ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಗೀಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯ ನಂತರ ಈ ಕರಡು ನೀತಿ ರೂಪುಗೊಂಡಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ವಿಧಿಸುವ ದಿಕ್ಕಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಈ ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬೇಕು ಎಂದು ಶಿಫಾರಸು ಮಾಡಲಾಗಿದೆ. ಜೊತೆಗೆ, ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ’ ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ಪ್ರತಿ ಶಾಲೆಯು ತನ್ನದೇ ಆದ ಡಿಜಿಟಲ್ ಬಳಕೆ ನೀತಿ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಡಿಜಿಟಲ್ ವೆಲ್ನೆಸ್ ಸಮಿತಿ ಸ್ಥಾಪಿಸಬೇಕು. ಈ ಸಮಿತಿಯಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಮಾನಸಿಕ ಆರೋಗ್ಯ ತಜ್ಞರು, ಪೋಷಕರ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ಇರಬೇಕಾಗಿದೆ.
ನೀತಿಯನ್ನು ರೂಪಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಶಿಕ್ಷಣ ಇಲಾಖೆ, ವಿವಿಧ ಶಿಕ್ಷಣ ಸಂಸ್ಥೆಗಳ ತಜ್ಞರು, ಪೋಷಕರು ಹಾಗೂ ಸೈಬರ್ ಕ್ರೈಂ ಇಲಾಖೆ ಭಾಗವಹಿಸಿವೆ.
ಈ ನೀತಿಯಡಿಯಲ್ಲಿ, ಶಾಲೆಗಳು ಸೈಬರ್ ಬುಲಿಯಿಂಗ್ ಮತ್ತು ಡಿಜಿಟಲ್ ದುರುಪಯೋಗ ತಡೆಯಲು ವಿಶೇಷ ಪ್ರೋಟೋಕಾಲ್ ರೂಪಿಸಬೇಕು. ಶಿಕ್ಷಕರಿಗೆ ವಿದ್ಯಾರ್ಥಿಗಳ ಡಿಜಿಟಲ್ ಬಳಕೆಯನ್ನು ನಿಯಂತ್ರಿಸುವುದು ಮತ್ತು ಸುರಕ್ಷಿತ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡುವುದು ಪ್ರಮುಖ ಜವಾಬ್ದಾರಿಯಾಗಲಿದೆ. ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವುದರಿಂದ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳಿನ ಲಕ್ಷಣಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಸೂಚಿಸಲಾಗಿದೆ.





