ಸಿನಿಮಾ ಮಾಡಬೇಕು ಎಂದರೆ ಮಾಡಿ, ಆದರೆ ಪವಿತ್ರ ಗ್ರಂಥಗಳನ್ನು ತಪ್ಪಾಗಿ ಬಳಸಬೇಡಿ. ಧರ್ಮದ ಹೆಸರಿನಲ್ಲಿ ಹಿಂಸೆ ಪ್ರಚಾರ ಬೇಡ ಎಂದು ನಟಿ ರಮ್ಯಾ ಶನಿವಾರ ಹೇಳಿದ್ದಾರೆ.

Dhurandhar 2 ಸಿನಿಮಾ ಕುರಿತು ಮತ್ತೊಮ್ಮೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಮ್ಯಾ, ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳನ್ನು ಚಿತ್ರಗಳಲ್ಲಿ ತಪ್ಪಾಗಿ ಅರ್ಥೈಸಿ, ಹಿಂಸೆ ಮತ್ತು ಸಂಘರ್ಷಕ್ಕೆ ನ್ಯಾಯ ನೀಡುವ ರೀತಿಯಲ್ಲಿ ಬಳಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರಮ್ಯಾ, ಭಗವದ್ಗೀತೆಯ ನಿಜವಾದ ಅರ್ಥವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಕೃಷ್ಣನು ಅರ್ಜುನನಿಗೆ ಹೇಳುವ ಯುದ್ಧವು ಕೇವಲ ಭೌತಿಕ ಯುದ್ಧವಲ್ಲ, ಅದು ಮಾನವನೊಳಗಿನ ಮನಸ್ಸಿನ ಸಂಘರ್ಷವೆಂದು ಹೇಳಿದ್ದಾರೆ. “ಆತ್ಮನೇ ಸ್ನೇಹಿತ, ಆತ್ಮನೇ ಶತ್ರು”, ಹೊರಗಿನ ಶತ್ರುಗಳಿಗಿಂತ ನಮ್ಮೊಳಗಿನ ಅಹಂಕಾರ, ಆಸೆ, ಅಜ್ಞಾನ ಮತ್ತು ಅಸ್ಥಿರ ಮನಸ್ಸೇ ನಿಜವಾದ ಶತ್ರು ಎಂದು ಹೇಳಿದ್ದಾರೆ.

ಯಾವಾಗ ಮನಸ್ಸು ಅಲೆದಾಡುತ್ತದೆಯೋ, ಅದನ್ನು ಮತ್ತೆ ಆತ್ಮದ ಕಡೆಗೆ ಕರೆತರಬೇಕು. ಧರ್ಮವೆಂದರೆ ಇತರರ ವಿರುದ್ಧ ಹೋರಾಡುವುದಲ್ಲ, ಬದಲಾಗಿ ತನ್ನ ಸ್ವಭಾವದೊಂದಿಗೆ ಹೊಂದಾಣಿಕೆ ಸಾಧಿಸುವುದು, ಆತ್ಮಜ್ಞಾನವನ್ನು ಅರಸುವುದು ಎಂದು ವಿವರಿಸಿದ್ದಾರೆ.

ಇದೇ ವೇಳೆ ಸಿನಿಮಾಗಳಲ್ಲಿ ಪವಿತ್ರ ಗ್ರಂಥಗಳನ್ನು ಕಥೆಗೆ ತಕ್ಕಂತೆ ತಿರುಚಿ ಪ್ರಚಾರ ಮಾಡುವ ಪ್ರವೃತ್ತಿಯ ಬಗ್ಗೆಯೂ ರಮ್ಯಾ ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮಾಡಬೇಕು ಎಂದರೆ ಮಾಡಿ, ಆದರೆ, ಪವಿತ್ರ ಗ್ರಂಥಗಳನ್ನು ತಪ್ಪಾಗಿ ಬಳಸಬೇಡಿ ಎಂದೂ ಹೇಳಿದ್ದಾರೆ.

ಬಳಿಕ ನಟ ರಣವೀರ್ ಸಿಂಗ್ ಅವರ ಅಭಿನಯ ಕುರಿತಂತೆಯೂ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನನಗೆ ರಣವೀರ್ ಸಿಂಗ್ ಇಷ್ಟ. ಅವರು ಧುರಂಧರ್ ಭಾಗ 1 ರಲ್ಲಿ ಅದ್ಭುತವಾಗಿ ನಟಿಸಿದ್ದರು. ಅವರು ತೋರಿಸಿದ ಸಂಯಮವು ನಟನಾಗಿ ಅವರ ಸಾಮರ್ಥ್ಯವನ್ನು ನಿಜವಾಗಿಯೂ ಸಾಬೀತುಪಡಿಸಿದೆ. ಆದರೆ, ಧುರಂಧರ್ 2’ನಲ್ಲಿ ಅತಿಯಾದ ಕೋಪ ಮತ್ತು ಹಿಂಸೆಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದರಿಂದ ಅವರ ಪ್ರತಿಭೆಯನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ. “ರಣವೀರ್ ಇನ್ನೂ ಉತ್ತಮವಾಗಿ ನಟಿಸಬಲ್ಲವರು. ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ. ಅವರ ಮುಂದಿನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ