– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಕಿರುತೆರೆಯ ವೀಕ್ಷಕರಿಗೆ ಅಮೂಲ್ಯ ಓಂಕಾರ್ ಎಂದರೆ ನೆನಪಾಗುವುದು ಆ ಮುಗ್ಧ ಮುಖ ಮತ್ತು ಸಖತ್ ಕ್ಯೂಟ್ ನಟನೆ. ‘ಕಮಲಿ’ ಧಾರಾವಾಹಿಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನೆಮಗಳಾಗಿದ್ದ ಈ ನಟಿ, ಈಗ ಮತ್ತೆ ಪರದೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದೇ ರೀತಿ ಅಮೃತಾ ರಾಮಮೂರ್ತಿ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರಿಗೂ ದೊಡ್ಡ ಫ್ಯಾನ್ ಬೇಸ್ ಇದೆ. ಈಗ ಇಬ್ಬರೂ ಒಂದೇ ಧಾರಾವಾಹಿ ಮೂಲಕ ಬರಲು ರೆಡಿ ಆಗಿದ್ದಾರೆ ಎಂಬುದು ವಿಶೇಷ. ಸನ್ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ‘ಮಹಾಲಕ್ಷ್ಮಿ ಮದುವೆ’ ಎಂಬ ಹೊಚ್ಚ ಹೊಸ ಧಾರಾವಾಹಿಯ ಮೂಲಕ ಅಮೂಲ್ಯ ಮತ್ತೆ ನಿಮ್ಮ ಮನೆಗೆ ಮರಳುತ್ತಿದ್ದಾರೆ.
ಅಮೂಲ್ಯ ಗೌಡ ಅವರು ಕಿರುತೆರೆ ಲೋಕಕ್ಕೆ ಬಂದು 12 ವರ್ಷಗಳೇ ಕಳೆದಿವೆ! ಅಮೂಲ್ಯ ಗೌಡ ಅವರು ಮೊದಲು ನಟಿಸಿದ್ದು ಸ್ವಾತಿ ಮುತ್ತು ಧಾರಾವಾಹಿಯಲ್ಲಿ. ‘ಸ್ಟಾರ್ ಸುವರ್ಣದಲ್ಲಿ’ ಧಾರಾವಾಹಿ ಪ್ರಸಾರ ಕಂಡಿತು. ಈ ಧಾರಾವಾಹಿಯಲ್ಲಿ ಪಾರು ಹೆಸರಿನ ಪಾತ್ರ ಮಾಡಿದರು. ಅಮೂಲ್ಯ ಓಂಕಾರ್‌ಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದ್ದು ‘ಕಮಲಿ’. ಈ ಸೀರಿಯಲ್‌ನಲ್ಲಿನ ರಿಷಿ-ಕಮಲಿ ಜೋಡಿ ಇಂದಿಗೂ ವೀಕ್ಷಕರ ಫೇವರಿಟ್. ಇದಾದ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ, ತಮ್ಮದೇ ಆದ ಸ್ಟೈಲ್‌ನಲ್ಲಿ ಆಟವಾಡಿ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗೆ ‘ಶ್ರೀಗೌರಿ’ ಮತ್ತು ತೆಲುಗು ಕಿರುತೆರೆಯಲ್ಲೂ ಮಿಂಚಿದ್ದ ಅಮೂಲ್ಯ, ಈಗ ‘ಮಹಾಲಕ್ಷ್ಮಿ ಮದುವೆ’ ‘ ಎಂಬ ವಿಭಿನ್ನ ಪಾತ್ರದ ಮೂಲಕ ಮರಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ.
ಅಮೃತಾ ಅವರು ‘ಕುಲವಧು’, ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಮೊದಲಾದ ಸೀರಿಯಲ್ನಲ್ಲಿ ನಟಿಸಿದರು. ಕೆಲ ಸಮಯ ‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಹೆಸರಿನ ಪಾತ್ರ ಮಾಡಿದರು. ಇದು ನೆಗೆಟಿವ್ ಶೇಡ್ ಹೊಂದಿದ್ದ ಪಾತ್ರ ಆಗಿತ್ತು. ಅವರ ವೃತ್ತಿ ಜೀವನಕ್ಕೆ ಈ ಧಾರಾವಾಹಿ ಸಾಕಷ್ಟು ಮೈಲೇಜ್ ನೀಡಿತು ಎಂದರೂ ತಪ್ಪಾಗಲಾರದು. ಈಗ ಅವರು ಉದಯ ಟಿವಿ ಮೂಲಕ ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ.
‘ಮಹಾಲಕ್ಷ್ಮಿ ಮದುವೆ’ ಇದು ಕೇವಲ ಒಂದು ಮದುವೆಯ ಕಥೆಯಲ್ಲ; ತನ್ನ ತವರಿನ ಸುಖಕ್ಕಾಗಿ ನಿಲ್ಲುವ ಒಬ್ಬ ಬಲವಾದ ಮಗಳ ಕಥೆ. ಸದ್ಯ ಉದಯ ಟಿವಿ ಈ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿದ್ದು, ಪ್ರೋಮೋ ಈಗಾಗಲೇ ಕುತೂಹಲ ಮೂಡಿಸಿದೆ. ಮಗಳಿಗೆ ಮದುವೆ ಮಾಡಬೇಕು ಎಂದು ತಾಯಿ ಹರಸಾಹಸ ಪಡುತ್ತಿದ್ದರೆ, ಮಗಳು ಮಹಾಲಕ್ಷ್ಮಿ ಮಾತ್ರ ಒಂದು ವಿಭಿನ್ನ ಕಂಡಿಷನ್ ಹಾಕಿದ್ದಾಳೆ “ಮದುವೆಯಾದ ಮೇಲೂ ನನ್ನ ಸಂಬಳ ನನ್ನ ಅಮ್ಮನ ಕೈಗೇ ಸೇರಬೇಕು” ಎನ್ನುವುದೇ ಆಕೆಯ ಷರತ್ತು. ತನ್ನನ್ನು ಸಾಕಿ ಸಲಹಿದ ತಾಯಿಯನ್ನು ಮದುವೆಯ ನಂತರವೂ ಗೌರವದಿಂದ ನೋಡಿಕೊಳ್ಳಬೇಕು ಎನ್ನುವ ಮಹಾಲಕ್ಷ್ಮಿಯ ನಿರ್ಧಾರ.
ಇನ್ನು ಕಮಲಿ ಖ್ಯಾತಿಯ ಅಮೂಲ್ಯರನ್ನ ಮತ್ತೆ ಕನ್ನಡದಲ್ಲಿ ನೋಡಿ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಸದ್ಯದಲ್ಲೇ ಈ ಧಾರಾವಾಹಿಯ ಪ್ರಸಾರದ ಸಮಯ ಅಧಿಕೃತವಾಗಿ ಪ್ರಕಟವಾಗಲಿದೆ.





