ಸಾಮಾನ್ಯವಾಗಿ ಯಾರ ಬಳಿಯಲ್ಲಾದರೂ ಸಹಾಯ ಕೇಳಲು ಹೋದಾಗ ಅವರು ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದಾಗ ಬಹುತೇಕರು ಮನಸ್ಸಿನಲ್ಲಿ ನೊಂದು ಕೊಂಡರೆ ಇನ್ನೂ ಕೆಲವರು ಹಿಡಿ ಶಾಪವನ್ನು ಹಾಕುತ್ತಾರೆ. ಇತ್ತೀಚೆಗಂತೂ ಹಣವಿರುವವರು ಹಣ ಇಲ್ಲದೇ ಇರುವವರಿಗೆ ಸಹಾಯ ಮಾಡಲೇ ಬೇಕೆಂಬ ಅಲಿಖಿತ ನಿಯಮವೂ ರೂಢಿಯಲ್ಲಿದೆ. ಅವರಿಗೇನು ಕಡಿಮೆ? ಸ್ವಲ್ಪ ಸಹಾಯ ಮಾಡಿಬಿಟ್ಟರೇ ಗಂಟು ಏನು ಕಳೆದು ಹೋಗುತ್ತದೆಯೇ? ಎಂದು ಬಹಿರಂಗವಾಗಿಯೇ ಆಡಿಕೊಳ್ಳುವವರಿಗೇನೂ ಕಡಿಮೆ ಏನಿಲ್ಲಾ. ಇನ್ನೂ ಕೆಲವರು ದಾನಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿ ನೋಡಿದರಂತೆ ಎನ್ನುವಂತೆ ಕೊಟ್ಟದಾನ ಸರಿ ಇಲ್ಲಾ ಅವರ ಅಂತಸ್ತಿಗೆ ಇನ್ನೂ ಚೆನ್ನಾಗಿರುವುದನ್ನು ಕೊಡಬಹುದಾಗಿತ್ತು ಎಂದು ಕರುಬುತ್ತಾರೆ. ನಿಜ ಹೇಳಬೇಕೆಂದರೆ ಅವರ ಬಳಿ ಹಣ ಇದೆ ಎಂದು ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿರುವಾಗ ಅದೆಷ್ಟು ಜನರಿಗೆಂದು ಅವರೂ ಸಹಾ ಕೊಟ್ಟಾರೂ? ಎಂಬುದನ್ನೂ ಸಹಾ ಯೋಚಿಸುವುದಿಲ್ಲ ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ,

ಕಳೆದ ವಾರವಷ್ಟೇ ಮುಗಿದ ಬಿಗ್ ಬಾಸ್ ಕನ್ನಡ ಸೀಸನ್ 9 ವಿಜೇತರಿಗೆ ಒಟ್ಟು. 50 ಲಕ್ಷ ರೂಪಾಯಿ ಹಣ ಸಿಗುತ್ತಿರುವಾಗ ಹಣ ನಿಮಗೆ ಎಷ್ಟು ಮುಖ್ಯ? ನಿಮ್ಮ ಬಳಿ ಸಹಾಯಕ್ಕೆ ಕೇಳಿಕೊಂಡು ಯಾರಾದರೂ ಬಂದರೆ ಅವರಿಗೆ ನೀವು ಸಹಾಯ ಮಾಡಲು ಮುಂದಾಗುವಿರಾ? ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಯವರನ್ನು ಫಿನಾಲೆ ವೇದಿಕೆಯ ಮೇಲೆ ಕೇಳಿದಾಗ, ಈ ಹಿಂದೆಿದೇ ರೂಪೇಶ್ ಶೆಟ್ಟಿ ಅವರು ನನಗೆ ಟ್ರೋಫಿ ಮುಖ್ಯ. 50 ಲಕ್ಷ ರೂಪಾಯಿ ಹಣವನ್ನು ಹೇಗೆ ಬೇಕಾದರೂ ದುಡಿಯಬಹುದು, ಆದರೆ ಈ ಟ್ರೋಫಿ ಸಿಗಲ್ಲ. ಒಮ್ಮೆ ವಿಜೇತನದಲ್ಲಿ ಕೊನೆ ತನಕವೂ ಬಿಗ್ ಬಾಸ್ ಕನ್ನಡ 9 ವಿಜೇತ ಎಂಬ ಪಟ್ಟ ನನ್ನೊಂದಿಗೆ ಇರುತ್ತದೆ, ಅದು ಎಂದಿಗೂ ಹೋಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಹಣ ಸಹಾ ಅತ್ಯಂತ ಮುಖ್ಯ ಎಂಬುದನ್ನೂ ಒಪ್ಪುತ್ತೇನೆ ಎನ್ನುತ್ತಾರೆ.
. 
ಹಾಗೆಯೇ ಮಾತನ್ನು ಮುಂದಿವರೆಸಿದ ಸುದೀಪ್, ಹೇಗೂ ಬಿಗ್ ಬಾಸ್ ಕನ್ನಡ 9 ಟ್ರೋಫಿಗೆದ್ದಾಗಿದೆ ಈಗ ಯಾರೋ ಬಂದು ಕಷ್ಟ ಇದೆ ಆ 50 ಲಕ್ಷ ರೂಪಾಯಿ ಹಣ ಕೊಡಿ ಎಂದು ಕೇಳಿದರೆ ಕೊಡ್ತೀರಾ? ಎಂದು ಪ್ರಶ್ನಿಸಿದಾಗ, ರೂಪೇಶ್ ಶೆಟ್ಟಿ ಅವರು, ಸರ್ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ 50 ಲಕ್ಷ ರೂಪಾಯಿ ನನ್ನ ಜೀವನದಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದೆ. ಇದುವರೆವಿಗೂ ನಾನು ಮಾಡಿದ ಸಿನಿಮಾ ಇದಕ್ಕಿಂತಲೂ ಹೆಚ್ಚಿನ ಹೆಣವನ್ನು ಗಳಿಸಿದ್ದರೂ, ವಯಕ್ತಿಕವಾಗಿ ನನಗೆ ಅಷ್ಟು ಹಣ ಸಿಕ್ಕಿರಲಿಲ್ಲ ಹಾಗಾಗಿ ಬೇರೆಯವರ ಕಷ್ಟಕ್ಕೆ ಈ ಹಣವನ್ನು ಸಹಾಯ ರೂಪದಲ್ಲಿ ಮಾಡುವ ಮನಸ್ಸು ನನಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದಾಗ, ಆ ಕ್ಷಣದಲ್ಲಿ ಅವರ ಆ ಮಾತಿನ ಹಿಂದೆ ಇರಬಹುದಾದ ಭಾವನೆ ಮತ್ತು ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಬದಲು ಅವರ ಕಾಲನ್ನು ಎಳೆದವರೇ ಹೆಚ್ಚಾಗಿದ್ದಾಗ, ಹಿಂದೆ ಓದಿದ್ದ ಈ ಪ್ರಸಂಗ ನೆನಪಾಗಿ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.





