– ರಾಘವೇಂದ್ರ ಅಡಿಗ ಎಚ್ಚೆನ್.
‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಅಶ್ಲೀಲ ಸಾಹಿತ್ಯದ ಆರೋಪಗಳ ನಡುವೆ ಈ ಹಾಡನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ.
ಹಾಡಿನ ವಿರುದ್ಧ ಕನ್ನಡದಿಂದ ಹಿಡಿದು ಬಾಲಿವುಡ್ ವಲಯದವರಿಂದಲೂ ತೀವ್ರ ಟೀಕೆ ವ್ಯಕ್ತವಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆಯೇ ಹಾಡನ್ನು ಹಾಡಿದ ಗಾಯಕಿ ಐಶ್ವರ್ಯಾ ರಂಗರಾಜನ್ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಅವರ ಇನ್ಸ್ಟಾಗ್ರಾಮ್ ಖಾತೆ ಡಿ-ಆ್ಯಕ್ಟಿವೇಟ್ ಆಗಿರುವುದು, ವಿವಾದದ ಒತ್ತಡವೇ ಕಾರಣವೋ ಎಂಬ ಅನುಮಾನ ಮೂಡಿಸಿದೆ.
ಹಾಡಿನ ಸಾಹಿತ್ಯವನ್ನು ಸ್ವತಃ ಜೋಗಿ ಪ್ರೇಮ್ ರಚಿಸಿದ್ದು, ವಿವಾದ ತೀವ್ರಗೊಂಡ ಹಿನ್ನೆಲೆ ಈಗ ಲಿರಿಕ್ಸ್ ಸಂಪೂರ್ಣ ಬದಲಿಸಿ ಹೊಸ ಹಾಡು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸಿನಿಮಾ ಬಿಡುಗಡೆಯಿಗೆ ಕೆಲವೇ ವಾರಗಳು ಬಾಕಿ ಇರುವ ಸಮಯದಲ್ಲಿ ಈ ವಿವಾದ ಸಿಡಿದಿರುವುದು ‘ಕೆಡಿ’ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ, ಈ ಹಾಡಿನ ಸುತ್ತಲಿನ ವಿವಾದ ಚಿತ್ರರಂಗದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ.





