ಪತ್ರಿಕೋದ್ಯಮದಂಥ ಪುರುಷ ಪ್ರಧಾನ ಮಾಧ್ಯಮದಲ್ಲಿ ಸಿಂಹಿಣಿಯಾಗಿ ಘರ್ಜಿಸುತ್ತಾ, ದಕ್ಷ ಪತ್ರಕರ್ತೆ, ಸಮರ್ಥ ಪ್ರಕಾಶಕಿಯಾಗಿ ಗುರುತಿಸಿಕೊಂಡಿರುವ ಹಾಸನದ ಲೀಲಾವತಿಯವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣವೇ….?

ಸದಾ ಹಸನ್ಮುಖಿಯಾಗಿ ಟಿಪಿಕಲ್ ಕರ್ನಾಟಕ ಶೈಲಿಯ ಉಡುಗೆಯಲ್ಲಿ ಕಾಣಸಿಗುವ ಲೀಲಾವತಿ ಬಗ್ಗೆ ತಿಳಿಯದವರಿಲ್ಲ. ಸಮರ್ಥ ಮುಂದಾಳತ್ವ, ನಿಷ್ಠೂರ ತುಂಬಿದ ಮಾತುಗಳು ಇವರ ಐಡೆಂಟಿಫಿಕೇಶನ್‌. ಇದ್ದದ್ದನ್ನು ಇದ್ದ ಹಾಗೆ ತಪ್ಪುಗಳನ್ನು ತಿದ್ದಿ ಮರುಕ್ಷಣವೇ ಆಲಂಗಿಸುವ ಪ್ರೇಮಮಯಿ. ತಾನೆಷ್ಟೇ ಎತ್ತರಕ್ಕೆ ಏರಿದರೂ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಹಮ್ಮುಬಿಮ್ಮು ಇಲ್ಲದೆ ಎಲ್ಲರೊಂದಿಗೆ ಬೆರೆಯುವ ಸರಳ ಜೀವಿ. ತಾವು ಅನುಭವಿಸಿದ ವೇದನೆಗಳಿಂದ ತಾವೇ ಪತ್ರಿಕಾ ಪ್ರಕಾಶನ, ಪತ್ರಿಕಾ ಸಂಪಾದಕತ್ವಕ್ಕೆ ನಡುಕಟ್ಟಿದರು.

ಎಂತಹ ಕಷ್ಟಗಳು ಬಂದರೂ ಧೃತಿಗೆಡದೆ ನಿಲ್ಲಬೇಕು ಎನ್ನುವುದಕ್ಕೆ ಇವರೇ ಸಾಕ್ಷಿ. ಸಪ್ರೇಮ ತುಂಬಿದ ಮಾದರಿ ವ್ಯಕ್ತಿತ್ವ. ಎಂತಹ ಸಮಸ್ಯೆಗಳೇ ಇದ್ದರೂ ಇವರಿದ್ದಲ್ಲಿ ಯಾವುದೇ ಆರೋಪಗಳಿಗೆ ಅವಕಾಶವಿಲ್ಲ. ಎಲ್ಲವೂ ಒಂದು ತಾರ್ಕಿಕ ಅಂತ್ಯ ಕಾಣುತ್ತದೆ. 1999ನೇ ಇಸವಿ, ಹೇಮಗಂಗೋತ್ರಿಯ ಹೊಸ ಕಟ್ಟಡ, ಹಾಸನದ ಕೆ.ಆರ್‌.ಪುರಂನಿಂದ ಕೆಂಚಟ್ಟಳಿಗೆ ಸ್ಥಳಾಂತರವಾದ ದಿನ ಮುಖ್ಯ ವೇದಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸ್ಥಳದಲ್ಲೇ ತಪ್ಪಿತಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದು ನೆನಪಾಗುತ್ತದೆ. ಲೀಲಾವತಿ ಇದ್ದಲ್ಲಿ ತಪ್ಪುಗಳು ನುಸುಳುವುದು ಅಸಾಧ್ಯ. ಯಾವಾಗಲೂ ಪರಂಪರೆ ಹಾಗೂ ಆಧುನಿಕತೆಯನ್ನು ಸರಿದೂಗಿಸಿಕೊಂಡು ಹೋಗು ಮೇರು ವ್ಯಕ್ತಿತ್ವ.

ಹಾಸನ ಜಿಲ್ಲೆಯ ಮೊದಲ ಪ್ರಕಾಶಕಿ

ಹಾಸನ ಜಿಲ್ಲೆಯ ಮೊದಲ ಪ್ರಕಾಶಕಿ. ಕನ್ನಡದ ಮೊದಲ ಪ್ರಕಾಶಕಿ ಎಂದು ಹೇಗೆ ಅತ್ತಿಮಬ್ಬೆಯನ್ನು ಗುರುತಿಸುತ್ತೇವೆಯೋ ಹಾಗೆ ಹಾಸನದ ಅತ್ತಿಮಬ್ಬೆ ಎಂದು ಇವರನ್ನು ಕರೆಯಬಹುದು. ಮಹಿಳೆಯರ ಪರ ಗಟ್ಟಿ ಧ್ವನಿ ಎತ್ತುವ ಇವರು ಯುವ ಜನತೆಯ ಬಗ್ಗೆಯೂ ಅಪಾರ ಕಾಳಜಿ ಇರುವವರು. ಸುದ್ದಿಗಳನ್ನು ತಾರತಮ್ಯ ಮಾಡದೆ ಪ್ರಕಟಿಸು ಇವರು ವೃತ್ತಿನಿಷ್ಠೆಗೆ ಅನ್ವರ್ಥವಾಗಿದ್ದಾರೆ.

ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ

1975ರಿಂದ ಪತ್ರಿಕಾ ಕ್ಷೇತ್ರದಲ್ಲಿ ಉಪಸಂಪಾದಕಿಯಾಗಿ, ಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನದ ಜನಮಿತ್ರ ಮತ್ತು ಜನತಾ ಮಾಧ್ಯಮ ಪತ್ರಿಕೆಗಳಲ್ಲಿ ಉಪಸಂಪಾದಕಿಯಾಗಿದ್ದ ಇರುವ ಹಾಸನಪ್ರಭಾದಲ್ಲಿ ಹವ್ಯಾಸಿ ಪತ್ರಕರ್ತೆಯಾಗಿದ್ದರು. 2004ರಲ್ಲಿ ಕನ್ನಡಪ್ರಭಾ ಪತ್ರಿಕೆಯ ಉಪಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದು, 2005ರ ನಂತರ ತಮ್ಮದೇ ಪತ್ರಿಕೆ ಹಾಸನವಾಣಿಯನ್ನು ಆರಂಭಿಸಿ ದೇಶ ವಿದೇಶಗಳಲ್ಲಿ ಓದುಗರ ಬಳಗನ್ನು ಹೊಂದಿರುತ್ತಾರೆ.

ಸಾಮಾಜಿಕ ಸೇವೆಗಳಲ್ಲಿಯೂ ಮುಂದು

ಇವರು ಪತ್ರಿಕಾರಂಗವಲ್ಲದೆ, ರಾಜ್ಯ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿದ್ದಾರೆ. ಭಾರತ ಸೇವಾದಳದ ಮಹಿಳಾ ಘಟಕದ ಕಾರ್ಯದರ್ಶಿಯಾಗಿ, ಹೆಣ್ಣು ಭ್ರೂಣಹತ್ಯೆ ತಡೆ, ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲಾ ಸಮಿತಿಯ ಸದಸ್ಯೆಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಪರ ಹೋರಾಟ

ಗೋಕಾಕ್‌ ಚಳುವಳಿಯಲ್ಲಿಯೂ ಭಾಗವಹಿಸಿರುವ ಇವರು ಕನ್ನಡ ಪರ ಹೋರಾಟ ಮಾಡಿರುತ್ತಾರೆ. ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, 2014ರಲ್ಲಿ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಸ್ತ್ರೀ ಜಾಗೃತಿ ಸುಮಂಗಲಿ ಸೇವಾಶ್ರಮದ ಎಸ್‌.ಜಿ. ಸುಶೀಲಮ್ಮ ಪ್ರಶಸ್ತಿ, ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನ ಟ್ರಸ್ಟಿನ ವತಿಯಿಂದ ಮಾಧ್ಯಮ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ವಿಭೂಷಣಾ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಪ್ರಶಸ್ತಿ ಪುರಸ್ಕಾರಗಳು

2018ರಲ್ಲಿ ನಡೆದ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ `ರಾಷ್ಟ್ರೀಯ ಆದರ್ಶ ಮಹಿಳೆ’ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2023ರಲ್ಲಿ ವೇದಮಾತೆ ಗಾಯತ್ರಿ ಪ್ರಶಸ್ತಿ, 2024ರಲ್ಲಿ ಅಖಲ ಕರ್ನಾಟಕ ಬ್ರಾಹ್ಮಣ ಸಭಾ ವತಿಯಿಂದ ಅಭಿಜಾತೆ ಪ್ರಶಸ್ತಿ, ನಾಡಿಗ ಕೃಷ್ಣಮೂರ್ತಿ ರಾಜ್ಯ ಪ್ರಶಸ್ತಿ ಲಭಿಸಿತು. ಮಹಿಳಾ ಕನ್ನಡ ಸಾಹಿತ್ಯದ ಅಧ್ಯಕ್ಷೆ 2019ರಲ್ಲಿ ಜಿಲ್ಲಾ ಲೇಖಕಿಯರ ಬಳಗದಿಂದ ನಡೆದ ಪ್ರಥಮಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ, ಜನವರಿ 12ರಂದು ಆಲೂರಿನ ಹರಿಹಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಸ್ಥಾನ ಪಡೆದಿರುತ್ತಾರೆ. ಪ್ರಕಾಶಕಿಯಾಗಿಯೂ ಲೀಲಾವತಿ ಗಮನ ಸೆಳೆದಿದ್ದಾರೆ. ಇಲ್ಲಿ ಕೆಲವೇ ಆಯ್ದ ಪ್ರಶಸ್ತಿಯನ್ನು ಮಾತ್ರ ಉಲ್ಲೇಖಿಸಿದೆ.

ಹೋರಾಟದ ಹಾದಿಯಲ್ಲಿ…..

ಹೋರಾಟದ ಹಾದಿಯಲ್ಲಿ `ಬೆಳ್ಳಿ ಹೆಜ್ಜೆ’ ಇವರಿಗೆ ಸಮರ್ಪಿತವಾಗಿರುವ ಅಭಿನಂದನಾ ಗ್ರಂಥ. ಹಾಸನವಾಣಿಯಲ್ಲಿ ಪ್ರಕಟವಾದ ಸಂಪಾದಕೀಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಸ್ವರಚಿತ ಕವನಗಳು ನಾಡಿನ ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಸನ ಜಿಲ್ಲೆಯ ನನ್ನಂಥ ಕಿರಿಯ ಲೇಖಕಿಯರ ಪಾಲಿಗೆ ಮಾತೃಸ್ಥಾನದಲ್ಲಿದ್ದು, ಸೂಕ್ತ ಮಾರ್ಗದರ್ಶನವನ್ನು ಕೊಡುತ್ತಾ ಬಂದಿದ್ದಾರೆ. ಇವರಿಗೆ ಇನ್ನೂ ಹೆಚ್ಚಿನ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬರಲಿ ಎಂಬುದು ಗೃಹಶೋಭಾ ಓದುಗರೆಲ್ಲರ ಸದಾಶಯ!

ಸುಮಾ ವೀಣಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ