ರಾಘವೇಂದ್ರ ಅಡಿಗ ಎಚ್ಚೆನ್.

ನಟಿ ರಶ್ಮಿಕಾ ಮಂದಣ್ಣ ಮದುವೆಯಾದ ಸುದ್ದಿ ಹೊರಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹಳೆಯ ವಿವಾದಗಳನ್ನು ಎತ್ತಿಹಾಕುವ ಪ್ರವೃತ್ತಿ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು, ಟೀಕೆಗಳು ಮತ್ತು ಕಿರುಕುಳಗಳ ಬಗ್ಗೆ ನಟಿ ಮೊದಲ ಬಾರಿಗೆ ಮನಮುಟ್ಟುವಂತೆ ಪ್ರತಿಕ್ರಿಯಿಸಿದ್ದಾರೆ.

2018ರ ಸೆಪ್ಟೆಂಬರ್ 18ರಿಂದ 2026ರ ಫೆಬ್ರವರಿ 26ರವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ಆರೋಪಗಳು, ಟೀಕೆಗಳು ಮತ್ತು ಅಪಪ್ರಚಾರಗಳನ್ನು ಎದುರಿಸಿದ್ದಾಗಿ ಅವರು ಹೇಳಿದ್ದಾರೆ. ಈ ಅವಧಿಯಲ್ಲಿ ಹಲವು ಬಾರಿ ನೋವು ಅನುಭವಿಸಿದ್ದರೂ, ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜವೆಂದು ಮೌನದಿಂದ ಎದುರಿಸಿದ್ದಾಗಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ, ಸುಮಾರು ಎಂಟು ವರ್ಷಗಳ ಹಿಂದಿನದ್ದೆಂದು ಹೇಳಲಾಗುತ್ತಿರುವ ಖಾಸಗಿ ಮಾತುಕತೆಯೊಂದರ ವಿಡಿಯೋವನ್ನು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಮಾತುಕತೆಯಲ್ಲಿ ಭಾಗಿಯಾದವರ ಅನುಮತಿ ಇಲ್ಲದೆ ಅದನ್ನು ಹಂಚುವುದು ಖಾಸಗಿತನದ ಮೇಲಿನ ದಾಳಿ ಹಾಗೂ ಮಾನನಷ್ಟಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

“ನನ್ನ ಜೀವನದಲ್ಲಿ ಇತ್ತೀಚೆಗೆ ನಡೆದ ಪ್ರಮುಖ ಬೆಳವಣಿಗೆಯ ಸಂದರ್ಭದಲ್ಲಿ ಈ ವಿಷಯವನ್ನು ಮತ್ತೆ ಎತ್ತಿಹಾಕುವುದು ಪಿತೂರಿಯಂತಿದೆ. ನನ್ನ ಕುಟುಂಬ ಮತ್ತು ನನಗೆ ಹತ್ತಿರವಿರುವವರನ್ನೂ ಅನಗತ್ಯವಾಗಿ ಈ ವಿವಾದಕ್ಕೆ ಎಳೆದು ತರುವುದು ನೋವುಂಟುಮಾಡಿದೆ,” ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹರಡುತ್ತಿರುವ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಅವರು ಮನವಿ ಮಾಡಿದ್ದಾರೆ. ಅದಕ್ಕಾಗಿ 24 ಗಂಟೆಗಳ ಕಾಲಾವಕಾಶ ನೀಡಿರುವುದಾಗಿ ತಿಳಿಸಿ, ಅದನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿ ನಡೆಯುವ ದ್ವೇಷಭರಿತ ಅಭಿಯಾನಗಳು ಹೊಸದಲ್ಲ. ಇತ್ತೀಚಿನ ವರ್ಷಗಳಲ್ಲಿ ಅನೇಕ ನಟಿಯರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ, ಮಹಿಳೆಯರ ಗೌರವ ಮತ್ತು ಖಾಸಗಿತನವನ್ನು ಕಾಪಾಡುವ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ನಟಿ ರಶ್ಮಿಕಾ ಮಂದಣ್ಣ ತಮ್ಮ ಪತ್ರದ ಮೂಲಕ “ಮೌನದಿಂದ ಎಲ್ಲವನ್ನೂ ಸಹಿಸಿಕೊಳ್ಳುವ ಕಾಲ ಮುಗಿದಿದೆ” ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ