ಎಲ್ಲೋರಾದ ಗುಹಾಂತರ ದೇವಾಲಯಗಳ ಅದ್ಭುತ ಶಿಲ್ಪಕಲೆ ಹಾಗೂ ತ್ರಿಧರ್ಮ ಸಂಗಮದ ವೈಭವವನ್ನು ಸಂಕೇತಿಸುವ ಚಿತ್ತಾರದ ಬಗ್ಗೆ ಸವಿವರವಾಗಿ ತಿಳಿಯೋಣವೇ…….?
ಕಳೆದ ಮಾರ್ಚ್ ಸಂಚಿಕೆಯಲ್ಲಿ ನಾನು ಅಜಂತಾ ಗುಹಾಲಯಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಸಲದ ಪ್ರವಾಸಿ ಲೇಖನದಲ್ಲಿ ಎಲ್ಲೋರಾ ಕೈಲಾಸನಾಥ ಹಾಗೂ ಇತರೆ ಗುಹಾಲಯಗಳ ಬಗ್ಗೆ ತಿಳಿದುಕೊಳ್ಳೋಣವೇ……?
ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ
ಔರಂಗಾಬಾದ್ ನಿಂದ 18 ಮೈಲುಗಳ ದೂರದಲ್ಲಿ ಎಲ್ಲೋರಾದ ಗುಹೆಗಳು ಇವೆ. ಹಾಗೆ ದಾರಿಯಲ್ಲಿ ಹೋಗುವಾಗ ನಮಗೆ ಗೃಷ್ಣೇಶ್ವರ ದೇವಾಲಯದ ದರ್ಶನವಾಯಿತು. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಇದು ಅತಿ ಕಿರಿದಾದ ಹಾಗೂ ಶಕ್ತಿವಂತ ಲಿಂಗವಾಗಿದೆ. ಗೃಷ್ಣೇಶ್ವರ ಎಂದರೆ ದಯಾವಂತ ಎಂದು ಅರ್ಥ. 14ನೇ ಶತಮಾನದಲ್ಲಿ ದೆಹಲಿಯ ಸುಲ್ತಾನರು ಮರಾಠ ರಾಜರ ಮೇಲೆ ದಂಡೆತ್ತಿ ಬಂದು ಈ ದೇವಾಲಯವನ್ನು ಸಂಪೂರ್ಣವಾಗಿ ಹಾಳುಗೆಡವಿದರು. ತದನಂತರ ಮರಾಠ ರಾಣಿ ಅಹಲ್ಯಾ ಬಾಯೀ ಹೋಳ್ಕರ್ ಇದನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ಮಕ್ಕಳಾಗದೇ ಇರುವ ದಂಪತಿಗಳು, ತಮಗೆ ಮಕ್ಕಳು ಆಗಬೇಕೆಂದು ಈ ದೇವಾಲಯಕ್ಕೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ನಾವು ದೇವರ ದರ್ಶನ ಪಡೆದು ಮುಂದೆ ಸಾಗಿದೆ.

ಎಲ್ಲೋರಾದ ಗುಹಾಂತರ ದೇವಾಲಯಗಳು
ದೇವರು ಮತ್ತು ದೇವತೆಗಳು ಹಾಗೂ ಬೃಹತ್ ಧರ್ಮಗಳ ಸ್ಮರಣೆಯಾಗಿರುವ ಎಲ್ಲೋರಾದ ಗುಹೆಗಳು ಬೌದ್ಧ ಧರ್ಮ, ಹಿಂದೂ ಹಾಗೂ ಜೈನ ಧರ್ಮಗಳ ಸಂಗಮವಾಗಿವೆ. ಪ್ರತಿಯೊಂದು ಗುಹೆಗಳೂ ತಮ್ಮದೇ ಆದ ಕಲಾಶೈಲಿಯನ್ನು ಹೊಂದಿದ್ದು, ಎಲ್ಲ ಧರ್ಮದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಎಲ್ಲೋರಾ ರಾಷ್ಟ್ರಕೂಟ ಅರಸರ ಕಾಲದ ಗುಹಾಲಯವಾಗಿದ್ದು, ಮೊಟ್ಟ ಮೊದಲು ಸಿಗುವ ಗುಹಾ ಕ್ರಮ ಸಂಖ್ಯೆ 16. ಇದು ಶಿವನ ಕೈಲಾಸ ದೇವಾಲಯವಾಗಿದೆ. ಇಲ್ಲಿ ಒಟ್ಟು 24 ಗುಹಾಲಯವಿದ್ದು, ಕ್ರಮ ಸಂಖ್ಯೆ 112 ಬೌದ್ಧ, 1329 ಹಿಂದೂ ಹಾಗೂ 3034 ಜೈನ ಧರ್ಮದ ಗುಹಾಲಯವಾಗಿದೆ. ಎಲ್ಲ ಗುಹಾಲಯವೂ ನಯನ ಮನೋಹರವಾಗಿದ್ದು, ನಮ್ಮ ಭಾರತೀಯ ಸಂಸ್ಕೃತಿಯ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಕೈಗನ್ನಡಿಯಂತಿದೆ.
ಏಕಶಿಲಾ ಕೈಲಾಸನಾಥ ದೇವಾಲಯ ಇದರ ಕ್ರ.ಸಂ.16. ಎಲ್ಲೋರಾ ಗುಹಾಲಯಕ್ಕೆ ಕಾಲಿಡುತ್ತಿದ್ದಂತೆ ಮೊಟ್ಟ ಮೊದಲು ಸಿಗುವ ಗುಹಾ ಕ್ರ.ಸಂ.16. ಅದುವೇ ಶಿವನ ನಿವಾಸ ಸ್ಥಾನವಾದ ಕೈಲಾಸ ಪರ್ವತದ ಉತ್ಪನ್ನವಿದ್ದು, ಎಲ್ಲೋರಾ ಉತ್ಪನ್ನಗಳ ಪೈಕಿ ಅತ್ಯುತ್ತಮವಾದದ್ದು ಮತ್ತು ಭಾರತದಲ್ಲಿ ಪ್ರಸಿದ್ಧ ಸ್ಮಾರಕ ಆಗಿದೆ. 9ನೇ ಶತಮಾನದ ಕಲಾಕುಶಲತೆಯನ್ನು ತೋರುವ ಕಲ್ಲು ಕೆತ್ತನೆಯ ಶಿಲಾ ವಿನ್ಯಾಸ ಇದಾಗಿದೆ.
ಈ ಕೈಲಾಸ ದೇವಾಲಯ ವಿಶ್ವದಲ್ಲಿಯೇ ಏಕ ಶಿಲ್ಪಕಲಾ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂರಾರು ಶಿಲ್ಪ ಕಲಾಕಾರರು ಹಾಗೂ ವಿನ್ಯಾಸಕಾರರು ಈ ಭವ್ಯವಾದ ಕಲ್ಲು ಕೆತ್ತನೆಯನ್ನು ಮಾಡಿದ್ದಾರೆ. ಬಹುಶಃ 30 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಕೆತ್ತನೆಯ ಕಾರ್ಯಕ್ಕೆ ಸುಮಾರು 100 ವರ್ಷಗಳಷ್ಟು ಸಮಯ ತೆಗೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಈ ಗುಹಾಲಯ ಒಟ್ಟು 3 ಅಂತಸ್ತುಗಳಿಂದ ಕೂಡಿದ್ದು, ಇಲ್ಲಿ ನಾವು ಮೊದಲಿಗೆ ಗಜರಾಜರು ಶ್ರೀದೇವಿ ಲಕ್ಷ್ಮಿಗೆ ತಮ್ಮ ಸೊಂಡಿಲುಗಳಿಂದ ನೀರನ್ನು ಎರಚಿ ಸ್ನಾನ ಮಾಡಿಸುತ್ತಿರುವ ವಿಗ್ರಹವನ್ನು ನೋಡಬಹುದು. ಹಾಗೆಯೇ ನಾಟ್ಯವಾಡುತ್ತಿರುವ ನಟರಾಜನ ವಿಗ್ರಹ, ದೊಡ್ಡ ದೊಡ್ಡ ಸ್ತಂಭಗಳು, ಬೃಹದಾಕಾರದ ಆನೆಗಳು, ಕುದುರೆ ಹಾಗೂ ಸಿಂಹಗಳ ಕಲ್ಲಿನ ಕೆತ್ತನೆಯನ್ನು ನೋಡಬಹುದು. ಹಾಗೆಯೇ ಇಲ್ಲಿಯ ಗೋಡೆಗಳ ಮೇಲೆ ದೇವಿಯು ಮಹಿಷಾಸುರನನ್ನು ಮರ್ದನ ಮಾಡುತ್ತಿರುವ, ರಾವಣಾಸುರನು ಸೀತಾ ಮಾತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಣ ಮಾಡುತ್ತಿರುವ, ದಶಕಂಠನಾದ ರಾಣನು ಭೂ ಕೈಲಾಸವನ್ನು ಎತ್ತಿ ಹಿಡಿದಿರುವ ಶಿಲ್ಪವನ್ನು ಅತಿ ಮನೋಹರವಾಗಿ ಕೆತ್ತಲಾಗಿದೆ.
ಬಹು ವಿಶೇಷವಾಗಿ ನಾವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಉತ್ತರ ಭಾಗದ ಗೋಡೆಗಳ ಮೇಲೆ ಮಹಾಭಾರತ ಹಾಗೂ ದಕ್ಷಿಣ ಭಾಗದ ಗೋಡೆಗಳ ಮೇಲೆ ರಾಮಾಯಣದ ಪಾತ್ರಧಾರಿಗಳ ಕಥೆಗಳನ್ನು ಅತೀ ಸೂಕ್ಷ್ಮವಾಗಿ ಕೆತ್ತಲಾಗಿದೆ.
ಈ ಕೈಲಾಸ ದೇವಾಲಯದ ಗರ್ಭಗುಡಿಯಲ್ಲಿ ಶಿವನ ಲಿಂಗವಿದ್ದು, ಈ ದೇವಾಲಯವನ್ನು ನಾವು ಒಟ್ಟು 4 ಭಾಗಗಳಾಗಿ ನೋಡಬಹುದು. ಅಂದರೆ ಗರ್ಭಗುಡಿ, ನೃತ್ಯ ಸಭಾಮಂಟಪ, ನಂದಿ ಸಭಾಮಂಟಪ, (ಇಲ್ಲಿ ನಾವು ನಂದಿ ವಿಗ್ರಹವನ್ನು ನೋಡಬಹುದು) ಹಾಗೂ ಕೊನೆಯದಾಗಿ ಗ್ಯಾಲರಿ (ಉಪ್ಪರಿಗೆ). ಇಡೀ ದೇವಾಲಯದ ಸುತ್ತಲೂ ಆನೆ, ಕುದುರೆ ಹಾಗೂ ಸಿಂಹಗಳು ಸುತ್ತುವರಿದಿದ್ದು ಇಡೀ ಕೈಲಾಸನಾಥ ದೇವಾಲಯವನ್ನು ಎತ್ತಿ ಹಿಡಿದಿರುವಂತೆ ಭಾಸವಾಗುತ್ತದೆ.

ಔರಂಗಜೇಬ್ ನಿರ್ಮಿಸಿದ ಮಹಾದ್ವಾರ
ಈ ಕೈಲಾಸನಾಥ ದೇವಾಲಯದ ಮೇಲೆ ಔರಂಗಜೇಬ್ ತನ್ನ ಸೈನಿಕರೊಂದಿಗೆ ದಂಡೆತ್ತಿ ಬಂದು ಇಲ್ಲಿಯ ಅನೇಕ ವಿಗ್ರಹ ಹಾಗೂ ಭಾರಿ ಗಾತ್ರದ ಕಲ್ಲಿನ ಆನೆಗಳ ಸೊಂಡಿಲುಗಳನ್ನು ತುಂಡರಿಸಿದ್ದು, ಈ ದೃಶ್ಯವನ್ನು ನೋಡಿದರೆ ನಮ್ಮ ಭಾರತೀಯರ ರಕ್ತ ಕುದಿಯದೇ ಸುಮ್ಮನಿರದು.
ಕೊನೆಯಲ್ಲಿ ಔರಂಗಜೇಬ್ ಕೈಲಾಸನಾಥ ದೇವಾಲಯದ ಗರ್ಭಗುಡಿಯಲ್ಲಿ ಇರುವ ಶಿವನ ಲಿಂಗವನ್ನು ನಾಶಮಾಡಲು ಬರುವ ಅದೇ ಸಮಯದಲ್ಲಿ ಅವನಿಗೆ ತನ್ನ ಪ್ರೀತಿಯ ಮಗ, ಹೆಂಡತಿ ಹಾಗೂ ಅವನ ಪ್ರಿಯವಾದ ಕುದುರೆ ಮರಣ ಹೊಂದಿದ ಸಂದೇಶ ಬರುತ್ತದೆ. ತನ್ನ ತಪ್ಪಿನ ಅವರಿಗಾಗಿ ಶಿವನ ಹತ್ತಿರ ಕ್ಷಮೆ ಯಾಚಿಸಿ, ಔರಂಗಜೇಬ್ ಕೈಲಾಸಘರಿಗೆ ಪ್ರವೇಶ ದ್ವಾರವನ್ನು ನಿರ್ಮಿಸಿಕೊಟ್ಟನು.
112 ಬೌದ್ಧ ಗುಹಾಲಯ
ಕ್ರ.ಸಂ. 1, 2, 3, 4 ಗುಹಾಲಯ ಬೌದ್ಧ ಭಿಕ್ಕುಗಳು ಧ್ಯಾನ ಮಾಡುವ ಗುಹಾಲಯವಾಗಿದ್ದು, ಎಲ್ಲಾ ಗುಹೆಗಳಲ್ಲೂ ಬುದ್ಧನ ವಿಗ್ರಹ ಹಾಗೂ ಅವನ ಅನುಯಾಯಿಗಳಾದ ವಜ್ರಪಾಣಿ, ಪದ್ಮಪಾಣಿಯ ವಿಗ್ರಹವಿದೆ. 5ನೇ ಗುಹಾಲಯ ಬೌದ್ಧ ಭಿಕ್ಕುಗಳ ಊಟದ ಕೋಣೆಯಾಗಿದೆ. ಇಲ್ಲಿನ 9ನೇ ಗುಹೆಯಲ್ಲಿ ಬುದ್ಧನ 15 ಅಡಿ ಎತ್ತರದ ವಿಗ್ರಹ ಹಾಗೂ ಸೂರಿನ ಮೇಲೆ ನಾಗ ರಾಣಿಯರು, ನರ್ತಕಿಯರು ಹಾಗೂ ಸಂಗೀತಕಾರರ ಶಿಲ್ಪಕಲೆಯನ್ನು ನೋಡಬಹುದು.

1329 ಹಿಂದೂ ಗುಹಾಲಯ
13ನೇ ಗುಹೆ ಅಪೂರ್ಣವಾಗಿದ್ದು, 1429ರ ಗುಹಾಲಯಗಳಲ್ಲಿ ಶಿವ ಹಾಗೂ ವಿಷ್ಣು ದೇವರುಗಳ ವಿಗ್ರಹವಿದೆ. ಇಲ್ಲಿ ನಾವು ಹರಿಹರ, ಶಿವ ಹಾಗೂ ಪಾರ್ವತಿ ದೇವಿ ಚೌಕಾಬಾರವನ್ನು ಆಡುತ್ತಿರುವುದು, ಸೇವಕಿಯರು ಪಾರ್ವತಿದೇವಿಗೆ ಗಾಳಿ ಬೀಸುತ್ತಿರುವ ಮತ್ತು ಅರ್ಧನಾರೀಶ್ವರ, ನಟರಾಜ, ಪಾರ್ವತಿ ಕಲ್ಯಾಣ, ವಿಷ್ಣುವಿನ ದಶಾವತಾರಾದ ಉಗ್ರ ನರಸಿಂಹ, ವರಾಹ, ವಾಮನ ಅವತಾರದ ಶಿಲ್ಪಕಲೆಗಳನ್ನು ನೋಡಬಹುದು.
29ನೇ ಗುಹೆಯನ್ನು ಧುಮರ್ ವೇಣಾ ಎಂದು ಕರೆಯುತ್ತಾರೆ. ವೇಣಾ ಎಂದರೆ ಮರಾಠಿ ಭಾಷೆಯಲ್ಲಿ ಗುಹೆ ಎಂದರ್ಥ. ಮಾನ್ ಸೂನ್ ಕಾಲದಲ್ಲಿ ಇಲ್ಲಿ ನೈಸರ್ಗಿಕವಾಗಿ ಹರಿಯುವ ಜಲಪಾತವನ್ನು ನೋಡಬಹುದು.
3034 ಜೈನ ಗುಹಾಲಯ
ಇಲ್ಲಿನ ಗುಹೆಗಳಲ್ಲಿ ನಾವು ಜೈನ ಗುರುಗಳಾದ ಮಹಾವೀರರ ಹಾಗೂ ದಿಗಂಬರರ ವಿಗ್ರಹಗಳನ್ನು ನೋಡಬಹುದು. ಇಲ್ಲಿ ನಾವು ಇಂದ್ರ ಆನೆಯ ಮೇಲೆ ಕುಳಿತಿರುವ ಹಾಗೂ ಅಂಬಿಕಾ ದೇವಿ ಸಿಂಹದ ಮೇಲೆ ಆಸೀನಳಾಗಿ ಮಾವಿನ ಮರದಡಿಯಲ್ಲಿ ವಿಶ್ರಮಿಸುತ್ತಿರುವ ಶಿಲ್ಪಕಲೆಯನ್ನು ನೋಡಬಹುದು.
ಒಟ್ಟಿನಲ್ಲಿ ಇಲ್ಲಿರುವ ಎಲ್ಲಾ ಗುಹಾಲಯದ ಶಿಲ್ಪಕಲೆಯನ್ನು ಕೆತ್ತಿ ಮುಗಿಸಲು ರಾಷ್ಟ್ರಕೂಟರಿಗೆ ಸುಮಾರು 600 ವರ್ಷಗಳ ಕಾಲ ಹಿಡಿಯಿತು ಎಂದು ಇತಿಹಾಸ ಹೇಳುತ್ತದೆ. ಇಂತಹ ಅದ್ಭುತ ಇತಿಹಾಸವನ್ನು ಹೊಂದಿರುವ ಅಜಂತಾ ಮತ್ತು ಎಲ್ಲೋರಾದ ಶಿಲ್ಪಕಲೆಯನ್ನು ನೋಡಿದ ಪ್ರವಾಸಿಗರೇ ಧನ್ಯರು ಎಂಬುದರಲ್ಲಿ ಎರಡು ಮಾತಿಲ್ಲ.
– ಸಂಜ್ಞಾ ಭಟ್.





