ಆಕೆ ಬೇಕೆಂದು ಬಯಸಿ ಹೋದವಳಲ್ಲ, ಬೇರೆಯವರ ಬೇಡಿಕೆಯನ್ನೇಡೇರಿಸಲು, ಬದುಕ ಬರಡು ಮಾಡಿಕೊಂಡವಳು. ಆಕೆ ಎಂದಿಗೂ ಪರಪುರುಷರ ಸಹವಾಸ ಬೇಡಿದವಳಲ್ಲ, ಪರ ಸ್ತ್ರೀಯರನ್ನ ಕಾಪಾಡಲು ಹಣಕ್ಕಾಗಿ ತನ್ನ ದೇಹವ ಪಣಕಿಟ್ಟವಳು.ಆಕೆ ಕಂಡವರೊಡನೆ ನಾ ಕಾಸಿಗಾಗಿ ಹೋಗುವನೆಂದು ಕನಸಲ್ಲೂ ಕಂಡವಳಲ್ಲ,ತನ್ನ ಕುಟುಂಬದ ಕಷ್ಟಕ್ಕಾಗಿ ಕರಗಿ ಕಾಮುಕರ ಕ್ರೌರ್ಯಕ್ಕೆ ಒಳಗಾದವಳು.

ಮನುಷ್ಯತ್ವವನ್ನೇ ಮರೆತು ಮೃಗಗಳಂತೆ ವರ್ತಿಸುವಾತನಿಗೇನು ತಿಳಿದಿತ್ತು, ಮನಸ್ಸ ಮಾರದೆ ಮನೆಯ ಪರಿಸ್ಥಿತಿಗೆ ಸೋತು ಮೈಯ ಮಾರಿದವಳ ಮನದೊಳಗಿನ ಮಾತು. ಆತನಿಗೆ ಬೇಕಾದದ್ದು ತನ್ನ ಕಾಮತೃಷಿಯನ್ನ ಈಡೇರಿಸೋ, ತನ್ನ ದೇಹದ ದಾಹವನ್ನು ತೀರಿಸೋ ಹೆಣ್ಣು. ಹೆಣ್ಣನ್ನು ಹಣ್ಣಿನಂತೆ ಕಚ್ಚಿ, ಕಡಿದು, ಕಾಡು ಮೃಗಗಳಂತೆ ವರ್ತಿಸುವ ಕಟುಕ ಕೀಚಕನು ಹೇಳುವುದು  ಎಲೈ ವೇಶ್ಯೆ ವೃತ್ತಿಯಳೆ ನೀನು ನಾ ಕೊಟ್ಟ ಕಾಸಿಗೆ ನನ್ನ ಕೆಲಸ ವಾಗುವವರಿಗೆ ನೀ ಕಾಯಬೇಕು. ನಿನ್ನ ದೇಹಕ್ಕೇನಾದರೆ ನನಗೇನು? ನನ್ನ ದೇಹದ ದಾಹ ತಣಿಯಬೇಕಷ್ಟೇ ಎಂದು ಹೆಣ್ಣಿನ ಮುಂದೆ ತನ್ನ ಕ್ರೌರ್ಯವ ಮೆರೆಯುವವರ ಕಾಲವಿದು.

ಇಂದು ಎಷ್ಟೋ ಹೆಣ್ಣು ಮಕ್ಕಳ ಜೀವನದಲ್ಲಿ ನಡೆಯುತ್ತಿರುವ ನೈಜ ಘಟನೆಗಳು ಇದು.ಯಾವ ಒಂದು ಹೆಣ್ಣು ಸಹ ಮನಸ್ಸೋ ಇಚ್ಛೆಯಿಂದ ತಾನು ವೇಶ್ಯ ಕೆಲಸವನ್ನು ಮಾಡಲು ಮುಂದಾದವಳಲ್ಲ. ತಾನು ಇಂತಹ ಕಾಯಕದೆಡೆಗೆ ನನ್ನ ಬದುಕಿನ ಪಯಣವಿದೆ ಎಂದು ನೆನೆದವಳು ಅಲ್ಲ.ಅದು ಆಕೆಯ ಸಂದರ್ಭ-ಸನ್ನಿವೇಶಗಳು ಕಾಮುಕರ  ತೃಷೆಯನ್ನು ಈಡೇರಿಸಲು, ತನ್ನ ಕಷ್ಟದ ಬದುಕನ್ನು ನಿಭಾಯಿಸಲು, ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಾಯಕವೇ ಕೈಲಾಸ ಎಂಬಂತೆ ಕೀಚಕರ ದೇಹದ ದಾಹವನ್ನು ತಣಿಸಲು ಮುಂದಾದವಳು ಆಕೆ.

ಮದವೇರಿದ ಪುರುಷನಿಗೆ ಈಡೇರಬೇಕಾದದ್ದು ಕಾಮದಾಸೆ. ವೇಶ್ಯೆ ಎಂಬ ಪಟ್ಟಕೊಳಗಾದವಳಿಗೆ ತನ್ನ ಜೀವನ ನಿರ್ವಹಣೆಗೆ ತುಂಬಬೇಕಾಗಿದ್ದು ಆಕೆಯ ಕಿಸೆ.

happy-smiling-middle-aged-woman-counting-money-currency-notes-home-concept-budgeting-responsible-spending-happy-smiling-296531525

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ನಾನು ಬೆಂಗಳೂರಿಗೆ ಹೋಗಿದ್ದೆ.ಅದು ತಡರಾತ್ರಿ ಸಮಯ.ಮೆಜೆಸ್ಟಿಕ್ ನ ಬಳಿ ಹಲವಾರು ಮಂಗಳಮುಖಿಯರು ಮತ್ತು ಮಹಿಳೆಯರಿದ್ದರು. ಅವರ ಹೆಸರನ್ನು ಪ್ರಸ್ತಾಪಿಸುವುದು ಬೇಡ ಎಂದುಕೊಳ್ಳುತ್ತೇನೆ ಅವರನ್ನು ದೇವತೆ ಎಂದೇ ಕರೆಯುವುದು ಸೂಕ್ತವೆನಿಸುವುದು. ನಾನು ಬಸ್ ಸ್ಟಾಪ್ ಬಳಿ ಕುಳಿತಿದ್ದೆ. ದೇವತೆಯು ಸಹ ದಣಿದು ಬಂದ ರೀತಿಯಲ್ಲಿ ನನಗೆ ಕಂಡಳು.  ಹಾಗೆಯೇ ಬಂದು ನನ್ನ ಪಕ್ಕದಲ್ಲಿ ಕುಳಿತಳು. ಹೀಗೆ ಮಾತನಾಡುತ್ತಾ ನನ್ನ ಅವರ ಪರಿಚಯವಾಯಿತು.ನಾನು ಅವಳ ಬಗ್ಗೆ  ವಿಚಾರಿಸಲಾರಂಭಿಸಿದಾಗ ನನ್ನ ಮನದಲ್ಲಿ ಸಂಕಟ, ಕಣ್ಣಲ್ಲಿ ನೀರು, ಬದುಕು ಎಷ್ಟು ಕ್ರೂರ,ಜೀವನ ಎನ್ನುವುದು ಎಂಥಾ ನರಕ ಎಂದೆನಿಸಲು ಆರಂಭವಾಯಿತು.

ಆಕೆಗೆ ನಾಲ್ಕು ಜನ ಹೆಣ್ಣು ಮಕ್ಕಳು. ಕಾಲ ಕಳೆದಂತೆ ಗಂಡ ಕುಡುಕನಾಗಿ ಬದಲಾದವ, ಅತ್ತೆ ಹಾಸಿಗೆ ಹಿಡಿದವರು, ಮಕ್ಕಳಿನ್ನು ಚಿಕ್ಕವರು, ನಾಲ್ಕು ಮಕ್ಕಳಲ್ಲಿ ಎರಡನೇ ಮಗಳು ಅಂಗ ವೈಫಲ್ಯಕ್ಕೆ ಒಳಗಾದವರು, ಮೂರನೇ ಮಗಳು ಅಪಘಾತಕ್ಕೆ ಒಳಗಾಗಿ ಬದುಕಿದ್ದು ಸತ್ತವರಂತೆ ಹಾಸಿಗೆ ಹಿಡಿದಿರುವವರು. ಒಂದು ಸಮಯದಲ್ಲಿ ಯಾವುದಕ್ಕೂ ಕುಂದು-ಕೊರತೆ ಇಲ್ಲದಂತೆ ಗಂಡನೊಟ್ಟಿಗೆ ಸುಖ ಸಂಸಾರ  ನಡೆಸುತ್ತಿದ್ದಂತಹ ಕುಟುಂಬವದು. ಗಂಡ-ಹೆಂಡತಿ  ಇಬ್ಬರೂ ಪದವೀಧರರೆ. ಗಂಡನು ಖಾಸಗಿ ಸಂಸ್ಥೆಗೆ ಕೆಲಸ ಮಾಡುತ್ತಿದ್ದವ.ಆಸ್ಪತ್ರೆಯೊಂದರಲ್ಲಿ ಆಕೆಯು ಸಹ ದುಡಿಯುತ್ತಾ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ,ಕಾಲ ಕಳೆದಂತೆ ಅವರ ಬದುಕಲ್ಲಿ ಎಲ್ಲವೂ ಮಾಯವಾಗಿ ಕಡು ಬಡತನದಡೆಗೆ ಅವರನ್ನು ದೂಡಿತ್ತು.

ಈಗ ವಿಧಿ ಇಲ್ಲದೆ  ಮನೆಯ ಅಷ್ಟೂ ಜವಾಬ್ದಾರಿಯನ್ನು  ನಿಭಾಯಿಸಲು ತಾನೆ ಮುಂದಾಗಬೇಕಾಗಿತ್ತು.ಅದಕ್ಕೆ ಆಕೆ ಹುಡುಕಿಕೊಂಡ ದಾರಿ ದಣಿದವನ ದೇಹದ ದಾಹ ತೀರಿಸುವ ಕಾಯಕ.ಆಕೆಯ ಬಳಿ ಬರುವವರಲ್ಲಿ ಹಲವರು ಮಾನವೀಯತೆ ಇರುವವರಂತೆ ವರ್ತಿಸಿದರೆ,ಇನ್ನೂ ಕೆಲವರು ಕಾಡು ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸಿ ಆಕೆಯ ಪ್ರತಿಯೊಂದು ಅಂಗಾಂಗವನ್ನು ಕಚ್ಚುವುದಷ್ಟೇ ಅಲ್ಲದೆ ಸಿಗರೇಟುಗಳಿಂದ ಸುಟ್ಟು, ದೇಹದ ಪ್ರತಿಯೊಂದು ಭಾಗಕ್ಕೂ ಹೊಡೆದು?ವನ್ಯ-ಮೃಗಗಳಿಗಿಂತಲೂ ಕಡೆಯಾಗಿ ಅವಳ ಮೇಲೆ ಎರಗುತ್ತಿದ್ದರಂತೆ.

ಕಡೆಯಲ್ಲಿ ಒಂದು ಮಾತು ಹೇಳಿದಳು. ಇದು ನನ್ನ ಕಾಯಕ ಕಾಯಕವನ್ನ ಕಷ್ಟವೆಂದು ದೂರ ತಳ್ಳಿದರೆ ಕುಟುಂಬ ಬೀದಿ ಪಾಲಾದೀತು. ನಾನು ನನ್ನ ದೇಹವನ್ನಾ ಮಾರುತ್ತಿರಬಹುದೇ ಹೊರತು,ನನ್ನ ಮನಸ್ಸನ್ನಲ್ಲ.ನನ್ನ ಮನಸ್ಸು ಯಾವತ್ತಿಗೂ ಪರಿಶುದ್ಧ ಎಂದು  ತನ್ನ ಕಥೆಯನ್ನು ಹೇಳುತ್ತಾ ಕಣ್ಣೀರಿನ ಮಳೆ ಹರಿಸಿದಳು.

ಏನೇ ಇರಲಿ ಸಮಾಜ ಆಕೆಗೆ ಕಟ್ಟುವುದು ವೇಶ್ಯೆ ಪಟ್ಟ.ಆಕೆ ಕುಟುಂಬಕ್ಕಾಗಿ, ಕುಟುಂಬದ ನಿರ್ವಹಣೆ ಹಾಗೂ ಪರಿಸ್ಥಿತಿಗಳಿಗೆ ಕಟ್ಟುಬಿದ್ದು ಕಾಮುಕರ ಮದವನ್ನ  ಈಡೇರಿಸುವವಳಿಗೆ  ವೇಶ್ಯೆ ಎಂದು ಕರೆಯುವುದಾದರೆ, ತನಗೊಂದು ಕುಟುಂಬವಿದ್ದು ಹೆಂಡತಿ ಮಕ್ಕಳು ಅಕ್ಕ ತಂಗಿಯರೊಟ್ಟಿಗೆ ಬೆಳೆದ ಆ ಪುರುಷನಿಗೆ ತನ್ನ ದೇಹದ ದಾಹಕ್ಕೆ ಮತ್ತೊಬ್ಬಳ ಬಳಿ ಹೋಗುತ್ತಾನೆಂದಾದರೆ ಆತನಿಗೆ ಕಟ್ಟಬೇಕಾದ ಪಟ್ಟ ಯಾವುದು

 

ಮೇಘನಾ ಯು,

ಪತ್ರಿಕೋದ್ಯಮ ವಿದ್ಯಾರ್ಥಿ

ಕುವೆಂಪು ವಿವಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ