ರಾಘವೇಂದ್ರ ಅಡಿಗ ಎಚ್ಚೆನ್.

ಕೆಡಿ: ದಿ ಡೆವಿಲ್ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಂಭೀರ ವಿವಾದಕ್ಕೆ ಸಿಲುಕಿದೆ. ಧ್ರುವ ಸರ್ಜಾ ಅಭಿನಯ ಮತ್ತು ಪ್ರೇಮ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನೋರಾ ಫತೇಹಿ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.
ಹಾಡು ಕನ್ನಡದ ಜೊತೆಗೆ ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ತಕ್ಷಣವೇ ಹಾಡಿನ ನೃತ್ಯ ಭಂಗಿಗಳು ಮತ್ತು ಸಾಹಿತ್ಯದ ಮೇಲೆ ‘ಅತಿರೇಕದ ಅಶ್ಲೀಲತೆ’ ಆರೋಪ ಕೇಳಿಬಂದಿದೆ.
ವಿಶೇಷವಾಗಿ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರ್’ ಹಾಡಿನ ಸಾಹಿತ್ಯ ತೀವ್ರ ಟೀಕೆಗೆ ಗುರಿಯಾಗಿದ್ದು, ಮಹಿಳೆಯರ ಘನತೆಗೆ ಧಕ್ಕೆ ತರುತ್ತದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ದೆಹಲಿಯ ವಕೀಲ ವಿನೀತ್ ಜಿಂದಾಲ್ ಅವರು ಸಿಬಿಎಫ್‌ಸಿಗೆ ದೂರು ಸಲ್ಲಿಸಿದ್ದಾರೆ. ಹಾಡನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿರುವ ಅವರು, ದೆಹಲಿ ಸೈಬರ್ ಪೊಲೀಸರಿಗೂ ದೂರು ನೀಡಿ, ಸಂಬಂಧಪಟ್ಟವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

notice 1

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳ ಪ್ರದರ್ಶನದ ಬಗ್ಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಐಟಂ ಹಾಡಾಗಿರುವ ಈ ಗೀತೆಯಲ್ಲಿ ನೋರಾ ಫತೇಹಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಮದ್ಯಾಧಾರಿತ ವಿಷಯ ಹಾಗೂ ದ್ವಂದ್ವಾರ್ಥದ ಸಾಹಿತ್ಯವೇ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ವಿವಾದ ತಾರಕ್ಕಕ್ಕೆ ಏರುತ್ತಿದ್ದಂತೆ ಹಿಂದಿ ಹಾಡನ್ನು ಯೂಟ್ಯೂಬ್‍ನಿಂದ ಕೆವಿಎನ್ ಪ್ರೊಡಕ್ಷನ್ ತೆಗೆದು ಹಾಕಿದೆ.
ಸಾರ್ವಜನೈಕರು, ಗಾಯಕರ ಆಕ್ರೋಶ
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಚಿತ್ರದ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಉತ್ತಮ ಸಾಹಿತ್ಯ ಬರೆದ ಪ್ರೇಮ್ ಅವರಿಂದ ಇಂಥ ಕಳಪೆ ಪದಗಳು ನಿರೀಕ್ಷಿಸಲಿಲ್ಲ” ಎಂದು ಟೀಕಿಸಿದ್ದಾರೆ. ಇದೇ ವೇಳೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಈ ಹಾಡಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಗೀತರಚನೆ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ನೋವು ತಂದಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳಾ ಆಯೋಗ ಗರಂ
ಜೋಗಿ ಪ್ರೇಮ್ ನಿರ್ದೇಶನದ ಕೆಡಿ-ದ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಸಿನಿಮಾದ ಈ ಹಾಡು ಅಶ್ಲೀಲವಾಗಿದೆ. ಮಹಿಳೆಯರ ಘನತೆಗೆ ಕುತ್ತು ಬರುತ್ತೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಈ ಮೂಲಕ ‘ಕೆಡಿ’ ಸಿನಿಮಾದ ಹಾಡು ಇದೀಗ ಸಂಗೀತಕ್ಕಿಂತ ವಿವಾದದ ಕಾರಣದಿಂದಲೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ