ನೀಳ್ಗಥೆ –  ಶೇಖರಗೌಡ ವೀ..

ತುಂಬು ಹರೆಯದಲ್ಲಿ ರೂಪ್ಲಿ ತನಗರಿವಿಲ್ಲದೆ ಆಂಗ್ಲ ಸಾಹೇಬನಿಗೆ ಮನಸೋತಳು. ನಂತರ ಅವಳ ಮಗು ವಿದೇಶದಲ್ಲಿ ಬೆಳೆಯುವಂತಾಯಿತು. ಮುಂದೆ ಮಗನಿಗೆ ತಾಯಿಯ, ಜನ್ಮ ಭೂಮಿಯ ಸಾಂಗತ್ಯ ಸಿಗುವಂತಾಯಿತೇ…..?

ಜೋನ್ಸ್ ತನ್ನ ಜೀವನ ಸಂಗಾತಿ ಲಿಲ್ಲಿಯ ಜೊತೆಗೆ ಲಂಡನ್‌ ನಿಂದ ಪುಣ್ಯ ಭೂಮಿ ಭಾರತ ದೇಶಕ್ಕೆ ಬಂದಿದ್ದು ಇದೇ ಮೊದಲು. 55ರ ಹರೆಯ ಜೋನ್ಸ್ ಗಾದರೆ, ಲಿಲ್ಲಿಗೆ 53. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಲ ಸ್ಪರ್ಶಿಸಿದಾಗ, ಭೂದೇವಿಗೆ ಹಣೆಹಚ್ಚಿ ನಮಸ್ಕರಿಸಿ ಧನ್ಯತಾಭಾವ ವ್ಯಕ್ತಪಡಿಸಿದ್ದ.

ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಹದಿನೈದು ದಿನಗಳ ಸುತ್ತಾಟವಿತ್ತು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ ವಿದೇಶಿ ದಂಪತಿಗಳು ಮರುದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಕರ್ನಾಟಕದ ಉತ್ತರ ದಿಕ್ಕಿನತ್ತ ಪ್ರಯಾಣ ಆರಂಭಿಸಿದ್ದರು. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸುಗೂರಿಗೆ ಬಂದಾಗ ಮಧ್ಯಾಹ್ನ ಹನ್ನೆರಡೂವರೆ. ಸತತ ಪ್ರಯಾಣದಿಂದ ತುಸು ಆಯಾಸವಾಗಿದ್ದರೂ ಜೋನ್ಸ್ ಎದೆಯೊಳಗೆ ಅದೇನೋ ತವಕ, ತಳಮಳ, ತಲ್ಲಣ, ಚಡಪಡಿಕೆ.

`ಮಯೂರ ರೆಸಿಡೆನ್ಸಿ’ಯಲ್ಲಿ ರೂಮೊಂದನ್ನು ಪಡೆದುಕೊಂಡು ಒಂದು ತಾಸು ವಿಶ್ರಾಂತಿ ಪಡೆದರು. ನಂತರ ಊಟ ಮುಗಿಸಿ ಹೋಟೆಲ್ ‌ಮಾಲೀಕರೊಂದಿಗೆ ಮಾತಾಡಿ ಜಲದುರ್ಗಕ್ಕೆ ಹೋಗುವ ದಾರಿ ಕೇಳಿಕೊಂಡ ಜೋನ್ಸ್, ಜಲದುರ್ಗದ ಬಗ್ಗೆ ತಿಳಿದಿರುವ ಒಬ್ಬ ಹುಡುಗನನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡು, ಅವರು ಕಳುಹಿಸಿದ ಹುಡುಗನನ್ನು ತಮ್ಮೊಂದಿಗೆ ಕರೆದುಕೊಂಡು ಪ್ರಯಾಣ ಶುರು ಮಾಡಿದರು.

ಕಾರು ಲಿಂಗಸುಗೂರು ಪಟ್ಟಣದಿಂದ ಜಲದುರ್ಗದ ಹಾದಿ ಹಿಡಿಯಿತು. ಟ್ಯಾಕ್ಸಿಯ ಚಾಲಕ ತುಂಬಾ ಸಹಕಾರಿಯಾಗಿದ್ದ. ಅಗಲವಾದ ರಸ್ತೆಯಿಂದ ಕಿರಿದಾದ ರಾಜ್ಯ ಹೆದ್ದಾರಿಯಲ್ಲಿ ಪಯಣ ಸಾಗಿತು. ರಸ್ತೆ ಪಕ್ಕದ ಸಣ್ಣಪುಟ್ಟ ಗಿಡಗಂಟಿಗಳು, ಅಲ್ಲಲ್ಲಿ ಡಾಂಬರ್‌ ಕಿತ್ತು ಹೋಗಿ ತಗ್ಗು ದಿಣ್ಣೆಗಳನ್ನು ಸೃಷ್ಟಿಸಿದ್ದ ಕಿರಿದಾದ ರಸ್ತೆಯ ಚಿತ್ರವಿಚಿತ್ರ ತಿರುವುಗಳನ್ನು ಕಣ್ತುಂಬಿಕೊಂಡ ದಂಪತಿಗಳು ಪರಸ್ಪರ ಅಚ್ಚರಿ ವ್ಯಕ್ತಪಡಿಸತೊಡಗಿದರು.

ಜಲದುರ್ಗ ಸಮೀಪಿಸುತ್ತಿದ್ದಂತೆ ಶುರುವಾದ ಲಘು ಅರಣ್ಯ ಪ್ರದೇಶ ತಮ್ಮನ್ನು ಸ್ವಾಗತಿಸುತ್ತಿರುವ ಭಾವ ಜೋನ್ಸ್ ನ ಎದೆಯಂಗಳ ಹೊಕ್ಕು ಜೀವನೋತ್ಸಾಹ ಚಿಗುರಿಸಿದ ಅನುಭವ.

“ಲಿಲ್ಲಿ, ಈ ಥಾರ್ನೀ ಪ್ಲಾಂಟ್ಸ್ ನೋಡು, ಚಿಕ್ಕಚಿಕ್ಕವಿದ್ದರೂ ತುಂಬಾ ಆಕರ್ಷಣೀಯಾಗಿವೆಯಲ್ಲವೇ….? ಇದರ ಎಲೆಗಳು ತುಂಬಾ ಚಿಕ್ಕವು. ಏಕೆ ಗೊತ್ತಾ….?” ಎಂದ ಜೋನ್ಸ್ ಕುತೂಹಲದಿಂದ ಕೇಳಿದ.

“ನಾನೇನು ಬೊಟಾನಿಕಲ್ ಸೈಂಟಿಸ್ಟಾ….?” ಎಂದು ಲಿಲ್ಲಿ ಕತ್ತು ಕೊಂಕಿಸಿ ವೈಯಾರದಿಂದ ಉಲಿದಳು.

o-pinjra-khol-story1

“ಅಷ್ಟೂ ಗೊತ್ತಾಗ್ಲಿಲ್ವೇ…..? ಇಲ್ಲಿ ಮಳೆ ತುಂಬಾ ಕಡಿಮೆ. ಸಿಕ್ಕಷ್ಟೇ ನೀರನ್ನು ಬಳಸಿಕೊಂಡು ಈ ಗಿಡಮರಗಳು ಬದುಕಿಕೊಂಡಿವೆ. ಅದಕ್ಕೇ ಇವುಗಳ ಲೀಫ್‌ ಸ್ಟ್ರಕ್ಚರ್‌ ಹೀಗೆ ಚಿಕ್ಕಚಿಕ್ಕದಾಗಿದೆ,” ಎಂದು ಸಮಾಧಾನದಿಂದ ಉತ್ತರಿಸಿದ ಜೋನ್ಸ್.

“ಹೌದಾ…? ನೀನೆಷ್ಟಾದರೂ ಬೊಟಾನಿಕ್‌ ಸೈಂಟಿಸ್ಟ್ ಅಲ್ವಾ….” ಎಂದು ಲಿಲ್ಲಿ ನಗೆ ಮಲ್ಲಿಗೆ ಪ್ರದರ್ಶಿಸಿದರು.

ಅಷ್ಟರಲ್ಲಿ ನೀರಿನ ಭೋರ್ಗರೆತದ ಶಬ್ದ. ಕಿರಿದಾದ ದಾರಿಯಲ್ಲಿ ತಿರುವುಗಳನ್ನು ದಾಟಿಕೊಂಡು ತುಸು ದೂರ ಬರುತ್ತಿದ್ದಂತೆ ಕೃಷ್ಣೆಗೆ ಅಡ್ಡವಾಗಿ ಕಟ್ಟಿದ್ದ ಸೇತುವೆ ಎದುರಾಯಿತು. ಮೈದುಂಬಿಕೊಂಡು ಭೋರ್ಗರೆಯುತ್ತಿದ್ದಳು ಕೃಷ್ಣೆ.

ನಾರಾಯಣಪುರಕ್ಕೆ ಸಮೀಪ ನದಿದಂಡೆಯ ಮೇಲಿರುವ, `ಛಾಯಾ ಭಗವತಿ ಮಾತೆ’ಯ ದೇವಸ್ಥಾನ ದಾಟಿದ ನಂತರ ಜಲದುರ್ಗದ ಹತ್ತಿರ ಭೋರ್ಗರೆಯುವ ಕೃಷ್ಣೆ ಪ್ರಪಾತವನ್ನು ಸೃಷ್ಟಿಸಿದ್ದಾಳೆ. ಜಲದುರ್ಗವೆಂದರೆ ಅಕ್ಷರಶಃ ಅನ್ವರ್ಥಕವಾದ ಹೆಸರು. ಪ್ರಪಾತದ ಮೇಲ್ಬದಿಗೆ ಕೃಷ್ಣೆಯ ಪಾತ್ರ ಬಲು ಚಿಕ್ಕದು. ನಾರಾಯಣಪುರದಿಂದ ಸುಮಾರು ಏಳೆಂಟು ಕಿ.ಮೀ. ಕ್ರಮಿಸಿ ಜಲದುರ್ಗದ ಹತ್ತಿರಕ್ಕೆ ಬರುವಷ್ಟರಲ್ಲಿ ಪ್ರವಾಹದ ವೇಗ ಹೆಚ್ಚುತ್ತಾ ಬರುತ್ತದೆ.

ಹಾಗೇ ಹೆಚ್ಚುತ್ತಾ ಬಂದ ರಭಸದ ಕೃಷ್ಣೆಯ ಪ್ರವಾಹ ಎದುರಾದ ಗುಡ್ಡಕ್ಕೆ ಹಾಯ್ದು, ಕವಲೊಡೆದು ಎರಡು ಸರಳುಗಳಾಗಿ ಗುಡ್ಡ ಮತ್ತು ಗುಡ್ಡಕ್ಕೆ ಹೊಂದಿಕೊಂಡಿರುವ ಜಲದುರ್ಗವನ್ನು ಸುತ್ತುವರಿದಿರುವ ದೃಶ್ಯ ರುದ್ರರಮಣೀಯವಾಗಿತ್ತು. ಈ ಗುಡ್ಡವನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ಕೃಷ್ಣಾ ನದಿ ಅದನ್ನು ದುರ್ಭೇದ್ಯ ಸ್ಥಾನವನ್ನಾಗಿ ಮಾಡಿದೆ. ಈ ಗುಡ್ಡದ ಮೇಲಿನ ಪ್ರಸ್ಥಭೂಮಿಯಲ್ಲಿ ಬಹು ವರ್ಷಗಳ ಹಿಂದೆ ಚಾಲುಕ್ಯರು ಕಟ್ಟಿಸಿದ ಕೋಟೆಯೊಂದಿದ್ದು ಅದನ್ನೇ ಅವರ ನಂತರ ಬಂದ ವಿಜಾಪುರದ ಸುಲ್ತಾನರು ವಿಸ್ತರಿಸಿ, ರಾಜಕೀಯ ಕೈದಿಗಳ ನಿವಾಸಕ್ಕಾಗಿ ಮೀಸಲಿಟ್ಟಿದ್ದರು.

ಕಂದಕದಂತಿರುವ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಈ ಕೋಟೆ ವರ್ಷದ ಸದಾ ಕಾಲದಲ್ಲಿಯೂ ದುರ್ಗಮವಾಗಿ ಉಳಿದುಬಿಟ್ಟಿದೆ. ಮಳೆಗಾಲದಲ್ಲಿ ಸುತ್ತಲಿನ ಬೆಟ್ಟಗುಡ್ಡಗಳು ಹಸಿರು ಹೊದಿಕೆ ಹೊದ್ದುಕೊಂಡು ಪರಿಸರ ಪ್ರೇಮಿಗಳ ಮೈಮನಗಳನ್ನು ತಣಿಸುತ್ತವೆ.

ದೂರದ ಗಮ್ಯ ಸೇರುವ ತವಕದಲ್ಲಿ ಕೃಷ್ಣಾ ನದಿ ಮೈದುಂಬಿಕೊಂಡು ರಭಸವಾಗಿ ಹರಿಯುತ್ತಿದ್ದಳು. ಕಾರು ಸೇತುವೆಯ ಮೇಲೆ ಚಲಿಸುತ್ತಿದ್ದಂತೆ, “ವಾವ್‌….! ಅಮೇಝಿಂಗ್‌….! ನೋಡಲೆರಡು ಕಣ್ಣುಗಳು ಸಾಲವು….” ಎಂದು ಲಿಲ್ಲಿ ಖುಷಿ ಖುಷಿಯಿಂದ ಚೀತ್ಕಾರ ಹಾಕಿದಳು.

“ರಿಯಲೀ, ಡೆಡ್ಲೀ ವಂಡರ್‌ ಫುಲ್….! ಮೈ ಸೆಲ್ಯೂಟ್‌ ಟು ಕೃಷ್ಣೆ….” ಎಂದು ಹರ್ಷೋದ್ಗಾರದಿಂದ ಜೋನ್ಸ್ ಸಂಭ್ರಮಿಸಿದ.

ಸೇತುವೆಯ ಮೇಲೆ ಕಾರು ಚಲಿಸುವಾಗ ಉಂಟಾಗುತ್ತಿದ್ದ ಲಯಭರಿತ ಧಡ್‌ ಧಡ್‌ ಶಬ್ದ ಇಬ್ಬರೆದೆಗಳಲ್ಲೂ ಸಂತಸದ ಕ್ಷಣಗಳನ್ನು ಸೃಷ್ಟಿಸತೊಡಗಿತ್ತು. ಕಾರು ಸೇತುವೆ ದಾಟುತ್ತಿದ್ದಂತೆ ಜೊತೆಗೆ ಬಂದಿದ್ದ ಹುಡುಗ, “ಸರ್‌, ಮೊದಲು ಜಲದುರ್ಗದ ಕೋಟೆ ನೋಡುವಿರಾ…. ಅಥವಾ…..?” ಎಂದು  ರಾಗವೆಳೆದ.

“ಇಲ್ಲ ಇಲ್ಲ…. ಮೊದಲು ಜಲದುರ್ಗಾ ತಾಂಡಾಕ್ಕೆ ಕರೆದುಕೊಂಡು ಹೋಗು,” ಎಂದು ಜೋನ್ಸ್ ಪ್ರತಿಕ್ರಿಯಿಸಿದ.

ಹುಡುಗ ಚಾಲಕನಿಗೆ ನಿರ್ದೇಶನ ನೀಡಿದ. ಹುಡುಗ ಕನ್ನಡದಲ್ಲಿ ಮಾತಾಡುತ್ತಿದ್ದ. ಕಾರಿನ ಚಾಲಕ ಅದನ್ನು ಇಂಗ್ಲಿಷ್‌ ಗೆ ತರ್ಜುಮೆ ಮಾಡಿ ಜೋನ್ಸ್ ಗೆ ಹೇಳುತ್ತಿದ್ದ. ಕಾರು ಜಲದುರ್ಗಾ ತಾಂಡಾಕ್ಕೆ ಬಂದು ನಿಲ್ಲಲು ಬಹಳ ಸಮಯ ಹಿಡಿಯಲಿಲ್ಲ.

ತಾಂಡಾದಲ್ಲಿ ಬರೀ 50-60 ಪುಟ್ಟ ಪುಟ್ಟ ಮನೆಗಳಷ್ಟೆ. ಕಾರಿನಿಂದ ಕೆಳಗಿಳಿದ ಜೋನ್ಸ್ ತನ್ನ ಕೈಯಲ್ಲಿದ್ದ ಪುಟ್ಟ ಹ್ಯಾಂಡ್ ಬ್ಯಾಗಿನಿಂದ ಕಪ್ಪು ಬಿಳುಪಿನ ಫೋಟೋವೊಂದನ್ನು ತೆಗೆದು ಡ್ರೈವರ್‌ ಮತ್ತು ಹುಡುಗನಿಗೆ ತೋರಿಸುತ್ತಾ, “ಈ ಫೋಟೋದಲ್ಲಿರುವವರು ರೂಪ್ಲಿಬಾಯಿ ಅಂತ. ಇವರಿಗೀಗ ಸುಮಾರು 75 ವರ್ಷ ವಯಸ್ಸಿರಬಹುದು. ಇವರ ಮನೆಯನ್ನು ಹುಡುಕಬೇಕು,” ಎಂದು ಕೇಳಿದ.

ಅಷ್ಟರಲ್ಲಿ ಸುತ್ತಮುತ್ತಲಿನ ಮನೆಯವರು ಅಲ್ಲಿಗೆ ಜಮಾಯಿಸಿದರು. ಅವರ ಕುತೂಹಲಭರಿತ ಕಣ್ಣುಗಳು ವಿದೇಶಿಗರ ಮೇಲೆ ಹರಿದಾಡತೊಡಗಿದವು. ಹಳ್ಳಿಗರಿಗೆ ಜೋನ್ಸ್ ವಿನೀತನಾಗಿ ನಮಸ್ಕರಿಸಿದ. ಅಷ್ಟರಲ್ಲಿ ಚಾಲಕ ಜೋನ್ಸ್ ನ ಕೈಯಲ್ಲಿದ್ದ ಫೋಟೋವನ್ನು ಅವರಿಗೆ ತೋರಿಸುತ್ತಾ, “ರೂಪ್ಲಿಬಾಯಿ ಎನ್ನುವ ಇವರು, ಈ ತಾಂಡಾದಲ್ಲಿದ್ದಾರೆಯೇ….? ಇದ್ದರೆ ಅವರ ಮನೆಗೆ ಕರೆದುಕೊಂಡು ಹೋಗಬೇಕಾಗಿ ವಿನಂತಿ,” ಎಂದು ಮನವಿ ಮಾಡಿಕೊಂಡ.

`ಇವರೇಕೆ ರೂಪ್ಲಿಬಾಯಿಯನ್ನು ಹುಡುಕಿಕೊಂಡು ಬಂದಿದ್ದಾರೆ….’ ಎಂಬ ಕುತೂಹಲ, ಹೆದರಿಕೆ ಅಲ್ಲಿನವರಿಗೆ ಉಂಟಾಯಿತು. ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸಿ ತಿರುಗಿಸಿ ನೋಡತೊಡಗಿದರು. ಜೋನ್ಸ್ ಮತ್ತು ಲಿಲ್ಲಿಯರನ್ನು ತೆರೆದ ಬಾಯಿ, ಬಿಟ್ಟ ಕಣ್ಣುಗಳಿಂದ ನೋಡತೊಡಗಿದರು. ಫೋಟೋದಲ್ಲಿದ್ದ ರೂಪ್ಲಿಬಾಯಿಗೆ 18-20ರ ಹರೆಯ ಇರಬಹುದೆಂದು ಅಂದಾಜಿಸತೊಡಗಿದರು.

70ರ ಆಜುಬಾಜಿನ ಹಿರಿಯ ನಾಗರಿಕನೊಬ್ಬ, “ಸಾಹೇಬ್ರಾ, ಈ ಫೋಟೋದಾಗಿರಾಕಿ ನಮ್ಮ ಖೇಮ್ಲ್ಯಾ ನಾಯ್ಕನ ಮಗ್ಳು ರೂಪ್ಲಿಬಾಯಿನಾ. ಇದು ಅವಳ ಹಂಗಾಮದಾಗಿದ್ದಾಗಿನ ಫೋಟೋ. ಇವ್ಳ ಮನಿ ಅಲ್ಲೈತಿ ಬನ್ರಿ, ತೋರಿಸ್ತೀನಿ….” ಎಂದು ಅವರನ್ನು ಕರೆದುಕೊಂಡು ಹೊರಟ.

ಜೋನ್ಸ್ ನ ಎದೆಯಲ್ಲಿ ಮಿಂಚಿನ ಸೆಳಕು, ಹೃದಯದಲ್ಲಿ ಸಂತಸದ ಬುಗ್ಗೆ ಚಿಮ್ಮಿದ ಅನುಭವ. ಅವ್ಯಕ್ತ ಭಾವನೆಗಳ ಮಿಳಿತ. ನೂರು ಹೆಜ್ಜೆ ಹಾಕಿರಲಿಕ್ಕಿಲ್ಲ, “ಇದೇ ರೂಪ್ಲಿಬಾಯಿ ಮನಿ,” ಎಂದು ಆ ಮುದುಕ ಹೇಳಿದ.

ಅಷ್ಟರಲ್ಲಿ ಮನೆಯಿಂದ ವಯಸ್ಸಾದ ಹೆಂಗಸೊಬ್ಬಳು ಹೊರಗಡೆ ಬರುವುದಕ್ಕೂ ಸರಿಹೋಯಿತು. ಮುಂದಡಿ ಇಡಬೇಕೆಂದಿದ್ದ ಅವಳು ಒಂದು ಕ್ಷಣ ನಿಂತಳು. ತನ್ನ ಮನೆಯತ್ತಲೇ ಬರುವವರನ್ನು ಕಂಡು ಗಾಬರಿಗೊಂಡಳು. ಕೆಂಪು ಕೆಂಪನೆಯ ಬಣ್ಣದ ವಿದೇಶಿಗರನ್ನು ಎಲೆಯಿಕ್ಕದೇ ದಿಟ್ಟಿಸಿದಳು. ಕಣ್ಣುಬ್ಬಿನ ಮೇಲೆ ಕೈಯಿಟ್ಟುಕೊಂಡು ಪಿಳಿಪಿಳಿ ಕಣ್ಣುಬಿಡುತ್ತಾ ಜೋನ್ಸ್ ನನ್ನೇ ತನ್ನ ದೃಷ್ಟಿಯಲ್ಲಿ ತುಂಬಿಕೊಳ್ಳತೊಡಗಿದಳು. ಜೋನ್ಸ್ ಕೂಡ ಅವಳನ್ನೇ ನೋಡುತ್ತಾ ಒಮ್ಮೆ ಅವಳನ್ನು, ಮತ್ತೊಮ್ಮೆ ಕೈಯಲ್ಲಿದ್ದ ಫೋಟೋವನ್ನು ನೋಡತೊಡಗಿದ. ಫೋಟೋದಲ್ಲಿನ ಹೆಣ್ಣಿನ ಮುಖದ ಜೊತೆಗೆ ಅವಳ ಮುಖವನ್ನು ಹೋಲಿಸತೊಡಗಿದ.

`ಹೌದು, ಹೋಲಿಕೆಯಿದೆ. ಫೋಟೋದಲ್ಲಿ ಇರುವವರು ಇವರೇ,’ ಮನದಲ್ಲೇ ಅಂದುಕೊಂಡ. ಅವನೆದೆಯಲ್ಲಿ ಸಂತೋಷದ ಹೊಳೆ ಭೋರ್ಗರೆಯುತ್ತಾ, ಪ್ರವಹಿಸತೊಡಗಿತು. ಅವಳೆದೆಯಲ್ಲೂ ಹೊಸದೊಂದು ಅವ್ಯಕ್ತ ಪುಳಕ, ಅವಿನಾಭಾವದ ಸಿಂಚನ.

“ಏಯ್‌ ರೂಪ್ಲಿ…. ಇವರಾರೋ ನಿನ್ನ ಹುಡ್ಕೊಂಡು ಬಂದಾರ. ತಟಗು ಇಕ್ಕಡೆ ನೋಡು,” ಎಂದು ಆ ವಯಸ್ಸಾದ ಮನುಷ್ಯ ಎಚ್ಚರಿಸಿದಾಗಲೇ ಅದೇನನ್ನೋ ನೆನಪಿಸಿಕೊಳ್ಳುತ್ತಿದ್ದ ರೂಪ್ಲಿಬಾಯಿ ವಾಸ್ತಕ್ಕೆ ಬಂದಳು.

“ಹ್ಞಾಂ…. ಏನಂದಲೇ ರಾಮ್ಲ್ಯಾ ನಾಯಕ ಮಾವಾ….?” ರೂಪ್ಲಿಬಾಯಿ ಆ ಮುದುಕನ ಬಳಿ ಪ್ರಶ್ನಿಸುತ್ತಿದ್ದರೂ, ನೋಟ ಮಾತ್ರ ವಿದೇಶಿಯರ ಮುಖದಲ್ಲೇ ನೆಲೆ ನಿಂತಿತ್ತು.

“ಇವ್ರು ನಿನ್ನ ಹುಡ್ಕೊಂಡು ಬಂದಾರ ರೂಪ್ಲಿ. ನಿಂಜೊತಿಗೆ ಮಾತಾಡ್ಬೇಕಂತಿದ್ದಾರ.”

“ಹೌದಾ….? ಸಾಹೇಬ್ರಾ, ಹಂಗಾದ್ರ ಒಳಗಾದ್ರೂ ಬರ್ರಿ,” ಎಂದಳು.

ಅವಳ ಆಮಂತ್ರಣಕ್ಕೆ ಎಲ್ಲರೂ ಮನೆಯೊಳಗೆ ಕಾಲಿಟ್ಟರು. ಅದೊಂದು ಎರಡು ಕೋಣೆಯ ಚಿಕ್ಕ ಮನೆ. ಜೋನ್ಸ್ ಮನೆಯೊಳಗೆ ಸೂಕ್ಷ್ಮವಾಗಿ ಕಣ್ಣಾಡಿಸಿದ. ಅವಳನ್ನು ಬಿಟ್ಟು ಮತ್ತಾರೂ ಅಲ್ಲಿ ವಾಸಿಸುತ್ತಿರುವ ಕುರುಹಾಗಲೀ, ಸುಳಿವಾಗಲೀ ಕಾಣಲಿಲ್ಲ.

“ಅಮ್ಮಾ….. ಈ ಫೋಟೋದಲ್ಲಿ ಇರುವವರು ನೀವು ತಾನೇ?” ತನ್ನ ಕೈಯಲ್ಲಿದ್ದ ಫೋಟೋನ್ನು ಅವಳ ಮುಂದೆ ಹಿಡಿದು ಪ್ರಶ್ನಿಸಿದ ಜೋನ್ಸ್.

ಫೋಟೋವನ್ನು ಕೈಗೆ ತೆಗೆದುಕೊಂಡು ಕ್ಷಣ ಹೊತ್ತು ಬಿಟ್ಟ ಕಣ್ಣುಗಳಿಂದ ದಿಟ್ಟಿಸಿ, “ಹೌದು, ಇದು ನಾನೇ…..!” ಅಚ್ಚರಿ ವ್ಯಕ್ತಪಡಿಸುತ್ತಾ ಉತ್ತರಿಸಿದಳು ಆಕೆ.

ಜೋನ್ಸ್ ನ ಮುಖದಲ್ಲಿ ನಗೆಮಲ್ಲಿಗೆ ಅರಳಿತು. ಒಂದು ಗಂಡು ಹೆಣ್ಣಿನ ಮುಖವಿರುವ ಮತ್ತೊಂದು ಕಪ್ಪು ಬಿಳುಪಿನ ಫೋಟೋವನ್ನು ಅವಳ ಮುಂದೆ ಹಿಡಿಯುತ್ತಾ, “ಅಮ್ಮಾ…. ಇದು ನೀವು. ಈ ಇನ್ನೊಬ್ಬರು ಯಾರು?” ಎಂದು ಪ್ರಶ್ನಿಸಿದ.

ಅವಳ ಮುಖದಲ್ಲಿ ಗಾಬರಿಯ ಚಿಹ್ನೆಗಳು, ಎದೆ ಬಡಿದುಕೊಳ್ಳತೊಡಗಿತು. ಎದೆಯೊಳಗೆ ತಲ್ಲಣದ ದಿಬ್ಬಣ. ಜೋನ್ಸ್ ನ ಮುಖವನ್ನೊಮ್ಮೆ, ಫೋಟೋದಲ್ಲಿನ ಗಂಡಸಿನ ಮುಖವನ್ನೊಮ್ಮೆ ದಿಟ್ಟಿಸತೊಡಗಿದಳು.

“ಅಮ್ಮಾ….. ಇವರು ನನ್ನ ತಂದೆ ಜಾನ್‌,” ಮೆಲ್ಲಗೆ ಉಸುರಿದ ಜೋನ್ಸ್.

“ಅಂದರೆ….?”

“ಅಂದರೆ ನಾನು ನಿಮ್ಮ ಮಗ. ನೀವು ಹೆತ್ತ ನಿಮ್ಮ ಕರುಳ ಕುಡಿ!” ಎಂದ ಜೋನ್ಸ್.

ರೂಪ್ಲಿ ಬಾಯಿ ತಬ್ಬಿಬ್ಬಾದಳು.

ಜೋನ್ಸ್ ನೆನಪಿನಾಳಕ್ಕೆ ಹೋದ, “ಮಗು ಜೋನ್ಸ್ ಸ್ವಲ್ಪ ಹೊತ್ತು ನನ್ನ ಬಳಿ ಬಂದು ಕುಳಿತುಕೋ. ನಿನಗೊಂದಿಷ್ಟು ವಿಷಯ ತಿಳಿಸಬೇಕಿದೆ,” ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದ 90ರ ವಯಸ್ಸಿನ ತಂದೆ ಜಾನ್‌ ಕರೆದರು.

curry-patta-story2

ಜೋನ್ಸ್ ಮಾತಿಲ್ಲದೇ, ಅವರ ಪಕ್ಕ ಬಂದು ಕುಳಿತು ಮೆಲ್ಲಗೆ ಅವರೆದೆ ನೀವತೊಡಗಿದ. ತಂದೆ ತುಸು ಉದ್ವೇಗದಲ್ಲಿದ್ದಾರೆಂದು ಅಂದುಕೊಂಡ. ಜಾನ್‌ ವಯೋಸಹಜ ಕಾಯಿಲೆಗಳಿಂದ ಬಳುತ್ತಿದ್ದರು.

“ಜೋನ್ಸ್ ನಮ್ಮ ಟ್ವಿಂಕಲ್ ಯೇಸುವಿನ ಪಾದ ಸೇರಿ ಆಗಲೇ ಐದು ವರ್ಷಗಳಾದವು. ಜೋನ್ಸ್ ನಾನು ಇನ್ನೆಷ್ಟು ದಿನ ಬದುಕಬಲ್ಲೇ….? ಯೇಸುವಿನ ಪಾದ ಸೇರುವುದಕ್ಕಿಂತ ಮೊದಲು ನಿನಗೆ ಒಂದೆರಡು ಸತ್ಯಗಳನ್ನು ಹೇಳಬೇಕಿದೆ,” ಎಂದರು.

ತಂದೆಯ ಮಾತು ಜೋನ್ಸ್ ಗೆ ವಿಚಿತ್ರವೆನಿಸಿದರೂ ಎದೆಯಲ್ಲಿ ಕುತೂಹಲ ಭುಗಿಲೆದ್ದಿತು, “ಅದೇನು ಅಂತ ಹೇಳಿ ಅಪ್ಪಾಜಿ….?” ತುಸು ಹೊತ್ತು ಮೌನ. ಮೌನದ ಮನೆಯಲ್ಲಿ ಮಾತಿಗೆ ಬಡತನ. ಜಾನ್‌ ತಾವಾಗಿಯೇ ಮೌನ ಮುರಿದು, “ಜೋನ್ಸ್, ನಿನ್ನಮ್ಮ ಟ್ವಿಂಕಲ್ ನಿನ್ನ ಹೆತ್ತಮ್ಮನಲ್ಲ…..” ಎಂದರು.

ಅಪ್ಪನ ಮಾತಿನಿಂದ ಜೋನ್ಸ್ ನ ಎದೆಯಲ್ಲಿ ದಿಗ್ಭ್ರಮೆಯ ಪ್ರವಾಹದ ಅಬ್ಬರ. `ಟ್ವಿಂಕಲ್ ಮಮ್ಮಿ ನನ್ನ ಅಮ್ಮನಲ್ಲದಿದ್ದರೆ ನನ್ನಮ್ಮ ಯಾರು….?’ ಗಲಿಬಿಲಿಗೊಂಡಿದ್ದ ಜೋನ್ಸ್ ನ ಮನಸ್ಸಿನಲ್ಲಿ ಯೋಚನೆಗಳ ತಾಕಲಾಟ.

“ಅಪ್ಪಾಜಿ, ನೀವೇನು ಹೇಳುತ್ತಿರುವಿರಿ….? ಹಾಗಾದರೆ ನನ್ನ ಹೆತ್ತಮ್ಮ ಯಾರು? ಅವರೆಲ್ಲಿದ್ದಾರೆ.?”

“ಜೋನ್ಸ್, ನಾನು ಹೇಳುತ್ತಿರುವುದು ಸತ್ಯ. ನಿನ್ನ ಟ್ವಿಂಕಲ್ ಮಮ್ಮಿಗೆ ಮಕ್ಕಳಾಗುವ ಯೋಗವಿರಲಿಲ್ಲ. ನಿನ್ನ ಹೆತ್ತವ್ವ ನಮ್ಮ ದೇಶದವಳಲ್ಲ. ನಿನ್ನ ಹೆತ್ತಮ್ಮ ಭಾರತೀಯ ಸಂಜಾತೆ. ಅವಳೀಗ ಜೀವದಿಂದಿರುವಳೋ ಇಲ್ಲವೋ, ಒಂದೂ ಗೊತ್ತಿಲ್ಲ……?” ಎಂದ ಹೇಳುವಷ್ಟರಲ್ಲಿ ಜಾನ್‌ ಏದುಸಿರು ಬಿಡತೊಡಗಿದರು.

ಸತ್ಯವನ್ನು ಅರಗಿಸಿಕೊಳ್ಳಲಾರದ ಜೋನ್ಸ್ ನ ಎದೆ ಉದ್ವೇಗದಿಂದ ಕಮ್ಮಾರನ ತಿದಿಯಂತಾಯಿತು.“ಅದು 1940ನೇ ಇಸ್ವಿ. ಭಾರತ ದೇಶದಲ್ಲಿ ನಮ್ಮ ಬ್ರಿಟಿಷ್‌ ಸರ್ಕಾರವೇ ಅಧಿಕಾರದಲ್ಲಿತ್ತು. ಆಗ ನನಗೆ 25ರ ಹರೆಯ. ಬ್ರಿಟಿಷ್‌ ಸೇನೆಯಲ್ಲಿ ನಾನೂ ಒಳ್ಳೆಯ ಉದ್ಯೋಗದಲ್ಲಿದ್ದೆ. ನನ್ನನ್ನೂ ಇಂಡಿಯಾಕ್ಕೆ ಕಳುಹಿಸಲಾಯಿತು. ಟ್ವಿಂಕಲ್ ಸಹ ನನ್ನ ಜೊತೆಗೆ ಬಂದಳು. ಮೊದಲ ಐದು ವರ್ಷಗಳವರೆಗೆ ಮಂಗಳೂರಿನಲ್ಲಿ ನನಗೆ ಕೆಲಸವಿತ್ತು. ಆಗ ಮಾತಾಡಲು ತುಸು ಕನ್ನಡ ಕಲಿತೆ.

“1946ರ ಜನವರಿಯಲ್ಲಿ ಹೈದರಾಬಾದ್‌ ನವಾಬನ ಆಳ್ವಿಕೆಯಲ್ಲಿದ್ದ ರಾಯಚೂರಿಗೆ ಸಮೀಪದ ಛಾವಣಿಗೆ ನನ್ನನ್ನು ಕಳುಹಿಸಿದರು. ಛಾವಣಿಯಲ್ಲಿ ಬ್ರಿಟಿಷ್‌ ಸೈನ್ಯದ ತುಕಡಿ ಇತ್ತು. ಅಲ್ಲಿಗೆ ಸಮೀಪದ ಜಲದುರ್ಗು ಎಂಬುವ ಗ್ರಾಮದಲ್ಲಿ ಯುದ್ಧ ಕೈದಿಗಳನ್ನು ಸೆರೆಯಲ್ಲಿ ಇಡಲಾಗುತ್ತಿತ್ತು. ಕೈದಿಗಳ ಮೇಲುಸ್ತುವಾರಿಗಾಗಿ ನಾನು ಆಗಾಗ ಜಲದುರ್ಗಕ್ಕೆ ಹೋಗಿ ಬರುತ್ತಿದ್ದೆ. ಪ್ರತಿ ಬಾರಿ ಹೋದಾಗ ಅಲ್ಲಿ 2-3 ದಿನಗಳವರೆಗೆ ವಸ್ತಿಯೂ ಇರುತ್ತಿದ್ದೆ. ಅಲ್ಲಿ ಉಳಿದುಕೊಳ್ಳಲು ನನಗೆ ಸುಸಜ್ಜಿತ ವಸತಿ ಗೃಹ ಇತ್ತು. ವಸತಿ ಗೃಹದಲ್ಲಿ ಅಡುಗೆ, ಇನ್ನಿತರ ಕೆಲಸ ಮಾಡಲು ಆಳುಕಾಳುಗಳೂ ಇದ್ದರು. ಈ ಪುಸ್ತಕದಲ್ಲಿ ದಾಖಲಿಸಿದ್ದೇನೆ. ನೀನೇ ಓದಿಕೋ,” ಎಂದೆನ್ನುತ್ತಾ ಜಾನ್‌ ಡೈರಿಯೊಂದನ್ನು ಜೋನ್ಸ್ ಕೈಗೆ ಕೊಟ್ಟರು.

ಎದೆಯಲ್ಲಿ ಕುತೂಹಲ ಮಡುವಗಟ್ಟಿದ್ದರಿಂದ ಜೋನ್ಸ್ ಡೈರಿಯ ಮೇಲೆ ಕಣ್ಣಾಡಿಸತೊಡಗಿದ. ಡೈರಿಯ ಕವರ್‌ ಪೇಜ್ ತೆರೆಯುತ್ತಿದ್ದಂತೆ ಎರಡು ಕಪ್ಪು ಬಿಳುಪು ಫೋಟೋಗಳು ಕಣ್ಣಿಗೆ ಬಿದ್ದ. ಒಂದರಲ್ಲಿ ಒಬ್ಬ ಹೆಂಗಸಿದ್ದರೆ, ಇನ್ನೊಂದರಲ್ಲಿ ತನ್ನ ತಂದೆ ಆ ಹೆಣ್ಣಿನ ಜೊತೆಗಿದ್ದ ಫೋಟೋ. ಜನವರಿ 1, 1946ರಿಂದ ಜಾನ್‌ ರ ಒಕ್ಕಣೆ ಶುರುವಾಗಿತ್ತು.

ನಾನು ಛಾವಣಿಯಲ್ಲಿ ಕೆಲಸಕ್ಕೆ ಹಾಜರಾದ ಮರುದಿನ ಜಲದುರ್ಗಕ್ಕೆ ಹೋಗಿದ್ದೆ. ಅಲ್ಲಿನ ಗೆಸ್ಟ್ ಹೌಸ್‌ ನಲ್ಲಿ ಎರಡು ದಿನ ವಸ್ತಿ ಇದ್ದೆ. ಒಂದೇ ದಿನದಲ್ಲಿ ವಾಪಾಸು ಬರಬೇಕೆಂದು ಹೋದನು ಮತ್ತೊಂದು ದಿನ ಅಲ್ಲಿದ್ದು ಅಲ್ಲಿನ ಸುಂದರ ಪ್ರಕೃತಿ, ಅಭೇದ್ಯ ಕೋಟೆ, ಕವಲೊಡೆದು ಹರಿಯುವ ಕೃಷ್ಣಾ ನದಿಯ ವೈಭವ, ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಳನಳಿಸುತ್ತಿದ್ದ ಹಸಿರ ವನಸಿರಿಯ ಸೊಬಗನ್ನು ಸವಿದು ಬಂದಿದ್ದೆ.

ನಮಗೆಂದೇ ರುಚಿರುಚಿಯಾದ ಮಾಂಸಾಹಾರದ ಅಡುಗೆಯನ್ನು ತಯಾರಿಸಲು ಔಟ್‌ ಹೌಸ್‌ ನಲ್ಲಿ ಒಂದು ಲಂಬಾಣಿ ಕುಟುಂಬವಿತ್ತು. ಎರಡು ದಿನ ಎರಡು ನಿಮಿಷಗಳಂತೆ ಕಳೆದುಹೋಗಿದ್ದ. ಅದೇ ತಿಂಗಳು ಮತ್ತೆರಡು ಸಾರಿ ಜಲದುರ್ಗಕ್ಕೆ ಹೋಗಿ ಬಂದೆ. ಎರಡನೇ ಸಾರಿ ಟ್ವಿಂಕಲ್ ಳನ್ನೂ ಕರೆದುಕೊಂಡು ಹೋಗಿದ್ದೆ. ಅವಳೂ ಆ ಪ್ರಕೃತಿಯ ರಮ್ಯತಾಣದಲ್ಲಿ ತುಂಬಾ ಎಂಜಾಯ್‌ ಮಾಡಿದಳು.

ಮೂರನೇ ಸಾರಿ ಹೋದ ದಿನ ಸಂಜೆ ನದಿ ದಂಡೆಯ ಕಡೆಗೆ ವಾಯುವಿಹಾರಕ್ಕೆ ಹೋಗಿದ್ದೆ. ಆಗ ತನ್ನ ಗೆಳತಿಯರ ಜೊತೆ 18-19ರ ಹರೆಯದ ತರುಣಿ ಕಣ್ಣಿಗೆ ಬಿದ್ದಳು. ಅವಳ ಕೆಂಪನೆ ಮೈಬಣ್ಣ, ವಯೋಸಹಜ ಆಕರ್ಷಕ ಮೈಮಾಟ ಅವಳನ್ನು ಮತ್ತೆ ಮತ್ತೆ ನೋಡುವಂತೆ ನನ್ನನ್ನು ಪ್ರೇರೇಪಿಸಿದ್ದ. ಅವಳ ಚೆಲುವಿನ ಚಿತ್ತಾರದ ದೇಹಸಿರಿಯನ್ನು ಮನಸೋ ಇಚ್ಛೆ ಕದ್ದು ಕದ್ದು ನೋಡಿ ಮನದಲ್ಲಿ ತುಂಬಿಕೊಂಡು ಅವ್ಯಕ್ತ ಖುಷಿಯಿಂದ ನನ್ನೊಳಗೇ ಸಂಭ್ರಮಿಸಿದ್ದೆ. ಅವಳೂ ಪದೇ ಪದೇ ಕದ್ದು ಕದ್ದು ಲಜ್ಜೆಯಿಂದ ನನ್ನನ್ನೇ ದಿಟ್ಟಿಸುತ್ತಿದ್ದಳು. ಕೆಲವೊಮ್ಮೆ ನಾಲ್ಕೂ ಕಣ್ಣುಗಳು ಒಂದಾಗುತ್ತಿದ್ದ. ಆಗ ಅವಳ ಮುಖದಲ್ಲಿ ಮಡುಗಟ್ಟಿದ್ದ ರಕ್ತದೋಕುಳಿ ಈಗಲೂ ನನ್ನ ಮನದಲ್ಲಿ ನೆಲೆ ನಿಂತಿದೆ.

ಆ ದಿನ ರಾತ್ರಿ ಆ ಸುಂದರಿ ನನ್ನ ನಿದ್ದೆಗೆಡಿಸಿದ್ದೂ ಉಂಟು. ಕನಸಿನ ಮೆರವಣಿಗೆಯಲ್ಲಿ ಅವಳದೇ ಚೆಲುವಿನ ಚಿತ್ತಾರ ತುಂಬಿತ್ತು. ಮಿಂಚಿನ ಕಣ್ಣಿನ ಅವಳು, ಹುಣ್ಣಿಮೆಯ ಚಂದಿರನಂತೆ ನವಿಲಿನ ಹೆಜ್ಜೆ ಇಡುತ್ತಾ ನಡೆದು ಬಂದಿದ್ದಳು. ನನ್ನ ಪ್ರೋಗ್ರಾಂ ಪ್ರಕಾರ ಮರುದಿನ ಬೆಳಗ್ಗೆ ಅಲ್ಲಿಂದ ಹೊರಡಬೇಕಿತ್ತು. ಕನಸು ಮನಸ್ಸಿನಲ್ಲಿ ಅವಳದೇ ರೂಪ. ಉಸಿರಾಟದ ಪ್ರತಿ ಉಸಿರಿನಲ್ಲಿ ಅವಳದೇ ಧ್ಯಾನವಾಯಿತು.

ನೆನೆದರ ಮನದಲ್ಲಿ ಎಂಬಂತೆ ಬೆಳ್ಳಂಬೆಳಗ್ಗೆ ಅತಿಥಿ ಗೃಹದಲ್ಲಿ ಅಡುಗೆ ಮಾಡುವ ಕಸ್ತೂರಿಬಾಯಿಯ ಜೊತೆಗೆ ನನ್ನ ಮನವನ್ನು ಕಾಡುತ್ತಿದ್ದ ಸುಂದರಿಯೂ ಪ್ರತ್ಯಕ್ಷವಾಗಿದ್ದಳು.

“ಸಾಹೇಬ್ರೇ, ಈಕೆ ನನ್ನ ಮಗಳು ರೂಪ್ಲಿ. ಹೊಳೆಯಾಚೆಯ ದೊಡ್ಡವ್ವನ ಮನೆಯಲ್ಲಿದ್ದ ಇವಳು ನಿನ್ನೆಯಷ್ಟೇ ಇಲ್ಲಿಗೆ ಬಂದಿದ್ದಾಳೆ,” ಎಂದು ಪರಿಚಯಿಸುತ್ತಾ, “ನಂಗ್ಯಾಕೋ ತುಸು ಹುಷಾರಿಲ್ಲ. ಇವತ್ತು ಇವಳೇ ಕೆಲಸ ಮಾಡ್ತಾಳೇ,” ಎಂದು ಕಸ್ತೂರಿಬಾಯಿ ಹೇಳಿದಳು.

ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ನಾನು ಸಂಭ್ರಮಿಸುತ್ತಾ ರೂಪ್ಲಿಯತ್ತ ಕಣ್ಣೋಡಿಸಿದ್ದೆ. ಅವಳೂ ನನ್ನನ್ನೇ ನೋಡುತ್ತಿದ್ದಳು. ಚಿಗರೆ ಕಂಗಳ ಕುಡಿನೋಟದಲ್ಲಿ ತುಂಟತನ, ನಾಚಿಕೆ, ಖುಷಿ, ಗಾಬರಿ ಎಲ್ಲ ಮೇಳೈಸಿದ್ದವು. ಅವಳ ಕಣ್ಣಿನ ಸೆಳೆತಕ್ಕೆ ನನ್ನ ತುಟಿ ಮೇಲಿನ ಮುಗುಳ್ನಗೆಯೇ ಉತ್ತರವಾಗಿತ್ತು. ಲಂಗ ದಾವಣಿಯಲ್ಲಿ ಅವಳ ರೂಪ ರಾಶಿ ಕಣ್ಮನ ಸೆಳೆಯುತ್ತಿತ್ತು.

“ಸಲಾಂ ರೀ ಸಾಹೇಬ್ರೇ…..” ಎಂದು ಗಾಬರಿ, ಅವಸರದಲ್ಲಿ ನನಗೆ ವಂದಿಸುತ್ತಿದ್ದಾಗ, ಎದೆಯ ಮೇಲಿನಿಂದ ಜಾರುತ್ತಿದ್ದ ಮೇಲ್ಹೊದಿಕೆಯನ್ನು ಸರಿಪಡಿಸಿಕೊಳ್ಳುವ ಅವಸರದಲ್ಲಿ ತನ್ನ ವಕ್ಷಸಿರಿಯ ಸಂಪತ್ತನ್ನು ಮಿಂಚಿನ ವೇಗದಲ್ಲಿ ಪ್ರದರ್ಶಿಸಿ ನನ್ನ ಕಣ್ಣಿಗೆ ತಂಪೆರೆದಿದ್ದಳು.

ರಾತ್ರಿ ರೂಪ್ಲಿಯ ರೂಪ ನನ್ನ ಮನವನ್ನು ಕಾಡಿಸಿತು. ಅವಳ ರೂಪ ಕಣ್ಮುಂದೆ ನಿಲ್ಲುತ್ತಿದ್ದಂತೆ ಎದೆಯಲ್ಲಿ ಪುಳಕ, ಕಂಪನ. `ಏಂಜಲ್ ನಂಥ ಸಂಗಾತಿ ಟ್ವಿಂಕಲ್ ಇರುವಾಗ ಪರಸ್ತ್ರೀಯ ವ್ಯಾಮೋಹವೇಕೆ ನಿನಗೆ…..? ಇದು ಸರಿಯಲ್ಲ,’ ಎಂದು ಒಂದು ಮನಸ್ಸು ತಿಳಿವಳಿಕೆ ಹೇಳುತ್ತಿದ್ದರೆ, `ರೂಪ್ಲಿ ನನ್ನ ಮನಸ್ಸನ್ನು ತುಂಬಿದ್ದಾಳೆ. ಅವಳಿಗೂ ನಾನೆಂದರೆ ಇಷ್ಟ ಎಂದೆನಿಸುತ್ತದೆ,’ ಎಂದು ಇನ್ನೊಂದು ಮನಸ್ಸು ನನ್ನ ಮನದ ಹಪಹಪಿಯನ್ನು ಸಮರ್ಥಿಸಿಕೊಳ್ಳುತ್ತಿತ್ತು.

ಮರುದಿನ ಬೆಳಗ್ಗೆ ನಾನು ಕೈದಿಗಳ ವಿಚಾರಣೆಗೆ ಹೋಗಬೇಕಿತ್ತು. ರೆಡಿಯಾಗುತ್ತಿದ್ದೆ. ಅಷ್ಟರಲ್ಲಿ ನನ್ನ ಕನಸಿನ ದೇವತೆ ಪ್ರತ್ಯಕ್ಷಳಾಗಿದ್ದಳು.

“ಸಾಹೇಬ್ರೇ, ಅಮ್ಮನಿಗೆ ಹುಷಾರಾಗಿಲ್ಲ. ನಾನೇ ಕೆಲಸಕ್ಕೆ ಬಂದೀನಿ. ಮೊದಲು ನಿಮಗೆ ತಿಂಡಿ ಮಾಡಿಕೊಡ್ಲಾ….?” ಎಂದು  ವೈಯಾರದಿಂದ ಕೇಳಿದಳು.

ನಾನು ಅವಳನ್ನೇ ತೀಕ್ಷ್ಣವಾಗಿ ಗಮನಿಸಿದೆ. ಚೈತನ್ಯದ ಚಿಲುಮೆಯಂತಿದ್ದ ಅವಳು, ತುಂಬು ಉತ್ಸಾಹದಲ್ಲಿ ಇರುವಂತೆ ಕಂಡಳು.

“ಸರಿ ಬೇಗ ಮಾಡಿಕೊಡು,” ಎಂದೆ.

ಅವಳು ಮಾಡಿಕೊಟ್ಟ ಉಪ್ಪಿಟ್ಟನ್ನು ತಿಂದು, “ಹುಡುಗಿ, ತುಂಬಾ ರುಚಿಯಾಗಿ ಮಾಡಿರುವಿ….?” ಎಂದು ಮೆಚ್ಚುಗೆ ಸೂಚಿಸುತ್ತಾ, ಉಪ್ಪಿಟ್ಟನ್ನು ಮೆದ್ದಿದ್ದೆ. ನನ್ನ ಹೊಗಳಿಕೆಯ ಮಾತಿನಿಂದ ಖುಷಿಗೊಂಡ ಅವಳು, ನಾನು ಹೊರಟು ನಿಂತಾಗ, “ಮಧ್ಯಾಹ್ನ ಊಟಕ್ಕೆ ಬೇಗ ಬನ್ನಿರಿ ಸಾಹೇಬ್ರೇ…. ನಿಮಗಿಷ್ಟವಾದ ಎಗ್‌ ಬುರ್ಜಿ, ಮೀನಿನ ಸಾರು ಮಾಡುವೆ,” ಎಂದಳು.

`ಅರೇ, ನನ್ನ ಇಷ್ಟಾನಿಷ್ಟಗಳು ಇವಳಿಗೆ ಹೇಗೆ ಗೊತ್ತಾಯಿತು….?’ ಎಂಬ ಕುತೂಹಲ ಮನದಲ್ಲಿ ಮೂಡಿತಾದರೂ ಬಾಯಿ ಮಾತಿನಲ್ಲಿ ಹೇಳದೇ ಕಣ್ಣ ನೋಟದಲ್ಲಿ ಮೆಚ್ಚುಗೆ ತಿಳಿಸಿದ್ದೆ.

ಮಧ್ಯಾಹ್ನದ ಊಟ ತುಂಬಾ ರುಚಿಕರವಾಗಿತ್ತು. ಮೆಚ್ಚುಗೆ ಸೂಚಿಸಿ ಹಾಡಿ ಹೊಗಳಿದ್ದೆ. ನನ್ನ ಹೊಗಳಿಕೆಯ ಮಾತುಗಳಿಂದ ಅವಳು ಹಿಗ್ಗಿ ಹೀರೇಕಾಯಿಯಾಗಿದ್ದಳು. ಮತ್ತೆ ನಾನು ಕೆಲಸದ ನಿಮಿತ್ತ ಹೊರಗೆ ಹೋದೆ. ಸಂಜೆ ನಾನು ಮನೆಗೆ ಬರುವುದು ತಡವಾಗಿತ್ತು. ರೂಪ್ಲಿ ರಾತ್ರಿ ಅಡುಗೆಯನ್ನು ತಯಾರಿಸಿಟ್ಟುಕೊಂಡು, ನನಗಾಗಿ ಕಾಯುತ್ತಿದ್ದಳು. ನನ್ನ ಊಟದ ನಂತರ, “ನಾನು ಹೋಗಿ ಬರುವೆ,” ಎಂದು ನನ್ನೆಡೆ ನಗೆ ಚೆಲ್ಲುತ್ತಾ ಹೊರಟಳು. ರಾತ್ರಿ ರೂಪ್ಲಿ ಮತ್ತೆ ನನ್ನನ್ನು ಕಾಡಿದಳು.

ಮರುದಿನ ಬೆಳಗ್ಗೆ ರೂಪ್ಲಿಯ ಕಾಲ್ಗೆಜ್ಜೆಯ ಘಲ್ಲೆನ್ನುವ ನಾದ ಕಿವಿಗಪ್ಪಳಿಸಿದಾಗ, ಮನಸ್ಸಿಗೆ ಹಾಯೆನಿಸಿ ಉಲ್ಲಸಿತನಾಗಿದ್ದೆ. ರೂಪ್ಲಿ ಹಳದಿ ಬಣ್ಣದ ಲಂಗ ಮತ್ತು ಗಾಢ ನೀಲಿ ಬಣ್ಣದ ದಾವಣಿಯಲ್ಲಿ ಮಿಂಚುತ್ತಿದ್ದಳು. ಅವಳ ಡ್ರೆಸ್‌ ಕಂಡು, “ಇಂದು ಹಬ್ಬ ಗಿಬ್ಬ ಇದೆಯೇನು….?” ಎಂದು ಪ್ರಶ್ನಿಸಿದ್ದೆ.

“ಖುಷಿ ಖುಷಿಯಿಂದಿರುವುದೇ ಹಬ್ಬ ಸಾಹೇಬ್ರೇ….” ಎಂದು ವೇದಾಂತಿಯಂತೆ ಖುಷಿಯಿಂದ ಉಲಿದಿದ್ದಳು.

ಬೆಳಗಿನ ನಾಷ್ಟಾ ಮುಗಿಸಿ ಕರ್ತವ್ಯದ ಮೇಲೆ ಹೊರಡುವಾಗ, “ನಾಳೆ ಬೆಳಗ್ಗೆ ಛಾವಣಿಗೆ ಹೊರಡುವೆ. ನನ್ನ ಹೆಂಡತಿ ಕಾಯುತ್ತಿರುತ್ತಾಳೆ,” ಎಂದೆ.

“ನಾಳೇನೇ ಹೋಗಬೇಕಾ…?” ಬೇಸರಿಸಿಕೊಂಡಂತೆ ಕಂಡಳು ರೂಪ್ಲಿ.

ಮಧ್ಯಾಹ್ನದ ಊಟವನ್ನು ಖುಷಿ ಖುಷಿಯಿಂದ ಬಡಿಸಿದ್ದಳು ರೂಪ್ಲಿ. ಮೆಚ್ಚುಗೆ ಸೂಚಿಸಿದೆ. ಅರಳು ಕಂಗಳ ಚೆಲುವೆಯ ಮುದ್ದು ಮೊಗದಲ್ಲಿ ನಗೆ ಮಲ್ಲಿಗೆ ಅರಳಿತ್ತು.

curry-patta-story

“ಸಾಹೇಬ್ರಾ… ಒಂದ್ಮಾತಿತ್ತು…” ಎಂದು ಮೆಲ್ಲಗೆ ಉಲಿದಳು.

“ಮೊದಲು ನೀನು ಊಟ ಮಾಡು. ನಂತರ ಹೇಳುವಿಯಂತೆ,” ಎಂದಿದ್ದೆ. ಸುಮ್ಮನೆ ಊಟ ಮುಗಿಸಿದಳು.

“ಬಾ ಇಲ್ಲಿ….” ಎಂದು ರೂಪ್ಲಿಯನ್ನು ಕರೆದೆ, ನವಿಲಿನ ನಡಿಗೆಯಲ್ಲಿ ನನ್ನ ಹತ್ರಿ ಬಂದಳು.

“ಅದೇನೋ ಹೇಳಬೇಕೆಂದಿಯಲ್ಲ…..?” ಎಂದು ರಾಗವೆಳೆದೆ.

“ಹ್ಞಾಂ… ಏನೂ ಇಲ್ಲ ಬಿಡಿ ಸಾಹೇಬ್ರೇ…”

“ನಾನೆಲ್ಲಿ ನಿನ್ನ ಹಿಡ್ಕೊಂಡೀನಿ ನಿನ್ನ ಬಿಡೋದಿಕ್ಕೆ,” ಎಂದು ನಗೆಯಾಡಿದೆ.

“ಹೌದಲ್ವಾ….? ಹಾಗಾದರೆ ಹಿಡ್ಕೊಂಡೇ ಮಾತಾಡ್ತೀನಿ….” ಎಂದೆನ್ನುತ್ತಾ ರೂಪ್ಲಿ ನನ್ನ ಮೀಸೆಯನ್ನು ಹುರಿದಿರುತ್ತಾ ಅಪ್ಪಿಕೊಂಡು. ತನ್ನ ಚೆಂದುಟಿಗಳಿಂದ ನನ್ನ ಲಿಪ್‌ ಲಾಕ್‌ ಮಾಡಿದವಳೇ, ಕೆನ್ನೆ, ಹಣೆ, ಕಣ್ಣುಗಳ ಮೇಲೆ ಮುತ್ತಿನ ಮಳೆ ಸುರಿಸಿದಳು.

“ಈ ತುಂಟ ಮೂಗು ಬಲು ಚೆಂದ,” ಎಂದು ಮೂಗಿಗೂ ತುಟಿ ಒತ್ತಿ ಸಂಭ್ರಮಿಸಿದಳು.

“ಸಾಹೇಬ್ರಾ…. ನೀವು ನಂಗೆ ತುಂಬಾ ಇಷ್ಟವಾಗಿದ್ದೀರಿ. ನಿಮ್ಮ ಮೇಲೆ ನಂಗೆ ಪ್ರೀತಿಯಾಗೈತೆ.”

“ಐ ಟೂ ಲವ್ ಯೂ ರೂಪ್ಲಿ…..” ಎಂದು ಅವಳೆದೆಯಲ್ಲಿ ಮುಖವಿರಿಸಿ ಮೆಲ್ಲಗೆ ಉಸುರಿದೆ.

“ನೀವು ಹೇಳಿದ್ದು ಅರ್ಥವಾಗಲಿಲ್ಲ. ನನಗೆ ಇಂಗ್ಲಿಷ್‌ ಬರಲ್ವಲ್ಲ…..”

“ನನಗೂ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೆ…..”

“ಆದರೆ ಅಂದರೆ ಅದೇನು….?”

“ನನಗೆ ಮದುವೆಯಾಗಿದೆಯಲ್ಲ…..? ಮೇಲಾಗಿ ಇಂದಲ್ಲ ನಾಳೆ ನಾನು ಇಂಗ್ಲೆಂಡ್‌ ಗೆ ಹೋಗುವವನು….”

“ಇಲ್ಲಿ ಇರುವವರೆಗೂ ನನ್ನನ್ನು ಪ್ರೀತಿಸಿ, ಅಷ್ಟೇ ಸಾಕು…”

“ಅದ್ಯಾಕೆ ನಾನು ಇಷ್ಟಾಗಿದ್ದು…..?”

“ಅದು ಅಮ್ಯಾಕೆ ಹೇಳುವೆ. ಮೊದಲು….” ಎಂದು ಸಿಂಹಿಣಿಯಂತೆ ಗರ್ಜಿಸುತ್ತಾ ನನ್ನನ್ನು ಆಕ್ರಮಿಸಿದ್ದಳು. `ರೋಗಿ ಬಯಸಿದ್ದೂ  ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎಂಬಂತಾಗಿತ್ತು. ರೂಪ್ಲಿಯ ತುಂಟಾಟಕ್ಕೆ ಮನಸಾರೆ ಸ್ಪಂದಿಸಿದೆ. ಬೆವರು ಜಿನುಗತೊಡಗಿದಾಗ ತನುವೆರಡೂ ಸಂತೃಪ್ತಿಯಿಂದ ಬೀಗಿದ್ದವು.

ನನ್ನೆದೆಯ ರೋಮದೊಳಗೆ ಕೈಯಾಡಿಸುತ್ತಾ, “ನೀವೇಕೆ ಇಷ್ಟವಾಗಿದ್ದೆಂದರೆ ಎಲ್ಲಾ ಅಧಿಕಾರಿಗಳಂತೆ ನೀವಲ್ಲ. ಇಲ್ಲಿಗೆ ಬರುವ ಅಧಿಕಾರಿಗಳು, ಸೈನಿಕರು ಹೆಣ್ಣಿನ ಮೇಲೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳಿಗೆ ಕೊನೆಯೇ ಇಲ್ಲ. ಕೆಳವರ್ಗದ, ಬಡವರ ಬಹುತೇಕ ಹೆಣ್ಣುಗಳನ್ನು ತಮ್ಮ ಕಾಮಪಿಪಾಸೆ ತೀರಿಸಿಕೊಳ್ಳಲು ಅನುಭವಿಸಿದ್ದಾರೆ. ಹೆಣ್ಣಿನ ಗೋಳನ್ನು ಕೇಳುವವರಿಲ್ಲ. ಶಾನುಭೋಗ, ಕುಲಕರ್ಣಿ, ಗೌಡರಂಥಹ ಬಲವುಳ್ಳ ಶ್ರೀಮಂತರು, ಅಧಿಕಾರಿಗಳ ದೌರ್ಜನ್ಯಕ್ಕೆ ಹೆದರಿ ತಮ್ಮ ಹರೆಯದ ಹೆಣ್ಣುಮಕ್ಕಳನ್ನು, ಸುಂದರ ಹೆಂಡತಿಯರನ್ನು ದೂರದ ಸಂಬಂಧಿಕರ ಮನೆಗಳಿಗೆ ಬಿಟ್ಟು ಬಂದಿದ್ದಾರೆ.

“ನಾನೂ ಸಹ ಹೊಳೆಯಾಚೆಯ ನಮ್ಮ ದೊಡ್ಡಮ್ಮನ ಮನೆಯಲ್ಲಿದ್ದೆ. ನಿಮ್ಮ ನಡತೆ ಗಮನಿಸಿ ನಂತರಷ್ಟೇ ನಾನಿಲ್ಲಿಗೆ ಬಂದಿದ್ದು. ಎಲ್ಲರಂತರಲ್ಲ ನೀವು ಎಂದು ತಿಳಿದ ಮೇಲೆ ತುಂಬಾ ಇಷ್ಟವಾಗತೊಡಗಿದಿರಿ. ನನಗರಿಯದೇ ನಿಮ್ಮಲ್ಲಿ ಪ್ರೀತಿ ಚಿಗುರಿತು. ಈ ನಿಮ್ಮ ಚಿಗುರು ಮೀಸೆ, ತುಂಟ ಕಣ್ಣುಗಳು ನನ್ನನ್ನು ಮೋಡಿ ಮಾಡಿಬಿಟ್ಟವು,” ಎಂದೆನ್ನುತ್ತಾ ಮನಸಾರೆ ಮುದ್ದಿಸಿದಳು.

“ಹಾಗಾದರೆ ನೀನು ನನ್ನ ಒಳ್ಳೇತನಕ್ಕೆ ಮಸಿ ಬಳಿದುಬಿಟ್ಟೆ,” ತುಂಟತನವಿತ್ತು ನನ್ನ ಮಾತಿನಲ್ಲಿ.

“ನೀವು ಒಳ್ಳೆಯವರಾ…..? ತುಂಬಾ ಕೆಟ್ಟವರು! ಒಳ್ಳೆಯವರಾಗಿದ್ದರೆ ತಿಳಿವಳಿಕೆ ಹೇಳಿ ನನ್ನನ್ನು ದೂರ ಸರಿಸುತ್ತಿದ್ದಿರಿ. ನಿಮಗೆ ಈ ರೂಪ್ಲಿ ಬೇಕಿತ್ತು, ಅಬ್ಬರಿಸಿದಿರಿ.”

“ಹೌದೌದು, ನಾನು ತುಂಬಾ ಕೆಟ್ಟವನು…..” ಹುಸಿ ಮುನಿಸು ತೋರಿಸಿದೆ.

“ಸಿಟ್ಯಾಕೆ ದೊರೆ….?” ಮುದ್ದಿನಾಟನದಿಂದ ಸಂತೈಸಿದಳು ರೂಪ್ಲಿ.

ಮರುದಿನ ಛಾವಣಿಗೆ ಹೋಗಬೇಕೆಂದವನು ಮತ್ತೆರಡು ದಿನ ರೂಪ್ಲಿಯ ಸಾಂಗತ್ಯದಲ್ಲಿ ರಸಮಯ ಗಳಿಗೆಗಳನ್ನು ಕಳೆದಿದ್ದೆ. ಮುಂದಿನ ದಿನಗಳಲ್ಲಿ ನಮ್ಮಿಬ್ಬರ ಕೂಡುವಿಕೆಗೆ ಅಡೆತಡೆ ಇರಲಿಲ್ಲ.

ಶೃಂಗಾರ ಕಾವ್ಯಾದಲ್ಲಿ ಸೃಷ್ಟಿಯಾಗುವ ಜೀವಜಲದಿಂದ ಜೀವ ಸೃಷ್ಟಿಯಾಗದೇ ಇರುತ್ತದೆಯೇ…? ನಮ್ಮಿಬ್ಬರಲ್ಲಿ ಸಂಬಂಧ ಚಿಗುರಿದ ಎರಡನೇ ತಿಂಗಳಿಗೆ ರೂಪ್ಲಿ ತಾನು ಗರ್ಭಿಣಿಯಾಗಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡಳು. ಅವಳ ಸಂಭ್ರಮ ವರ್ಣಿಸಲಸದಳ!

“ಜನ ನಿಂದೆ ಎದುರಿಸುವುದು ಕಷ್ಟ. ಗರ್ಭಪಾತ ಮಾಡಿಸಿಕೊಂಡು ಬಿಡು,” ಎಂದೆ.

ಅವಳು ಎದೆಗುಂದಲಿಲ್ಲ, “ನಾನು, ನನ್ನ ಜೀವನ ಅಷ್ಟೇ….” ಎಂದಿದ್ದ ಅವಳ ಕಣ್ಣ ಕಾಂತಿಯಲ್ಲಿ ಧೈರ್ಯದ ಕಿಚ್ಚಿತ್ತು. ತನ್ನ ತಾಯಿ ತಂದೆಯರಿಗೆ ಅವಳೇ ಧೈರ್ಯ ತುಂಬಿದ್ದಳು. 1947ರ ಮೇ 9 ರಂದು ರೂಪ್ಲಿ ಗಂಡು ಮಗುವಿಗೆ ತಾಯಿಯಾದಳು. ಮಗುವಿಗೆ ಅಮರ್‌ ಎಂದು ಹೆಸರಿಟ್ಟು ಕರೆಯತೊಡಗಿದಳು.

ಅದೊಂದು ದಿನ ಟ್ವಿಂಕಲ್ ಗೆ ನನ್ನ ಮತ್ತು ರೂಪ್ಲಿಯ ಸಂಬಂಧ ಮತ್ತು ಅವಳೀಗ ಗಂಡು ಮಗುವಿಗೆ ತಾಯಿಯಾಗಿರುವುದನ್ನು ಅಂಜಂಜುತ್ತಾ ಹೇಳಿದೆ. ಟ್ವಿಂಕಲ್ ಒಮ್ಮಿಂದೊಮ್ಮೆಲೇ ಉಗ್ರರೂಪ ತಾಳಿದಳು.

“ಥೂ ನೀಚ!  ಕಂಡಲ್ಲಿ ಕಾಲೆತ್ತುವ ನಾಯಿ ಜಾತಿಯವ,” ಎಂದು ಮನಸೋ ಇಚ್ಛೆ ಬಯ್ದಿದ್ದಳು. ಕಣ್ಣುಗಳು ಕೆಂಡವನ್ನು ಉಗುಳುತ್ತಿದ್ದವು. ಎರಡು ದಿನ ಮೌನವ್ರತ ಆಚರಿಸಿದಳು. ನನ್ನನ್ನು ಪಕ್ಕಕ್ಕೂ ಹಾಯಗೊಡಲಿಲ್ಲ. ಮೌನದಿಂದಿರುವುದೇ ಕ್ಷೇಮ ಎಂದು ನಾನೂ ಮಾತು ಬೆಳೆಸಲಿಲ್ಲ.

ಅದೇನು ಯೋಚಿಸಿದಳೋ  ಏನೋ, ಮೂರನೇ ದಿನ ಟ್ವಿಂಕಲ್, “ನಾನು ನಿನ್ನ ಮುದ್ದಿನ ಅರಗಿಣಿ ಮತ್ತು ಮಗುವನ್ನು ನೋಡಬೇಕು. ಕರೆದುಕೊಂಡು ಹೋಗು,” ಎಂದಳು. ಮುಖದಲ್ಲಿ ರೌದ್ರತೆ ಕಡಿಮೆಯಾಗಿ ತುಸು ಪ್ರಸನ್ನವದನೆಯಾಗಿದ್ದಳು.

ಟ್ವಿಂಕಲ್ ರೂಪ್ಲಿ ಮತ್ತು ಮಗುವನ್ನು ನೋಡಿ, “ಮಗು ತುಂಬಾ ಮುದ್ದಾಗಿದೆ. ಥೇಟ್‌ ನಮ್ಮಂತೆಯೇ! ನಿನ್ನ ಜೀವದ ರಾಣಿಯೂ ತ್ರಿಲೋಕ ಸುಂದರಿಯೇ!” ಎಂದು ಉದ್ಗರಿಸಿದಳು.

“ಮಹಾ ಚತುರೆ ನೀನು. ಅದೇನು ಮೋಡಿ ಮಾಡಿ ನನ್ನ ಸಾಹೇಬನನ್ನು ಬುಟ್ಟಿಗೆ ಹಾಕಿಕೊಂಡುಬಿಟ್ಟೆ….?” ಎಂದು ರೂಪ್ಲಿಯ ಜೊತೆಗೆ ಟ್ವಿಂಕಲ್ ಮಾತಿಗಿಳಿದಿದ್ದಳು.

ಭಯದಿಂದ ನಡುಗುತ್ತಿದ್ದ ರೂಪ್ಲಿಗೆ ಮಾತೇ ಹೊರಡಲಿಲ್ಲ. “ನನಗೆ ಮಕ್ಕಳಿಲ್ಲ. ಈ ಮಗುವನ್ನು ನನಗೆ ಕೊಟ್ಟುಬಿಡ್ತೀಯಾ……?”  ಟ್ವಿಂಕಲ್ ಳ ಅನಿರೀಕ್ಷಿತ ಬೇಡಿಕೆ ಇಟ್ಟಳು.

ರೂಪ್ಲಿ ದಂಗಾಗಿ ಹೋಗಿದ್ದಳು, ಅವಳ ಮುಖ ಮುದುಡಿದ ಹೂವಿನಂತಾಗಿತ್ತು. ಆದರೂ ಸಾವರಿಸಿಕೊಂಡು, “ಅಮ್ಮೋರೆ, ನಿಮಗೆ ಖುಷಿಯಾಗುವುದಾದರೆ ಮಗುವನ್ನು ಕೊಡುವೆ,” ಎಂದು ನಿರ್ವಿಕಾರ ಭಾವದಲ್ಲಿ ಹೇಳಿದಳು.

“ಓ.ಕೆ. ದಟ್ಸ್ ಲೈಕ್‌ ಎ ಗುಡ್‌ ಗರ್ಲ್. ಥ್ಯಾಂಕ್ಯೂ ವೆರಿ ಮಚ್‌,” ಎನ್ನುತ್ತಾ ಪ್ರೀತಿಯಿಂದ ರೂಪ್ಲಿಯ ಕೆನ್ನೆಗಳನ್ನು ನವಿರಾಗಿ ಹಿಂಡಿದಳು. ಖುಷಿಯ ಅನುಭೂತಿಯ ಪರಾಕಾಷ್ಠೆಯಲ್ಲಿದ್ದ ಟ್ವಿಂಕಲ್ ರೂಪ್ಲಿಯಿಂದ ಭಾಷೆ ತೆಗೆದುಕೊಂಡಳು.

ಅವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಗಾಬರಿ. ಟ್ವಿಂಕಲ್ ಳದು ಎಂತಹ ವಿಚಿತ್ರ ಬೇಡಿಕೆ! ತಾಯಿ ಮಗುವನ್ನು ಅಗಲಿಸುವುದು ನ್ಯಾಯವೇ…..? ಎಂಬ ವಿಚಾರ ಮನವನ್ನು ಕಾಡಿತು.

ಅಷ್ಟರಲ್ಲಿ ಟ್ವಿಂಕಲ್ ಥಟ್ಟಂತ ತನ್ನ ಕೈಯಲ್ಲಿದ್ದ ಬ್ಯಾಗ್‌ ನಿಂದ ಬಂಗಾರದ ಕಡಗಗಳನ್ನು ತೆಗೆದು ಮಗುವಿನ ಕೈಗೆ ತೊಡಿಸಿ, “ತುಂಬಾ ಲಕ್ಷಣವಾಗಿ ಕಾಣುತ್ತಿದೆ,” ಎನ್ನುತ್ತಾ ಸಂಭ್ರಮಿಸಿದಳು.

ಮುಂದಿನ ದಿನಗಳಲ್ಲಿ ನಾನು, ರೂಪ್ಲಿ ಏಕಾಂತದಲ್ಲಿದ್ದಾಗ, “ನೀನು ಮಗುವನ್ನು ಬಿಟ್ಟು ಅದ್ಹೇಗೆ ಇರುವಿ….?  ಹೆತ್ತ ಕರುಳು ಜೀವನ ಪರ್ಯಂತ ನೋವಿನಲ್ಲೇ ಕೈತೊಳೆಯಬೇಕಾಗುತ್ತದೆ,” ಎಂದು ನಾನು ರೂಪ್ಲಿಯನ್ನು ಕೇಳಿದೆ.

“ಮಗುನ್ನು ಕೊಡುವುದಾಗಿ ಅಕ್ಕನಿಗೆ ಭಾಷೆ ಕೊಟ್ಟಿದ್ದೇನೆ. ಮಗು ನಿಮ್ಮ ಸುಪರ್ದಿನಲ್ಲಿ ಚೆನ್ನಾಗಿ ಬೆಳೆದು, ವಿದ್ಯಾವಂತನಾಗುತ್ತಾನೆ. ಇಲ್ಲೇನಿದೆ….? ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ…. ದೈವೇಚ್ಛೆ ಇದ್ದಂತಾಗಲಿ. ಎಲ್ಲಿದ್ದರೂ ಅದು ನಮ್ಮಿಬ್ಬರ ಮಗು,” ಎಂದವಳ ಮಾತಿನಲ್ಲಿ ದೃಢ ಸಂಕಲ್ಪವಿತ್ತು.

ಅವಳ ಮಾತಿನಿಂದ ನನ್ನ ಕರುಳು ಚುರುಕ್ಕೆನ್ನುತ್ತಿತು. `ಓ ಹೆಣ್ಣೇ ನೀನೆಂತಹ ತ್ಯಾಗಮಯಿ…..!’ ಎಂದು ನನ್ನ ಮನಸ್ಸು ಅವಳಿಗಾಗಿ ಹಲುಬುತ್ತಿತ್ತು.

ಬ್ರಿಟಿಷರು ಮರಳಿ ಇಂಗ್ಲೆಂಡಿಗೆ ತೆರಳುವ ಕಾಲ ಸನ್ನಿಹಿತವಾಗಿತ್ತು. ಭಾರತ ದೇಶಕ್ಕೆ 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕಿತು. ನವೆಂಬರ್‌ 30 ರಂದು ನಾವು ಮದ್ರಾಸಿನಿಂದ ಹಡಗನ್ನು ಏರಬೇಕಿತ್ತು. ಮಗುವಿನ ಜನನಕ್ಕೆ ನಾನು ಕಾರಣವಾಗಿದ್ದರೂ, ರೂಪ್ಲಿ ಮಗುವನ್ನು ಹೆತ್ತವಳು, ಆದ್ದರಿಂದ ಅವಳೇ ಮಗುವನ್ನು ಪೋಷಿಸಲಿ ಎಂದು ಅದೆಷ್ಟೇ ತಿಳಿವಳಿಕೆ ಹೇಳಿದರೂ ಟ್ವಿಂಕಲ್ ರಾಜಿ ಮಾಡಿಕೊಳ್ಳಲು ತಯಾರಿರಲಿಲ್ಲ. ಹಟ ಬಿಡದ ಟ್ವಿಂಕಲ್ ಮಗುವನ್ನು ತನ್ನ ಸುಪರ್ದಿಗೆ ಬರಲು 19.10.1947ರಂದು ಹೊರಟೇಬಿಟ್ಟಳು. ರೂಪ್ಲಿ ಮಗುವನ್ನು ಟ್ವಿಂಕಲ್ ಗೆ ಹಸ್ತಾಂತರಿಸುವಷ್ಟರಲ್ಲಿ ಅವಳೆದೆ ಒಡೆದು ಹೋಗಿತ್ತು. ಕಣ್ಣೀರು ಧಾರೆಯಾಗಿ ಸುರಿಯುತ್ತಿತ್ತು, “ಅಕ್ಕಾ…. ನಮ್ಮ ಮಗುನ್ನು ಚೆನ್ನಾಗಿ ನೋಡಿಕೊಳ್ಳಿ. ಹೆತ್ತ ಕರುಳು ನಂದು ಮಿಡಿಯುತ್ತಿದೆ. ಎಲ್ಲೇ ಇರಲಿ, ಮಗು ಚೆನ್ನಾಗಿರಲಿ!” ಎನ್ನುತ್ತಾ ರೂಪ್ಲಿ ನಮ್ಮಿಬ್ಬರ ಪಾದ ಸ್ಪರ್ಶಿಸಿ ಭೋರಾಡಿ ಅತ್ತಿದ್ದಳು. ನನ್ನ ತೆಕ್ಕೆಗೆ ಬಿದ್ದು ರೋಧಿಸಿದ್ದಳು. ಸಂತೈಸುವ ಭರಾಟೆಯಲ್ಲಿ ಅವಳನ್ನು ಬಿಗಿದಪ್ಪಿಕೊಂಡು ಮನಸಾರೆ ಮುದ್ದಿಸಿದೆ.

“ನೀನು ನಿನ್ನ ಮನಸ್ಸಿಗೊಪ್ಪುವನನ್ನು ಮದುವೆಯಾಗಿ ಹೊಸ ಜೀವನ ಆರಂಭಿಸು,” ಎಂದಿದ್ದೆ.

ಭುಗಿಲೇಳುತ್ತಿದ್ದ ನೋವನ್ನು ಹತ್ತಿಕ್ಕಿಕೊಳ್ಳುತ್ತಾ, “ಗುಡಗುಂಟಿ ಅಮರೇಶ ನಡೆಸಿದಂತೆ ನಡೆಯುವೆ. ನೀವು ಚಿಂತಿಸದಿರಿ. ಈ ಬಡವಿಯ ನೆನಪು ನಿಮ್ಮ ಮನದಲ್ಲಿರಲಿ,” ಎಂದು ಹೇಳಿದಳು.

ಹೆತ್ತ ತಾಯಿಯ ನೋವು ಅರ್ಥವಾಯಿತೇನೋ ಎಂಬಂತೆ ಮಗು ಮುಗಿಲು ಮುಟ್ಟುವಂತೆ ಏರು ಧ್ವನಿಯಲ್ಲಿ ಚೀರಿ ಅಳುತ್ತಿತ್ತು. ಆ ಸನ್ನಿವೇಶ ಮನಕಲಕುವಂತಿತ್ತು. ಕೊನೆಗೂ ಹೃದಯಸ್ಪರ್ಶಿ ಸನ್ನಿವೇಶದಲ್ಲಿ ರೂಪ್ಲಿಯಿಂದ ಬೀಳ್ಕೊಂಡಿದ್ದೆ. ಲಂಡನ್‌ ಗೆ ಮರಳಿದ ಮೇಲೆ ರೂಪ್ಲಿಯ ಅಮರ್‌ ಟಿಂಕಲ್ ಗೆ ಜೋನ್ಸ್ ಆಗಿ ಪರಿವರ್ತನೆಯಾದ.

ತಂದೆ ದಾಖಲಿಸಿದ್ದ ಘಟನೆಗಳನ್ನು ಓದುತ್ತಿದ್ದಂತೆ ಜೋನ್ಸ್ ಆರ್ದ್ರನಾದ. ರೂಪ್ಲಿ ಬಾಯಿಯ ಫೋಟೋ ಮತ್ತೆ ಮತ್ತೆ ನೋಡಿದ. ಹಿಂದೆ ಮುಂದೆ ತಿರುಗಿಸಿ ನೋಡಿ ಭಾವೋದ್ವೇಗಕ್ಕೆ ಒಳಗಾದ.

`ಎಂತಹ ಚೆಲುವೆ ನನ್ನ ತಾಯಿ….?  ಟ್ವಿಂಕಲ್ ಅಮ್ಮನಿಗಿಂತಲೂ ಸುಂದರಿ,’ ಎಂದುಕೊಂಡ.

ತಂದೆಯ ಹತ್ತಿರ ಬಂದು ಗಳಗಳನೇ ಅತ್ತ. ಜಾನ್‌ ಮಲಗಿದ್ದಲ್ಲೇ ಮಗನನ್ನು ಸಂತೈಸುತ್ತಾ, “ನನಗಂತೂ ಮತ್ತೆ ನಿನ್ನ ತಾಯಿಯನ್ನು ನೋಡಲು ಆಗಲಿಲ್ಲ. ನೀನಾದರೂ ಒಂದು ಸಾರಿ ಇಂಡಿಯಾಕ್ಕೆ ನಿನ್ನ ತಾಯಿಯ ದರ್ಶನ, ಆಶೀರ್ವಾದ ಪಡೆದುಕೊಂಡು ಬಾ,” ಜಾನ್‌ ಮಗನಿಗೆ ಹೇಳಿದ.

“ಹಾಗೇ ಆಗಲಿ ಡ್ಯಾಡ್‌,” ಎಂದು ತಂದೆಗೆ ಭರವಸೆ ನೀಡಿದ.

ಇದಾದ ಒಂದೆರಡು ವಾರಗಳಲ್ಲಿ ಜಾನ್‌ ಮರಣಿಸಿದ. ಜೋನ್ಸ್ ದುಃಖತಪ್ತನಾದ. ಅಪ್ಪ ಕೊಟ್ಟಿದ್ದ ಡೈರಿಯನ್ನು ಹೆಂಡತಿ ಲಿಲ್ಲಿಗೂ ತೋರಿಸಿದ. ಅವಳೂ ಅಚ್ಚರಿಗೊಂಡಳು. ಒಂದು ಸಲ ಇಂಡಿಯಾಕ್ಕೆ ಹೋಗಿ ಬರೋಣವೆಂದ. ಲಿಲ್ಲಿಯೂ ಹ್ಞೂಂ ಎಂದಳು. ನಂತರ ಭಾರತ ದೇಶಕ್ಕೆ ಬಂದೇಬಿಟ್ಟರು.

“ಅಮ್ಮಾ, ಈ ಪುಸ್ತಕದಲ್ಲಿ ಅಪ್ಪಾಜಿ ನಿಮ್ಮಿಬ್ಬರ ಪ್ರೀತಿಯ ಸಂಬಂಧದ ಬಗ್ಗೆ ಬರೆದಿದ್ದಾರೆ. ನೀವು ನನ್ನ ಹೆತ್ತ ತಾಯಿ ಎಂದು ಗೊತ್ತಾಯಿತು. ಇವಳು ನಿಮ್ಮ ಸೊಸೆ ಲಿಲ್ಲಿ….” ಎಂದೆನ್ನುತ್ತಾ ಪತ್ನಿ ಜೊತೆಗೆ ರೂಪ್ಲಿ ಬಾಯಿಯ ಪಾದಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ. ಒಂದರೆ ಕ್ಷಣ ರೂಪ್ಲಿ ಮೂಕಿಯಾಗಿಬಿಟ್ಟಳು.

ನಂತರ, “ಹೌದೇ….? ಇದು ಕನಸೋ, ನನಸೋ….? ಒಂದೂ ಗೊತ್ತಾಗುತ್ತಿಲ್ಲವಲ್ಲ….? ನನ್ನ ಜೀವನದಲ್ಲಿ ಮತ್ತೊಮ್ಮೆ ನನ್ನ ಮಗನನ್ನು ಕಾಣುತ್ತೇನೆಂದು ಅಂದುಕೊಂಡಿರಲಿಲ್ಲ. ಸಂತೋಷವಾಗುತ್ತಿದೆ,” ಎಂದು ಮಗ ಸೊಸೆಯರನ್ನು ತಬ್ಬಿಕೊಂಡು ಸಂಭ್ರಮಿಸಿದಳು. ಅಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.

“ಸಾಹೇಬ್ರು, ಟ್ವಿಂಕಲ್ ಅಕ್ಕ ಹೇಗಿದ್ದಾರೆ….?” ಎಂದು ಕೇಳಿದ ರೂಪ್ಲಿಯ ಪ್ರಶ್ನೆಗೆ ಜೋನ್ಸ್ ತತ್ತರಿಸಿದ. ಲಿಲ್ಲಿಯ ಮುಖ ನೋಡಿದ. ತುಸು ಹೊತ್ತು ಮೌನ ಅಲ್ಲಿ ತಾಂಡವವಾಡಿತು.

ನಂತರ ಅವನು ಮೌನ ಮುರಿದು, “ಅಮ್ಮಾ, ನಿನ್ನ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೋ ತಿಳಿಯದಾಗಿದೆ. ಆದರೂ ನಿನಗೆ ಸತ್ಯ ಗೊತ್ತಾಗಲೇ ಬೇಕಲ್ವಾ…..? ಟ್ವಿಂಕಲ್ ಅಮ್ಮ ಗತಿಸಿ ಐದು ವರ್ಷಗಳ ಮೇಲಾಯ್ತು. ಅಪ್ಪಾಜಿ ಈಗ್ಗೆ ಒಂದೆರಡು ತಿಂಗಳ ಹಿಂದಷ್ಟೇ ನಮ್ಮನ್ನು ಅಗಲಿದರು,” ಎಂದ.

“ಹೌದಾ……?” ಎಂದ ರೂಪ್ಲಿಗೆ ಮುಂದೆ ಮಾತುಗಳು ಹೊರಡದಾದವು. ಬಿಕ್ಕಿ ಬಿಕ್ಕಿ ಅಳತೊಡಗಿದಳು.

“ಅಮ್ಮಾ…. ಕಾಲನ ಕರೆಗೆ ಎಲ್ಲರೂ ಒಂದಲ್ಲ, ಒಂದು ದಿನ ಓಗೊಡಲೇ ಬೇಕಲ್ಲ…? ಅವರದು ಭೂಮಿಯ ಋಣ ಮುಗಿದಿತ್ತು, ಹೊರಟು ಹೋದರು. ನೀವು ಸಮಾಧಾನ ಮಾಡಿಕೊಳ್ಳಿ,” ಲಿಲ್ಲಿ ಮತ್ತು ಜೋನ್ಸ್ ಅವಳನ್ನು ತೆಕ್ಕೆಗೆ ಹಾಕಿಕೊಂಡು ಸಮಾಧಾನ ಮಾಡತೊಡಗಿದರು.

ಮತ್ತೆ ಮೌನ ಆವರಿಸಿತು.“ಮಗಾ, ನೀನು ಹೇಳುವುದೂ ಸರಿಯೇ. ಇದುವರೆಗೂ ಗಂಡನಿದ್ದೂ ವಿಧವೆಯಂತೆ ಜೀವನ ಮಾಡಿದೆ. ಈಗ ನಿಜವಾಗಿಯೂ ವಿಧವೆಯಾದೆ,” ರೂಪ್ಲಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ದುಃಖತಪ್ತ ಮನಗಳಲ್ಲಿ ಬಹಳ ಹೊತ್ತಿನವರೆಗೆ ಮಾತುಗಳು ಹೊರಡಲೇ ಇಲ್ಲ.

“ಅಮ್ಮಾ…. ಅಪ್ಪಾಜಿ ಲಂಡನ್‌ ಗೆ ಹೋದ ನಂತರ ನೀವು ಬೇರೊಬ್ಬರನ್ನು ಮದುವೆಯಾಗಲಿಲ್ಲವೇ….?” ಜೋನ್ಸ್ ಅನುಮಾನಿಸುತ್ತಾ ಕೇಳಿದ.

ರೂಪ್ಲಿಯ ದುಃಖ ತಹಬಂದಿಗೆ ಬಂದ ನಂತರ, “ಅಮ್ಮ ಅಪ್ಪನಿಂದ ಹಿಡಿದು ಬಹಳಷ್ಟು ಮಂದಿ ನನಗೆ ಮದುವೆಯಾಗಲು ಒತ್ತಡ ಹೇರಿದ್ದಂತೂ ನಿಜ. ನಿಜವಾದ ಸತಿಗೆ ಗಂಡನೊಬ್ಬನೇ. ಹೀಗಾಗಿ ನಾನು ಸಾಹೇಬರ ನೆನಪಲ್ಲೇ ಜೀವನ ಸವೆಸಿದೆ. ಹಲವಾರು ಎಡರು ತೊಡರುಗಳು, ಜನನಿಂದೆಗಳು ಮುಕ್ಕಿ ತಿನ್ನಲು ಪ್ರಯತ್ನಿಸಿದರೂ ನಾನು ಮಾತ್ರ ನನ್ನ ನಿರ್ಧಾರ ಬದಲಿಸಲಿಲ್ಲ.”

“ಅಮ್ಮಾ…. ನೀವು ಮಹಾತಪಸ್ವಿ….”

“ಇರಲಿ…. ನನ್ನ ಮೊಮ್ಮಕ್ಕಳು….?”

“ನಮಗಿಬ್ಬರು ಮಕ್ಕಳು. ಮಗಳು, ಮಗ, ಲಂಡನ್ನಿನಲ್ಲಿ ಇದ್ದಾರೆ.”

ಅಷ್ಚರಲ್ಲಿ ಲಿಲ್ಲಿ ಕಾರಿನಲ್ಲಿದ್ದ ಬ್ಯಾಗೊಂದನ್ನು ತರಿಸಿದ್ದಳು. ಅದರಲ್ಲಿ ರೂಪ್ಲಿ ಬಾಯಿಗಾಗಿ ತಂದಿದ್ದ ಬಟ್ಟೆ ಬರೆಗಳು, ಸಿಹಿ ತಿಂಡಿಯ ಪೊಟ್ಟಣಗಳು, ಹಣ್ಣು ಹಂಪಲುಗಳು ತುಂಬಿದ್ದವು. ಕೈಯಲ್ಲಿ ಹಿಡಿದುಕೊಂಡಿದ್ದ ಜ್ಯೂವೆಲರಿ ಬಾಕ್ಸ್ ಗಳನ್ನು ತನ್ನತ್ತೆಯ ಕೈಯಲ್ಲಿಟ್ಟಳು ಲಿಲ್ಲಿ.

“ಅಯ್ಯೋ….. ಇದನ್ನೆಲ್ಲಾ ತೆಗೆದುಕೊಂಡು ಈ ವಯಸ್ಸಿನಲ್ಲಿ ನಾನೇನು ಮಾಡಲಿ…..?” ಅನುಮಾನಿಸತೊಡಗಿದಳು.

“ಅಮ್ಮಾ….. ನಮ್ಮ ಪ್ರೀತಿಗಾಗಿ ತಂದಿದ್ದೇವೆ, ತೆಗೆದುಕೊಳ್ಳಿ. ನಿಮ್ಮ ಮನಸ್ಸಿಗೆ ಹೇಗೆ ಅನಿಸುತ್ತೋ ಹಾಗೆ ಮಾಡಿ,” ಜೋನ್ಸ್ ಮತ್ತು ಲಿಲ್ಲಿ ಒಟ್ಟಿಗೆ ಹೇಳಿದರು.

ಲಿಲ್ಲಿಯ ಕೈಯಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಾ, ಮಗ ಸೊಸೆಯನ್ನು ತಬ್ಬಿಕೊಂಡು ಆನಂದಾತಿರೇಕದಿಂದ ರೂಪ್ಲಿ ಸಂಭ್ರಮಿಸುತ್ತಿದ್ದರೆ, “ಜನನೀ, ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ,” ಎಂದು ಜೋನ್ಸ್ ಖುಷಿಯ ಪರಾಕಾಷ್ಠೆಯಲ್ಲಿ ಹೇಳಿದ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ