ಫಿಲಿಪೈನ್ಸ್‌ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ 7.8 ತೀವ್ರತೆಯ ಭೂಕಂಪದಿಂದ 12 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದಿದ್ದು, ಫಿಲಿಪೈನ್ಸ್‌ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾವ್, ಪಪುವಾ ನ್ಯೂಗಿನಿಯಾ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಪ್ರಕಾರ, ಭೂಕಂಪವು ಫಿಲಿಪೈನ್ಸ್‌ ನ ಮಿಂಡನಾವೊ ದ್ವೀಪದ ಸರಂಗಾನಿ ಪ್ರಾಂತ್ಯದಿಂದ ಸುಮಾರು 24 ಕಿಲೋಮೀಟರ್ ಪಶ್ಚಿಮ ಭಾಗದ ಸಮುದ್ರದಲ್ಲಿ ಸಂಭವಿಸಿದೆ.

12 ಮಂದಿ ಸಾವು ದೃಢಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಸಂಪೂರ್ಣ ಕುಸಿದಿವೆ ಎಂದು ಜನರಲ್ ಸ್ಯಾಂಟೋಸ್ ನಗರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಜನರಲ್ ಸ್ಯಾಂಟೋಸ್ ನಗರದ ಒಂದು ವಾಣಿಜ್ಯ ಸಂಕೀರ್ಣ ಸಂಪೂರ್ಣವಾಗಿ ನೆಲಸಮವಾಗಿರುವ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಜಾಲಿಬೀ ಫಾಸ್ಟ್‌ಫುಡ್ ರೆಸ್ಟೋರೆಂಟ್ ಹೊಂದಿದ್ದ ಕಟ್ಟಡ ಕುಸಿದಿದ್ದು, ಮತ್ತೊಂದು ಪ್ರದೇಶದಲ್ಲಿ ಶಾಲಾ ಕಟ್ಟಡವೂ ಧರೆಗುರುಳಿದೆ. ಭೂಕಂಪದ ಸುಮಾರು ಎರಡು ಗಂಟೆಗಳ ನಂತರ 6.1 ತೀವ್ರತೆಯ ಪ್ರಬಲ ಕಂಪನ ಕೂಡ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಈ ನಡುವೆ ಅಧಿಕಾರಿಗಳು ಹಾನಿಗೊಳಗಾದ ಕಟ್ಟಡಗಳ ಸಮೀಪ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಭೂಕಂಪದ ಬಳಿಕ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಫಿಲಿಪೈನ್ಸ್‌, ಇಂಡೋನೇಷ್ಯಾ, ಪಲಾವ್, ತೈವಾನ್ ಮತ್ತು ಪಪುವಾ ನ್ಯೂಗಿನಿಯಾ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಫಿಲಿಪೈನ್ಸ್‌ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ತುರ್ತು ಪರಿಸ್ಥಿತಿ ಘೋಷಿಸಿದ್ದು, ಮಿಂಡನಾವೊದ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಕರಾವಳಿ ಪ್ರದೇಶದ ನಿವಾಸಿಗಳಿಗೆ ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಇಂಡೋನೇಷ್ಯಾ ಸರ್ಕಾರ ಕೂಡ ಉತ್ತರ ಸುಲಾವೆಸಿ, ಗೊರೊಂಟಾಲೊ ಮತ್ತು ಸಂಗಿಹೆ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಆದೇಶಿಸಿದೆ. ಜಪಾನ್ ಕೂಡ ತನ್ನ ಪೆಸಿಫಿಕ್ ಕರಾವಳಿ ಭಾಗಗಳಿಗೆ ಸುನಾಮಿ ಸಲಹೆ ಹೊರಡಿಸಿದ್ದು, ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಇದೀಗ 7.8 ತೀವ್ರತೆಯ ಭೂಕಂಪ ಮತ್ತೊಮ್ಮೆ ಫಿಲಿಪ್ಪೀನ್ಸ್‌ನಲ್ಲಿ ಭಾರಿ ಆತಂಕ ಸೃಷ್ಟಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ