ಬೇಸಿಗೆಯಿಂದ ಮಳೆಗಾಲಕ್ಕೆ ಬದಲಾದಾಗ ನೆಮ್ಮದಿ ಎನಿಸುತ್ತದೆ. ಆದರೆ ಅದರ ಜೊತೆಗೆ ಇನ್ನಿತರ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗೋಡೆಗಳಲ್ಲಿ ತೇವಾಂಶ, ಜೌಗು, ಸೊಳ್ಳೆ, ಕ್ರಿಮಿಕೀಟ, ಗಲೀಜು……. ಇತ್ಯಾದಿ. ಈ ಕಾರಣದಿಂದ ಕಿಚನ್ ನಲ್ಲಿ ಭೂಷಣ ಎನಿಸುವಂಥ ಮಸಾಲೆ ಪದಾರ್ಥ, ತೇವಾಂಶದ ಸಮಸ್ಯೆಯಿಂದ ತಾಜಾತನ ಕಳೆದುಕೊಂಡು ಹಾಳಾಗುತ್ತವೆ. ಈ ಹಾಳಾದ ಮಸಾಲೆ ತಿಂದು ಎಷ್ಟೋ ಸಲ ನಾವು ಅನಾರೋಗ್ಯಕ್ಕೆ ಈಡಾಗುತ್ತೇವೆ. ಹೀಗಾಗಿ ಮಳೆಗಾಲದಲ್ಲಿ ಇವುಗಳನ್ನು ಕಾಪಾಡಿಕೊಳ್ಳುವುದು ಬಲು ಮುಖ್ಯ.

ಏರ್ಟೈಟ್ಡಬ್ಬಿಗಳು

ಮಳೆಗಾಲ ಮಾತ್ರವಲ್ಲದೆ ಎಲ್ಲಾ ಋತುಮಾನಕ್ಕೂ ಏರ್‌ ಟೈಟ್‌ ಜಾರ್ಸ್‌ ಬಲು ಉತ್ತಮ. ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ತೇವಾಂಶ ಮತ್ತು ಹೊರಗಿನ ಥಂಡಿ ಕಾರಣ, ಶೀತಲ ಹವೆ ಈ ಡಬ್ಬಿ ಒಳಗೆ ಪ್ರವೇಶಿಸಲಾಗದು. ಹೀಗಾಗಿ ಇದರೊಳಗಿನ ಮಸಾಲೆ ಸುರಕ್ಷಿತವಾಗಿ ಉಳಿಯುತ್ತದೆ. ಈ ರೀತಿ ಅವು ಹೆಚ್ಚು ದಿನ ಬಾಳಿಕೆ ಬರುತ್ತವೆ.

Masale

ಸುರಕ್ಷತೆಗಾಗಿ ಹೊಸ ಪ್ರಯೋಗ

ಈ ಮಸಾಲೆ ಪದಾರ್ಥಗಳನ್ನು ಕ್ರಿಮಿ ಕೀಟಗಳಿಂದ ರಕ್ಷಿಸಲು, ಒಂದು ಮಸಾಲೆ ಬಳಸಿ ಮತ್ತೊಂದನ್ನು ರಕ್ಷಿಸಬೇಕಾಗುತ್ತದೆ. ಹೌದು, ನಮ್ಮ ಅಡುಗೆಮನೆಯಲ್ಲೇ ಸಿಗುವಂಥ ಲವಂಗದೆಲೆ (ಪಲಾವ್ ‌ಎಲೆ), ಲವಂಗ, ಏಲಕ್ಕಿ, ಚಕ್ಕೆ ಇತ್ಯಾದಿ ಬಳಸಿಕೊಳ್ಳಬಹುದು. ನಾವು ಪುಡಿ ಮಾಡಿಕೊಂಡಿರುವ ಮಸಾಲೆ ಪದಾರ್ಥಗಳ ಪ್ರಮಾಣ ಗಮನಿಸಿಕೊಂಡು, ಅವಕ್ಕೆ 1-2 ಪಲಾವ್ ‌ಎಲೆ, ಲವಂಗ, ಏಲಕ್ಕಿ, ಚಕ್ಕೆ ಇತ್ಯಾದಿ ಹಾಕಬೇಕು. ಇದರಿಂದ ಮಸಾಲೆಪುಡಿ ಯಾವುದೂ ಕೆಡುವುದಿಲ್ಲ. ಅದರ ರುಚಿಯೂ ಸುಧಾರಿಸುತ್ತದೆ.

ಇಡಿಯಾದ ಮಸಾಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಪುಡಿ ಮಸಾಲೆ ಕೊಳ್ಳುವ ಬದಲು, ಇಡಿಯಾದ (ಲವಂಗ, ಚಕ್ಕೆ, ಮೊಗ್ಗು, ಕಾಳುಮೆಣಸು) ಮಸಾಲೆಗಳನ್ನೇ ಕೊಂಡು ತಂದು, ಅಡುಗೆ ಮಾಡುವಾಗ, ಅಗತ್ಯದಷ್ಟನ್ನು ಮಾತ್ರ ಲೈಟಾಗಿ ಹುರಿದುಕೊಂಡು, ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಬಳಸಿಕೊಳ್ಳಿ. ಏಕೆಂದರೆ ಇಡಿಯಾದ ಮಸಾಲೆಗಳು ದೀರ್ಘ ಬಾಳಿಕೆಗೆ ಹೆಸರಾಗಿವೆ.

ಫ್ರಿಜ್ನಲ್ಲಿ ಇರಿಸುವಿಕೆ

ನೀವು ಮಸಾಲೆಗಳನ್ನು ಫ್ರಿಜ್‌ ನಲ್ಲಿ ಇರಿಸುವುದಾದರೆ, ಅದರ ತೀಕ್ಷ್ಣ ರುಚಿ ತುಸು ಬದಲಾಗಬಹುದು, ಹೀಗಾಗಿ ಅವನ್ನು ಏರ್ ಟೈಟ್‌ ಜಾರ್‌ ನಲ್ಲಿ ತುಂಬಿಸಿದ ನಂತರವೇ ಅವನ್ನು ಫ್ರಿಜ್‌ ನಲ್ಲಿ ಎಚ್ಚರಿಕೆಯಿಂದ ಇರಿಸಬೇಕು.

ಬಿಸಿಲಿಗಿಡಲು ಮರೆಯದಿರಿ

ಅಪರೂಪಕ್ಕೆ ಮಳೆಗಾಲದಲ್ಲಿ ಬಿಸಿಲು ಕಾಣಿಸಿದಾಗ, ಅಗತ್ಯವಾಗಿ ಈ ಮಸಾಲೆಗಳನ್ನು 2-3 ತಾಸು ಬಿಸಿಲಿಗಟ್ಟು ರಕ್ಷಿಸಿಕೊಳ್ಳಿ.

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ