ಭಾರತೀಯ ಜನತಾ ಪಕ್ಷದ (BJP) ನಾಯಕ ಸಾಮ್ರಾಟ್ ಚೌಧರಿ ಅವರು ಇಂದು (ಬುಧವಾರ) ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಅವರು ಇಂದು ಬೆಳಗ್ಗೆ ಲೋಕಭವನ್‌ನಲ್ಲಿ ನಡೆದ ಸಮಾರಂಭದಲ್ಲಿ ಸಮ್ರಾಟ್ ಚೌಧರಿಗೆ ಮುಖ್ಯಮಂತ್ರಿಯಾಗಿ ಹಾಗೂ ಜೆಡಿಯು (JD(U)) ನಾಯಕರಾದ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಪ್ರಸಾದ್ ಯಾದವ್ ಅವರಿಗೆ ಸಚಿವ ಸಂಪುಟದ ಸದಸ್ಯರಾಗಿ ಪದಗ್ರಹಣ ಮತ್ತು ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿ ವಿಧಾನಸಭಾ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ನಂತರ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಯ ಪ್ರಮುಖ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್ ಹಾಗೂ ಎನ್‌ಡಿಎಗೆ ಸೇರಿದ ಎಲ್ಲಾ ಶಾಸಕರು ಉಪಸ್ಥಿತರಿದ್ದರು.
ಕಳೆದ ವಾರ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿ ರಾಜ್ಯಸಭಾ ಸದಸ್ಯರಾದ ನಂತರ, ತಕ್ಷಣವೇ ಸಾಮ್ರಾಟ್ ಚೌಧರಿ ಅವರನ್ನು ವಿಧಾನಸಭಾ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಸಾಮ್ರಾಟ್ ಚೌಧರಿ ಹಾಗೂ ಅವರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭಕ್ಕೆ ಬಿಜೆಪಿ ಹಿರಿಯ ನಾಯಕರು ಹಾಜರಿದ್ದರು. ಬಿಹಾರ ವಿಧಾನಸಭಾಧ್ಯಕ್ಷ ಪ್ರೇಮ್ ಕುಮಾರ್ ಉಪಸ್ಥಿತರಿದ್ದರು. ವಿಜಯೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಚೌಧರಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಕಳೆದ ಎರಡು ದಶಕಗಳಿಂದ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ನಿತೀಶ್ ಕುಮಾರ್, ರಾಜ್ಯಸಭೆಗೆ ಆಯ್ಕೆಯಾದ ಬಳಿಕ ನಿನ್ನೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ರಾಜಕೀಯ ಜೀವನ: ಸಾಮ್ರಾಟ್ ಚೌಧರಿ ಅವರು 1990ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1999ರಲ್ಲಿ ರಾಬ್ರಿ ದೇವಿ ಅವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ್ದರು. ಆದರೆ ವಯಸ್ಸು ಹಾಗೂ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯತ್ವ ಇಲ್ಲದ ಕಾರಣ ರಾಜೀನಾಮೆ ನೀಡಬೇಕಾಯಿತು.
ನಂತರ ಲಾಲು ಪ್ರಸಾದ್ ಅವರ ಆರ್‌ಜೆಡಿ ಪಕ್ಷವನ್ನು ತೊರೆದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾದರು. 2014ರಲ್ಲಿ ನಿತೀಶ್ ಕುಮಾರ್ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 2021ರಲ್ಲಿ ಪಂಚಾಯತ್ ರಾಜ್ ಸಚಿವರಾಗಿ, 2024ರಲ್ಲಿ ಎನ್‌ಡಿಎ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಈಗ ಬಿಹಾರದ ನೂತನ ಮುಖ್ಯಮಂತ್ರಿಯಾಗಿದ್ದಾರೆ.





