ಹೊಸದಾಗಿ ತಾಯಿ ಆಗುತ್ತಿದ್ದೀರಾ? ಹಾಗಾದರೆ ಅಗತ್ಯವಾಗಿ ಸಲಹೆ ಪಾಲಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ…….

ಕಾವ್ಯಾ ಆಫೀಸಿಗೆ ಹೊರಡಲೆಂದು ತನ್ನ ಕಾರನ್ನು ಏರಿದಳು. ಇದ್ದಕ್ಕಿದ್ದಂತೆ ಅವಳ ಸೊಂಟ ಖಳಕ್‌ ಎಂದು ಅಪಾರ ನೋವಾಯಿತು. ಇದೇನೂ ಅವಳಿಗೆ ಮೊದಲ ಸಲದ ನೋವಲ್ಲ. ಇದಕ್ಕೆ ಮೊದಲು ಕಳೆದ 15 ದಿನಗಳಲ್ಲಿ ಈ ತರಹ 2-3 ಸಲ ಆಗಿತ್ತು. ಅದನ್ನು ಅವಳು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದಳು. ಆದರೆ ಈಗ ಅವಳ ಈ ಸಮಸ್ಯೆ ತೀವ್ರವಾಗಿ ಕಾಡತೊಡಗಿತು. ಹಾಗೇಂತ ಅವಳ ವಯಸ್ಸೇನೂ 40+ ಅಲ್ಲ. ಆ ಕಾರಣದಿಂದ ಅವಳಿಗೆ ಈ ಸಮಸ್ಯೆ ಉಂಟಾಗಿರಲಿಲ್ಲ. ಕಾವ್ಯಾಳಿಗೀಗ ಕೇವಲ 35ರ ಹರೆಯ. ಅವಳೀಗ 3 ವರ್ಷದ ಮಗುವಿನ ತಾಯಿ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಅವಳಿಗೆ ಈ ಚಿಂತೆ ಹತ್ತಿದ್ದು ವಿಷಾದವೇ ಸರಿ.

ಈ ಕುರಿತಾಗಿ ಗೈನಕಾಲಜಿಸ್ಟ್ ತಜ್ಞರ ಅಭಿಪ್ರಾಯ ಎಂದರೆ, 30+ ನಂತರ ಹೆಂಗಸರ ದೇಹದಲ್ಲಿ ಆಸ್ಟಿಯೋಪೊರೋಸಿಸ್‌ ನ ಸಮಸ್ಯೆ ಉಂಟಾಗುವುದರಿಂದ ಹೀಗಾಗುವುದು ಮಾಮೂಲಿ. ಇದರಿಂದ ದೇಹದ ಮೂಳೆ ದುರ್ಬಲವಾಗುತ್ತದೆ, ಮುಂದೆ ಅವು ಸುಲಭವಾಗಿ ಸವೆಯಲಿಕ್ಕೆ ಇದು ನಾಂದಿ. ಹೀಗಾಗಿ ಮೂಳೆ ಫ್ರಾಕ್ಟರ್‌ ಆಗಬಹುದಾದ ಸಂಭಾವ್ಯತೆಯನ್ನು ತಳ್ಳಿಹಾಕಲಾಗದು. ಸಾಮಾನ್ಯವಾಗಿ ಇದು ಹೆಂಗಸರಲ್ಲಿ ಮುಟ್ಟಂತ್ಯ (ಮೆನೋಪಾಸ್‌)ದ ನಂತರ ಕಾಣಿಸುತ್ತದೆ, ಆಗ ದೇಹದಲ್ಲಿ ಈಸ್ಟ್ರೋಜೆನ್ ಹಾರ್ಮೋನಿನ ಉತ್ಪಾದನೆ ಕಡಿಮೆ ಆಗಿಹೋಗಿರುತ್ತದೆ. ಹಾಗೇಂತ ಇದು 30-40 ವಯಸ್ಸಲ್ಲಿ ಕಾಣಿಸಿಕೊಳ್ಳಬಾರದು ಅಂತೇನಿಲ್ಲ.

ಪರ್ಫೆಕ್ಟ್ ಡಯೆಟ್ಪಾಲಿಸಿ

ನೀವು ಇಂಥ ಸಮಸ್ಯೆಯಿಂದ ದೂರವಾಗ ಬಯಸಿದರೆ, ಕ್ಯಾಲ್ಶಿಯಂ/ವಿಟಮಿನ್‌ ಡಿ ತುಂಬಿರುವಂಥ ಡಯೆಟ್‌ ಫಾಲೋ ಮಾಡಿ. ಸೂರ್ಯನ ಎಳೆ ಬಿಸಿಲು ಇರುವ ಹೊತ್ತಿನಲ್ಲಿ ಅಗತ್ಯವಾಗಿ ವಾಕಿಂಗ್‌ ಹೊರಡಿರಿ. ಜೊತೆಗೆ ಅತಿ ಭಾರದ ವಸ್ತುಗಳನ್ನು ಎತ್ತುವ ಪ್ರಯತ್ನ ಬೇಡ. ಸ್ಮೋಕಿಂಗ್‌, ಡ್ರಿಂಕ್ಸ್ ಖಂಡಿತಾ ಬೇಡ! ನಿಮ್ಮ ಮೂಳೆಗಳ ಆರೋಗ್ಯದ ಕಡೆ ಗಮನಹರಿಸಲು, ನಿಯಮಿತವಾಗಿ ಬೋನ್‌ ಡೆನ್ಸಿಟಿ ಟೆಸ್ಟ್ ಮಾಡಿಸುತ್ತಿರಿ. ಆಗ ಮಾತ್ರ ನೀವು ಹೆಲ್ದಿ ಯಂಗ್‌ ಮದರ್‌ ಆಗಬಲ್ಲಿರಿ.

30+ ನಂತರ ಹೆಂಗಸರು ಗಮನಿಸಬೇಕಾದುದು ಕೇವಲ ಇದೊಂದೇ ಸಮಸ್ಯೆ ಅಲ್ಲ! ಇಂಥ ಹಲವಾರು ಇತರ ಹೆಲ್ತ್ ಇಶ್ಯೂಸ್‌ ಇವೆ. ಆ ಬಗ್ಗೆ ಈಗ ವಿವರವಾಗಿ ತಿಳಿಯೋಣ :

ಅನಿಯಮಿತ ಮುಟ್ಟು

ಈಸ್ಟ್ರೋಜೆನ್‌ಪ್ರೊಜೆಸ್ಟೆರಾನ್‌ ಹಾರ್ಮೋನುಗಳ ಬದಲಾವಣೆಯ ಕಾರಣದಿಂದ, ಹೆಂಗಸರ ಮುಟ್ಟಿನ ಮೇಲೆ ಪ್ರಭಾವ ತಪ್ಪಿದ್ದಲ್ಲ. ಇದನ್ನೇ ಆಧುನಿಕ ವೈದ್ಯಕೀಯದಲ್ಲಿ ಎನ್ನುತ್ತಾರೆ. ಈ ಕಾರಣದಿಂದಲೇ ಮುಟ್ಟು ಸದಾ ಹಿಂದೆ ಅಥವಾ ಮುಂದಕ್ಕೆ ಹೋಗುತ್ತಿರುತ್ತದೆ. ಇದರಿಂದ ಹೆವಿ ಬ್ಲೀಡಿಂಗ್‌ ಸಮಸ್ಯೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಬಹಳ ಕಡಿಮೆಯೂ ಆಗಬಹುದು. ಒಮ್ಮೊಮ್ಮೆ ಕೆಲವು ತಿಂಗಳು ಮುಂದೂಡಲ್ಪಡುತ್ತದೆ.

ನಮ್ಮ ದೇಶದಲ್ಲಿ 25% ಹೆಂಗಸರು ಇಂಥ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಾರೆ. ಎಷ್ಟೋ ಜನರಿಗೆ ಮುಟ್ಟಿನ ದಿನಗಳು ಮುಂದೂಡಲ್ಪಟ್ಟು, ತಾನು ಬಸುರಿ ಆದೆನೇನೋ ಎಂದು ಭಯಪಡುವ ಸಂದರ್ಭ ಉಂಟು. ಆಮೇಲೆ ಇದ್ದಕ್ಕಿದ್ದಂತೆ ಮುಟ್ಟು ಮುಂದುವರಿಯುತ್ತದೆ. ಇದನ್ನೇ ಅಮೆನೋರಿಯಾ ಎನ್ನುತ್ತಾರೆ. ಇಂಥ ಸಮಸ್ಯೆ ಎದುರಿಸುತ್ತಿರುವ ಹೆಂಗಸರು ಸಾಮಾನ್ಯವಾಗಿ 30-40 ವಯಸ್ಸಿನರಾಗಿದ್ದು, ಪ್ರಿಮೆಚ್ಯೂರ್‌ ಓವೇರಿಯನ್‌ ಫೇಲ್ಯೂರ್‌ ಯಾ 0.1%ನಷ್ಟು ಕಾಡುತ್ತಿರುತ್ತದೆ.

ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಈ ಸಮಸ್ಯೆ ಹೆಂಗಸರಲ್ಲಿ ಬಂಜೆತನಕ್ಕೆ ಒಂದು ಮುಖ್ಯ ಕಾರಣವಾಗುತ್ತದೆ. ಈ ಕಾರಣದಿಂದ ಉಂಟಾಗುವ ಗೆಡ್ಡೆ (ಸಿಸ್ಟ್)ಗೆ ಸಕಾಲಿಕವಾಗಿ ಚಿಕಿತ್ಸೆ ಒದಗಿಸದಿದ್ದರೆ, ಮುಂದೆ ಇದು ಗರ್ಭಕೋಶದ ಕ್ಯಾನ್ಸರ್‌ ಗೆ ತಿರುಗುವ ಸಾಧ್ಯತೆಗಳಿವೆ. ನಮ್ಮ ದೇಶದಲ್ಲಿ ಇಂದು 10% ಹೆಂಗಸರು, ಕಿಶೋರಾವಸ್ಥೆಯಲ್ಲಿಯೇ ಇಂಥ ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ.

ಫೈಬ್ರಾಯ್ಡ್ ಸಮಸ್ಯೆ

ಇದಂತೂ ಇತ್ತೀಚೆಗೆ ಹೆಂಗಸರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಆಗಿಹೋಗಿದೆ. ಸಾಮಾನ್ಯವಾಗಿ ಇದು 30-50 ವರ್ಷದ ಹೆಂಗಸರನ್ನು ಕಾಡುತ್ತದೆ. ಇದರಿಂದ ಪೀಡಿತರಾದರೂ, ಎಷ್ಟೋ ಮಹಿಳೆಯರಿಗೆ ಆ ಬಗ್ಗೆ ಗೊತ್ತೇ ಇರುವುದಿಲ್ಲ. ಇದನ್ನು ಅಲ್ಟ್ರಾ ಸೌಂಡ್‌ ಹಾಗೂ ಇನ್ನಿತರ ಆಧುನಿಕ ವಿಧಾನಗಳಿಂದ ಪತ್ತೆಹಚ್ಚುತ್ತಾರೆ. ಹೀಗಾಗಿ ಸಂದೇಹ ಬಂದಾಗ ತಕ್ಷಣ ಧಾವಿಸಿ ಮೆಡಿಕಲ್ ಟೆಸ್ಟ್ ಮಾಡಿಸುತ್ತಿರಿ. ಆಗ ಸಕಾಲಕ್ಕೆ ಚಿಕಿತ್ಸೆ ದೊರೆತು, ಕಷ್ಟ ದೂರವಾಗುತ್ತದೆ.

ಸ್ಥೂಲತೆಯ ಬಾಧೆ ಇವೆಲ್ಲದರ ಹೊರತಾಗಿ 30+ನ ಹೆಂಗಸರು, ಆ್ಯಂಡ್ರಾಯ್ಡ್ ಒಬಿಸಿಟಿಗೆ (ಅತ್ಯಧಿಕ ಸ್ಥೂಲಕಾಯ) ಸಿಲುಕುವುದೂ ಸಹ ಮಾಮೂಲಿ ವಿಷಯ. ಇದರಿಂದ ಹೊಟ್ಟೆ, ಸೊಂಟ, ನಿತಂಬದ ಬಳಿ ಅತ್ಯಧಿಕ ಕೊಬ್ಬು ಶೇಖರಣೆಗೊಡು, ನಡೆಯುವುದೇ ದುಸ್ತರವಾಗುತ್ತದೆ. 30+ನ ಹೆಂಗಸರಿಗೆ ಫೀಮೇಲ್ ‌ಹಾರ್ಮೋನ್ಸ್ ನಲ್ಲಿ ಕೊರತೆ ಕಾಣುವುದರಿಂದ, ಇಂಥ ಬೆಲ್ಲಿ ಫ್ಯಾಟ್‌ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಇಂಥ ಸಮಸ್ಯೆ ಬೇಡ ಎನ್ನುವವರು ಮೊದಲಿನಿಂದಲೇ ಸ್ಥೂಲತೆಗೆ ತುತ್ತಾಗದಂತೆ ಕಟ್ಟುನಿಟ್ಟಾಗಿ ಡಯೆಟ್ ಮಾಡಬೇಕು. ಆದಷ್ಟೂ ಪಾಲಿಶ್ಡ್ ಬಿಳಿ ಅಕ್ಕಿ, ಮ್ಯಾಗಿ, ಜಂಕ್‌ ಫುಡ್‌, ಮೈದಾ ಆಧಾರಿತ ಬೇಕರಿ ಫುಡ್‌, ಅತಿಯಾದ ಹುರಿದ/ಕರಿದ ಪದಾರ್ಥ ಅವಾಯ್ಡ್ ಮಾಡಿ. ಆದಷ್ಟೂ ಪ್ರೋಟೀನ್‌, ಮಿನರಲ್ಸ್, ವಿಟಮಿನ್ಸ್ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ರೆಗ್ಯುಲರ್‌ ಆಗಿ ಬಳಸಿಕೊಳ್ಳಿ.

ಡಯಾಬಿಟೀಸ್ಬಗ್ಗೆ ಎಚ್ಚರವಿರಲಿ

30+ ನಂತರ ನಿಮ್ಮ ಲೈಫ್‌ ಸ್ಟೈಲ್‌, ಊಟ ತಿಂಡಿ ಕಡೆ ಸರಿಯಾಗಿ ಗಮನಹರಿಸದಿದ್ದರೆ, ಸಕ್ಕರೆ ಕಾಯಿಲೆ (ಮಧುಮೇಹ) ತಪ್ಪಿದ್ದಲ್ಲ. ಇದು ಇಣುಕ ತೊಡಗಿದಂತೆ ಅದರ ಲಕ್ಷಣಗಳು ಹೀಗೆ ಕಾಡತೊಡಗುತ್ತವೆ. ಹೆಚ್ಚು ಹೆಚ್ಚು ಸುಸ್ತು, ಮೆಟ್ಟಿಲು ಹತ್ತುವಾಗ ಏದುಸಿರು, ಅಕಾಲಿಕ ದೃಷ್ಟಿ ಮಂಜು, ಸತತ ಬಾಯಾರಿಕೆ, ರಾತ್ರಿ ಆಗಾಗ ಮೂತ್ರ ವಿಸರ್ಜನೆ, ತೂಕ ತಗ್ಗುವಿಕೆ, ವಸಡುಗಳಲ್ಲಿ ಬಾಧೆ…. ಇತ್ಯಾದಿ. ಇಂಥ ಲಕ್ಷಣ ಕಾಣಿಸಿದಾಗ, ತಕ್ಷಣ ರಕ್ತದ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಆರಂಭಿಸಿ.

ಮೂಳೆಗಳ ಆರೋಗ್ಯ ಮುಖ್ಯ

30+ ನಂತರ ಹೆಂಗಸರು ತಮ್ಮ ಡಯೆಟ್‌ ನಲ್ಲಿ ಕ್ಯಾಲ್ಶಿಯಂ ವಿಟಮಿನ್ಸ್ ಡಿ ಕೊರತೆ ಕಾಡದಂತೆ ಆದಷ್ಟೂ ಎಚ್ಚರಿಕೆ ವಹಿಸಬೇಕು, ಆಹಾರದಲ್ಲಿ ಇವನ್ನು ಸಹಜವಾಗಿ ಬೆರೆಸಿಕೊಳ್ಳಬೇಕು. ಈ ವಯಸ್ಸಿನ ನಂತರ ಮೂಳೆಗಳ ಸದೃಢತೆ ಕಡಿಮೆ ಆಗುತ್ತದೆ. ಹಾರ್ಮೋನ್ಸ್ ಚೇಂಜ್‌ ಕಾರಣ, ದೇಹದ ಮೇಲೆ ಪರಿಣಾಮ ಆಗುತ್ತದೆ. ಕೀಲುಗಳಲ್ಲಿ ನೋವು, ಮಂಡಿ ನೋವು, ಸರಾಗವಾಗಿ ನಡೆಯಲಾಗದೆ ಇರುವುದೆಲ್ಲ ಮೂಳೆಗಳ ಅನಾರೋಗ್ಯ ಸೂಚಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಧಾರಾಳ ಕ್ಯಾಲ್ಶಿಯಂ ಬಳಸಿಕೊಳ್ಳಿ. ಹಾಲು, ಹಾಲಿನ ಉತ್ಪನ್ನಗಳು, ಹಸಿರು ತರಕಾರಿ, ಸೊಪ್ಪು, ಸೋಯಾ ಇತ್ಯಾದಿ ಜಾಸ್ತಿ ಬಳಸಿರಿ.

ಹೃದ್ರೋಗ ದೂರವಿರಿಸಲು

30+ ನಂತರ ಹೆಂಗಸರಲ್ಲಿ ಹಾರ್ಟ್‌ ಅಟ್ಯಾಕ್‌ ನಂಥ ಹೃದ್ರೋಗಗಳು ಒಂದು ಮಾಮೂಲಿ ವಿಷಯ ಆಗಿಬಿಟ್ಟಿದೆ. ಇದಕ್ಕೆ ಮೂಲಕಾರಣ ಹೈ ಬಿಪಿ, ಹೈ ಕೊಲೆಸ್ಟ್ರಾಲ್, ಸ್ಥೂಲಕಾಯ, ಸ್ಮೋಕಿಂಗ್‌, ಡ್ರಿಂಕ್ಸ್ ಇತ್ಯಾದಿ. ಡಯೆಟಿಶಿಯನ್‌ ಗಳ ಸಲಹೆ ಅಂದ್ರೆ 30+ನ ಮಹಿಳೆಯರು ಸದಾ ತಮ್ಮ ದೇಹ ತೂಕದ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಇದಕ್ಕಾಗಿ ಅವರು ನಿಯಮಿತವಾಗಿ ವ್ಯಾಯಾಮ, ಯೋಗ ಮಾಡಬೇಕು. ತಮ್ಮ ಆಹಾರದಲ್ಲಿ ಸ್ಯಾಚುರೇಟೆಡ್‌ ಫ್ಯಾಟ್ಸ್, ಟ್ರಾನ್ಸ್ ಫ್ಯಾಟ್ಸ್ ನ್ನು ಆದಷ್ಟೂ ತಗ್ಗಿಸಬೇಕು. ವೈದ್ಯರಿಂದ ಆಗಾಗ ಬಿ‌ಪಿ, ಶುಗರ್‌ ಚೆಕ್‌ ಮಾಡಿಸುತ್ತಿರಬೇಕು. ಕೊಲೆಸ್ಟ್ರಾಲ್ ನ್ನು ಎಂದೂ ನಿರ್ಲಕ್ಷಿಸದಿರಿ.

ಮಾನಸಿಕ ಆರೋಗ್ಯ

30+ ನಂತರ ಹೆಂಗಸರು ತಮ್ಮ ಲೈಫ್‌ ಸ್ಟೈಲ್‌, ತಪ್ಪಾದ ಅಭ್ಯಾಸಗಳಿಂದಾಗಿ ಹೆಚ್ಚಾಗಿ ಆ್ಯಂಗ್ಝೈಟಿ, ಡಿಪ್ರೆಶನ್‌ ಇತ್ಯಾದಿಗಳಿಗೆ ಬೇಗ ತುತ್ತಾಗುತ್ತಾರೆ. ಸದಾ ಸೋಮಾರಿತನದಿಂದ ಹಾಸಿಗೆಗೆ ಒರಗುವುದು, ಟಿವಿ ಮುಂದೆ ಸೋಫಾಸೀನರಾಗಿ ಇರುವುದು, ದೈಹಿಕ ಚಟುವಟಿಕೆ ಇಲ್ಲದಿರುವುದರಿಂದ ಮಾನಸಿಕ ಆರೋಗ್ಯ ಬಿಗಡಾಯಿಸುತ್ತದೆ. ಇದರಿಂದ ಪಾರಾಗಲು ಹೆಲ್ದಿ ಲೈಫ್‌ ಸ್ಟೈಲ್ ನಿಮ್ಮದಾಗಿಸಿಕೊಳ್ಳಿ. ಇದರಲ್ಲಿ ಪೌಷ್ಟಿಕ ಆಹಾರ, ವ್ಯಾಯಾಮ, ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌, ಯೋಗ ಎಲ್ಲವೂ ಮುಖ್ಯ.

ಜಿ. ಪ್ರಿಯಾಂಕಾ

ಎಗ್ಫ್ರೀಝ್ ಮಾಡಿಸಿ

ಸಾಮಾನ್ಯವಾಗಿ ಹೆಂಗಸರಲ್ಲಿ ಗರ್ಭಧಾರಣೆಗೆ ಸೂಕ್ತ ವಯಸ್ಸು ಎಂದರೆ 20-30 ಎಂದಾಗುತ್ತದೆ. ಆದರೆ ಕೆರಿಯರ್‌ ನ್ನು ಗಮನದಲ್ಲಿರಿಸಿಕೊಂಡು, ಇಂದಿನ ಯುವತಿಯರು ಮದುವೆ ಮುಂದೂಡುತ್ತಾರೆ, ತಾಯ್ತನ ಇನ್ನೂ ದೂರ! ಒಂದು ಹಂತದ ನಂತರ ತಾಯಿ ಆಗುವುದು ಸುಲಭವಲ್ಲ.

30+ನ ಕೆಲವು ಹೆಂಗಸರು ಗರ್ಭಧಾರಣೆ ಮಾಡಿಸಿಕೊಳ್ಳಲಾಗದೆ ಅಸಮರ್ಥರಾಗಿ ಚಡಪಡಿಸುತ್ತಾರೆ. ಇಂಥವರು ಅತ್ಯಾಧುನಿಕ ಟೆಕ್ನಾಲಜಿ ಅನುಸರಿಸಿ ತಮ್ಮ ಎಗ್‌ ಫ್ರೀಝ್ ಮಾಡಿಸಿ, ಮುಂದೆ 40+ ನಂತರ ತಾಯ್ತನದ ಸುಖ ಅನುಭವಿಸಬಹುದು. ಈ ಪ್ರಕ್ರಿಯೆಯಲ್ಲಿ ಹೆಣ್ಣು ತನ್ನ ಅಂಡಾಣುವನ್ನು 10-15 ವರ್ಷ ಫ್ರೀಝ್ ಮಾಡಿಸಿ, ಬೇಕೆನಿಸಿದಾಗ ತಾಯಿ ಆಗಬಹುದು.

ಹೀಗಾಗಿ ಇಂದಿನ ಆಧುನಿಕ ಯುವತಿಯರಿಗೆ ತಮ್ಮ ಎಗ್‌ ಫ್ರೀಝಿಂಗ್‌ ಪ್ರೊಸೀಜರ್‌ ಬಲು ಮಾಮೂಲಿ ಎನಿಸುತ್ತದೆ. ಪ್ರಿಯಾಂಕಾ ಚೋಪ್ರಾ, ತನಿಷಾ ಮುಖರ್ಜಿ, ಏಕ್ತಾ ಕಪೂರ್‌, ರಾಖಿ ಸಾವಂತ್‌ ರಂಥ ಸೆಲೆಬ್ರಿಟೀಸ್‌ ಹೀಗೆ ಮಾಡಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ