ಕಥೆ - ಅರವಿಂದ ಜೋಷಿ
ಅನಾಥನಾದ ಪ್ರದೀಪನಿಗೆ ಆಶ್ರಯ ನೀಡಿ, ಮುಂದೆ ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗುವಂತೆ ರೂಪಿಸಲು, ಯಾವುದೇ ಸಂಬಂಧವಿಲ್ಲದ ಮಧ್ಯಮ ವರ್ಗದ ಗುರುಮೂರ್ತಿ ಬಹಳ ಶ್ರಮಿಸಿದರು. ಮುಂದೆ ಅವರನ್ನು ಬಹುತೇಕ ಮರೆತಿದ್ದ ಪ್ರದೀಪ್, ಅವರ ಋಣ ತೀರಿಸಿಕೊಂಡದ್ದು ಹೇಗೆ.....?
ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿ ಪ್ರದೀಪ್ ರ ಕಾರು, ರಸ್ತೆ ಬದಿಯ ಚಹಾ ಮಾರು ಗೂಡಂಗಡಿ ಎದುರು ಬಂದು ನಿಂತಾಗ, ಚಹಾ ಮಾರು ಗಾಬರಿಗೊಂಡ. ಜಿಲ್ಲಾಧಿಕಾರಿ ಪ್ರದೀಪ್ ಕಾರಿನಿಂದ ಇಳಿದು ಬಂದು ಆ ಚಹಾ ಮಾರುವವನಿಗೆ, ``ಏನಪ್ಪಾ ಇಲ್ಲಿ ಗುರುಮೂರ್ತಿ ಎಲ್ಲಿದ್ದಾರೆ?'' ಎಂದು ಕೇಳಿದರು.
ಚಹಾ ಮಾರುವವನು, ``ಯಾವ ಗುರುಮೂರ್ತಿ ಸಾಹೇಬ್ರೇ....? ಅವನು ಯಾರು ಅಂತ ಗೊತ್ತಿಲ್ಲ,'' ಎಂದ.
ಮುಂದುವರಿದ ಜಿಲ್ಲಾಧಿಕಾರಿ, ``ಅವರೇ.... ಅವರೆ ಕಣಪ್ಪ ಇಲ್ಲಿ ಚಹಾ ಮಾಡಿ ಮಾರುತ್ತಿದ್ದವರು,'' ಎಂದರು.
``ಓ..... ಅವರಾ ಸಾರ್..... ಈಗ್ಗೆ 34 ವರ್ಷಗಳ ಹಿಂದೆನೇ ತಮ್ಮ ಹಳ್ಳಿಗೆ ಹೋದರು. ಆವತ್ತಿನಿಂದ ನಾನೇ ಇಲ್ಲಿ ಚಹಾ ಮಾಡಿ ಮಾರುತ್ತಿದ್ದೇನೆ,'' ಎಂದು ಹೇಳಿದ.
ಅದನ್ನು ಕೇಳುತ್ತಿದ್ದಂತೆಯೇ ಜಿಲ್ಲಾಧಿಕಾರಿ ಪ್ರದೀಪ್ ರ ಮುಖ ಸಪ್ಪಗಾಯಿತು. ಪುನಃ ಅವರು ಆ ಚಹಾ ಮಾರುವವನಿಗೆ, ``ಅವರು ಹಳ್ಳಿಗೆ ಯಾಕೆ ಹೋದ್ರು ಅಂತ ನಿನಗೇನಾದರೂ ಗೊತ್ತಾ.....?'' ಎಂದು ಕೇಳಿದರು.''
ಗೊತ್ತಿಲ್ಲ ಸಾರ್..... ನಾನಂತೂ ಆ ಬಗ್ಗೆ ಅವರನ್ನು ಕೇಳಿಯೂ ಇಲ್ಲ.... ನಾನು ಇಲ್ಲಿ ಬಂದಿದ್ದಾಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿಶ್ಶಕ್ತಿಯಿಂದ ಒಳ್ಳೆ ಕಡ್ಡಿಯಂತಾಗಿದ್ದರು. ಹೀಗಾಗಿ ಬಂದಷ್ಟು ಬರಲಿ ಎಂದು ತಮ್ಮ ಈ ಅಂಗಡಿಯನ್ನು ನನಗೆ ಮಾರಿ ಹೊರಟು ಹೋದ್ರು....''
ಅವನ ಮಾತು ಕೇಳಿದ ಜಿಲ್ಲಾಧಿಕಾರಿ ಪ್ರದೀಪ್ ರ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಅವರಿಗೆ ತಮ್ಮ ಮೇಲೆಯೇ ಕೋಪ ಬರತೊಡಗಿತು. ಅವರು ತಮ್ಮಷ್ಟಕ್ಕೆ ತಾವೇ, `ಛೇ.... ಅವರು ಎಂಥಾ ಒಳ್ಳೆಯ ಮನುಷ್ಯ.... ಇಷ್ಟು ಬೇಗ ಹಳ್ಳಿ ಸೇರಿಕೊಂಡ್ರಾ....' ಎಂದುಕೊಳ್ಳುತ್ತಾ ಅಲ್ಲಿದ್ದ ಒಂದು ಹಳೇ ಕಾಲದ ಫೋಲ್ಡಿಂಗ್ ಕುರ್ಚಿಯನ್ನು ಎಳೆದುಕೊಂಡು ಕುಳಿತರು.
ಚಹಾ ಮಾರುವವನು, ``ಸಾಹೇಬ್ರೇ, ಚಹಾ ಮಾಡಿ ಕೊಡ್ಲಾ.....?'' ಎಂದು ಕೇಳಿದ.
``ಹ್ಞಾಂ.... ಎರಡರಲ್ಲಿ ಮೂರು ಮಾಡಿ, ಒಂದು ಇಲ್ಲಿ ಕೊಡು, ಉಳಿದೆರಡನ್ನು ಕಾರಿನಲ್ಲಿ ಕುಳಿತ ಡ್ರೈವರ್ ಹಾಗೂ ಪಿ.ಎ.ಗೆ ಕೊಡು,'' ಎಂದು ಹೇಳಿ ಅದೇ ಕುರ್ಚಿಯಲ್ಲಿ ಒರಗಿ ಕುಳಿತುಕೊಂಡರು. ಹಾಗೇ ಕುಳಿತಿದ್ದ ಅವರಿಗೆ ಹದಿನೈದು ವರ್ಷಗಳ ಹಿಂದಿನ ಘಟನೆಗಳು ಮನದಲ್ಲಿ ಮೂಡಲಾರಂಭಿಸಿತು.
ಹೌದು....ಅಂದು ನಾನು ಇಲ್ಲೇ ಇದ್ದ ಒಂದು ಹಳೇ ಮರದ ಬೆಂಚಿನ ಮೇಲೆ ಹಸಿದು ಬಂದು ನಿತ್ರಾಣನಾಗಿ ಕುಳಿತಿದ್ದೆ. ಆಗ ಅಲ್ಲಿ ಚಹಾ ಮಾಡಿ ಮಾರುತ್ತಿದ್ದ ಗುರುಮೂರ್ತಿ ನನ್ನನ್ನು ಕಂಡು ಕಕ್ಕುಲಾತಿಯಿಂದ, ``ಯಾರಪ್ಪಾ ನೀನು....? ತುಂಬಾ ದುಃಖದಲ್ಲಿ ಇದ್ದಂತೆ ಕಾಣ್ತೀಯಾ.... ಚಹಾ ಮಾಡಿ ಕೊಡಲೇ....?'' ಎಂದು ಕೇಳಿದರು.
ಹಾಗೆ ಹೇಳಿದೊಡನೆ ನನಗೆ ಕಣ್ತುಂಬ ನೀರು ಬಂದು, ``ಅಂಕಲ್ ನನ್ನ ಹತ್ರ ದುಡ್ಡಿಲ್ಲ.....'' ಎಂದಿದ್ದೆ.
ಅದಕ್ಕವರು, ``ಅಯ್ಯೋ.... ಹುಚ್ಚಪ್ಪಾ, ನೀನು ತುಂಬಾ ಹಸಿದಂತೆ ಕಾಣ್ತಿದ್ದೀ. ಚಹಾದ ಜೊತೆಗೆ ಬಿಸ್ಕತ್ತು ಕೊಡ್ತೀನಿ ತಿನ್ನು,'' ಎಂದು ಒಂದು ಲೋಟ ಚಹಾ ಹಾಗೂ ಹತ್ತಾರು ಬಿಸ್ಕತ್ತು ಕೊಟ್ಟರು. ಅದನ್ನು ತಿಂದ ನಂತರ ನಾನು ಇನ್ನೂ ಅಲ್ಲಿಯೇ ಕುಳಿತಿದ್ದಾಗ ಗುರುಮೂರ್ತಿಯವರು ಹತ್ತಿರ ಬಂದು, ``ಏನಪ್ಪಾ....ನೀನು ಮನೆಯಿಂದ ಓಡಿ ಬಂದಿದ್ದೀಯಾ....?'' ಎಂದು ಕೇಳಿದರು.





