ್ಲಿ ಗಂಡ, ಮಕ್ಕಳು, `ಇವತ್ತು ತಿಂಡಿಗೆ ಕಾಂಕ್ರೀಟಾ…’ ಎನ್ನುತ್ತಾ ಮೂಗು ಮುರಿದು ಗೊಣಗುತ್ತಲೇ ತಿಂದರೆ, ಸರಿತಾ ಮಾತ್ರ ಉಪ್ಪಿನಕಾಯಿಯನ್ನೋ, ಚಟ್ನಿಪುಡಿಯನ್ನೋ ಉಪ್ಪಿಟ್ಟಿನ ಜೊತೆ ನೆಂಜಿಕೊಳ್ಳುತ್ತಾ ಚಪ್ಪರಿಸಿ ತಿನ್ನುತ್ತಿದ್ದಳು. ಅಕಸ್ಮಾತ್ ಯಾರಾದ್ರೂ ಬೇಡವೆಂದು ಬಿಟ್ಟಿದ್ದರೆ! ಮಧ್ಯಾಹ್ನಕ್ಕೂ ಅದನ್ನೇ ತಿನ್ನಲೂ ಸೈ. ಹೀಗಿದ್ದವಳಿಗೆ ಇಂದೇಕೋ ಅದೇ ಉಪ್ಪಿಟ್ಟು ಬೇಡವೆನಿಸಿತು.
ಗ್ಯಾಸ್ ಕಟ್ಟೆ ತೊಳೆಯಲೆಂದು ಮೇಲೆದ್ದವಳಿಗೆ ತಲೆ ಗಿರ್ರೆಂದು ತಿರುಗಿ ತಲೆ ಸುತ್ತಿ ಬಂದು ಬೀಳುವಂತಾಯ್ತು. ಜೊತೆಗೆ ವಿಪರೀತವಾದ ತಲೆ ಶೂಲೆ. ಹಾಗೆ ಕಿಬ್ಬೊಟ್ಟೆ ಮತ್ತು ಬೆನ್ನಿನಲ್ಲೂ ಚಳಕು ಹತ್ತಿದಂತೆ ವಿಪರೀತ ನೋವು ಕಾಣಿಸಿಕೊಂಡಿತು. ಒಮ್ಮೆಗೆ ಮೇಲೆದ್ದು ನಿಂತಿದ್ದಕ್ಕೆ ಹಾಗಾಗಿರಬಹುದು, ಒಂದೈದು ನಿಮಿಷ ಕೂತು ಸುಧಾರಿಸಿಕೊಳ್ಳುತ್ತೇನೆ ಎಂದು ಅಂದುಕೊಳ್ಳುತ್ತಾ ಕುರ್ಚಿಯಲ್ಲಿ ಕುಕ್ಕರಿಸಿ ಕುಳಿತಳು.
ತಲೆಯಲ್ಲಿ ಯಾರೋ ನೂರಾರು ಸುತ್ತಿಗೆಗಳಿಂದ ಒಟ್ಟಿಗೆ ಬಾರಿಸುತ್ತಿರುವರೇನೋ ಎಂಬಷ್ಟು ಸಿಡಿಯತೊಡಗಿತು. ಇನ್ನಿದು ಬಗೆ ಹರಿಯುವುದಲ್ಲ, ಒಂದು ಮಾತ್ರೆ ನುಂಗುವುದೇ ಸೈ ಎಂದುಕೊಳ್ಳುತ್ತಾ ತಲೆಯನ್ನು ಕೈಯಿಂದ ಒತ್ತಿಕೊಳ್ಳುತ್ತಲೇ, ಮೆಲ್ಲನೆದ್ದು ತನ್ನ ಮಾತ್ರೆ ಬಾಕ್ಸಿನಿಂದ ಒಂದು ಪ್ಯಾರಾಸಿಟಮಲ್, ಒಂದು ಪೇನ್ ಕಿಲ್ಲರ್ ಮಾತ್ರೆ ನುಂಗಿದಳು. ನಿಂಗಿ ಬರೋವರೆಗೆ ಒಂದರ್ಧ ಗಂಟೆ ಮಲಗುತ್ತೇನೆ ಎಂದು ಮಂಚದ ಮೇಲೆ ಹಾಗೆ ಉರುಳಿಕೊಂಡು ಮುಸುಕೆಳೆದುಕೊಂಡಳು.
ಮಲಗಿದರೂ ನಿದ್ದೆಯೇನೂ ಬರಲಿಲ್ಲ. ಮುಸುಕಿನಲ್ಲಿ ಸುಮ್ಮನೆ ಕಣ್ಣು ಬಿಟ್ಟುಕೊಂಡೆ ಮಲಗಿದ್ದಳು. ಸರಿತಾಳ ತಲೆ ತುಂಬಾ ಏನೇನೋ ಯೋಚನೆಗಳು. ಅವಳಿಗೆ ತಾನು ತೀರಾ ಒಂಟಿ ಎನಿಸಿತು. ಯಾವುದೋ ಅರಿಯದ ಭಯ, ಆತಂಕ ಇತ್ತೀಚೆಗೆ ಅವಳನ್ನು ಇನ್ನಿಲ್ಲದಂತೆ ಕಾಡುತ್ತಿತ್ತು.
ಸುತ್ತಲೂ ಆಗಾಧ ಸಮುದ್ರ. ಸಮುದ್ರದ ಮಧ್ಯದಲ್ಲೊಂದು ದ್ವೀಪ. ಆ ದ್ವೀಪದಲ್ಲಿ ಒಂಟಿಯಾಗಿ ಭಯಭೀತಳಾಗಿ ನಿಂತಿದ್ದೇನೆ. ಅಲ್ಲಿಂದ ತನ್ನನ್ನು ಹೊರ ತರುವವರು ಮಾತ್ರ ಯಾರೂ ಇಲ್ಲ ಎಂದು ಅನಿಸುತ್ತಿತ್ತು. ನಿಜ! ತನ್ನವರೆನ್ನುವವರು ಯಾರಿದ್ದಾರೆ ಈ ಜಗತ್ತಿನಲ್ಲಿ? ತವರಿನಲ್ಲಿ ತಾಯಿ ತಂದೆಗೆ ಮುದ್ದಿನ ಮಗಳಾಗಲಿಲ್ಲ. ಅಲ್ಲಿ ಮೂರರಲ್ಲೂ ಅಲ್ಲ, ನೂರರಲ್ಲಿ ಒಬ್ಬಳಾಗಿ ಬೆಳೆದೆ, ಗಂಡನ ಮನೆಯಲ್ಲಿ ಅತ್ತೆಯ ದರ್ಪ, ಮಾವನ ಆರ್ಭಟಕ್ಕೆ ಹೆದರಿ ಜೀವನ ಕಳೆದದ್ದಾಯ್ತು. ಇನ್ನು ತಾನು ಹೆತ್ತ ಮಕ್ಕಳೂ ಕೂಡ ತನ್ನೊಂದಿಗೆ ಯಾವಾಗಲೂ ಮಲತಾಯಿ ಎಂಬಂತೆ ವರ್ತಿಸುತ್ತಿದ್ದರು. ಈಗಂತೂ ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಬೆನ್ನು ತಿರುಗಿಸಿ ದೂರ ಬಹು ದೂರ ಹೋಗಿಯಾಗಿದೆ.

ಇನ್ನು ಉಳಿದವರು ನಾವಿಬ್ಬರೇ. ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಎಂಬಂತೆ ಗಂಡನಿಂದಲೂ ಮಾತು ಸಂಪೂರ್ಣ ನಿಂತೇ ಹೋಗಿತ್ತು. ಮನೆಯಲ್ಲಿ ತನ್ನ ಇರುವನ್ನೇ ಮರೆತವನಂತೆ ವರ್ತಿಸುತ್ತಾನೆ. ಈಗ ತನ್ನ ಅಗತ್ಯ ಅಷ್ಟಾಗಿ ಇಲ್ಲವೆಂತಲೋ ಅಥವಾ ತನ್ನಲ್ಲಿ ಮೊದಲಿನ ಆಕರ್ಷಣೆ ಉಳಿದಿಲ್ಲವೆಂತಲೋ ಅಂತೂ ಯಾವುದೋ ಒಂದು ಕಾರಣದಿಂದ ಆತ ಅವಳಿಂದ ವಿಮುಖನಾಗುತ್ತಿರುವುದಂತೂ ನಿಜ.
ಕೆಲವೇ ತಿಂಗಳುಗಳ ಹಿಂದಷ್ಟೇ, ಮನೆ ತುಂಬಿದ ಮನೆ ಆಗಿತ್ತು. ಮನೆಯಲ್ಲಿ ಮಕ್ಕಳು ಇದ್ದರು. ಮಾಡಲು ಕೈತುಂಬ ಕೆಲಸ ಇರುತ್ತಿತ್ತು. ಆಗೆಲ್ಲ ಗಂಡ ತಾನಿದ್ದಲ್ಲಿಗೆ ತನ್ನನ್ನು ಹುಡುಕಿಕೊಂಡು ಬರುತ್ತಿದ್ದ, `ನಿನಗೇನಾದರೂ ಹೆಲ್ಪ್ ಮಾಡಲೇ….’ ಎಂದು ಬಾಯ್ತುಂಬ ಕೇಳುತ್ತಿದ್ದನಲ್ಲದೆ, ಅಲ್ಲೇ ಅಡುಗೆ ಮನೆಯಲ್ಲೇ ತನ್ನೊಂದಿಗೆ ಲಲ್ಲೇ ಹೊಡೆಯುತ್ತಲೇ ತರಕಾರಿ ಹೆಚ್ಚಿ ಕೊಡುವುದು, ಊಟಕ್ಕೆ ತಟ್ಟೆ ಇಡುವುದು ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಮನೆ ಕೆಲಸವಂತೂ ಮಾಡದೆ, ತಮ್ಮ ಸ್ವಂತದ ಕೆಲಸವಕ್ಕೂ ಸರಿತಾಳನ್ನೇ ಅವಲಂಬಿಸಿದ ಮಕ್ಕಳ ಬಳಿ, `ಅಮ್ಮನಿಗೆ ಒಂದಷ್ಟು ಹೆಲ್ಪ್ ಮಾಡಬಾರದೇ….? ಕೊನೆಗೆ ನಿಮ್ಮ ಬಟ್ಟೆಬರೆ, ಹಾಸಿಗೆ ಹೊದಿಕೆಗಳನ್ನಾದರೂ ಮಡಿಸಿ ಇಟ್ಟುಕೊಳ್ಳಿ. ದಿನವಿಡೀ ಅವಳೊಬ್ಬಳೇ ಎಷ್ಟು ಅಂತ ಕೆಲಸ ಮಾಡ್ಬೇಕು….?’ ಎಂದು ಬುದ್ಧಿವಾದ ಹೇಳುತ್ತಿದ್ದ.
ಅದರೆ ಈಗ ತಿನ್ನುವ ಉಣ್ಣುವ ಹೊಟ್ಟೆಗಳು ಕಮ್ಮಿಯಾಗಿದ್ರೂ ಕೆಲಸ ಅದೇ ಮತ್ತು ಅಷ್ಟೇ. ಆದರೂ ಈಗ ಗಂಡ ಒಂದು ದಿನ ಅಡುಗೆಮನೆಯತ್ತ ಹಣಕಿಯೂ ನೋಡುವುದಿಲ್ಲ. ಮೊದಲಿನ ಹಾಗೆ ತನ್ನ ಬಳಿ ಕುಳಿತು ಆತ್ಮೀಯವಾಗಿ ಕಷ್ಟಸುಖದ ಒಲವು ನಲಿವಿನ ಒಂದೆರಡು ಮಾತು ಆಡುವುದಿಲ್ಲ….. ಎಂಬ ನೋವು ಇನ್ನಿಲ್ಲದಂತೆ ಅವಳನ್ನು ಕಾಡುತ್ತಿತ್ತು. ಈಗ ಬರೀ ತನ್ನ ಬೇಕು ಬೇಡಗಳಿಗೆ ಸ್ಪಂದಿಸಲು ಹ್ಞಾಂ….ಹ್ಞೂಂ….. ಎನ್ನುವಲ್ಲಿಗೆ ಮಾತ್ರ ಅವನ ಸಂಭಾಷಣೆ ಬಂದು ನಿಂತಿತ್ತು. ಗಂಡನ ಈ ವಿಪರೀತದ ವರ್ತನೆ ಸರಿತಾಳ ಪಾಲಿಗೆ ಕಗ್ಗಂಟಾಗಿತ್ತು. ಈ ಬದಲಾವಣೆ ಯಾವಾಗ ಆಯಿತು…? ಏಕಾಯಿತು….? ಎಂಬುದೇ ಈಗವಳ ಮುಂದಿರುವ ಯಕ್ಷ ಪ್ರಶ್ನೆ!
ಅತ್ತ ಮಕ್ಕಳು ದೂರಾಗಿ, ಇತ್ತ ಗಂಡ ಮಾತು ಮರೆತು ಮೂಕನಂತೆ ಮೂರು ಹೊತ್ತು ಮೊಬೈಲ್ ನಲ್ಲಿ ಮುಖ ಹುದುಗಿಸಿ ಕುಳಿತಿರುವುದನ್ನು ನೋಡಿ ಅವಳಿಗೆ ರೋಸಿ ಹೋಗುತ್ತಿತ್ತು. ಸಿಡಿಮಿಡಿಗೊಳ್ಳುತ್ತಾ ಅವನೊಂದಿಗೆ ಜಗಳ ಕಾಯುತ್ತಿದ್ದಳು. ಅವನೂ ಅವಳ ಮೇಲೆ ರೇಗುತ್ತಿದ್ದ. ಇಬ್ಬರ ಜಗಳ ವಿಪರೀತಕ್ಕೆ ಹೋಗುತ್ತಿತ್ತೆ ವಿನಾ, ಗಂಡನಿಂದ ಯಾವ ಸಮಾಧಾನದ ಅನುಭೂತಿ ಅವಳಿಗೆ ಸಿಗುತ್ತಿರಲಿಲ್ಲ.
ಕೆಲವೊಮ್ಮೆ ಸರಿತಾಳಿಗೆ ಮನೆಯೊಟ್ಟಿಗೆ ಮನವೂ ಖಾಲಿಯಾಗಿದ್ದಂತೆ ಅನಿಸುತ್ತಿತ್ತು.
ಇಷ್ಟು ದಿನಗಳ ಕಾಲ ನಾನು ಯಾರಿಗಾಗಿ ದುಡಿದೆ….? ನನ್ನ ಮನೆ, ಮಕ್ಕಳು, ಗಂಡ ಎಂಬ ಸಡಗರ ಸಂಭ್ರಮದಲ್ಲೇ ತೇಲಾಡಿಕೊಂಡಿದ್ದವಳನ್ನು ಯಾರೋ ಎತ್ತಿ ಎಸೆದಂತೆ ಆಗಿತ್ತು. ರೆಕ್ಕೆ ಬಲಿತ ಹಕ್ಕಿಯಂತೆ ಮಕ್ಕಳು ತಮ್ಮ ನೆಲೆಯನರಸುತ ದೂರ ಹಾರಿ ಹೋಗಿ `ಸರೂ… ಸರೂ…’ ಎನ್ನುತ್ತಾ ತನ್ನ ಹಿಂದೆ ಮುಂದೆ ಸುತ್ತಿ ಸುಳಿಯುತ್ತಿದ್ದ ಗಂಡ ಒಮ್ಮೆಲೇ ತನ್ನಿಂದ ವಿಮುಖನಾಗಿದ್ದು…..! ಎಲ್ಲವೂ ಒಮ್ಮೆಲೇ….? ಅಂದ್ರೆ….!! ಇಷ್ಟು ದಿನ ತಾನು ಎಲ್ಲವೂ ನನ್ನದು, ಎಲ್ಲಾ ನನ್ನವರು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇನೆಯೇ? ಹಾಗಾದ್ರೆ ಅವರ್ಯಾರೂ ನನ್ನವರು ಆಗಿರಲಿಲ್ಲವೇ…..? ಎಂಬ ಸಂಶಯದ ಹುಳು ಸರಿತಾಳ ತಲೆ ಹೊಕ್ಕು ಕೊರೆಯುತ್ತಿತ್ತು.
ತನಗೆ ಗೊತ್ತಿಲ್ಲದಂತೆ, ಸರಿತಾ ದಿನೇ ದಿನೇ ಖಿನ್ನತೆಗೆ ಜಾರುತ್ತಿದ್ದಳು. ದಿನದಿಂದ ದಿನಕ್ಕೆ ಹದಗೆಡುತ್ತಿರುವ ಇವಳ ಮಾನಸಿಕ ಸ್ಥಿತಿಯ ಪರಿಣಾಮ ಅವಳ ಗಂಡನ ಸ್ವಾರ್ಥದ ಬದುಕಿನ ಮೇಲಾಗಹತ್ತಿತು. ಆಗ ಅವನು ಎಚ್ಚೆತ್ತುಕೊಂಡ. ಕಡೆಗೂ ಸರಿತಾಳನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ದು ತೋರಿಸಿದವು.
ಡಾಕ್ಟರ್ ಇವಳನ್ನು ಪರೀಕ್ಷಿಸಿ ಇವಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಇವಳಿಗೂ ತನ್ನ ಮನದ ಅಳಲು ಕೇಳುವ ಕಿವಿಯೊಂದು ಬೇಕಾಗಿತ್ತು. ಅದು ಡಾಕ್ಟರೇ ಆಗಿರುವುದು ಮತ್ತಷ್ಟು ಅನುಕೂಲವಾಗಿತ್ತು.
ಸರಿತಾ ಡಾಕ್ಟರ್ ಮುಂದೆ ಗಂಡನ ನಡವಳಿಕೆಯನ್ನಷ್ಟು ಹೊರತುಪಡಿಸಿ ತನ್ನ ಮನೋವೇದನೆಯನ್ನೆಲ್ಲಾ ಹೇಳಿಕೊಂಡಳು. ಆಕೆ ಒಳ್ಳೆಯ ಡಾಕ್ಟರ್. ರೋಗಿಗಳೊಂದಿಗೆ ಮೃದುವಾಗಿ ಮಾತಾಡುತ್ತಾ ಆತ್ಮೀಯವಾಗಿ ವರ್ತಿಸುತ್ತಿದ್ದರು. ವಯಸ್ಸಿನ ಜೊತೆಗೆ ಸರಿತಾಳಂತಹ ಸೂಕ್ಷ್ಮ ಸಂವೇದನೆಯುಳ್ಳ ರೋಗಿಗಳ ಮನಸ್ಥಿತಿಯನ್ನು ಅರಿತು ಅವರೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಕಲೆ ಅವರಲ್ಲಿತ್ತು.
ಸಾವಧಾನವಾಗಿ ಇವಳ ಮನೋವೇದನೆಯನ್ನಾಲಿಸಿದ ಡಾಕ್ಟರ್, “ಸರಿತಾ, ನಿಮಗೀಗ ವಯಸ್ಸು ನಲ್ವತ್ತು ಅಂತ ಹೇಳಿದ್ರಿ. ಅಂದ್ರೆ ನಿಮಗೀಗ ಮೆನೋಪಾಸ್ ಅಂದ್ರೆ ಮುಟ್ಟಂತ್ಯ (ಋತುಬಂಧ)ದ ಸಮಯ. ಈ ವಯಸ್ಸಿನಲ್ಲಿ ಮಹಿಳೆಯರ ದೇಹದಲ್ಲಿ `ಈಸ್ಟ್ರೋಜೆನ್’ ಎಂಬ ಹಾರ್ಮೋನಿನ ಬದಲಾವಣೆಯಿಂದ ಹೀಗೆ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಯ ಏರುಪೇರು ಸಹಜ. ನೀವು ಗಾಬರಿ ಆಗುವಂಥದ್ದು, ಹೆದರಿಕೊಳ್ಳುವಂಥದ್ದು ಏನಿಲ್ಲ…. ನೀವೊಬ್ರೇ ಅಂತಲ್ಲ…. ಈ ಸಮಯದಲ್ಲಿ ಬಹುತೇಕ ಮಹಿಳೆಯರು ಇದೇ ತರಹದ ಮಾನಸಿಕ ವೇದನೆ ನೋವನ್ನು ಅನುಭವಿಸುತ್ತಾರೆ.
“ಇಲ್ಲಿ ಸಮಸ್ಯೆ ಒಂದೇ ಆಗಿದ್ದರೂ ಕಾಣಿಸಿಕೊಳ್ಳುವ ರೀತಿ ಮಾತ್ರ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಫಾರ್ ಎಗ್ಸಾಂಪಲ್….. ನೀವು ಗೃಹಿಣಿಯಾಗಿದ್ದೀರಾ…. ಇಲ್ಲಿ ನಿಮ್ಮ ಸೋಶಿಯಲ್ ಲೈಫ್ ತುಂಬಾ ಕಡಿಮೆ ಪ್ರಮಾಣದ್ದಾಗಿರುತ್ತವೆ. ಸಾಮಾನ್ಯವಾಗಿ ಗೃಹಿಣಿಯರಿಗೆ ತಮ್ಮ ಮನೆಯೇ ಸರ್ವಸ್ವವಾಗಿರುತ್ತವೆ. ಬರೀ ಮನೆ ಕೆಲಸ, ಗಂಡ, ಮಕ್ಕಳು ಅವರ ಸ್ಕೂಲು, ಕಾಲೇಜು, ಆಫೀಸು, ಯಾರ್ಯಾರು ಮನೆಗೆ ಯಾವಗ್ಯಾವಾಗ ಬರ್ತಾರೆ ಅಂತ ಕಾದಿದ್ದು ಅವರು ಬಂದ ಮೇಲೆ ಅವರ ಊಟ ತಿಂಡಿ ಅಂತ ಹೊತ್ತೊತ್ತಿಗೆ ಮಾಡಿ ಬಡಿಸುತ್ತಾ ಅದರಲ್ಲಿ ಮುಳುಗಿ ಹೋಗಿರ್ತೀರ. ಅವರ ಬಟ್ಟೆ ಬರೆ, ಬೇಕು ಬೇಡ ಅಂತ ನೋಡಿಕೊಳ್ಳುವುದೂ ಅಲ್ಲಿ ನಿಮ್ಮದೇ ಕೆಲಸವಾಗಿರುತ್ತದೆ. ಇದಿಷ್ಟು….. ಒಂದು ಹಂತದವರೆಗೆ ಹೀಗೆ ಮುಂದುವರಿಯುತ್ತೆ!
“ಮಕ್ಕಳು ದೊಡ್ಡವರಾಗ್ತಾ ಆಗ್ತಾ ಬಂದಂತೆ ಅವ್ರಿಗೆ ನಿಮ್ಮ ಅವಶ್ಯಕತೆ ಕಮ್ಮಿ ಆಗ್ತಾ ಬರುತ್ತೆ. ಹಾಗೆ ಮುಂದೆ ಅವ್ರು ತಮ್ಮ ಗುರಿ ಅರಸಿ ನಿಮ್ಮನ್ನು ಬಿಟ್ಟು ಹೋದಾಗ ನಿಮ್ಮ ಮನಸ್ಸಿಗೆ ಅಪಾರ ನೋವಾಗಬಹುದು. ಇಲ್ಲಿಯೂ ಮಕ್ಕಳು ತಮ್ಮ ಹೆತ್ತವರೊಂದಿಗೆ ಹೇಗೆ ಸಂಬಂಧವಿರಿಸಿಕೊಂಡಿದ್ದಾರೆ ಎಂಬುದರ ಮೇಲೆ ನಿಮ್ಮಗಳ ಮನಸ್ಥಿತಿ ಅವಲಂಬಿಸಿರುತ್ತದೆ. ಅವರು ತಮ್ಮ ಜೀವನದಲ್ಲಿ ವ್ಯಸ್ತರಾಗಿ ನಿಮಗೆ ಫೋನ್ ಮಾಡದೇ ಇರಬಹುದು. ಅದರಿಂದಲೂ ನಿಮ್ಮ ಮನಸ್ಸಿಗೆ ಅಪಾರ ನೋವು ಉಂಟಾಗಬಹುದು. ಆದರೆ ನೀವು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಕಾಲದ ಬದಲಾವಣೆ ಪ್ರಕೃತಿ ನಿಯಮ. ನೀವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆದಷ್ಟೂ ಆರಾಮವಾಗಿ ಇರುವುದನ್ನು ಕಲಿಯಬೇಕು.
“ಯಾವಾಗಲೂ ಒಬ್ಬರೇ ಇರಬೇಡಿ. ಅದರಿಂದ ನಿಮ್ಮಲ್ಲಿ ಯಾವಾಗಲೂ ನಕಾರಾತ್ಮಕ ಯೋಚನೆಗಳು ಬರಬಹುದು. ದಿನ ಲಘು ವ್ಯಾಯಾಮ ಮಾಡಿ, ಧ್ಯಾನ, ಪ್ರಾಣಾಯಾಮ ಮಾಡಿ. ಒಳ್ಳೆ ಮ್ಯೂಸಿಕ್ ಕೇಳಿ. ನಿಮ್ಮಲ್ಲಿ ಏನಾದ್ರೂ ಹೆಚ್ಚಿನ ಹವ್ಯಾಸಗಳಿದ್ದರೆ ಅವುಗಳಲ್ಲಿ ಜಾಸ್ತಿ ಜಾಸ್ತಿಯಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಒಟ್ಟಿನಲ್ಲಿ ಗೆಲುವಾಗಿ ಇರುತ್ತವೆ ನೀವು ನಿಮ್ಮ ಗಮನಹರಿಸಿ. ಇಷ್ಟಾದ್ರೆ…. ಸಾಕು. ಕ್ರಮೇಣ ಎಲ್ಲವೂ ತಾನೇ ಸರಿಹೋಗುತ್ತೆ. ಈಗ ಕೆಲವು ಮಾತ್ರೆ ಬರೆದು ಕೊಡ್ತೀನಿ…. ಸ್ವಲ್ಪ ದಿವಸ ತೆಗೆದುಕೊಳ್ಳಿ ಹಾಗೆಯೇ ಸ್ವಲ್ಪ ರೆಸ್ಟ್ ಕೂಡ ಮಾಡಿ,” ಎನ್ನುತ್ತಾ ಇವಳಿಗಾಗಿ ಮಾತ್ರೆ ಬರೆಯುತ್ತಾ, ಏನೋ ನೆನಪಿಸಿಕೊಂಡರಂತೆ, “ಹ್ಞಾಂ….. ಸರಿತಾ, ರಾತ್ರಿ ಚೆನ್ನಾಗಿ ನಿದ್ರೆ ಮಾಡ್ತೀರಿ ತಾನೇ….. ದೇಹಕ್ಕೆ ಒಳ್ಳೆ ನಿದ್ರೆ ಮುಖ್ಯ,” ಎಂದರು.
ಅವರ ಪ್ರಶ್ನೆಗೆ ಅವಳು ಮುಖ ಕಿವುಚುತ್ತಾ, “ಇಲ್ಲಾ ಡಾಕ್ಟ್ರೇ….. ರಾತ್ರಿ ನಂಗೆ ನಿದ್ದೇನೇ ಬರೋಲ್ಲ. ತಲೆ ತುಂಬಾ ಬರೀ ಕೆಟ್ಟ ಕೆಟ್ಟ ವಿಚಾರ, ಯೋಚನೆಗಳು ಇವೇ ತುಂಬಿರುತ್ತವೆ. ರಾತ್ರಿಯೆಲ್ಲಾ ಹಾಸಿಗೆಯಲ್ಲಿ ನಿದ್ರೆಯಿಲ್ಲದೆ ಹೊರಳಾಡಿ ಹೊರಳಾಡಿ ನಸುಕಿನಲ್ಲಿ ನಿದ್ರೆ ಬರುತ್ತೆ…. ಆದರೆ ಆಗ ಮನಗುವಂತಿರಲ್ಲ….. ಹೀಗಾಗಿ ಇಡೀ ದಿನ ಮಂಕಾಗಿ ಇರ್ತೀನಿ,” ಎಂದಳು ಸರಿತಾ.
ಡಾಕ್ಟರ್ ನಿದ್ರೆ ಮಾತ್ರೆಯನ್ನು ಬರೆದುಕೊಟ್ಟು ಕೆಲವು ದಿನಗಳ ಕಾಲ ತೆಗೆದುಕೊಳ್ಳಲು ಹೇಳಿದರು.
ಅವಳ ಗಂಡನಿಗೆ, “ನೋಡಿ ಸರ್, ಹೆಣ್ಮಕ್ಕಳಿಗೆ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಹಾರ್ಮೋನಿನ ಕಾರಣದಿಂದ ಬರೀ ಅವರ ದೇಹದಲ್ಲಿ ಮಾತ್ರ ಬದಲಾವಣೆ ಆಗುವುದಿಲ್ಲ, ಅವರ ಮನಸ್ಸಿನಲ್ಲೂ ನಾನಾ ಬಗೆಯ ಭಾವನೆಗಳು ಹೊಯ್ದಾಡುತ್ತವೆ. ಅದರಲ್ಲೂ ದುರ್ಬಲ ಮನಸ್ಸಿರುವವರು ಬಲು ಬೇಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅವರ ಮನಸ್ಸು ಅದೇ ರೀತಿ ಮೊದಲಿನ ಹಾಗೆ ತುಂಬು ಕುಟುಂಬದವರ ಪ್ರೀತಿ ಪ್ರೇಮಕ್ಕಾಗಿ ಹಂಬಲಿಸಿ ಹಾತೊರೆಯುತ್ತದೆ.
“ನಿಮ್ಮ ಹೆಂಡತಿಗೆ ಈಗ ಬೇಕಾಗಿರೋದು ಗುಳಿಗೆ ಮಾತ್ರೆಗಳಲ್ಲ…..! ಹಿಡಿಯಷ್ಟು ಪ್ರೀತಿ, ಬಾಯ್ತುಂಬಾ ನಾಲ್ಕು ಪ್ರೀತಿ ಮಾತುಗಳು ಅಷ್ಟೆ! ಅವರಲ್ಲಿ ವಿಪರೀತ ಒಂಟಿತನ ಕಾಡ್ತಿದೆ. ದಿನ ಅವರೊಂದಿಗೆ ಒಂದಿಷ್ಟು ಹೊತ್ತು ಕಳೆಯಿರಿ. ವಾರಾಂತ್ಯದಲ್ಲಿ ಆಕೆಯನ್ನು ಆಚೆ ಕರೆದುಕೊಂಡು ಹೋಗಿ ಎಲ್ಲ ಸರಿಹೋಗುತ್ತೆ,” ಎಂದು ಹೇಳಿ ಕಳುಹಿಸಿದರು.
ಡಾಕ್ಟರ್ ಬರೆದು ಕೊಟ್ಟ ಮಾತ್ರೆಗಳನ್ನು ತಂದುಕೊಟ್ಟು ಕರ್ತವ್ಯ ಮುಕ್ತನಾದ ಸರಿತಾಳ ಗಂಡ. ಆದರೆ ತಂದುಕೊಟ್ಟ ಮಾತ್ರೆಗಳು ಸರಿತಾಳ ನೋವಿಗೆ ಸ್ಪಂದಿಸಿದವೇ ಹೊರತು, ಉಳಿದಂತೆ ಎಲ್ಲವೂ ಮಾಮೂಲಿನಂತೆಯೇ ನಡೆದಿತ್ತು. ಅನೇಕ ಸಂದರ್ಭಗಳಲ್ಲಿ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು ಬರೀ ಡಾಕ್ಟರ್ ಕೊಡುವ ಔಷಧಿ ಮಾತ್ರೆಗಳಿಂದೇನೂ ಮಾಸುವುದಿಲ್ಲ. ದೇಹಕ್ಕೆ ಎಂಥದೇ ಕಾಯಿಲೆ ಇರಲಿ, ಅದಕ್ಕೆ ಉಲ್ಲಾಸದ ಲೇಪನವಿದ್ದರೆ ಕ್ಷಣಮಾತ್ರದಲ್ಲಿ ಕಾಯಿಲೆಯ ನೋವು ಮಾಸಿಹೋಗುವುದು. ಅಷ್ಟೇ ಬೇಗ ದೇಹದಿಂದಲೂ ದೂರವಾಗುವುದರಲ್ಲಿ ಸಂದೇಹವಿಲ್ಲ. ಉಲ್ಲಸಿತ ಮನ ಏನನ್ನಾದರೂ ಸಾಧಿಸಬಹುದು.
ಅಗಾಧ ಒಂಟಿತನ, ಮೂರು ಹೊತ್ತು ಒಬ್ಬಳೇ ಮನೆಯಲ್ಲಿ ಇದ್ದು ಇದ್ದೂ ಬೇಸತ್ತ ಸರಿತಾ, ಒಮ್ಮೊಮ್ಮೆ ಗಂಡನೊಡನೆ ಜಗಳಕ್ಕಿಳಿಯುತ್ತಿದ್ದಳು.
“ಏನು….? ಮೂರು ಹೊತ್ತೂ ನಿನ್ಮುಂದೆ ಕೂತಿರು ಅಂತೀಯಾ…..? ನೀನೊಂದು ಕಾಗೆಯ ಹಾಗೆ ಸದಾ ಕಾ…. ಕಾ…. ಅಂತಿರ್ತೀಯಾ…. ನಾನೊಂದು ಗೂಬೆಯಂತೆ ನಿನ್ಮುಂದೆ ಗುಟುರ್….. ಗುಟುರ್….. ಅನ್ನುತ್ತಾ ಕೂತಿರ್ಲಾ…..? ಇಷ್ಟು ಕಾಲ ಮಕ್ಕಳು ಮರಿ, ಅವರ ಓದು ಬರಹ, ಮನೆ ಖರ್ಚು ತೂಗಿಸುವುದರ ಬಗ್ಗೆ ಚಿಂತೆ ಮಾಡಿ ಕಾಲ ಕಳೆದಾಯ್ತು. ಆಗೆಲ್ಲಾ ನಾನು ಹೀಗೆ ಹೋಗ್ತಿದ್ನಾ…..? ಎಲ್ಲೋ ತಿಂಗಳಿಗೆ ಒಂದ್ಸಲ ಹೋದ್ರೆ ಬಹಳ, ಈಗ ಜವಾಬ್ದಾರಿ ಮುಗಿದಿದೆ.
“ದುಡಿಯುವ ಮನಸ್ಸಿಗೂ ಸ್ವಲ್ಪ ರಿಲ್ಯಾಕ್ಸೇಶನ್ ಬೇಕಾಗುತ್ತೆ ಅದ್ಕೆ ಹೋಗ್ತೀನಿ. ಈ ಸೊಸೈಟಿಯಲ್ಲಿ ಇರಬೇಕಾದ್ರೆ ನಾವು ನಾಲ್ಕು ಜನ ಜೊತೆ ಬೆರೆಯಬೇಕಾಗುತ್ತೆ. ಅವರು ಕರದಾಗೆಲ್ಲಾ ನಾನು ಹೋಗದೆ ಇದ್ರೆ, ನಾಳೆ ದಿನ ಯಾವ ಫ್ರೆಂಡ್ಸೂ ನನ್ನನ್ನು ಕರೆಯಲ್ಲ…..! ನೀನು ಅಕ್ಕಪಕ್ಕದವರ ಜೊತೆ ಸ್ನೇಹ ಬೆಳೆಸುವ, ಕಥೆ ಕಾದಂಬರಿ ಓದ್ತಾ ಟೈಂಪಾಸ್ ಮಾಡ್ಕೋ….. ನಾನೇನೂ ಬೇಡ ಅಂದ್ನೇ…..?” ಎಂದು ಇವಳಿಗಿಂತ ದನಿಯೇರಿಸಿ ಕೂಗಾಡಿ ಅವಳ ಬಾಯಿ ಮುಚ್ಚಿಸಿದ್ದ.
ಇವಳ ಮನ ಗೀಚುವರಿಲ್ಲದ ಬಿಳಿ ಹಾಳೆಯಂತಾಗಿತ್ತು. ತಲೆ ಯೋಚನೆಗಳ ಗೂಡಾಗಿತ್ತು. ಗಂಡಿಗಿಂತಲೂ ಹೆಣ್ಣು ಈ ಸಮಾಜದಲ್ಲಿ ಒಂಟಿಯಾಗಿ ಇರಲಾರಳು, ಒಂಟಿಯಾಗಿ ಬಾಳಲಾರಳು. ಹುಟ್ಟಿನಿಂದ ಸಾಯೋವರೆಗೂ ಹೆಣ್ಣು ಗಂಡಿನ ಅಡಿಯಾಳೆ….? ಪರಾಧೀನಳೇ….? ಅವಳಿಗೆ ಅವಳದೇ ಆದ ಸ್ವಾತಂತ್ರ್ಯ ಯಾವ ಕಾಲಕ್ಕೂ ಇಲ್ಲವೇ….? ಗಂಡಸು ತನ್ನ ಜವಾಬ್ದಾರಿ ಮುಗಿಸಿ ಸ್ವತಂತ್ರನಾಗಿ ಇರುವುದಾದರೆ ಹೆಣ್ಣಿಗೇಕೆ ಅಂಥ ಸ್ವಾತಂತ್ರ್ಯವಿಲ್ಲ? ಅವಳು ಅವನ ಜವಾಬ್ದಾರಿಯಲ್ಲಿ ಅವನ ಹೊಣೆಗಾರಿಕೆಯಲ್ಲಿ ಸಮಾನವಾಗಿ ಭಾಗಿಯಾಗಿರುವುದಿಲ್ಲವೇ……?
ಕೈ ಹಿಡಿದಾಗ ಕಿವಿಯಲ್ಲಿ ಪಿಸುಗುಟ್ಟಿದ ಮಾತು, ತೋರಿದ ಒಲವು, ನೀಡಿದ ಭರವಸೆ, ಎಂಥದ್ದೇ ಕಷ್ಟ ಬಂದರೂ ಮೊದಲು ನಾನು ಎದೆಯೊಡ್ಡಿ ನಿನ್ನ ಅಂಗೈಯಲ್ಲಿಟ್ಟು ಕಾಪಾಡುವೆ ಎಂದ ಮಾತುಗಳು ಇಂದಿಗೂ ಕಿವಿಯಲ್ಲಿ ಗುಂಯ್ಯಿಗುಡುತ್ತಿವೆ. ಎಲ್ಲವೂ ನಿನ್ನೆ ಮೊನ್ನೆ ನಡೆದ ಹಾಗೆ ಇನ್ನು ಕಣ್ಮುಂದಿದೆ. ಆದರೆ ಇಂದು ಬರೀ ಎರಡು ಬಾಯಿ ಮಾತಿಗೆ ಬರ ಬಂದಿತೆ…? ಅವನ ಪ್ರೀತಿ ಅಷ್ಟು ಜೊಳ್ಳಾಗಿತ್ತೆ…..? ಅವನಿತ್ತ ಭರವಸೆ ಹುಸಿ ಭರವಸೆಯೇ…..? ಅವನು ತೋರಿದ ಒಲವು ಬಿಸಿ ತಾಕಿದ ಕರ್ಪೂರದ ಹಾಗೆ ಕರಗಿ ಹೋಯ್ತೆ….? ಇದರಲ್ಲಿ ಯಾವುದು ನಿಜ…..? ಹೆಣ್ಣು ತಾನು ಹುಟ್ಟಿದ ಮನೆ ತನ್ನ ಬಂಧು ಬಳಗನ್ನೆಲ್ಲ ತೊರೆದು ಯಾರೋ ಅಪರಿಚಿತನ ಕೈ ಹಿಡಿದು ಅಪರಿಚಿತ ಮನೆಗೆ ಬಂದು ಅಪರಿಚಿತರನ್ನು ತನ್ನವರಾಗಿಸಿಕೊಂಡು ಅವರೊಂದಿಗೆ ಬೆರೆತು ಅರಿತು, ಅವರೊಂದಿಗೆ ಹೊಂದಿಕೊಂಡು ಹೋಗುವುದಕ್ಕೆ ಯಾವತ್ತಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವನ ವಂಶ ಬೆಳೆಯಲು ಅವನ ವಂಶೋದ್ಧಾರಕನ ಕುಡಿಯುನ್ನು ಒಂಬತ್ತು ತಿಂಗಳುಗಳ ಕಾಲ ತನ್ನೊಡಲಿನಲ್ಲಿ ಇರಿಸಿಕೊಂಡು ಬೆಳೆಸಿ ತನ್ನ ದೇಹದ ರಕ್ತವನ್ನೇ ಬಸಿಯುತ್ತಾ ವಂದ್ಧಾರಕನನ್ನು ಹೆತ್ತು ತನ್ನ ರಕ್ತವನ್ನು ಹಾಲಾಗಿಸಿ, ಕುಡಿಸಿ ಬೆಳೆಸುವುದನ್ನು ಯಾವ ಗಂಡಸು ಮಾಡಬಲ್ಲ….? ಇದು ಕೂಡ ಇಡೀ ಒಂದು ಕುಟುಂಬ ತನ್ನ ಮೇಲೆ ಹೊರೆಸಿರುವ ಜವಾಬ್ದಾರಿ ಅಲ್ಲವೇ….? ದುಡಿಯುವ ಗಂಡಿನ ಕಣ್ಣಿಗೆ ಇದೆಲ್ಲ ಗೌಣವಾಗಿ ಕಂಡಿತೆ…..? ಒಂದೊಂದು ಬಿಡಿ ಕಾಸಿಗೂ ಗಂಡನ ಮುಂದೆ ಕೈಯೊಡ್ಡಬೇಕು.
ಅಂದು, `ನನ್ನ ದುಡ್ಡು ನಿನ್ನ ದುಡ್ಡು ಎಂದೇನಾದ್ರೂ ಇದೆಯೇ?’ ಎನ್ನುತ್ತಿದ್ದ ಮಾತಿಗೆ ಈಗ, `ನಾನು ಕೊಟ್ಟಿದ್ದಕ್ಕೆ ತಾನೇ… ನಿನ್ನಲ್ಲಿ ದುಡ್ಡು,’ ಎಂಬ ಹಂಗಣಿಕೆ. ಇಂತಹ ಸಾವಿರ ಸಾವಿರ ಸಮಸ್ಯೆಗಳು ಮನೆಯಲ್ಲಿ ಮನದಲ್ಲಿ ಇರುವಾಗ ಇದಕ್ಕೆ ಬರೀ `ಮೆನೋಪಾಸ್’ ಅಥವಾ ಋತುಬಂಧ ಮಾತ್ರ ಮಾನದಂಡವೇ……? ಸಂಸಾರದ ಸಮಸ್ಯೆಗಳ ಸುಳಿಗೆ ಮೆನೋಪಾಸ್ ನ ಬಣ್ಣ ಬಳಿಯುವುದು ಸಾಧ್ಯವೇ….? ಈ ನೋವಿಗೆ ನಿಜಕ್ಕೂ ಪರಿಹಾರ ಸಿಗುತ್ತದೆಯೇ…..?





