ರಾಘವೇಂದ್ರ ಅಡಿಗ ಎಚ್ಚೆನ್.

‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದ ಯಶಸ್ಸಿನ ನಂತರ ನಟ-ನಿರ್ದೇಶಕ ಅರವಿಂದ್‍ ಕೌಶಿಕ್‍ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಕಂಪ್ಲೀಟ್ ಮಾಡಿದ್ದಾರೆ. ಇದುವರೆಗೆ ಪ್ರೇಮಕಥೆ ಸೇರಿದಂತೆ ವಿಭಿನ್ನ ಜಾನರ್‌ಗಳ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ರಾ ಮತ್ತು ರಗಡ್ ಶೈಲಿಯ ಗ್ಯಾಂಗ್‍ಸ್ಟರ್ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದೇ ‘ಕಂಟ್ರಿ ಮೇಡ್‍ – ಭಾಗ 2’.
ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಹೈಪ್ ಹೆಚ್ಚಿಸುವಂತಹ ಖಡಕ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ವೇಳೆ ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರದ ಪ್ರಮುಖ ಪಾತ್ರಧಾರಿಗಳನ್ನು ವೇದಿಕೆಗೆ ಆಹ್ವಾನಿಸಿ ಪರಿಚಯಿಸಿದರು. ಬಳಿಕ ಸಿನಿಮಾ ರೂಪುಗೊಂಡ ರೋಚಕ ಹಾದಿಯನ್ನು ಹಂಚಿಕೊಂಡರು.

country

“ನನ್ನ ಹಿಂದಿನ ಸಿನಿಮಾ ರಿಲೀಸ್ ಆದ ಬಳಿಕ ಒಂದು ದಿನ ಪಾವಗಡದ ಕಡೆ ಪ್ರವಾಸ ಹೋಗಿದ್ದೆ. ಬಾಲ್ಯದಿಂದಲೂ ನನಗೆ ಪಾವಗಡ ತುಂಬಾ ಕಾಡಿದ ಊರು. ಅಲ್ಲಿ ಶೂಟಿಂಗ್ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಅಲ್ಲಿ ನಾನು ನೋಡಿದ ಒಂದಿಷ್ಟು ನೈಜ ವ್ಯಕ್ತಿಗಳನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಕಾಜಲ್, ಮಿಲ್ಕಿ, ಮಜ್ಜಿಗೆ, ಬಾಂಬೆ ಬಂಟಿ, ಪಾಯ್ಸನ್ ರವಿ, ಜೋಕರ್‍ ಜಾನಿ, ಜಿಮ್ ಚೇತು, ಪುಷ್ಪ, ಆ್ಯಂಕರ್‍ ಅಂಜಲಿ, ರೀಲ್‍ ಶಾಂತಮ್ಮ ಹಾಗೂ ಡೇರ್ ಡೆವಿಲ್‍ ಸರೋಜ ಮುಂತಾದ ವಿಶಿಷ್ಟ ಪಾತ್ರಗಳನ್ನು ಸೃಷ್ಟಿಸಿದೆ. ಈ ಪಾತ್ರಗಳ ಸುತ್ತ ‘ಕಂಟ್ರಿಮೇಡ್‍ – ಭಾಗ 2’ ಸಿನಿಮಾದ ಕಥೆ ಹೆಣೆದೆ” ಎಂದು ಅರವಿಂದ್ ಹೇಳುತ್ತಾರೆ.
“ನಮ್ಮೂರಲ್ಲಿ ನೊಣಗಳು ಜಾಸ್ತಿ, ಏಕೆಂದರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ ಎಂಬ ಒಂದೆಳೆಯನ್ನು ಇಟ್ಟುಕೊಂಡು ಚಿತ್ರದ ಚಿತ್ರಕಥೆ ಬರೆದಿದ್ದೇನೆ. ಸಾಮಾನ್ಯವಾಗಿ ದ್ವೇಷ, ರೋಷ, ಸಿಟ್ಟಿನ ಯುದ್ಧಗಳನ್ನು ಗಂಡಸರು ಮಾಡಿದರೆ, ಅದರ ನೋವು ಮತ್ತು ಗಾಯಗಳನ್ನು ಅನುಭವಿಸುವುದು ಮನೆಯಲ್ಲಿರುವ ಹೆಂಗಸರು.

country 1
ಹೊಸಿಲು ದಾಟಿ ಚಾಕು ಇರಿಯುವ ಗಂಡಸರಿಗೆ ಮನೆಯಲ್ಲಿರುವ ಹೆಣ್ಣುಮಕ್ಕಳ ನೆನಪಿರುವುದಿಲ್ಲ ಎಂಬ ಭಾವುಕ ಅಂಶವನ್ನೇ ಇಲ್ಲಿ ಮುಖ್ಯವಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಸಾಂಪ್ರದಾಯಿಕ ನಾಯಕ-ನಾಯಕಿ ಎಂಬ ಹಣೆಪಟ್ಟಿ ಯಾರಿಗೂ ಇಲ್ಲ, ಎಲ್ಲಾ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ಇದೆ” ಎಂದು ಹೇಳುತ್ತಾರೆ ಅರವಿಂದ್‌ ಕೌಶಿಕ್.
ಈ ವಿಭಿನ್ನ ಸಾಹಸದ ಚಿತ್ರದಲ್ಲಿ ಅರವಿಂದ್‍ ಕೌಶಿಕ್‍, ಅಭಿಲಾಷ್‍ ದ್ವಾರಕೀಶ್‍, ರಾಘವ್‍ ರಾಮ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಗೌರವ್‍ ಆರ್ಯನ್, ಅಶ್ವಿತಾ ಗೌಡ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಗಣವಿದೆ. ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಮತ್ತು ಚಂದನ್ ಗೌಡ ಜಂಟಿಯಾಗಿ ಬಂಡವಾಳ ಹೂಡಿದ್ದು, ಅರ್ಜುನ್‍ ರಾಮು ಸಂಗೀತ ಹಾಗೂ ಸೂರ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ