ಮನೆ ಮದ್ದಿನ ಜೊತೆಗೆ ನೀವು ನವಜಾತ ಶಿಶುವಿಗೆ ಯಾವ ಬಗೆಯ ಬೇಬಿ ಕೇರ್ ಪ್ರಾಡಕ್ಟ್ಸ್ ಖರೀದಿಸಬೇಕೆಂದು ನೋಡೋಣವೇ….?
ನವಜಾತ ಶಿಶುವಿನ ಆರೈಕೆ ಹೊಸ ತಾಯಂದಿರಿಗೆ ಸದಾ ಟೆನ್ಶನ್ ತಂದಿಡುತ್ತದೆ. ಹಳ್ಳಿಗಳ ಕಡೆಯಾದರೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಈ ಸಮಸ್ಯೆ ಕಾಡದು. ಆದರೆ ಮಹಾನಗರಗಳಲ್ಲಿ ವಿಭಕ್ತ ಕುಟುಂಬಗಳೇ ಪ್ರಧಾನ. ಹಾಗಾಗಿ ಹೊಸ ತಾಯಂದಿರು ಈ ನಿಟ್ಟಿನಲ್ಲಿ ಹೆಚ್ಚು ಯೋಚಿಸಿ ಉತ್ತಮ ಬೇಬಿ ಕೇರ್ ಪ್ರಾಡಕ್ಟ್ಸ್ ಆರಿಸಬೇಕು. ಅವುಗಳ ಆಯ್ಕೆಯ ಬಗ್ಗೆ ತಿಳಿಯೋಣ :
ಬೇಬಿ ಫೀಡಿಂಗ್ ಬಾಟಲ್ : ನವಜಾತ ಶಿಶುವಿಗೆ ಆಗಾಗ ಸ್ತನ್ಯಪಾನ ಮಾಡಿಸುತ್ತಿರಬೇಕು. ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ತಾಯಿ ನೀಡುವ ಎದೆಹಾಲು ಸಾಕಾಗುವುದಿಲ್ಲ. ಆಗ ಹಸುವಿನ ಹಾಲು ಉತ್ತಮ ಉಪಾಯ. ಅದನ್ನು ಕಾಯಿಸಿ, ಆರಿಸಿದ ನಂತರ ಫೀಡಿಂಗ್ ಬಾಟಲಿಗೆ ಹಾಕಿ ಮಗುವಿಗೆ ಊಡಿಸಬೇಕು. ಹೀಗಾಗಿ ಮಗುವಿನ ಅಗತ್ಯ ಸಾಮಗ್ರಿಗಳಲ್ಲಿ ಇದು ಬಲು ಮುಖ್ಯ. ಇದು ಸದಾ ಬ್ರಾಂಡೆಡ್ ಆಗಿರಬೇಕೆಂಬುದನ್ನು ಗಮನಿಸಿ, ಅದು ಸಾಫ್ಟ್ ಆಗಿರಬೇಕು. ದುಬಾರಿ ಬಾಟಲಿ ಮಾತ್ರವೇ ಶ್ರೇಷ್ಠ ಎಂದು ಭಾವಿಸದಿರಿ. ಅದರ ಗುಣಮಟ್ಟವನ್ನು ಆಮೂಲಾಗ್ರವಾಗಿ ಪರಿಶೀಲಿಸಿ ನಂತರ ಆರಿಸಿಕೊಳ್ಳಿ.
ಡೈಪರ್ಸ್ : ನಗರಗಳಲ್ಲಿ ಮಗುವಿನ ಬೆಡ್ ಶೀಟ್, ಇನ್ನಿತರ ಬಟ್ಟೆಬರೆ ಹೆಚ್ಚು ಗಲೀಜಾಗಬಾರದು ಎಂದು ಮಗು ಎಲ್ಲೆಂದರಲ್ಲಿ 1-2 ಮಾಡಿಕೊಳ್ಳದಂತೆ ಅದಕ್ಕೆ ಡೈಪರ್ಸ್ ತೊಡಿಸುವುದು ರೂಢಿ. 1 ಡೈಪರ್ ಸುಮಾರು 3-4 ಗಂಟೆಗಳ ಕಾಲ ಮಗುವಿಗೆ ನೆರವಾಗುತ್ತದೆ. ಅದು ಬಯಸಿದಾಗ ಅದರಲ್ಲಿ ಮಲಮೂತ್ರ ವಿಸರ್ಜಿಸಿಕೊಳ್ಳಬಹುದು. ಹೀಗಾಗಿ ಇಂಥ ಶಿಶುಗಳಿಗಾಗಿ ಪ್ರತಿದಿನ 6-7 ಡೈಪರ್ಸ್ ಬೇಕಾಗುತ್ತದೆ. ಮಗುವಿಗೆ ಒಂದಿಷ್ಟೂ ಅನಾನುಕೂಲ ಆಗದಂಥ ಡೈಪರ್ಸ್ ನ್ನೇ ಆರಿಸಿ. ಅದು ಮಗುವಿಗೆ ಚುಚ್ಚುವಂತಿರಬಾರದು. ಹಾಗೆಯೇ ವಿಸರ್ಜಿತ ದ್ರವವನ್ನು ಸುಲಭವಾಗಿ ಹೀರಿಕೊಳ್ಳುವಂತಿರಬೇಕು. ಅದರಿಂದ ರಾಶೆಸ್ ಸಮಸ್ಯೆ ಬರಬಾರದು ಎಂಬುದೇ ಮುಖ್ಯ.
ಸ್ಕಿನ್ ಕೇರ್ ಪ್ರಾಡಕ್ಟ್ಸ್ : ನವಜಾತ ಶಿಶುವಿನ ಚರ್ಮ ಅತಿ ಸೆನ್ಸಿಟಿವ್ ಆಗಿರುತ್ತದೆ. ಹೀಗಾಗಿ ನಾವು ಒಂದಿಷ್ಟು ನಿರ್ಲಕ್ಷ್ಯ ವಹಿಸಿದರೂ, ಅಗ್ಗದ ಬೇಬಿ ಪ್ರಾಡಕ್ಟ್ಸ್ ಮಗುವಿಗೆ ತಕ್ಷಣ ಅಲರ್ಜಿ, ರಾಶೆಸ್ ಮೂಡಿಸಬಹುದು. ಮಗುವಿಗಾಗಿ ಡೈಫ್ರೀ, ಫ್ರಾಗ್ರೆನ್ಸ್ ಫ್ರೀ, ಮೆಡಿಕಲಿ ಟೆಸ್ಟೆಡ್ ಆಗಿರುವಂಥದ್ದನ್ನೇ ಖರೀದಿಸಿ. ಈ ಪ್ರಾಡಕ್ಟ್ಸ್ ಕೊಳ್ಳುವಾಗ ಅದರ ನಿಗದಿತ ಸಮಯದ ಲೇಬಲ್ (ಎಕ್ಸ್ ಪೈರಿ ಡೇಟ್) ಚೆನ್ನಾಗಿ ಗಮನಿಸಿ. ಇದು ಬೇಬಿ ಆಯಿಲ್, ಲೋಶನ್, ಸೋಪ್, ಶಾಂಪೂ ಎಲ್ಲದಕ್ಕೂ ಅನ್ವಯಿಸುತ್ತದೆ.
ಸರಿಯಾಗಿ ನೋಡಿ ಮಾಡಿ ಬೇಬಿ ಪ್ರಾಡಕ್ಟ್ಸ್ ಆರಿಸದಿದ್ದರೆ ಮಗುವಿಗೆ ಹಾನಿ ತಪ್ಪಿದ್ದಲ್ಲ. ಬೇಬಿ ಕ್ರೀಂ ಆರಿಸುವಾಗ ಅದರ ಘಟಕಗಳತ್ತ ಅಗತ್ಯವಾಗಿ ಒಮ್ಮೆ ಕಣ್ಣಾಡಿಸಿ. ತಜ್ಞರು ಈ ಕುರಿತಾಗಿ, ಪ್ರಟಿ ಕ್ರೀಂ ಆರಿಸಬೇಕೆಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಹಾರ್ಶ್ ಕೆಮಿಕಲ್ಸ್ ನ ಪ್ರಮಾಣ ಇರುವುದಿಲ್ಲ. ಇದು ಮಗುವಿನ ಸ್ಕಿನ್ ಮಾಯಿಶ್ಚರ್ ಗೆ ಪ್ರಾಡಕ್ಟ್ಸ್ ಆಯ್ಕೆ ಎನಿಸುತ್ತದೆ.
ಬೇಬಿ ಸೋಪ್ ಆರಿಸುವ ಬಗೆ ಹೇಗೆ? : ಮಗುವಿಗಾಗಿ ಬೇಬಿ ಸೋಪ್ ಆರಿಸುವಾಗ, ಕೆಲವು ವಿಷಯ ನೆನಪಿಟ್ಟುಕೊಳ್ಳಿ. ಯಾವುದೇ ಸೋಪ್ ಯಾ ಶ್ಯಾಂಪೂ ಇರಲಿ, ತಂತಾನೇ ನೈಸರ್ಗಿಕ ಆಗಿರುವುದಿಲ್ಲ, ಎಲ್ಲವೂ ಕೃತಕ ತಯಾರಿಯೇ ಹೌದು. ಹೀಗಾಗಿ ಬೇಬಿ ಸೋಪ್ ನಲ್ಲೂ ಹಲವಾರು ಕೆಮಿಕಲ್ಸ್ ಇದ್ದೇ ಇರುತ್ತದೆ. ಮಗುವಿನ ಚರ್ಮ ಅತಿ ಮೃದುವಾದ್ದರಿಂದ, ಅದರ ಸೋಪಿನಲ್ಲಿ ಹಾರ್ಶ್ ಕೆಮಿಕಲ್ಸ್ ಇರಲೇಬಾರದು. ಹೀಗಾಗಿ ಸರ್ಟಿಫೈಡ್ ಪ್ರಾಡಕ್ಟ್ಸ್ ನ್ನೇ ಖರೀದಿಸಿ.
ಬೇಬಿ ಪೌಡರ್ ಹೇಗಿರಬೇಕು? : ಬೇಬಿ ಪೌಡರ್ ನ ಸುವಾಸನೆ ಅತಿ ತೀಕ್ಷ್ಣವಾಗಿರಬಾರದು, ಅಂಥದ್ದನ್ನೇ ಆರಿಸಿ. ಅದರಲ್ಲಿ ಹೆಚ್ಚಿನ ಕೆಮಿಕಲ್ಸ್, ತೀಕ್ಷ್ಣ ಸುವಾಸನೆ ಇದ್ದರೆ, ಮಗುವಿಗೆ ನವೆ, ತುರಿಕೆ, ಕಡಿತ, ರಾಶೆಸ್ ತಪ್ಪಿದ್ದಲ್ಲ. ಆ ಪೌಡರ್ ಬಳಸಿದ ನಂತರ ಮಗುವಿನ ಮೈ ಮೇಲೆ ಕೆಂಪು ಗಂಧೆ, ದದ್ದುಗಳಾಗಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಹಾಗಾದಾಗ ಅಗತ್ಯ ವೈದ್ಯರ ಸಲಹೆ ಪಡೆಯಿರಿ. ಸ್ನಾನ ಆದ ನಂತರ ಮಗುವಿನ ಮೈ ಚೆನ್ನಾಗಿ ಒಣಗಲಿ, ನಂತರವೇ ಪೌಡರ್ ಸಿಂಪಡಿಸಿ.
ಬೇಬಿ ಆಯಿಲ್ : ಇದರ ಆಯ್ಕೆಗೂ ಅದೇ ಮೂಲ. ನೀವು ಆರಿಸುವ ಆಯಿಲ್ ನಲ್ಲಿ ಹಾರ್ಶ್ ಕೆಮಿಕಲ್ಸ್ ಇರಬಾರದು, ಅದರಿಂದ ಮಗುವಿನ ಸ್ಕಾಲ್ಪ್ ಗೆ ದದ್ದು, ಗುಳ್ಳೆ, ನವೆ, ತುರಿಕೆಗಳ ಕಾಟ ಬರಬಾರದು. ಮಗುವಿಗೆ ಎಂದಿನ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯ ಬಳಕೆ ಉತ್ತಮ ಎನಿಸುತ್ತದೆ. ಮಸಾಜ್ ಮಾಡುವುದಕ್ಕೆ ಸಹ ಇವೇ ಆಯಿಲ್ ಬಳಸಿದರೆ ಅಡ್ಡಿ ಇಲ್ಲ.
ಮಗುವಿಗಾಗಿ ವಿಶೇಷ ಟವೆಲ್ : ಸ್ನಾನದ ನಂತರ ಅಥವಾ ಮೈ ಒರೆಸಲಿಕ್ಕೂ ಸರಿ, ಮಗುವನ್ನು ಸುತ್ತಿಕೊಳ್ಳಲು ಅತಿ ಮೃದುವಾದ ಬಟ್ಟೆಯ ಟವೆಲ್ ಇದ್ದರೆ ಸರಿ. ತಾಯಿಯ ಗರ್ಭದಿಂದ ಹೊರಬಂದ ಮಗು, ಸುತ್ತಲ ಪರಿಸರದ ತಾಪಮಾನಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕು. ಹೀಗಾಗಿ ಮೊದಲ 3-4 ತಿಂಗಳು ಅದಕ್ಕೆ ಅತಿ ಸಾಫ್ಟ್ ಆದ ಟವೆಲ್ ನಿಂದ ಒರೆಸಿರಿ, ಬರಿಮೈ ಸುತ್ತಿಕೊಂಡು ಬಂದು, ಮಡಿ ಮೇಲೆ ಹಾಕಿಕೊಂಡು ನಿಧಾನವಾಗಿ ಒರೆಸಿರಿ. ಸಾಂಬ್ರಾಣಿ ಹೊಗೆ ನೀಡಿ. ಇಂಥ ಬೆಚ್ಚಗಿನ ಟವೆಲ್ ಅದಕ್ಕೆ ಹೆಚ್ಚಿನ ಆನಂದ ನೀಡುತ್ತದೆ.
ಥರ್ಮಾಮೀಟರ್ : ಮಗುವಿನ ಆರೋಗ್ಯ ಆಗಾಗ ಏರುಪೇರಾಗುತ್ತಲೇ ಇರುತ್ತದೆ. ಅಗತ್ಯಕ್ಕಿಂತ ಅದರ ಮೈ ತುಸು ಹೆಚ್ಚು ಉಷ್ಣ ಎನಿಸಿದರೆ, ತಕ್ಷಣ ಒಂದು ಬೇಬಿ ಡಿಜಿಟಲ್ ಥರ್ಮಾಮೀಟರ್ ಬಳಸಿ, ಅದರ ದೇಹದ ತಾಪಮಾನ ಪರೀಕ್ಷಿಸಿ. ಬದಲಾಗುವ ಋತುವಿಗೆ ತಕ್ಕಂತೆ, ಚಳಿ ಮಳೆಯ ಕಾರಣ ಮಗುವಿನ ದೇಹದ ಉಷ್ಣತೆ ಬದಲಾಗುವುದು ಸಹಜ. ಅದು ಆತಂಕ ಪಡುವಷ್ಟು ಜ್ವರದ ಮಟ್ಟ ಮುಟ್ಟಿಲ್ಲ ತಾನೇ ಎಂದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ. ಅದರಲ್ಲಿ ವ್ಯತ್ಯಾಸ ಕಂಡುಬಂದಾಗ, ತಕ್ಷಣ ವೈದ್ಯರ ಬಳಿ ಧಾವಿಸಿ, ಅದಕ್ಕೆ ಚಿಕಿತ್ಸೆ ಕೊಡಿಸಿರಿ.
– ಕೆ. ಚಂದ್ರಕಲಾ





