ದೇಶದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ (92) ಭಾನುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಏಪ್ರಿಲ್ 11ರಂದು  ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಬಹು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಹಾಗೂ ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು ಎಂದು ಆಸ್ಪತ್ರೆ ವೈದ್ಯರಾದ ಪ್ರತೀತ್ ಸಮದಾನಿ ದೃಢಪಡಿಸಿದ್ದಾರೆ.

‘ಆಶಾ ಭೋಸ್ಲೆ ಇಂದು ನಿಧನರಾದರು ಎಂಬುದು ದುಃಖಕರ ಸುದ್ದಿ. ಅವರು ಬಹು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು…’ ಎಂದು ಅವರು ಹೇಳಿದರು.ಆಶಾ ಭೋಸ್ಲೆ ಅವರ ನಿಧನದ ಸುದ್ದಿಯನ್ನು ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಆಶಿಶ್ ಶೇಲಾರ್ ಅವರು ಆಸ್ಪತ್ರೆಯ ಹೊರಗೆ ಪ್ರಕಟಿಸಿದರು. ಸೋಮವಾರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಆಶಾ ಭೋಸ್ಲೆ ಅವರ ಪುತ್ರ ಆನಂದ್ ಭೋಸ್ಲೆ ಕೂಡ ಸಾವಿನ ಸುದ್ದಿಯನ್ನು ದೃಢಪಡಿಸಿದ್ದು, ಅಂತಿಮ ನಮನ ಸಲ್ಲಿಸುವ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ತಾಯಿ ಆಶಾ ಭೋಸ್ಲೆ ಇಂದು ನಿಧನರಾಗಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ಅವರ ಮೊಮ್ಮಗಳು ಮತ್ತು ಗಾಯಕಿ ಝನೈ ಭೋಸ್ಲೆ ಸಹ ದೃಢಪಡಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ