ಹೊಸದಾಗಿ ತಾಯಿ ಆಗುತ್ತಿದ್ದೀರಾ? ಹಾಗಾದರೆ ಅಗತ್ಯವಾಗಿ ಈ ಸಲಹೆ ಪಾಲಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.......
ಕಾವ್ಯಾ ಆಫೀಸಿಗೆ ಹೊರಡಲೆಂದು ತನ್ನ ಕಾರನ್ನು ಏರಿದಳು. ಇದ್ದಕ್ಕಿದ್ದಂತೆ ಅವಳ ಸೊಂಟ ಖಳಕ್ ಎಂದು ಅಪಾರ ನೋವಾಯಿತು. ಇದೇನೂ ಅವಳಿಗೆ ಮೊದಲ ಸಲದ ನೋವಲ್ಲ. ಇದಕ್ಕೆ ಮೊದಲು ಕಳೆದ 15 ದಿನಗಳಲ್ಲಿ ಈ ತರಹ 2-3 ಸಲ ಆಗಿತ್ತು. ಅದನ್ನು ಅವಳು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದಳು. ಆದರೆ ಈಗ ಅವಳ ಈ ಸಮಸ್ಯೆ ತೀವ್ರವಾಗಿ ಕಾಡತೊಡಗಿತು. ಹಾಗೇಂತ ಅವಳ ವಯಸ್ಸೇನೂ 40+ ಅಲ್ಲ. ಆ ಕಾರಣದಿಂದ ಅವಳಿಗೆ ಈ ಸಮಸ್ಯೆ ಉಂಟಾಗಿರಲಿಲ್ಲ. ಕಾವ್ಯಾಳಿಗೀಗ ಕೇವಲ 35ರ ಹರೆಯ. ಅವಳೀಗ 3 ವರ್ಷದ ಮಗುವಿನ ತಾಯಿ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಅವಳಿಗೆ ಈ ಚಿಂತೆ ಹತ್ತಿದ್ದು ವಿಷಾದವೇ ಸರಿ.
ಈ ಕುರಿತಾಗಿ ಗೈನಕಾಲಜಿಸ್ಟ್ ತಜ್ಞರ ಅಭಿಪ್ರಾಯ ಎಂದರೆ, 30+ ನಂತರ ಹೆಂಗಸರ ದೇಹದಲ್ಲಿ ಆಸ್ಟಿಯೋಪೊರೋಸಿಸ್ ನ ಸಮಸ್ಯೆ ಉಂಟಾಗುವುದರಿಂದ ಹೀಗಾಗುವುದು ಮಾಮೂಲಿ. ಇದರಿಂದ ದೇಹದ ಮೂಳೆ ದುರ್ಬಲವಾಗುತ್ತದೆ, ಮುಂದೆ ಅವು ಸುಲಭವಾಗಿ ಸವೆಯಲಿಕ್ಕೆ ಇದು ನಾಂದಿ. ಹೀಗಾಗಿ ಮೂಳೆ ಫ್ರಾಕ್ಟರ್ ಆಗಬಹುದಾದ ಸಂಭಾವ್ಯತೆಯನ್ನು ತಳ್ಳಿಹಾಕಲಾಗದು. ಸಾಮಾನ್ಯವಾಗಿ ಇದು ಹೆಂಗಸರಲ್ಲಿ ಮುಟ್ಟಂತ್ಯ (ಮೆನೋಪಾಸ್)ದ ನಂತರ ಕಾಣಿಸುತ್ತದೆ, ಆಗ ದೇಹದಲ್ಲಿ ಈಸ್ಟ್ರೋಜೆನ್ ಹಾರ್ಮೋನಿನ ಉತ್ಪಾದನೆ ಕಡಿಮೆ ಆಗಿಹೋಗಿರುತ್ತದೆ. ಹಾಗೇಂತ ಇದು 30-40 ವಯಸ್ಸಲ್ಲಿ ಕಾಣಿಸಿಕೊಳ್ಳಬಾರದು ಅಂತೇನಿಲ್ಲ.
ಪರ್ಫೆಕ್ಟ್ ಡಯೆಟ್ ಪಾಲಿಸಿ
ನೀವು ಇಂಥ ಸಮಸ್ಯೆಯಿಂದ ದೂರವಾಗ ಬಯಸಿದರೆ, ಕ್ಯಾಲ್ಶಿಯಂ/ವಿಟಮಿನ್ ಡಿ ತುಂಬಿರುವಂಥ ಡಯೆಟ್ ಫಾಲೋ ಮಾಡಿ. ಸೂರ್ಯನ ಎಳೆ ಬಿಸಿಲು ಇರುವ ಹೊತ್ತಿನಲ್ಲಿ ಅಗತ್ಯವಾಗಿ ವಾಕಿಂಗ್ ಹೊರಡಿರಿ. ಜೊತೆಗೆ ಅತಿ ಭಾರದ ವಸ್ತುಗಳನ್ನು ಎತ್ತುವ ಪ್ರಯತ್ನ ಬೇಡ. ಸ್ಮೋಕಿಂಗ್, ಡ್ರಿಂಕ್ಸ್ ಖಂಡಿತಾ ಬೇಡ! ನಿಮ್ಮ ಮೂಳೆಗಳ ಆರೋಗ್ಯದ ಕಡೆ ಗಮನಹರಿಸಲು, ನಿಯಮಿತವಾಗಿ ಬೋನ್ ಡೆನ್ಸಿಟಿ ಟೆಸ್ಟ್ ಮಾಡಿಸುತ್ತಿರಿ. ಆಗ ಮಾತ್ರ ನೀವು ಹೆಲ್ದಿ ಯಂಗ್ ಮದರ್ ಆಗಬಲ್ಲಿರಿ.
30+ ನಂತರ ಹೆಂಗಸರು ಗಮನಿಸಬೇಕಾದುದು ಕೇವಲ ಇದೊಂದೇ ಸಮಸ್ಯೆ ಅಲ್ಲ! ಇಂಥ ಹಲವಾರು ಇತರ ಹೆಲ್ತ್ ಇಶ್ಯೂಸ್ ಇವೆ. ಆ ಬಗ್ಗೆ ಈಗ ವಿವರವಾಗಿ ತಿಳಿಯೋಣ :
ಅನಿಯಮಿತ ಮುಟ್ಟು
ಈಸ್ಟ್ರೋಜೆನ್‌ಪ್ರೊಜೆಸ್ಟೆರಾನ್ ಹಾರ್ಮೋನುಗಳ ಬದಲಾವಣೆಯ ಕಾರಣದಿಂದ, ಹೆಂಗಸರ ಮುಟ್ಟಿನ ಮೇಲೆ ಪ್ರಭಾವ ತಪ್ಪಿದ್ದಲ್ಲ. ಇದನ್ನೇ ಆಧುನಿಕ ವೈದ್ಯಕೀಯದಲ್ಲಿ ಎನ್ನುತ್ತಾರೆ. ಈ ಕಾರಣದಿಂದಲೇ ಮುಟ್ಟು ಸದಾ ಹಿಂದೆ ಅಥವಾ ಮುಂದಕ್ಕೆ ಹೋಗುತ್ತಿರುತ್ತದೆ. ಇದರಿಂದ ಹೆವಿ ಬ್ಲೀಡಿಂಗ್ ಸಮಸ್ಯೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಬಹಳ ಕಡಿಮೆಯೂ ಆಗಬಹುದು. ಒಮ್ಮೊಮ್ಮೆ ಕೆಲವು ತಿಂಗಳು ಮುಂದೂಡಲ್ಪಡುತ್ತದೆ.
ನಮ್ಮ ದೇಶದಲ್ಲಿ 25% ಹೆಂಗಸರು ಇಂಥ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಾರೆ. ಎಷ್ಟೋ ಜನರಿಗೆ ಮುಟ್ಟಿನ ದಿನಗಳು ಮುಂದೂಡಲ್ಪಟ್ಟು, ತಾನು ಬಸುರಿ ಆದೆನೇನೋ ಎಂದು ಭಯಪಡುವ ಸಂದರ್ಭ ಉಂಟು. ಆಮೇಲೆ ಇದ್ದಕ್ಕಿದ್ದಂತೆ ಮುಟ್ಟು ಮುಂದುವರಿಯುತ್ತದೆ. ಇದನ್ನೇ ಅಮೆನೋರಿಯಾ ಎನ್ನುತ್ತಾರೆ. ಇಂಥ ಸಮಸ್ಯೆ ಎದುರಿಸುತ್ತಿರುವ ಹೆಂಗಸರು ಸಾಮಾನ್ಯವಾಗಿ 30-40 ವಯಸ್ಸಿನರಾಗಿದ್ದು, ಪ್ರಿಮೆಚ್ಯೂರ್ ಓವೇರಿಯನ್ ಫೇಲ್ಯೂರ್ ಯಾ 0.1%ನಷ್ಟು ಕಾಡುತ್ತಿರುತ್ತದೆ.





