ಲಿಂಗ ತಾರತಮ್ಯ ಹೋಗಲಾಡಿಸಲು ಹಾಗೂ ದೌರ್ಜನ್ಯಗಳಿಗೆ ಒಳಗಾಗುವ ಮಹಿಳೆಯರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಗೆಳತಿ ಕೇಂದ್ರವನ್ನು ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ಬಾಲ್ಯ ವಿವಾಹ, ಲೈಂಗಿಕ ಕಿರುಕುಳ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯಗಳು ಬೆಳಕಿಗೆ ಬರುವುದು ವಿರಳ. ಇಂತಹ ಅನೇಕ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತವೆ. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಸಮಾಜವನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳನ್ನೂ ಅಲ್ಲಗಳೆಯುವಂತಿಲ್ಲ. ಹಿಂಸೆ ರಹಿತ ಜೀವನಕ್ಕೆ ಅನುವು ಮಾಡಿಕೊಡಲು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ಮೂಲಕ ಇದೀಗ ಪ್ರಾಯೋಗಿಕವಾಗಿ “ಗೆಳತಿ” ಕೇಂದ್ರವನ್ನು ಆರಂಭಿಸಿದೆ.
ಎಂಟು ನೌಕರರು: ಗೆಳತಿ ಕೇಂದ್ರದಲ್ಲಿ ಆಡಳಿತಾಧಿಕಾರಿ -1, ಸೋಶಿಯಲ್ ವರ್ಕರ್ – 3, ಆಪ್ತ ಸಮಾಲೋಚಕರು-2, ಹೌಸ್ ಕೀಪಿಂಗ್ ಇಬ್ಬರು ಸೇರಿದಂತೆ ಎಂಟು ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಒಬ್ಬರಂತೆ ಮೇನ್ ಬುಕ್ ಕೀಪರ್ (ಎಂಬಿಕೆ) ನೇಮಕವಾಗಿರುತ್ತಾರೆ. ಗೆಳತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಪಂ ಸಿಇಒ ಉಪಾಧ್ಯಕ್ಷರಾಗಿರುತ್ತಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ವ-ಸಹಾಯ ಸಂಘದ ಮಹಿಳೆಯರಿಗೆ, ಮಹಿಳಾ ಕಾರ್ಮಿಕರಿಗೆ, ನೊಂದ ಮಹಿಳೆಯರಿಗೆ, ಯುವತಿಯರಿಗೆ ಗೆಳತಿ ಕೇಂದ್ರದ ಮೂಲಕ ಸಹಾಯ, ವೈದ್ಯಕೀಯ ನೆರವು ನೀಡಲಾಗುತ್ತದೆ.
ನೊಂದವರಿಗೆ ಗೆಳತಿ ಕೇಂದ್ರದಿಂದ ಆಪ್ತ ಸಮಾಲೋಚನೆ ಹಾಗೂ ಕಾನೂನಿನ ನೆರವು ನೀಡಲಾಗುತ್ತದೆ. ಮಾತ್ರವಲ್ಲ, ಈ ಕೆಂದ್ರ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ.
ಶೀರ್ಘದಲ್ಲೇ ಎಲ್ಲಾ ಜಿಲ್ಲೆಗಳಿಗೂ : ರಾಜ್ಯ ಸರ್ಕಾರ “ಗೆಳತಿ” ಕೇಂದ್ರವನ್ನು ಪ್ರಾಯೋಗಿಕವಾಗಿ ಕಲಬುರಗಿಯಲ್ಲಿ ಪ್ರಾರಂಭಿಸಿದೆ. ಸರ್ಕಾರ ಒಂದು ವರ್ಷಕ್ಕೆ ಗೆಳತಿ ಕೇಂದ್ರಕ್ಕೆ 50 ಲಕ್ಷ ರೂ. ಅನುದಾನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಗೆಳತಿ ಕೇಂದ್ರಗಳು ಪ್ರಾರಂಭವಾಗಲಿವೆ.





