ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಎಲ್ಪಿಜಿಯನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ತೈಲ ಕಂಪನಿಗಳು ಹರಸಾಹಸ ಪಡುತ್ತಿವೆ. ಈ ಬಿಕ್ಕಟ್ಟನ್ನು ನೀಗಿಸಲು ಸಿಲಿಂಡರ್‌ನ ಗಾತ್ರ ಮತ್ತು ತೂಕವನ್ನು ಕಡಿಮೆ ಮಾಡುವ ಪ್ರಸ್ತಾವನೆ ಬಂದಿದೆ.
ದೇಶದಲ್ಲಿ ಏರುತ್ತಿರುವ ಇಂಧನ ಬೇಡಿಕೆ ಮತ್ತು ಅಡುಗೆ ಅನಿಲ ಪೂರೈಕೆ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಸದ್ಯ ಬಳಕೆಯಲ್ಲಿರುವ 14.2 ಕೆ.ಜಿ. ತೂಕದ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬದಲಿಗೆ, ಇನ್ನು ಮುಂದೆ 10 ಕೆ.ಜಿ. ತೂಕದ ಸಿಲಿಂಡರ್ ಕೊಡಲು ಚಿಂತನೆ ನಡೆಸುತ್ತಿದೆ.
ದೇಶದಲ್ಲಿ ಎಲ್‌ಪಿಜಿ ಬಿಕ್ಕಟ್ಟು ತಲೆದೋರಿರುವುದು ಈ ಬದಲಾವಣೆಗೆ ಮುಖ್ಯ ಕಾರಣವಾಗಿ ಪರಿಣಮಿಸಿದೆ. ಅಂಕಿ-ಅಂಶಗಳ ಪ್ರಕಾರ ಹೇಳುವುದಾದರೆ ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳಿಗಾಗಿ ಪ್ರತಿದಿನ ಸರಾಸರಿ 80,400 ಟನ್ ಎಲ್‌ಪಿಜಿ ಅಗತ್ಯವಿದೆ. ವಾಣಿಜ್ಯ ಮತ್ತು ಗೃಹಬಳಕೆ ಸೇರಿ ದೇಶದಲ್ಲಿ ದಿನವೊಂದಕ್ಕೆ ಒಟ್ಟು 93,500 ಟನ್ ಎಲ್‌ಪಿಜಿ ಬೇಕಾಗುತ್ತದೆ. ಪ್ರಸ್ತುತ ಅಗತ್ಯವಿರುವ ಪ್ರಮಾಣದಲ್ಲಿ ಎಲ್‌ಪಿಜಿ ಪೂರೈಕೆ ಮಾಡಲು ಆಗುತ್ತಿಲ್ಲ. ಹೀಗಾಗಿ ಸಿಲಿಂಡರ್ ತೂಕವನ್ನು 14.2 ಕೆ.ಜಿ.ಯಿಂದ 10 ಕೆ.ಜಿ.ಗೆ ಇಳಿಸುವುದರಿಂದ, ಲಭ್ಯವಿರುವ ಅನಿಲವನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂಬುದು ತೈಲ ಕಂಪನಿಗಳ ಲೆಕ್ಕಾಚಾರ.
10 ಕೆ.ಜಿ. ಸಿಲಿಂಡರ್‌ಗೆ ಅದರಲ್ಲಿರುವ ಅನಿಲದ ಪ್ರಮಾಣಕ್ಕೆ ತಕ್ಕಷ್ಟು ಮಾತ್ರವೇ ಹಣ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದ ಒಟ್ಟಾರೆ ಸಿಲಿಂಡರ್ ಬೆಲೆ ಕಡಿಮೆಯಾಗಿ ಕಾಣುವುದರಿಂದ ಮಧ್ಯಮ ವರ್ಗದವರಿಗೆ ಒಂದು ಬಾರಿಯ ಖರೀದಿಗೆ ಹಣ ಹೊಂದಿಸುವುದು ಸುಲಭವಾಗಬಹುದು.14.2 ಕೆ.ಜಿ. ತೂಕದ ಸಿಲಿಂಡರ್ ಎತ್ತುವುದು ಅಥವಾ ಸಾಗಿಸುವುದು ವಯಸ್ಸಾದವರಿಗೆ ಅಥವಾ ಮಹಿಳೆಯರಿಗೆ ಕಷ್ಟವಾಗುತ್ತಿತ್ತು. 10 ಕೆ.ಜಿ.ಯ ಹಗುರವಾದ ಸಿಲಿಂಡರ್‌ಗಳು (ಕಾಂಪೋಸಿಟ್ ಸಿಲಿಂಡರ್ ಮಾದರಿ) ಬಳಕೆಗೆ ಹೆಚ್ಚು ಸುಲಭವಾಗಿರಲಿವೆ.
ಕಂಪನಿಗಳ ಅಂದಾಜು ಪ್ರಕಾರ ಸಾಮಾನ್ಯ ಕುಟುಂಬವೊಂದಕ್ಕೆ ಈಗ ನೀಡುತ್ತಿರುವ ಸಿಲಿಂಡರ್ 35ರಿಂದ 40 ದಿನ ಉಪಯೋಗಕ್ಕೆ ಬರುತ್ತದೆ. 10 ಕೆ.ಜಿ. ಎಲ್‌ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸುಮಾರು ಒಂದು ತಿಂಗಳು ಬಳಕೆಗೆ ಬೇಕಾಗಬಹುದು. 10 ಕೆ.ಜಿ. ಎಲ್‌ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸುಮಾರು ಒಂದು ತಿಂಗಳು ಬರಬಹುದು. ಇದು ಜಾರಿಯಾದರೆ ಸಿಲಿಂಡರ್ ತೂಕಕ್ಕೆ ತಕ್ಕಂತೆ ಬೆಲೆ ಪರಿಷ್ಕರಣವಾಗುತ್ತದೆ. ತೂಕ ಮಾಪನವನ್ನು ಸರಿಹೊಂದಿಸಬೇಕಾಗುತ್ತದೆ. ಇದಕ್ಕೆ ಕೆಲವು ನಿಯಂತ್ರಕ ಸಂಸ್ಥೆಗಳ ಅನುಮೋದನೆ ಸಹ ಬೇಕಾಗಬಹುದು. ತೂಕ ಇಳಿಕೆಯಿಂದ ಸಹಜವಾಗಿ ಬೆಲೆ ಕೂಡ ತಗ್ಗುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಇದು ಜಾರಿಗೊಂಡರೆ ಜನರಲ್ಲಿ ಗೊಂದಲ, ಆತಂಕ ತಲೆದೋರಬಹುದು. ಹಾಗಾಗಿ ಈ ನಿರ್ಧಾರವನ್ನು ಎಚ್ಚರಿಕೆಯಿಂದ ಕೈಗೊಳ್ಳಬೇಕಾಗುತ್ತದೆ. ಮುಂದಿನ ತಿಂಗಳು ತೈಲ ಪೂರೈಕೆ ಇನ್ನಷ್ಟು ಕಳವಳಕಾರಿಯಾಗಬಹುದು. ಇದರಿಂದ ಎಲ್‌ಪಿಜಿ ಲಭ್ಯತೆ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ಕಂಪನಿಗಳ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.





