ಜೀವನದ ಸಂಧ್ಯಾಕಾಲದಲ್ಲಿ ಮಾನವರು ಎದುರಿಸುವ ಕಷ್ಟಗಳು ಅಷ್ಟಿಷ್ಟಲ್ಲ. ಅದರಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ವೃದ್ಧರಿಗೆ ತೊಂದರೆಗಳು ಹೆಚ್ಚು. ಇಂಥವರು ಮನಶ್ಶಾಂತಿ ಪಡೆಯಲು ವೃದ್ಧಾಶ್ರಮಗಳೇ ಮೂಲ. ಬೆಳಗಾವಿಯ ಇಂಥ ಒಂದು ವೃದ್ಧಾಶ್ರಮದ ಬಗ್ಗೆ ವಿವರಗಳನ್ನು ತಿಳಿಯೋಣವೇ....?
ಮನುಷ್ಯನ ಬಾಳಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯಗಳ ಅವಸ್ಥೆಗಳು ಅನಿವಾರ್ಯ. ಅವುಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಬಾಲ್ಯದಲ್ಲಿ ತಾಯಿ ತಂದೆಯರ ಸಹಾಯಹಸ್ತ ಇದ್ದೇ ಇರುತ್ತದೆ. ಮಗು ಅತ್ತಾಗ, ರಾತ್ರಿಯೆಲ್ಲ ನಿದ್ದೆ ಕೆಡಿಸಿದಾಗ, ಹಠ ಮಾಡಿದಾಗ, ಯಾವ ತಾಯಿಯೂ ಆ ಮಗುವನ್ನು ಎಲ್ಲಿಯಾದರೂ ಬಿಟ್ಟುಬರಬೇಕೆನ್ನುವ ವಿಚಾರವನ್ನು ಯಾವತ್ತೂ ಮಾಡುವುದಿಲ್ಲ. ಮುಂದೆ ಯೌವನಾವಸ್ಥೆಯಲ್ಲಿ ಹೆಂಡತಿಯಾದವಳು ಅಥವಾ ಗಂಡನಾದವನು ಮಾಡಿದ ತಪ್ಪು ಅವಾಂತರಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಂಸಾರ ಪಥವನ್ನು ಮುನ್ನಡೆಸುತ್ತಾರೆ. ಅಲ್ಲಿ ಪತಿಪತ್ನಿ ಪರಸ್ಪರ ಆಧಾರವಾಗಿರುತ್ತಾರೆ. ಆದರೆ ಜೀವನದ ಅತ್ಯಂತ ದುರ್ಭರ ಅವಸ್ಥೆ ಎಂದರೆ ವೃದ್ಧಾಪ್ಯ!
ವೃದ್ಧಾಪ್ಯದಲ್ಲಿ ಆರೋಗ್ಯ ಕೈಕೊಟ್ಟಿರುತ್ತದೆ. ಮಕ್ಕಳು, ಸೊಸೆಯರು ಹಾಗೂ ಮೊಮ್ಮಕ್ಕಳ ವಿಚಾರಗಳು ಹಿರಿಯರೊಂದಿಗೆ ಹೊಂದಾಣಿಕೆ ಆಗುತ್ತಿರುವುದಿಲ್ಲ.
ವೃದ್ಧಾಶ್ರಮದ ಆಸರೆ
ಹಿರಿಯರ ಕೈಯಿಂದ ಕೆಲಸ ಆಗುತ್ತಿರುವುದಿಲ್ಲ. ಕೆಲವೊಂದು ಸಲ ಅವರ ಹತ್ತಿರ ದುಡ್ಡೂ ಇರುವುದಿಲ್ಲ. ಆ ಸಮಯದಲ್ಲಿ ಅಸಹಾಯಕತೆ ಇನ್ನೂ ದಯನೀಯವಾಗಿರುತ್ತದೆ. ಇಂಥ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ಇರಲೆಂದೇ ನನ್ನ ಅಭಿಪ್ರಾಯ. ಕನಿಷ್ಠ ಪಕ್ಷ ಅಲ್ಲಿ ತನ್ನ ಸ್ವಾಭಿಮಾನದಿಂದ, ಆತ್ಮಗೌರದಿಂದಲಾದರೂ ಬದುಕಿನ ಕೊನೆಯ ಘಟ್ಟವನ್ನು ಕಳೆಯಬಹುದು.
ಇಂದು ವೃದ್ಧಾಶ್ರಮಗಳ ಸಂಖ್ಯೆಯು ಸಾಕಷ್ಟು ವೃದ್ಧಿಸಿದೆ, ನಿಜ. ಮನೆಯಲ್ಲಿ ದೊರೆಯದ ಗೌರವಾದರಗಳೊಂದಿಗೆ ಅವರಿಗೆ ಅಗತ್ಯವಾದ ವಿಶ್ರಾಂತಿಯೂ ಇಲ್ಲಿ ದೊರಕಬಹುದು. ಅವರಿಗೆ ಬೇಕಾದ ಸ್ವಾತಂತ್ರ್ಯ ಕೂಡ ತಕ್ಕ ಮಟ್ಟಿಗೆ ಇಲ್ಲಿ ದೊರೆಯುತ್ತದೆ.
ಕೆಲವು ವೃದ್ಧಾಶ್ರಮಗಳು ಅವರಿಂದ ದುಡ್ಡು ತೆಗೆದುಕೊಂಡು ವೃದ್ಧರಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸುತ್ತವೆ. ಇವು ಶ್ರೀಮಂತರಿಗಾಗಿ ಇರುವಂಥ. ಇನ್ನು ಆರ್ಥಿಕ ದೃಷ್ಟಿಯಿಂದ ನೋಡಿದರೆ ಎಲ್ಲ ವೃದ್ಧರೂ ಇದ್ದವುಳ್ಳವರೇ ಆಗಿರುವುದಿಲ್ಲ. ಕೆಲವೊಮ್ಮೆ ಅಂಥವರಿಗೆ ವೃದ್ಧಾಶ್ರಮದ ತಿಂಗಳ ವೆಚ್ಚವಷ್ಟೇ ಅಲ್ಲ, ಅದರ ಡಿಪಾಜಿಟ್ ಕೂಡ ಕೊಡಲು ಸಾಧ್ಯವಾಗುವುದಿಲ್ಲ. ಅಂಥ ಬಡವರಿಗಾಗಿಯೂ ಕೆಲವು ವೃದ್ಧಾಶ್ರಮಗಳಿವೆ.

ವೃದ್ಧಾಶ್ರಮದ ಅನಿವಾರ್ಯತೆ
ಇವು ಸರ್ಕಾರದಿಂದ ಗ್ರ್ಯಾಂಟ್ ನ್ನು ಪಡೆದೋ ಅಥವಾ ಶ್ರೀಮಂತ ಜನರಿಂದ ಸಹಾಯವನ್ನು ಪಡೆದೋ ವೃದ್ಧರಿಗೆ ಪುಕ್ಕಟೆಯಾಗಿ ಸೌಕರ್ಯವನ್ನು ಒದಗಿಸುತ್ತವೆ. ಒಟ್ಟಿನಲ್ಲಿ ಬಡವರೇ ಇರಲಿ, ಶ್ರೀಮಂತರೇ ಇರಲಿ, ವೃದ್ಧರು ತಮ್ಮ ಕೊನೆಗಾಲವನ್ನು ಸುಖಶಾಂತಿ ಹಾಗೂ ಸಮಾಧಾನಗಳಿಂದ ಕಳೆಯಬೇಕೆನ್ನುವುದೇ ವೃದ್ಧಾಶ್ರಮಗಳ ಉದ್ದೇಶ.
ಮಕ್ಕಳು ವಿದೇಶದಲ್ಲಿ ವಾಸವಿದ್ದಾಗ ಅಥವಾ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದಾಗ, ಏಕಾಂಗಿಯಾಗಿ ಒಬ್ಬರೇ ಮನೆಯಲ್ಲಿರುವುದಕ್ಕಿಂತ ತನ್ನಂತೆಯೇ ಏಕಾಂಗಿಯಾಗಿ ಇರುವಂಥವರ ಜೊತೆಗೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಂಗಾತಿಗಳ ಅಗತ್ಯ ಇರುತ್ತದೆ. ಹೀಗಾಗಿ ವೃದ್ಧಾಶ್ರಮಗಳು ಕೇವಲ ಆಸರೆ ಒದಗಿಸದೇ ವೃದ್ಧರಿಗೆ ಅವಶ್ಯಕವಾಗಿರುವ ಮನಶ್ಶಾಂತಿಯನ್ನೂ ಕರುಣಿಸಬಲ್ಲವು.
ಅಂಥ ಒಂದು ವೃದ್ಧಾಶ್ರಮ ಬೆಳಗಾವಿಯ ಹೊರವಲಯದಲ್ಲಿರುವ ಬಸವನ ಕುಡಚಿಯ ದೇವರಾಜ ಅರಸು ಕಾಲನಿಯಲ್ಲಿ ತಲೆ ಎತ್ತಿರುವುದು ಸುತ್ತಮುತ್ತಣ ಜನರಿಗೆ ಒಂದು ಸಮಾಧಾನವನ್ನು ತಂದಿದೆ.





