ರಂಜನಿ ರಾಘವನ್
ಇಡೀ ಕರುನಾಡೇ ಮೆಚ್ಚಿಕೊಂಡು ಅಪ್ಪಿಕೊಂಡಿರುವ, ಅಭಿಮಾನದಿಂದ ಕನ್ನಡತಿ ಎಂಬ ಕಿರೀಟ ತೊಟ್ಟಿರುವವರು ರಂಜನಿ ರಾಘವನ್. ಕಿರುತೆರೆಯಲ್ಲಿ ಕನ್ನಡ ಟೀಚರ್ ಎಂದೇ ಖ್ಯಾತಿ ಗಳಿಸಿರುವ ರಂಜನಿ, ನಟಿಯಾಗಿ, ಬರಹಗಾರ್ತಿಯಾಗಿ ಇದೀಗ ನಿರ್ದೇಶಕಿಯಾಗಿಯೂ ಬಡ್ತಿ ಪಡೆದಿದ್ದಾರೆ. `ಪುಟ್ಟ ಗೌರಿ ಮದುವೆ, ಕನ್ನಡತಿ’ ಧಾರಾವಾಹಿಗಳ ಮೂಲಕ ಮನೆಮನೆಗಳಲ್ಲಿ ಎಲ್ಲರ ಮನಮುಟ್ಟುವಂತೆ ನಟಿಸಿದ್ದ ಅವರು, ಈಗ ಚಿತ್ರವೊಂದಕ್ಕೆ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸ್ವರ ಮಾಂತ್ರಿಕ ಇಳಯರಾಜ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.
ಅಪ್ಪಟ ಕನ್ನಡತಿಯಾಗಿ ತಮ್ಮ ಪಾತ್ರದಿಂದಲೇ ಎಲ್ಲರಿಗೂ ಚಿರಪರಿಚಿತರಾಗಿರುವ ರಂಜನಿ, ಕೆಲವು ಸೀರಿಯಲ್ ಗಳಿಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಕನ್ನಡವಲ್ಲದೇ ಮಲೆಯಾಳಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. `ರಾಜಹಂಸ’ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ಅವರು, `ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ, ಕಾಂಗರೂ’ ಸೇರಿದಂತೆ ಕೆಲವು ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸೌಮ್ಯಾ ರಾವ್
ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್, ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕನ್ನಡ ನ್ಯೂಸ್ ರೀಡರ್ ಆಗಿ ಲೈವ್ ಶೋಗಳನ್ನು ನಡೆಸಿಕೊಡುತ್ತಿದ್ದ ಸೌಮ್ಯಾ ರಾವ್, ತಮಿಳು, ತೆಲುಗು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತಾರೆ. ಧಾರಾವಾಹಿ ಆರಂಭದಲ್ಲಿ ನರ್ಸ್ ಪಾತ್ರ ಮಾಡುತ್ತಿದ್ದ ಸೌಮ್ಯಾ, ಆಮೇಲೆ ಹೀರೋಯಿನ್ ತಂಗಿ ಪಾತ್ರ ಮಾಡುತ್ತಾ ಬಂದರು. ತಮಿಳು ಧಾರಾವಾಹಿಯಲ್ಲೂ ನಟಿಸಿದ ಅವರು, ತೆಲುಗು ರಿಯಾಲಿಟಿ ಶೋ `ಜಬರ್ದಸ್ತ್’ನಲ್ಲಿ ನಿರೂಪಕಿಯಾದರು.
ತಮಿಳು ಧಾರಾವಾಹಿ ರೋಜಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸೌಮ್ಯಾ ರಾವ್ ಗೆ ಅವರ ಸಾಕ್ಷಿ ಪಾತ್ರ ಶೀಘ್ರವೇ ಪ್ರೇಕ್ಷಕರ ಗಮನ ಸೆಳೆಯಿತು. ನಂತರ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾದರು. ತಮಿಳಿನಲ್ಲಿ `ನೆಂಜಮ್ ಮರಪ್ಪದಿಲ್ಲೈ, ಲಿಲ್ಲಿ, ಮಿನ್ನಿ, ತಿರುಮತಿ ಹಿಟ್ಲರ್’ ತೆಲುಗಿನ `ಶ್ರೀಮಂತುಡು’ ಚಿತ್ರದಲ್ಲೂ ಅಭಿನಯಿಸಿದರು. ನಿರೂಪಕಿಯಾಗಿ ಆಕೆಯ ಯಶಸ್ಸು ಮತ್ತಷ್ಟು ಅವಕಾಶಗಳಿಗೆ ಕಾರಣವಾಯಿತು. ಸ್ಟಾರ್ ಮಾಮ್ ದಲ್ಲಿ ಕಿಲಾಡಿ ಗರ್ಲ್ಸ್ ಮತ್ತು ಕಿರಿಕ್ ಬಾಯ್ಸ್ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತೆ ಮರಳಿದ ನೀತಾ ಅಶೋಕ್
ಯಶೋದೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾದರು ನೀತಾ ಅಶೋಕ್. ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಯಶೋದೆ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನೀತಾ ಅಶೋಕ್, ಇದೀಗ `ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ ನಟನೆಗೆ ಹಿಂದಿರುಗಿದ್ದಾರೆ. ಮುದ್ದು ಮುಖದ ಮುಗ್ಧ ಮನಸ್ಸಿನ ಯಶೋದೆ ಧಾರಾವಾಹಿಯುದ್ದಕ್ಕೂ ಉಡುಪಿಯ ಗಲ್ಲಿ ಗಲ್ಲಿ ಸುತ್ತಿ ಉಡುಪಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. `ನಾ ನಿನ್ನ ಬಿಡಲಾರೆ’ ಎಂಬ ಹಾರರ್ ಧಾರಾವಾಹಿಯಲ್ಲಿ ನಂದಿನಿ ಪಾತ್ರದ ಮೂಲಕ ಮತ್ತೆ ಕಾಣಿಸಿಕೊಂಡಿದ್ದರು. ಅದಾದ ಮೇಲೆ `ನೀಲಾಂಬರಿ’ ಎಂಬ ಹಾರರ್ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದರು. ಕಿಚ್ಚ ಸುದೀಪ್ರ `ವಿಕ್ರಾಂತ್ರೋಣ’ ಸಿನಿಮಾದಲ್ಲಿ ಅಪರ್ಣಾ ಬ್ಲಾಳ್ ಆಲಿಯಾಸ್ ಪನ್ನಾ ಆಗಿ ಅಭಿನಯಿಸಿದ್ದರು. ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ವಿಭಿನ್ನ ಕಥೆಯನ್ನು ಹೇಳ ಹೊರಟಿದ್ದಾರೆ.

ಬಹುಭಾಷಾ ನಟಿ ಮೇಘಾ ಶೆಟ್ಟಿ
ಮೇಘಾ ಶೆಟ್ಟಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯಾಗಿರುವ ನಟಿ. ಬೆಂಗಳೂರಿನಲ್ಲಿ ಎಂಬಿಎ ವಿದ್ಯಾಭ್ಯಾಸ ಪೂರೈಸಿದರು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ `ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಕಿರುತೆರೆಗ ಎಂಟ್ರಿ ಕೊಟ್ಟರು. ಸೀರಿಯಲ್ ಮುಗಿಯುವ ಮುನ್ನವೇ ಸಾಕಷ್ಟು ಸಿನಿಮಾಗಳ ಆಫರ್ ಬಾಚಿಕೊಂಡರು.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ತುಸು ಹೆಚ್ಚೇ ಗ್ಲಾಮರಸ್ ಆಗಿದ್ದ ಪಾತ್ರದಲ್ಲಿ ಮಿಂಚಿದ್ದ ಸಿನಿಮಾ, `ದಿಲ್ ಪಸಂದ್.’ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ನಟಿಸಿದ್ದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಆಗಿದ್ದರು. ಒಂದು ಪೀರಿಯಾಡಿಕ್ ಡ್ರಾಮಾ, ಧನ್ವೀರ್ ಲೀಡ್ರೋಲ್ ನಲ್ಲಿ ನಟಿಸಿದ್ದ ಮೇಘಾ ಶೆಟ್ಟಿ, `ಕೈ’ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಿ, ತಮ್ಮಲ್ಲಿರುವ ಅದ್ಭುತ ಅಭಿನೇತ್ರಿಯನ್ನು ಜಗತ್ತಿಗೆ ಪರಿಚಯಿಸಿದರು.
ವಿನಯ್ ರಾಜ್ ಕುಮಾರ್
ಅಭಿನಯದ ಬಹು ನಿರೀಕ್ಷಿತ `ಗ್ರಾಮಾಯಣ’ ಸಿನಿಮಾಕ್ಕೆ ಹೀರೋಯಿನ್. ಇನ್ನೂ ಕನ್ನಡ ಹಾಗೂ ಮರಾಠಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ `ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅಭಿನಯದ `ಚೀತಾ’ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ. ಕಾಲಿವುಡ್ ಗೂ ಎಂಟ್ರಿ ಕೊಟ್ಟಿರುವ ಅವರು, ತಮಿಳಿನ ಸ್ಟಾರ್ ನಟರಾದ ಶಶಿಕುಮಾರ್ ಹಾಗೂ ಭರತ್ ಶ್ರೀನಿವಾಸ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ `ಕಾಳೈಯನ್’ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

ನಿಶಾ ರವಿಕೃಷ್ಣನ್
ನಿಶಾ ರವಿಕೃಷ್ಣನ್ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಝೀ ಕನ್ನಡದ ಗಟ್ಟಿಮೇಳ ಸೀರಿಯಲ್ ಮೂಲಕ ಪ್ರಸಿದ್ಧರಾದರು. ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಸಿನಿಪಯಣ ಆರಂಭಿಸಿದರು. `ಸರ್ಮಂಗಳ ಮಾಂಗಲ್ಯ’ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದ ನಿಶಾ, `ಗಟ್ಟಿಮೇಳ’ ಸೀರಿಯಲ್ ಮೂಲಕ ನಾಯಕಿ ನಟಿಯಾಗಿ ಅಭಿನಯಿಸತೊಡಗಿದರು. ಕನ್ನಡದ ಗಟ್ಟಿಮೇಳದ ಜೊತೆಗೆ ತೆಲುಗಿನ `ಮುತ್ಯಮಂತ ಮುದ್ದು’ ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟನೆಯಿಂದಲೇ ಕಿರುತೆರೆ ವೀಕ್ಷಕರ ಮನ ಸೆಳೆದ ನಿಶಾ ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಅಣ್ಣಯ್ಯ’ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ನಟನೆ ಮಾತ್ರವಲ್ಲ, ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆಯೂ ಹೌದು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಇಷ್ಟಕಾಮ್ಯ’ ಸಿನಿಮಾದ ಹಾಡೊಂದರಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಸಿನಿಮಾಗೆ ಕಾಲಿಟ್ಟರು.
ಸದ್ಯ ಝೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಅಮ್ಮಾಯಿಗಾರು’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶಾ ರವಿಕೃಷ್ಣನ್, `ಅಣ್ಣಯ್ಯ’ ಧಾರಾವಾಹಿಯ ಪಾರ್ವತಿಯಾಗಿ ಕನ್ನಡ ಕಿರುತೆರೆ ವರೆಗೆ ಕಂಬ್ಯಾಕ್ ಆಗಿದ್ದಾರೆ. ಇದರ ಜೊತೆಗೆ ಸ್ತ್ರೀ ಪ್ರಧಾನ ಕಥಾಹಂದರ ಹೊಂದಿರುವ `ಅಂಶು’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಸ್ಟಾರ್ ಗಳಿಗೂ ಫೇವರಿಟ್ ರುಕ್ಕು
ಕನ್ನಡ ಸಿನಿರಸಿಕರಿಗೆ ರುಕ್ಕು ಅಂದ್ರೆ ಬಹಳ ಪ್ರೀತಿ. ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಂತರವಂತೂ ರುಕ್ಮಿಣಿ ಅಂದ್ರೆ ಬಹಳ ಫೇವರಿಟ್. ತೆಲುಗು, ತಮಿಳು ಇಂಡಸ್ಟ್ರಿಯ ದೊಡ್ಡ ದೊಡ್ಡ ಸ್ಟಾರ್ ಗಳಿಗೂ ರುಕ್ಮಿಣಿ ಅಂದ್ರೆ ಅದೇನೋ ಬಾಂಧವ್ಯ. ಎ.ಆರ್. ಮುರುಗದಾಸ್ ನಿರ್ದೇಶನದ `ಮದರಾಸಿ’ ಎನ್ನುವ ಶಿವಕಾರ್ತಿಕೇಯನ್ ಚಿತ್ರದಲ್ಲಿ ನಟಿಸುತ್ತಿರುವ ರುಕ್ಮಿಣಿ, ಮೋಸ್ಟ್ ಆ್ಯಕ್ಟರ್ ವಿಜಯ್ ಸೇತುಪತಿ ನಟನೆಯ `ಏಸ್’ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ ಜೂನಿಯರ್ ಎನ್.ಟಿ.ಆರ್ ನಟನೆಯ 31ನೇ ಸಿನಿಮಾಗೂ ಹೀರೋಯಿನ್. `ಅಪ್ ಸ್ಟಾರ್ಟ್ಸ್’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿರುವ ರುಕ್ಮಿಣಿಗೆ ಟಾಲಿವುಡ್ ಕೂಡ ಕರೆದು ಅವಕಾಶ ನೀಡಿದೆ. ಆಗ ಆಗಿದ್ದೇ `ಅಪ್ಪುಡೋ ಇಪ್ಪುಡೋ ಎಪ್ಪುಡೋ’ ಸಿನಿಮಾ. ಸದ್ಯ ಎರಡು ತಮಿಳು ಸಿನಿಮಾ ಹಾಗೂ ಮತ್ತೊಂದು ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ `ಕಾಂತಾರ-1’ರಲ್ಲೂ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.
ಆರ್ಮಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, ಲಂಡನ್ ನಲ್ಲಿ ಆ್ಯಕ್ಟಿಂಗ್ ಕಲಿತು ಬಂದ ರುಕ್ಮಿಣಿ ವಸಂತ್, 2019ರಲ್ಲಿ ಬೀರಬಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ `ಸಪ್ತ ಸಾಗರದಾಚೆ ಎಲ್ಲೋ ಭಾಗ-1, ಭಾಗ-2, ಬಾನದಾರಿಯಲ್ಲಿ, ಬಘೀರ, ಭೈರತಿ ರಣಗಲ್’ ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೇ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ನಮ್ಮ ಬೆಂಗಳೂರಿನ ಹುಡುಗಿ ಹೀಗೆ ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋದು ಸಿನಿರಸಿಕರಿಗೆ ಖುಷಿಯ ವಿಚಾರ.

ಅನೂಷಾ ರೈ
ಅನೂಷಾ ರೈ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ತುಮಕೂರಿನಲ್ಲಿ ಹುಟ್ಟಿದ ಅರು, ಶಾಲಾ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ, ನಂತರ ಬೆಂಗಳೂರಿನ ಆಚಾರ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದರು. ಕಾಲೇಜಿನಲ್ಲಿ ರಾಂಪ್ ವಾಕ್ ನಲ್ಲಿ ಭಾಗವಹಿಸುತ್ತಿದ್ದ ಅನೂಷಾ, ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋ ಅನೂಷಾ ರೈ, `ದಮಯಂತಿ, ಖಡಕ್’ ಸೇರಿ ಒಂದಷ್ಟು ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯ ತೋರಿಸಿದ್ದಾರೆ. `ನಾಗಕನ್ನಿಕೆ, ರಾಜಕುಮಾರಿ’ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿ ಸದ್ದು ಮಾಡಿದ್ದು, ಲಕ್ಷಾಂತರ ಫಾಲೋಯರ್ಸ್ ಹೊಂದಿದ್ದಾರೆ.
2017ರಲ್ಲಿ ತೆರೆಕಂಡ `ಮಹಾನುಭಾವರು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಅವರು, ನಂತರ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ರೈಡರ್, ಪೆಂಟಗನ್, ಧೈರ್ಯಂ ಸರ್ತ್ರ ಸಾಧನಂ, ಅಬ್ಬಬ್ಬಾ… ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್-11ರಲ್ಲಿ ಅನೂಷಾ ರೈ 5ನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದರು.

ಮೌನವೇ ಆಭರಣ…. ಮುಗುಳ್ನಗೆ ಶಶಿಕಿರಣ!
ದಕ್ಷಿಣ ಚಿತ್ರರಂಗದಲ್ಲಿ ಕ್ರೇಜಿ ಹೀರೋಯಿನ್ ಅಭಿನಯಾ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸದ್ದು ಮಾಡಿದರು. ತನ್ನ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಈ ನಟಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ!
`ಮೌನವೇ ಈಕೆಗೆ ಭಾಷೆ, ನಟನೆಯೇ ಈಕೆಗೆ ವೈಯ್ಯಾರ’ ಎಂಬಂತೆ ತನ್ನ ಅತ್ಯದ್ಭುತ ನಟನೆಯಿಂದಲೇ ಜನಮನ ಗೆದ್ದರು. ತೆಲುಗಿನ `ಸೀತಮ್ಮ ವಾಕಿಟ್ಲೋ ಸಿರಿಮ್ಲಿ ಚೆಟ್ಟು’ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಮಹೇಶ್ ಬಾಬುರವರ ಸಹೋದರಿಯಾಗಿ ನಟಿಸಿ ಮನಸೆಳೆದರು.
ತಮಿಳುನಾಡು ಮೂಲದ ಅಭಿನಯಾಗೆ ಹುಟ್ಟಿನಿಂದಲೇ ಮಾತು ಬರಲ್ಲ, ಕಿವಿಯೂ ಕೇಳಲ್ಲ. ಹೀಗಿದ್ದರೂ ಆಕೆ ತನ್ನ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ವಿಶೇಷ ಮನ್ನಣೆ ಗಳಿಸಿದ್ದಾಳೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ರವಿತೇಜ ಅಭಿನಯದ `ನೇನಿಂತೆ’ ಚಿತ್ರದ ಮೂಲಕ ಅಭಿನಯಾ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಆ ನಂತರ ತಮಿಳಿನಲ್ಲಿ `ನಾಗಾರ್ಜುನ, ಕಿಂಗ್ ಮತ್ತು ನಾಡೋಡಿಗಳ್’ ಚಿತ್ರಗಳಲ್ಲಿ ನಟಿಸಿದ್ದಾರೆ.
ಆದರೆ ಅವರು ಜನಮನ್ನಣೆ ಪಡೆದಿದ್ದು, ರವಿತೇಜ ಅಭಿನಯದ `ಶಂಭೋ ಶಿವ ಶಂಭೋ’ ಚಿತ್ರದ ಮೂಲಕ. ಆ ನಂತರ `ದಮ್ಮು, ಢಮರುಗಂ, ಜೀನಿಯಸ್, ರಾಜುಗಾರಿಗದಿ-2, ಧ್ರುವ’ ಮುಂತಾದ ಚಿತ್ರಗಳ ಮೂಲಕ ಉತ್ತಮ ಮನ್ನಣೆ ಪಡೆದರು. ಇತ್ತೀಚೆಗೆ ಅಭಿನಯಾ ನಟಿಸಿದ ತೆಲುಗು ಸಿನಿಮಾಗಳಾದ `ಸೀತಾರಾಮನ್, ಗಾಮಿ ಮತ್ತು ಫ್ಯಾಮಿಲಿ ಸ್ಟಾರ್ ‘ ಸೂಪರ್ ಹಿಟ್ ಆಗಿವೆ. ಅಲ್ಲದೆ, ಕಾಲಿವುಡ್ ನಲ್ಲಿ `ಮಾರ್ಕ್ ಆ್ಯಂಟನಿ’ ಎಂಬ ತಮಿಳು ಚಿತ್ರದಲ್ಲಿ ನಟ ವಿಶಾಲ್ ಜೋಡಿಯಾಗಿ ಅಭಿನಯಾ ಕಾಣಿಸಿಕೊಂಡಿದ್ದರು. ಅವರ ಈ ಚಿತ್ರ 100 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸ್ಯಾಂಡಲ್ ವುಡ್ ನ `ಹುಡುಗರು’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ತಂಗಿಯಾಗಿ ನಟಿಸಿದ್ದರು. ನಂತರ `ಕಿಚ್ಚು’ ಹಾಗೂ `ಆಟೋ ರಾಮಣ್ಣ’ ಚಿತ್ರದಲ್ಲೂ ಮಿಂಚಿದ್ದರು. ಮಲೆಯಾಳಂನ `ಪನಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಾ ಗಮನ ಸೆಳೆದಿದ್ದರು. ಸದ್ಯ `ಮೂಕುತ್ತಿ ಅಮ್ಮನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರ್ ಸಿ. ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಮೀನಾ, ರೆಜಿನಾ, ದುನಿಯಾ ವಿಜಯ್ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.





