ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್ ತನ್ನ ಕೃತ್ಯವನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಮಗು ಐಸ್‌ಕ್ರೀಂ ಬೇಕೆಂದು ಹಠ ಮಾಡಿದ್ದಕ್ಕೆ ಆಕೆಯ ಹೊಟ್ಟೆಗೆ ಬಲವಾಗಿ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಪೊಲೀಸ್ ತನಿಖೆ ವೇಳೆ ಆರೋಪಿ ಮೋಹನ್ ನೀಡಿದ ಹೇಳಿಕೆ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಮಾರ್ಚ್ 21ರಂದು ಪ್ರಿಯಾಂಕಾ ಮತ್ತು ಮೋಹನ್ ಮಧುರೈಗೆ ಮೂರು ದಿನಗಳ ದೇವಸ್ಥಾನ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 24 ರಂದು ಬೆಂಗಳೂರಿಗೆ ವಾಪಸ್ ಬಂದಿದ್ದು, ರಾತ್ರಿ ಇಂದಿರಾನಗರದಲ್ಲಿ ಶಾಪಿಂಗ್​ಗೆ ತೆರಳಿದಾಗ ಈ ದುರ್ಘಟನೆ ನಡೆದಿದೆ.

ಪ್ರಿಯಾಂಕಾ ಶಾಪಿಂಗ್‌ಗೆ ಹೋದಾಗ ಕಾರಿನಲ್ಲಿದ್ದ ಬಾಲಕಿ ಮೋಹನ್ ಬಳಿ ಐಸ್‌ಕ್ರೀಂ ಬೇಕೆಂದು ಕೇಳಿದ್ದಳು. ಮೋಹನ್ ಐಸ್‌ಕ್ರೀಂ ತಂದುಕೊಟ್ಟಿದ್ದ. ಆದರೆ ಬೇರೆ ಐಸ್‌ಕ್ರೀಂ ಬೇಕೆಂದು ಮಗು ಹಠ ಆರಂಭಿಸಿತ್ತು. ಇದರಿಂದ ಕೋಪಗೊಂಡ ಮೋಹನ್, ಮಗುವಿನ ಹೊಟ್ಟೆಗೆ ಬಲವಾಗಿ ಒದ್ದಿದ್ದಾನೆ. ನೋವಿನಿಂದ ಮಗು ಜೋರಾಗಿ ಕಿರುಚಾಡಿದೆ. ಆಗ ಮೋಹನ್ ಮಗುವಿನ ಬಾಯಿಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಸಂಚು: ಘಟನೆ ನಡೆದ ಬಳಿಕ ಶಾಪಿಂಗ್ ಮುಗಿಸಿ ಬಂದ ಪ್ರಿಯಾಂಕಾಗೆ ನಡೆದ ವಿಚಾರವನ್ನು ಮೋಹನ್ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ಪ್ರಕರಣ ಮುಚ್ಚಿಹಾಕಲು ಸಂಚು ರೂಪಿಸಿದ್ದಾರೆ. ಮಗು ಮಲಗಿರುವಂತೆ ಭುಜದ ಮೇಲೆ ಹೊತ್ತು ಕಾಡುಗೋಡಿಯ ವಿಲ್ಲಾಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಪೂರ್ತಿ ಮಗುವಿನ ಮೃತದೇಹವನ್ನು ಮನೆಯಲ್ಲೇ ಇಟ್ಟಿದ್ದಾರೆ.

ಮರುದಿನ, ಮೃತದೇಹವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಮಗು ಮೆಟ್ಟಿಲಿನಿಂದ ಬಿದ್ದಿತ್ತು, ನಾವು ಆಕೆಯನ್ನು ಮಲಗಿಸಿದ್ದೆವು ಎಂದು ಸುಳ್ಳು ಹೇಳಿದ್ದಾರೆ. ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಗ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಗೋಳಾಡಿದ ನಟನೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಾಂಕಾ ಪತಿ ಪ್ರವೀಣ್ ಕೂಡ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಿಯಾಂಕಾಗೆ ಪ್ರವೀಣ್ ಜೊತೆ ಮದುವೆಯಾಗಿತ್ತು. ಮದುವೆಗೂ ಮುನ್ನ ಪ್ರಿಯಾಂಕಾ ಹಾಗೂ ಮೋಹನ್ ನಡುವೆ ಸಂಬಂಧವಿತ್ತು. ಹಲವು ವರ್ಷಗಳ ಬಳಿಕ ಇಬ್ಬರೂ ಮತ್ತೆ ಸಂಪರ್ಕದಲ್ಲಿದ್ದರು. ಮೋಹನ್ ನಂಬರ್ ಅನ್ನು ಅಡ್ವೊಕೇಟ್ ಸಾನ್ವಿ ಎಂದು ಸೇವ್ ಮಾಡಿಕೊಂಡು ಪ್ರಿಯಾಂಕಾ ಪ್ರತಿದಿನ ಮಾತನಾಡುತ್ತಿದ್ದಳು.

ಇಬ್ಬರೂ ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಪತಿ-ಪತ್ನಿ ಎಂದು ಹೇಳಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರವೀಣ್ ಆರೋಪಿಸಿದ್ದಾರೆ.

ಹೊಸಕೋಟೆ ರಸ್ತೆಯಲ್ಲಿರುವ ಪ್ರಿಯಾಂಕಾ ಜಮೀನಿನ ವ್ಯಾಜ್ಯ ಪ್ರಕರಣದ ವೇಳೆ ಹಳೇ ಪ್ರೇಮಿ ಮೋಹನ್ ಮತ್ತೆ ಪರಿಚಯವಾಗಿದ್ದ. ಮೋಹನ್ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿದ್ದು, ಸಾನ್ವಿಪ್ರಿಯ ಬಿಲ್ಡ್‌ಟೆಕ್ ಸಂಸ್ಥೆಯ ಪಾಲುದಾರನಾಗಿದ್ದ.

ಮೋಹನ್ ತನ್ನ ಪತ್ನಿ ವಾಸಿಸುವ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಪ್ರಿಯಾಂಕಾಳನ್ನು ಇರಿಸಿದ್ದ. ಈ ವಿಚಾರ ತಿಳಿದ ಮೋಹನ್ ಪತ್ನಿ ವಿಲ್ಲಾ ಬಳಿ ಬಂದು ಗಲಾಟೆ ಮಾಡಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಕಾಡುಗೋಡಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮೋಹನ್ ವಿರುದ್ಧ IPC 302  ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಿಯಾಂಕಾ ವಿರುದ್ಧ ಸಹ ಸಂಚು ಮತ್ತು ಸಾಕ್ಷಿ ನಾಶ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ