ಸುತ್ತೆಲ್ಲ ಹಸಿರು. ಮುಂಜಾನೆಯ ಹೊಂಬಿಸಿಲಿನ ಕಿರಣಗಳ ಸ್ಪರ್ಶ ಸುಕ್ಕುಗಟ್ಟಿದ ಚರ್ಮದ ಮೇಲೆ ಬೀಳುತ್ತಿದೆ. ಅಲಸಿದ ಮನಸು ಬೆಂದು ಬಳಲಿದೆ. ಬದುಕಿನ ಆಸೆಗಳು ಸೋತು ಮಸಣ ಸೇರಿವೆ!
“ಇಷ್ಟೊಂದು ಆಯಸ್ಸು ಬೇಡವಾಗಿತ್ತು ಭಗವಂತನೇ. ಮಗನಿಗೆ ನಾನು ಒಂದು ತುತ್ತು ಅನ್ನ ತಿನ್ನುವುದೇ ಭಾರವಾಗಿರುವಾಗ, ಬದುಕಿ ಸಾಧನೆ ಮಾಡುವುದೇನಿದೆ? ನೀನು ಕಲ್ಲಾಗಿ ಹೋಗುವೆ ಎಂದು ದೇವರಲ್ಲಿ ಹೇಳಿಕೊಂಡು ಕೊರಗುವ…”
“ಒಂಬತ್ತು ತಿಂಗಳು ಒಡಲಲ್ಲಿ ಹೊತ್ತು, ಕಂದನಾಗಿ ಭುವಿಗೆ ಕಣ್ಬಿಟ್ಟ ಕ್ಷಣಾರ್ಧದಲ್ಲಿ, ಕಿತ್ತುಕೊಂಡೆ ಜೀವವನ್ನು. ನಾ ಇಷ್ಟು ಪರಿಪರಿಯಾಗಿ ಬೇಡುತ್ತಿರುವ ಸಾವನ್ನು, ಆದರೂ ಕೊಂಚ ಕರುಣೆ ಬರಲಿಲ್ಲವೇ…?”
ನಾ ಸಾಯಲು ಇಷ್ಟು ಹಂಬಲಿಸುತ್ತಿರುವುದಕ್ಕೂ ಕಾರಣ, ನಾನು ಹೆತ್ತು ಹೊತ್ತು ಸಾಕಿದ ನನ್ನ ಕರುಳ ಬಳ್ಳಿ, ನನ್ನ ಮಗನೇ. ಎಷ್ಟು ನೋವಾಗುತ್ತೆ ಅಲ್ವಾ, ಈ ನೊಂದ ಹೃದಯದ ಗೂಡಿಗೆ ಈ ವಿಷಾದಕರ ಸಂಗತಿಯನ್ನು ಹೇಳಿಕೊಳ್ಳಲು…
“ನಾನು ಸತ್ತ ಬಳಿಕ ಹತ್ತು ಲಕ್ಷ ಅವನ ಕೈವಶವಾಗುವುದಂತೆ.”
ಅದಕ್ಕೆ ಹೃದಯ ಹಿಂಡುವಂತೆ, ಚುಚ್ಚಿ ಚುಚ್ಚಿ ಮಾತಾಡುತ್ತಾನೆ.
“ಇನ್ನು ಸಾಯುತ್ತಿಲ್ಲ ಈ ಮುದುಕಿ. ಇಷ್ಟೊಂದು ಆಯಸ್ಸು ದೇವರು ನಿನಗೆ ಏಕೆ ಕೊಟ್ಟ? ನೀನು ಸತ್ತರೆ ನನ್ನ ಬದುಕು ರೂಪಿತವಾಗುತ್ತದೆ. ನಿನ್ನ ಕಥೆಯಂತೂ ಮುಗಿಯಿತು. ನನ್ನ ಬದುಕುವ ಆಸೆಯು ನಿನ್ನ ಜೊತೆಯಲ್ಲಿ ಸಾಯುತ್ತಿದೆ. ನೀನು ಸತ್ತರೆ ಬರುವ ಹಣದಿಂದ ನಾನು ಒಂದು ಸ್ವಂತ ಬಿಸಿನೆಸ್ ಮಾಡಿಕೊಂಡು ಜೀವನ ನಡೆಸಬಹುದು. ಅದಕ್ಕೂ ನೀನು ಮುಳ್ಳು.”
ಎಂದೂ ಊಟ ಮಾಡುತ್ತಿದ್ದ ತಟ್ಟೆಯನ್ನೇ ಕಸಿದು, ಮನೆಯಿಂದ ಹೊರದಬ್ಬಿದ.
ಭಗವಂತಾ, ಅಂದು ಹಸಿ ವಯಸ್ಸಿನಲ್ಲಿ ನನ್ನ ಗಂಡ ನನ್ನನ್ನು ಬಿಟ್ಟಾಗ… ಕಾಮದ ಕಣ್ಣಿಗೆ ಬೊಂಬೆಯಾದರೂ, ಛಲ ಇತ್ತು ನನ್ನಲ್ಲಿ. ಮಗನನ್ನು ಸಾಕಲು ನನ್ನೆಲ್ಲಾ ಆಸೆ, ಬಯಕೆಗಳನ್ನು ತ್ಯಜಿಸಿದೆ. ಮಗನಿಗಾಗಿ ಯಾವ ಖುಷಿಯನ್ನೂ ಅನುಭವಿಸಲಿಲ್ಲ.
ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪಾ…?
ಗಂಡ ಇನ್ನೊಂದು ಮದುವೆ ಮಾಡಿಕೊಂಡು ತನ್ನೆಲ್ಲ ಆಸೆಗಳನ್ನು ತೀರಿಸಿಕೊಂಡ. ನಾನು ಒಂಟಿಯಾಗಿ ಕಳೆದ ರಾತ್ರಿಗಳು ಭೀಕರ. ಇಷ್ಟು ನೋವು ಒಡಲಾಳದಲ್ಲಿ ಇದ್ದರೂ, ನನಗೆ ಆಸರೆ ನನ್ನ ಮಗ ಎಂದುಕೊಂಡು ಕೂಲಿ-ನಾಲಿ ಮಾಡಿ ಸಾಕಿದೆ.
ನನಗೆ ಒಂದು ಹೊತ್ತು ತುತ್ತು ಇಲ್ಲದಿದ್ದರೂ, ಅವನಿಗೆ ತುತ್ತು ತಿನ್ನಿಸಿದೆ.

ಇಂದೂ ಅವನು ದುಡಿಯುವಾಗ, ನಾನು ತಿನ್ನುವ ತುತ್ತು ದುಬಾರಿಯಾಗಿದೆ. ನನಗೂ ಬೇಡವಾಗಿದೆ ಆ ತುತ್ತು.
“ನನ್ನ ಪ್ರಾಣವನ್ನು ತೆಗೆದುಕೊಂಡು, ನನ್ನ ಮಗನ ಬದುಕನ್ನು ರೂಪಿಸು.”
ನನ್ನ ಜೀವವನ್ನು ತ್ಯಾಗ ಮಾಡಿದ್ದು ನನ್ನ ಮಗನಿಗಾಗಿ. ಇಂದು ಈ ಪ್ರಾಣವೂ ಮಗನಿಗಾಗಿ ಎಂದೇ ದೀರ್ಘ ಉಸಿರು ಬಿಟ್ಟು ಕಣ್ಮುಚ್ಚಿತು.
ಕೊನೆಯಲ್ಲಿ ಕಣ್ಮುಚ್ಚಲು ಮಗ ಹತ್ತಿರ ಸುಳಿಯಲಿಲ್ಲ. ಬಾಯಿಗೆ ನೀರು ಬಿಡಲಿಲ್ಲ.
ಕೊನೆಗೆ ಹಣಕ್ಕಾಗಿ ಅಮ್ಮನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ.
ತಾಯಿ ಹತ್ತು ಮಕ್ಕಳನ್ನು ಸಾಕಲು ಸಮರ್ಥಳು. ಆದರೆ, ಮಕ್ಕಳು ಒಬ್ಬ ತಾಯಿಯನ್ನು ನೋಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ.
— ವಾಣಿ ಮೈಸೂರು





