“ಅಮ್ಮಾ” ಎಂದರೆ ಬರಿ ಪದವಲ್ಲ, ಹಾಸಿ ಹೊದ್ದರೂ ಮುಗಿಯದ ಪ್ರೀತಿ ವಾತ್ಸಲ್ಯದ ಭಾವನೆಯೇ ಅದರಲ್ಲಿದೆ, ದೇಹಕ್ಕೆ ಒಂದಿಷ್ಟು ಪೆಟ್ಟು ಬಿದ್ದಾಗ “ಅಮ್ಮಾ” ಎಂದರೆ ಸಾಕು ನೋವು ಹಾರಿ ಹೋಗುವುದು, ಆ ಪದಕ್ಕೆ ಅಷ್ಟು ಶಕ್ತಿ ಇದ್ದಾಗ ತಾಯಿಯೇ ಜೊತೆಗಿದ್ದರೆ ಅದು ಎಷ್ಟು ಶಕ್ತಿ ಇದ್ದಂತೆ ಅಲ್ವಾ!
ಒಂದು ಹುಡುಗಿ ತಾಯಿಯಾದಾಗ ಆಕೆಗೆ ತನ್ನ ತಾಯಿಯ ಅವಶ್ಯಕತೆ ಜಾಸ್ತಿ! ಎಷ್ಟೋ ಜನರಿಗೆ ತಾಯಿಯೇ ಇರುವುದಿಲ್ಲ, ಆ ಸಮಯದಲ್ಲಿ ದೊಡ್ಡಮ್ಮ, ಚಿಕ್ಕಮ್ಮ ಜವಾಬ್ದಾರಿ ವಹಿಸಿಕೊಂಡು ಪ್ರೀತಿಯಿಂದ ಬಾಣಂತನ ಮಾಡುತ್ತಾರೆ!
ಬಾಣಂತಿಗೆ ಆ ಸಮಯದಲ್ಲಿ ಸರಿಯಾದ ಆರೈಕೆ ಮುಖ್ಯ, ಪಥ್ಯದ ಊಟ, ತಾಯಿಯ ಹಾಲಿನ ಪ್ರಮಾಣ ಜಾಸ್ತಿ ಮಾಡಲು ಸೊಪ್ಪುಗಳ ಬಳಕೆ,
ಮಗುವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇರಲು ಮೆತ್ತನೆಯ ಆಹಾರ, ಮಗುವಿನ ರಕ್ಷಣೆಗಾಗಿ ತಾಯಿ ಕೂಡ ಬೆಚ್ಚನೆಯ ವಾತಾವರಣದಲ್ಲಿ ಇರಬೇಕಾಗುತ್ತದೆ,

ಬಾಣಂತಿಗೆ ಬೆನ್ನು ಗಟ್ಟಿಯಾಗಲು ಅಗ್ಗಿಷ್ಟಿಕೆ ಸರಿಯಾಗಿ ಕಾಯಿಸಿಕೊಳ್ಳುವುದು, ಕಟ್ಟುವುದು, ಆ ಸಮಯದಲ್ಲಿ ಅಂಟಿನ ಉಂಡೆಯನ್ನು ತಿನ್ನುವುದು, ಬಾಣಂತಿ ಖಾರ ಎಂದು ಬೆಲ್ಲ ಹಾಗು ಶುಂಠಿಯನ್ನು ತುಪ್ಪದಲ್ಲಿ ಕಲಸಿ ಕೊಡುವ ಮಗಳಿಗೆ ತಾನು ಮಾತ್ರ ಊಟ ತಿಂಡಿಯನ್ನು ಮರೆತು ಬಿಡುತ್ತಾಳೆ ಆ ತಾಯಿ !!
ಒಂದು ಹೆಣ್ಣು ತಾಯಿಯಾದರೆ ಅವಳು ಮರುಜನ್ಮ ಪಡೆದಂತೆ , ಮಗುವಿಗೆ ಜನನ ಕೊಡುವ ಸಮಯದಲ್ಲಿ ಸಾವಿರ ಚೇಳುಗಳು ಒಂದೇ ಸಲ ಕುಟುಕಿದ ಅನುಭವ, ಹೀಗಾಗಿ ಅವಳು ಪುನರ್ಜನ್ಮ ಪಡೆದು ಬಂದಂತೆ ಎಂದು ಹೇಳುತ್ತಾರೆ!
ಹೀಗಾಗಿ ಆ ಮೂರು ತಿಂಗಳು ಪತಿಯಿಂದ ದೂರವಿರಬೇಕು ಎನ್ನುವುದು ಮುಖ್ಯ, ಏಕೆಂದರೆ ಮಗುವಿಗೆ ಜನ್ಮ ಕೊಟ್ಟ ತಾಯಿಯ ಗರ್ಭಕೋಶ ತುಂಬಾ ನಿಶ್ಯಕ್ತಿಗೊಂಡಿರುತ್ತದೆ, ನರನಾಡಿಗಳು ಮಗುವಿಗೆ ಜನ್ಮ ಕೊಟ್ಟ ಸಮಯದಲ್ಲಿ ಜಾಸ್ತಿ ನುಲುಗಿರುತ್ತವೆ,ಈ ಕಾರಣದಿಂದ ಮೊದಲು ತಾಯಿಯ ದೇಹಕ್ಕೆ ಸರಿಯಾದ ಆರೈಕೆ ಮುಖ್ಯ!
ಇನ್ನು ಮಗುವಿನ ಬೆಳವಣಿಗೆಯಲ್ಲಿ ವೈದ್ಯರ ಸಲಹೆ,ಸೂಚನೆ ಒಂದು ಕಡೆಗೆ ಪಾಲಿಸಬೇಕು ನಿಜ , ಆದರೆ ವೈದ್ಯಕೀಯ ಚಿಕಿತ್ಸೆಗಿಂತ ಮೀರಿದ್ದು ಹಿರಿಯರ ಸಲಹೆ, ಸೂಚನೆಗಳನ್ನು ಆ ತಾಯಿ ತೆಗೆದುಕೊಂಡು ಮಕ್ಕಳ ಲಾಲನೆ ಪಾಲನೆಯನ್ನು ಮಾಡಬೇಕು!
ಆ ಸಮಯದಲ್ಲಿ ಮಗುವಿಗೆ ಶೀತವಾಗದಂತೆ ಇಡಲು ಬೆಚ್ಚಗಿನ ಹಾಗು ಕಣ್ಣಿಗೆ ಜಾಸ್ತಿ ಬೆಳಕು ಬೀಳದಂತೆ ನೋಡಿಕೊಳ್ಳಬೇಕು , ಆದರೂ ಎಳೆಯ ಬಿಸಿಲಿನಲ್ಲಿ ಕುಳಿತು ಕೊಳ್ಳುವುದು ಅವಶ್ಯಕ!

ನಮ್ಮ ಹಿರಿಯರ ಮೆತ್ತನೆಯ ಹತ್ತಿ ಸೀರೆಯಲ್ಲಿ ಮಗುವಿನ ಜೋಳಿಗೆ ಕಟ್ಟಿ ಅದರಲ್ಲಿ ಮಗುವನ್ನು ಮಲಗಿಸುತ್ತಾರೆ, ಅದರಿಂದ ಮಗುವಿಗೆ ತಾಯಿಯ ಗರ್ಭದಲ್ಲಿ ಸುರಕ್ಷಿತವಾದಂತೆ ಇದ್ದು ಬೆಚ್ಚಿ ಬೀಳದಂತೆ ನೆಮ್ಮದಿಯ ನಿದ್ದೆ ಮಾಡುತ್ತದೆ! ಆ ಸಮದಲ್ಲೇ ತಾಯಿ ನಿಶ್ಚಿಂತೆಯಿಂದ ಮಲಗುವುದು ಕೂಡ!
ಆಗ ಹೊರಗಿನ ವಾತಾವರಣದಲ್ಲಿ ಎಷ್ಟೇ ಗಲಾಟೆಯಿರಲಿ ಮಗು ಎಚ್ಚರಗೊಳ್ಳುವುದಿಲ್ಲ, ಹೆಚ್ಚು ಕಡಿಮೆ ಒಂದೂವರೆ ವರುಷ ಜೋಳಿಗೆಯಲ್ಲಿ ಮಲಗಿಸುತ್ತಾರೆ, ತಾಯಿ ತನ್ನ ಎದೆ ಹಾಲೂಡಿಸುವ ತನಕ ಎನ್ನಬಹುದು!
ಇನ್ನು ಮಗು ಹುಟ್ಟಿ ಹದಿನೈದು ದಿನಗಳ ನಂತರ”ಗುಟ್ಟಿ” ಎಂದು ಹಾಕುತ್ತಾರೆ! ಬಾದಾಮಿ ಶಕ್ತಿ ಬರುವುದಕ್ಕೆ, ಜಾಕಾಯಿ ನಿದ್ರೆ ಸರಿಯಾಗಿ ಆಗುವುದಕ್ಕೆ,ಒಡ್ಡು ಮುರುಕು ಎನ್ನುವ ಒಂದು ಬೇರು ಅದು ಮಕ್ಕಳು ಮೈಕೈ ನೋವು ಕಡಿಮೆಯಾಗಿ ಪದೇಪದೇ ದೇಹವನ್ನು ಒಡ್ಡು ಮುರಿಯದಂತೆ ನೋಡಿಕೊಳ್ಳಲು, ಅರಿಷಿಣ ರೋಗ ನಿರೋಧಕ ಶಕ್ತಿಯಂತೆ, ಹೀಗೆ ಇವುಗಳನ್ನು ತಾಯಿಯ ಹಾಲಿನಲ್ಲಿಯೇ ತೇಯ್ದು ಮಗುವಿನ ಹಾಕುತ್ತಾರೆ, ಈ ಸಮಯದಲ್ಲಿ ಹಾಕಿದ ಈ ಗುಟ್ಟಿಯಿಂದ ಮಗು ಬೆಳೆದು ದೊಡ್ಡವರಾದ ಮೇಲೆ ಬೇಗ ಶೀತ, ಕೆಮ್ಮು ಬರದಂತೆ ತಡೆಗಟ್ಟುತ್ತದೆ! ಇನ್ನು ಮಗುವಿನ ಮೂಳೆ ಗಟ್ಟಿ ಮಾಡಲು ಕ್ಯಾಲ್ಸಿಯಂ ಬೇಕು ಅದಕ್ಕೆ ಒಂದು ಎಲೆ ತೆಗೆದುಕೊಂಡು ಅದಕ್ಕೆ ಸುಣ್ಣ ಸವರಿ ಎಲೆಯ ರಸವನ್ನು ಹಿಂಡಿ ತಾಯಿಯ ಹಾಲಿನಲ್ಲಿ ಕಲೆಸಿ ಕುಡಿಸುತ್ತಾರೆ, ಪ್ರತಿಯೊಂದು ತಾಯಿ ಹಾಲಿನಿಂದಲೇ ಹೀಗಾಗಿ ತಾಯಿ ಹಾಲು ಯಾವಾಗಲೂ ಅಮೃತಕ್ಕೆ ಸಮ!
ಮಗು ಬೆಳದಂತೆ ಬಾಣಂತಿಯ ಆಹಾರದಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ, ನಿಧಾನವಾಗಿ ಒಂದೊಂದೇ ಚಪಾತಿ, ರೊಟ್ಟಿಯನ್ನು ಕೊಡುತ್ತಾ ಮೂರು ತಿಂಗಳ ಬಾಣಂತನ ಮುಗಿಯುವುದರೊಳಗೆ ಆಕೆಯ ತಾಯಿ ಮಗಳನ್ನು ದೈಹಿಕವಾಗಿ ಗಟ್ಟಿ ಮಾಡಿ, ತೊಟ್ಟಿಲು ಶಾಸ್ತ್ರ ನೆರವೇರಿಸಿ,ಗಂಗೆ ಪೂಜೆ ಮಾಡಿಸಿ ಇನ್ನು ನೀನು ನಿಧಾನವಾಗಿ ನಿನ್ನ ಮಗುವಿನ್ನು ನೀನೇ ನೋಡಿಕೊಳ್ಳಬಹುದು ಎಂದು ದೇವರ ಗುಡಿಗೆ ಹೋಗಿ ಭಗವಂತನ ಆಶೀರ್ವಾದ ತಾಯಿ ಮಗುವಿಗೆ ಕೊಡಿಸಿ, ಸಂತೃಪ್ತಿ ಪಡೆದು ಅತ್ತೆಯ ಮನೆಗೆ ನೆಂಟರಿಷ್ಟರ ಜೊತೆಗೆ ಹೋಗಿ ಎಲ್ಲರೂ ಮಗು,ತಾಯಿಗೆ ಒಳ್ಳೆಯದಾಗಲಿ ಎಂದು ಹಾರೈಸಿ ಮನೆಗೆ ವಾಪಸ್ಸು ಬರುತ್ತಾರೆ!
ಅಷ್ಟು ದಿನ ಇದ್ದ ಮುದ್ದಾದ ಮಗುವಿನ ಆರೈಕೆ ಅಕ್ಕರೆಯ ನೆನಪಾಗಿ ಕಣ್ಣು ತುಂಬಿ ಬರುತ್ತದೆ!
ಅಲ್ಲಿಗೆ ತನ್ನ ಮಗಳ ಹಾಗು ಮಗು ಜವಾಬ್ದಾರಿ ತಾಯಿಗೆ ಮುಗಿಯಿತು, ನಂತರ ಹೊಸದಾಗಿ ತಾಯಿಯಾದ ಮಗಳು ಅಮ್ಮಾ ಹಾಗು ಅತ್ತೆಯು ಕಾಳಜಿಯಿಂದ ಕೊಡುವ ಸಲಹೆ ಪಡೆಯುತ್ತಾ ಮಗುವಿನ ಆರೈಕೆ ಸರಿಯಾಗಿ ಮಾಡುತ್ತಾಳೆ!
ಹೀಗೆ ಒಂದು ಹೆಣ್ಣು ತಾಯಿಯಾದಾಗ ಮಗುವಿನ ಜವಾಬ್ದಾರಿ ಸರಿಯಾಗಿ ವಹಿಸಿಕೊಂಡು ಮನೆಯನ್ನೂ ಕೂಡ ಶಿಸ್ತಾಗಿಟ್ಟು
ಎಲ್ಲರಿಗೂ ರುಚಿಯಾದ ಅಡುಗೆ ಬಡಿಸಿ ಅನ್ನಪೂರ್ಣೇಶ್ವರಿ ಎನಿಸಿಕೊಳ್ಳುತ್ತಾಳೆ!
ಒಂದು ಮನೆ ನಂದಗೋಕುಲವಾಗ ಬೇಕಾದರೆ ತಾಯಿಯ ಅಸ್ತಿತ್ವ ಅಲ್ಲಿರಲೇ ಬೇಕು!
ತಾಯಿ
———–
ಕಣ್ಣಲ್ಲೇ ಕಾಪಿಟ್ಟು
ನವಮಾಸ ನೋವ್ಪಟ್ಟು
ಭುವಿಗೆ ತಂದಳು ನನ್ನ ತಾಯಿ!
ತನ್ನ ಕನಸೆಲ್ಲ ಕೊಂದ್ಬಿಟ್ಟು
ನನ್ನ ಕನಸಿಗೆ ರೆಕ್ಕೆ ಕಟ್ಬಿಟ್ಟು
ಹಾರಿ ಬಿಟ್ಟಳೇ ನನ್ನ ತಾಯಿ!
ಋಣ ಭಾರ ಕಟ್ಬಿಟ್ಟು
ಈ ದೇಹಕೆ ಉಸಿರುಕೊಟ್ಟು
ಹೊರಟು ಬಿಟ್ಟಳೇ ನನ್ನ ತಾಯಿ!
ತಾಯಿ ಯಾವಾಗಲೂ ನಮ್ಮ ಜೊತೆಗೆ ಶಾಶ್ವತವಲ್ಲ, ಆದರೆ ಅವಳ ಋಣ ಮಾತ್ರ ಉಸಿರಿರುವವರೆಗೆ!
ಹೀಗಾಗಿ”ಅಮ್ಮಾ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರ್ಯಾರಮ್ಮಾ” ಎನ್ನುವ ಸಾಲುಗಳಿಗೆ ಸರಿಗಟ್ಟುವ ಪದವಿಲ್ಲ!
ಸ್ನೇಹಾ ಆನಂದ್





