ಬೆಂಗಳೂರು ಮೂಲದ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಸ್ಥಾಪಿಸಿರುವ ವಿಶ್ವಪ್ರಸಿದ್ಧ ಬಯೋಟೆಕ್ನಾಲಜಿ ಬಯೋಕಾನ್ ಸಂಸ್ಥೆಗೆ ತನ್ನ ನಂತರದ ಉತ್ತರಾಧಿಕಾರಿಯ ಹೆಸರನ್ನು ಘೋಷಿಸಿದ್ದಾರೆ.
ತಮ್ಮ ಕುಟುಂಬ ಸಂಬಂಧಿಯೇ ಆದ ಸೋದರ ಸೊಸೆ, ಕ್ಲೇರ್ ಮುಜುಂದಾರ್ ಅವರನ್ನು ತನ್ನ ನಂತರ ಸಂಸ್ಥೆ ನಡೆಸಲು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ.
ಕ್ಲೇರ್ ಮಜುಂದಾರ್ (37) ಅವರು ಕಿರಣ್ ಮಜುಂದಾರ್ ಶಾ ಅವರ ಬಯೋಕಾನ್ ಪ್ರೇರಣೆಯಿಂದ ಬಿಕಾರಾ ಥೆರಪಿಟಿಕ್ಸ್ (Bicara Therapeutics) ಸಂಸ್ಥೆ ಸ್ಥಾಪಿಸಿ ಅದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಅಮೆರಿಕದ ನ್ಯಾಸ್ ಡಾಕ್ (NASDAQ) ಶೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿದೆ. ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಸುಮಾರು 1.6 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಹೀಗಾಗಿ ಕ್ಲೇರ್ ಅವರ ಸಮರ್ಥ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿರುವ ಕಿರಣ್, ಬಯೋಕಾನ್ ಸಂಸ್ಥೆಯ ನೇತೃತ್ವವಹಿಸಿಕೊಳ್ಳಲು ಹಂತಹಂತವಾಗಿ ಬಿಟ್ಟುಕೊಡಲಿದ್ದಾರೆ.
ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಕ್ಲೇರ್ ಮಜುಂದಾರ್, ಕ್ಯಾನ್ಸರ್ ಬಯೋಲಾಜಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲದೆ ಥರ್ಡ್ ರಾಕ್ ವೆಂಚರ್ಸ್ ಹಾಗೂ ರಿಯೋಸ್ ಮೆಡಿಸಿನ್ಸ್ ಗಳಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವೂ ಇದೆ.
ಕ್ಲೇರ್ ಮಜುಂದಾರ್ ಜೊತೆ ಅವರ ಕುಟುಂಬದ ಇತರ ಸದಸ್ಯರು ಕೂಡಾ ಬಯೋಕಾನ್‌ಗೆ ಪೂರಕವಾಗಲಿದ್ದಾರೆ ಎಂಬುದು ಕಿರಣ್ ಮಜುಂದಾರ್ ಶಾ ಅವರ ಅಭಿಪ್ರಾಯ. ಕ್ಲೇರ್ ಅವರ ಸಹೋದರ, ಎಐ ತಜ್ಞ ಹಾಗೂ ಕ್ಯಾಲ್ಟೆಕ್ ಪ್ರೊಫೆಸರ್ ಆಗಿರುವ ಎರಿಕ್ ಮಜುಂದಾರ್ ಹಾಗೂ ಕ್ಲೇರ್ ಅವರ ಪತಿ ಕ್ಯಾನ್ಸರ್ ತಜ್ಞ ಥಾಮಸ್ ರಾಬರ್ಟ್ಸ್ ಅವರ ಜ್ಞಾನ ಕೂಡಾ ಕಂಪನಿಯ ಭವಿಷ್ಯಕ್ಕೆ ಪೂರಕವಾಗಿರಲಿದೆ ಎನ್ನಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಿರಣ್ ಮಜುಂದಾರ್ ಷಾ, “ನಾನು ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆಯಲ್ಲಿ ಇಲ್ಲ, ಹಂತಹಂತವಾಗಿ ಕ್ಲೇರ್ ನನ್ನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ “. “ಕೃತಕ ಬುದ್ಧಿಮತ್ತೆ (ಎಐ)ಹಾಗೂ ಆಧುನಿಕ ಬಯೋಟೆಕ್ನಾಲಜಿ ಯುಗದಲ್ಲಿ ಕಂಪನಿಯನ್ನು ಭವಿಷ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಸಲು ಕ್ಲೇರ್ ಸರಿಯಾದ ವ್ಯಕ್ತಿ” ಎಂದು ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಟ್ಟಿದ್ದಾರೆ.
ಇತರೆ ಬದಲಾವಣೆಗಳು: ಬಯೋಕಾನ್ ಸಂಸ್ಥೆಯ ಇತರ ಅಂಗಸಂಸ್ಥೆಗಳ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದ್ದು, ಶ್ರೀಹಾಸ್ ತಾಂಬೆ ಅವರು ಬಯೋಕಾನ್ ಬಯೋಲಾಜಿಕ್ಸ್ ಸಿಇಒ ಆಗಿದ್ದಾರೆ. ಸಿದ್ದಾರ್ಥ್ ಮಿತ್ತಲ್ ಜುಲೈ 1 ರಿಂದ ಸಿಂಜೆನ್ ಇಂಟರ್‌ನ್ಯಾಷನಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಬಯೋಕಾನ್ ಸಂಸ್ಥೆಯ ಜೆನೆರಿಕ್ಸ್ ಹಾಗೂ ಬಯೋಲಾಜಿಕ್ಸ್ ವಿಭಾಗಗಳನ್ನು ವಿಲೀನಗೊಳಿಸಿ, ಸಾಲದ ಹೊರೆ ಕಡಿಮೆ ಮಾಡಲು ಯಶಸ್ವಿಯಾಗಿದೆ. ಅಲ್ಲದೆ ಕಂಪನಿಯ ಒಟ್ಟು ಆದಾಯದ ಶೇ 60 ರಷ್ಟು ಪಾಲನ್ನು “ಬಯೋಸಿಮಿಲರ್” ವಿಭಾಗ ಹೊಂದಿದೆ.





