ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ ಹಾಗೂ ವಿಮಾನ ಸೇವೆಗಳ ಅನಿಶ್ಚಿತತೆ ನಡುವೆ ಇರಾನ್ ಗೆ ಅನಗತ್ಯ ಸಂಚಾರ ಮಾಡದಂತೆ ಭಾರತೀಯ ನಾಗರಿಕರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ಭಾರತೀಯರು ಯಾವುದೇ ರೀತಿಯಲ್ಲಿ ಇರಾನ್‌ಗೆ ಪ್ರಯಾಣಿಸುವುದನ್ನು ತಡೆಯಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. ಅಲ್ಲದೆ, ಈಗಾಗಲೇ ದೇಶದಲ್ಲಿರುವವರು ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಹೊರಡುವಂತೆ ಸಲಹೆ ನೀಡಿದೆ.

ಭಾರತ ಮತ್ತು ಇರಾನ್ ನಡುವೆ ಕೆಲವು ವಿಮಾನಗಳು ಪ್ರಾರಂಭವಾಗುವ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕರು ವಿಮಾನ ಅಥವಾ ಭೂ ಮೂಲಕ ಇರಾನ್‌ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ವಾಯುಪ್ರದೇಶದ ನಿರ್ಬಂಧಗಳು ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಗಳು ಇರಾನ್‌ಗೆ ಮತ್ತು ಅಲ್ಲಿಂದ ಹೊರಡುವ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

“ಪ್ರಸ್ತುತ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಗೊತ್ತುಪಡಿಸಿದ ಭೂ ಗಡಿ ಮಾರ್ಗಗಳ ಮೂಲಕ ದೇಶವನ್ನು ತೊರೆಯಬೇಕು ಎಂದು ಹೇಳಲಾಗಿದೆ. ಇದು ರಾಯಭಾರ ಕಚೇರಿಯೊಂದಿಗೆ ಸಮನ್ವಯಗೊಂಡಿರುತ್ತದೆ. ನೆರವಿಗಾಗಿ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳು: +989128109115; +989128109102; +989128109109; +989932179359. ಇಮೇಲ್: cons.tehran@mea.gov.in ಸಂಪರ್ಕಿಸಬಹುದು ಎಂದು ಹೇಳಿದೆ.

ಪ್ರಾದೇಶಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಇರಾನ್‌ನಿಂದ ಬೇಗನೆ ಹೊರಹೋಗುವಂತೆ ಇತ್ತೀಚೆಗಷ್ಟೇ ರಾಯಭಾರ ಕಚೇರಿ ಇದೇ ರೀತಿಯ ಸಲಹೆನೀಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ