ಕೆನಡಾದ ಮಾಂಟ್ರಿಯಲ್‌ನಿಂದ ಬರುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶದ ವೇಳೆ ಟ್ಯಾಕ್ಸಿವೇನಲ್ಲಿ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಪೈಲಟ್‌ ಹಾಗೂ ಕೋ-ಪೈಲಟ್‌ ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ್‌ ಲಾಗಾರ್ಡಿಯಾ ವಿಮಾನ ನಿಲ್ದಾಣದ ರನ್‌ವೇ 4 ರಲ್ಲಿ ಆಗಮಿಸುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ನ CRJ -900 ವಿಮಾನ ಮತ್ತು ಅಗ್ನಿಶಾಮಕ ಎಂಜಿನ್ ಡಿಕ್ಕಿಹೊಡೆದಿದ್ದು, ಇದಾದ ಬಳಿಕ ಅಲ್ಲಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಚರಣೆ ಹಾಗೂ ಜನರನ್ನು ಸ್ಥಳಾಂತರಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಈ ವಿಡಿಯೋಗಳಲ್ಲಿ ವಿಮಾನದ ಮುಂಭಾಗವು ಜಖಂಗೊಂಡಿದೆ.

ಈ ಘಟನೆಯು ಸ್ಥಳೀಯ ಸಮಯ ರಾತ್ರಿ 11:38 ಕ್ಕೆ ನಡೆದಿದ್ದು, ಅಪಘಾತಕ್ಕೀಡಾದ ಟ್ರಕ್ ಅಗ್ನಿಶಾಮಕ ದಳದ ವಾಹನವಾಗಿದ್ದು, ಇದಕ್ಕೂ ಮೊದಲೇ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಕೆಟ್ಟ ವಾಸನೆಯ ಸಮಸ್ಯೆಯಿಂದಾಗಿ ಎಮರ್ಜೆನ್ಸಿ ಘೋಷಿಸಲಾಗಿತ್ತು. ಇದನ್ನು ತಲುಪಲು ಈ ಆಗ್ನಿಶಾಮಕ ಟ್ರಕ್‌ ರನ್‌ ವೇ ದಾಟಲು ಪ್ರಯತ್ನಿಸುತ್ತಿತ್ತು. ಆದರೆ, ಈ ವೇಳೆ, ಏರ್‌ ಕೆನಡಾ ವಿಮಾನ ತುರ್ತುಪರಿಸ್ಥಿತಿಯನ್ನು ಘೋಷಿಸಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಲು ಮುಂದಾಗಿದ್ದು, ಅವಘಡಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಈ ವಿಮಾನದಲ್ಲಿ 80ಮಂದಿ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳು ಇದ್ದರು. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಅಗ್ನಿಶಾಮಕ ವಾಹನದಲ್ಲಿದ್ದ ಒಬ್ಬ ಸಾರ್ಜೆಂಟ್ ಮತ್ತು ಮತ್ತೊಬ್ಬ ಅಧಿಕಾರಿಯ ಕೈಕಾಲುಗಳಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಮಾನದಲ್ಲಿದ್ದ 41 ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯಲ್ಲಿ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದು, ಇವರು ಕೆನಡಾದವರಾಗಿದ್ದಾರೆ ಎಂದು ವರದಿಯಾಗಿದೆ.

ಈ ಬೆನ್ನಲ್ಲೇ, ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(FAA) ಅಪಘಾತ ತುರ್ತು ಪರಿಸ್ಥಿತಿಯಿಂದಾಗಿ ಘಟನೆ ನಡೆದಿದೆ ಎಂದು ತಿಳಿಸಿದೆ. ನ್ಯೂಯಾರ್ಕ್‌ ನ ಪ್ರಮುಖ ಸಾರಿಗೆ ಕೇಂದ್ರವಾಗಿರುವ ಈ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ