ದೀಪದ ಕಡ್ಡಿ ಗೀಚುತ್ತ ಅಕ್ಕನ ಪುಟ್ಟ ಮನೆಯಲ್ಲಿ ಚಿಮಣಿ ಎಣ್ಣೆಯ ದೀಪವನ್ನು ಹಚ್ಚಿ ಮನಸ್ಸಿನಲ್ಲಿಯೇ ಈ ದೀಪದ ಬೆಳಕು ಎಷ್ಟು ಮಸುಕೋ ನನ್ನ ಬದುಕು ಅಷ್ಟೇ ಮಸುಕಾಯಿತಲ್ಲ ಅಂತ ನೊಂದುಕೊಳ್ಳುತ್ತಲೇ...
ಅಲ್ಲಾ ಸೊಸೆ ನನ್ನ ಬಗ್ಗೆ ಅಷ್ಟೊಂದು ಕೇವಲವಾದ ಮಾತುಗಳನ್ನಾಡಿದಾಗ ನನಗಾದ ನೋವಿಗಿಂತ ಹೆಚ್ಚಾಗಿ ನನ್ನ ಕರುಳಿನ ಕುಡಿಯ ಬಾಡಿದ ಮುಖವೇ ನನಗೆ ಕಣ್ಣಿಗೆ ಕಟ್ಟಿದಂತಿದೆ. ಅವಳು ಆ ರೀತಿ ಆಡಿಕೊಂಡಿದ್ದು ನನಗೆ ಬೇಸರವಾಗಲಿಲ್ಲ. ಆದರೆ ಆ ಮಾತುಗಳೆಲ್ಲವನ್ನು ಕೇಳಿ ನನ್ನ ಮಗ ತಲೆ ತಗ್ಗಿಸಿ ಮೌನವಾಗಿ ಕಣ್ಣೀರು ಹಾಕುತ್ತಾ ನಿಂತನಲ್ಲ... ಆ ಕ್ಷಣ ನನ್ನ ಎದೆ ಸೀಳಿದಂತಾಗಿದ್ದು ಸುಳ್ಳಲ್ಲ.
ಸಮಯ ಸರಿದರೂ ಆತನಿಗೆ ನೆನಪಿದೆ ತನ್ನ ತಂದೆ ನಡು ನೀರಿನಲ್ಲೇ ನಮ್ಮ ಕೈ ಬಿಟ್ಟಾಗ ಮನೆಯ ಪರಿಸ್ಥಿತಿ ಹೇಗಿತ್ತು. ನಾನು ಒಂದೆರಡು ಹಳೆಯ ಕಾಟನ್ ಸೀರೆಯನ್ನೇ ಉಟ್ಟು ಗಂಜಿ ಕುಡಿದು ಮಗನ ಉಜ್ವಲ ಭವಿಷ್ಯಕ್ಕಾಗಿ ಅವಿರತ ದುಡಿಯುತ್ತ ದಿನ ಕಳೆದದ್ದು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಾಗ ಬಿಗಿದಪ್ಪಿಕೊಂಡು ಅಮ್ಮ ನಾನು ಕಷ್ಟ ಪಟ್ಟು ಓದಿ ಒಳ್ಳೆಯ ಕೆಲಸ ಗಳಿಸಿ ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿದ್ದ ಇದೇ ಮಗ ದೊಡ್ಡ ಅಧಿಕಾರಿಯಾಗಿ ಸುಖದಿಂದ ಬಾಳಲಿ ಎಂಬ ಒಂದೇ ಒಂದು ಆಸೆಗಾಗಿ ತಾನು ಇದುವರೆಗೂ ಜೀವಿಸಿದ್ದು.
ಇಂದು ಅವನು ತನ್ನ ಆಫೀಸಿನಲ್ಲಿ ದೊಡ್ಡ ದೊಡ್ಡ ಸಾಹೇಬರ ಜೊತೆ ಕುಳಿತು ಕೆಲಸ ಮಾಡುವುದನ್ನು ನೋಡಿದರೆ ಪಟ್ಟ ಕಷ್ಟ ಈ ಜನ್ಮ ಸಾರ್ಥಕವಾದಂತೆ ಅನಿಸಿತ್ತು.
ನಾನು ಮಾಡಿದ ದೊಡ್ಡ ತಪ್ಪೆಂದರೆ ಶ್ರೀಮಂತರ ಮನೆಯ ಮಗಳನ್ನು ಸೊಸೆಯಾಗಿ ತಂದಿದ್ದು. ಅವಳಿಗೆ ಈ ಒರಟು ಕೈಗಳ ಹಿಂದಿರುವ ಶ್ರಮದ/ ಹಸಿವಿನ ಕಥೆ ಹೇಗೆ ತಾನೇ ಗೊತ್ತಾಗಬೇಕು!?
ಅವಳ ಸ್ವೇಚ್ಛೆಯ ನಡೆನುಡಿಯನು ಕಂಡು ಸ್ವಲ್ಪ ಬುದ್ಧಿವಾದ ಹೇಳಿದ್ದನ್ನೇ ದೊಡ್ಡ ರಾದ್ಧಾಂತ ಮಾಡಿ ಅಸಲಿ ವಿಷಯವನ್ನು ಮರೆಮಾಚುತ್ತ ನನ್ನನ್ನು ಮನೆಯಿಂದ ಹೊರ ಹಾಕಿ ಅಂದ ತಕ್ಷಣ ಮಗನ ಕಣ್ಣುಗಳು ಕೆಂಡಾಮಂಡಲವಾಗಿದ್ದು ಕಾಣಿಸಿತು.
ಇಂತಹ ಪರಿಸ್ಥಿತಿಯಲ್ಲಿ ಹೆಂಡತಿಯನ್ನು ಎದುರಿಸಿ ಮಾತನಾಡಿದರೆ ತನ್ನ ಸಂಸಾರವು ಎಲ್ಲಿ ಮುರಿದು
ಹೋಗುತ್ತದೆ ಎಂಬ ಹೆದರಿಕೆ ಅವನಿಗೆ ಇದ್ದಿರಬಹುದು.
ಹೆಂಡತಿಯ ಅಹಂಕಾರದ ಮಾತುಗಳಿಗಿಂತ ತನ್ನ ಹೆತ್ತ ತಾಯಿಯ ಪರವಾಗಿ ನಿಲ್ಲಲಾಗದಂತಹ ನನ್ನ ಮಗನ ಅಸಹಾಯಕತೆ ಇದೆಯಲ್ಲ... ಅದು ಅವನ ಹೃದಯವನ್ನು ಒಳಗೊಳಗೆ ಎಷ್ಟೊಂದು ಹಿಂಸಿಸುತ್ತಿರಬಹುದು ಎನ್ನುವುದು ಈ ತಾಯಿ ಹೃದಯಕೆ ಮಾತ್ರ ಗೊತ್ತು.
ಇದರಿಂದ ಒಳಗೊಳಗೇ ಆತ ರಕ್ತದ ಕಣ್ಣೀರು ಸುರಿಸುತ್ತಿದ್ದಾನೆಂಬುದನ್ನು ಸೂಕ್ಷ್ಮವಾಗಿ ಅರಿತು... ಮಗನೇ ನೀನೇನೂ ಯೋಚಿಸಬೇಡಪ್ಪಾ ಹೇಗೂ ನನ್ನ ಅಕ್ಕ ಭಾವನನ್ನು ಕಳೆದುಕೊಂಡು ಹಳ್ಳಿಯಲ್ಲಿ ಒಂಟಿಯಾಗಿದ್ದಾಳೆ ನಾನು ಅವಳ ಜೊತೆಗೇ ಇರಬೇಕೆಂದು ನಿರ್ಧರಿಸಿದ್ದೇನೆ.ನೀನು ನನಗೋಸ್ಕರ ಹೆಂಡತಿಯೊಂದಿಗೆ ಜಗಳವಾಡಿ ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳಬೇಡ. ಮುಂದೆ ಆಗಬೇಕಾದ್ದು ಬಹಳಷ್ಟಿದೆ. ಅವಳು ನಮ್ಮ ವಂಶವನ್ನು ಬೆಳಗಬೇಕಾದವಳೆಂದು... ತಾಯಿಯ ಸ್ಥಾನ ಯಾವಾಗಲೂ ಮಕ್ಕಳ ಹಿಂದಿರುವ ನೆರಳಿನಂತೆಯೇ ಅದು ಕತ್ತಲಲ್ಲೇ ಇರಬೇಕೆಂಬುದನ್ನು ಅವನಿಗೆ ಅರ್ಥ ಮಾಡಿಸಿದ್ದೆ.





