ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಭಾನುವಾರ ನಿಧನರಾಗಿದ್ದಾರೆ. ಅವರ ಆರೋಗ್ಯ ಏಕಾಏಕಿ ಹದಗೆಟ್ಟ ಕಾರಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಏಪ್ರಿಲ್ 11ರಂದು ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಿಯಾ ತು ಅಬ್ ತೋ ಆಜಾ, ಕಜ್ರಾ ಮೊಹಬ್ಬತ್ ವಾಲಾ, ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ನಂತರ ಪ್ರಸಿದ್ಧ ಹಾಡುಗಳ ಮೂಲಕ ಮನೆಮಾತಾಗಿದ್ದ ಆಶಾ ಭೋಸ್ಲೆ ನಿಧನವು, ಕೋಟ್ಯಾಂತರ ಸಂಗೀತಪ್ರಿಯರ ಮನಗಳಲ್ಲಿ ಆಘಾತ ಉಂಟುಮಾಡಿದೆ.
ಆಶಾ ಭೋಸ್ಲೆ 10ನೇ ವಯಸ್ಸಿನಲ್ಲಿ 1943ರ ಮರಾಠಿ ಚಿತ್ರ ‘ಮಾಜಾ ಬಾಲ್’ಗಾಗಿ ‘ಚಲಾ ಚಲಾ ನವ ಬಾಲಾ’ ಎಂಬ ಮೊದಲ ಚಲನಚಿತ್ರ ಗೀತೆಯನ್ನು ಹಾಡಿದ್ದರು. ‘ಓ ಹಸೀನಾ ಜುಲ್ಫೋನವಾಲಿಯಂತಹ ನೃತ್ಯಗೀತೆಗಳಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿದ್ದ ಅವರು, ನಂತರ ‘ದಿಲ್ ಚೀಜ್ ಕ್ಯಾ ಹೈ’ ಎಂಬ ಘಝಲ್‌ಗಳು, ‘ತೋರಾ ಮನ ದರ್ಪಣ ಕಹಲಾಯೆ’ಯಂತಹ ಶಾಸ್ತ್ರೀಯ ಗೀತೆಗಳ ಮೂಲಕ ತಮ್ಮ ಗಾನ ಸಾಮರ್ಥ್ಯದ ಸಾಬೀತುಪಡಿಸಿದ್ದರು. ಕ್ಯಾಬರೆ ಹಾಡುಗಳು, ರೊಮ್ಯಾಂಟಿಕ್ ಮಧುರ ಗೀತೆಗಳವರೆಗೆ, ಅವರ ಗಾನಸಂಪತ್ತು ಅದ್ಭುತ ಕಲಾತ್ಮಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತಿತ್ತು.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯಾದ ಆಶಾ ಭೋಸ್ಲೆ, ‘ಅಭಿ ನ ಜಾವೋ ಛೋಡ್ ಕರ್’, ‘ಇನ್ ಆಂಖೋನ್ ಕಿ ಮಸ್ತಿ’, ‘ದಿಲ್ ಚೀಜ್ ಕ್ಯಾ ಹೈ’, ‘ಪಿಯಾ ತು ಅಬ್ ತೋ ಆಜಾ’, ‘ದುನಿಯಾ ಮೇನ್ ಲೋಗೋನ್ ಕೋ’ ಮತ್ತು ‘ಜರಾ ಸಾ ಝೂಮ್ ಲೂನ್ ಮೇನ್’ ಸೇರಿದಂತೆ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಮೀನಾ ಕುಮಾರಿ, ಮಧುಬಾಲಾ, ಜೀನತ್ ಅಮಾನ್, ಕಾಜೋಲ್ ಮತ್ತು ಊರ್ಮಿಳಾ ಮಾತೋಂಡ್ಕರ್ ಸೇರಿದಂತೆ ಹಲವು ಪೀಳಿಗೆಯ ಪ್ರಮುಖ ನಟಿಯರ ನೃತ್ಯಗಳಿಗೆ ಅವರು ಹಿನ್ನೆಲೆ ಗಾಯನ ಹಾಗೂ ಪದ್ಮಿನಿ, ವೈಜಯಂತಿಮಾಲಾ ಮುಂತಾದ ದಕ್ಷಿಣ ಭಾರತೀಯ ನಟಿಯರಿಗೆ ಧ್ವನಿ ನೀಡಿದ್ದರು.
ಗಣ್ಯರ ಕಂಬನಿ: ಆಶಾ ಭೋಸ್ಲೆಯವರ ನಿಧನಕ್ಕೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಬಾಲಿವುಡ್ ದಿಗ್ಗಜರು ಕಂಬನಿ ಮಿಡಿದಿದ್ದಾರೆ.





